ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರ ಸಮಸ್ಯೆ, ಕುಂದು-ಕೊರತೆಗಳನ್ನು ಆಲಿಸಿ, ನಿವಾರಿಸುವ ಸಲುವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜ.3ರಿಂದ ಮೊದಲ ಹಂತದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರು (ಜ.2) : ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರ ಸಮಸ್ಯೆ, ಕುಂದು-ಕೊರತೆಗಳನ್ನು ಆಲಿಸಿ, ನಿವಾರಿಸುವ ಸಲುವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜ.3ರಿಂದ ಮೊದಲ ಹಂತದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ನಡೆಯಲಿದೆ.
ಜನರು ಸರ್ಕಾರಿ ಕಚೇರಿಗೆ ಅಲೆಯುವುದನ್ನು ತಡೆಯಲು ಅವರ ಮನೆ ಬಾಗಿಲಿನಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿನ 28 ವಿಧಾನಸಭಾ ವ್ಯಾಪ್ತಿಯಲ್ಲೂ ಹಂತಹಂತವಾಗಿ ಕಾರ್ಯಕ್ರಮ ನಡೆಸಲಾಗುವುದು. ಮೊದಲ ಹಂತದಲ್ಲಿ ಜ. 3ರಂದು ಮಹದೇವಪುರ ವಲಯ, ಜ. 5ರಂದು ಯಲಹಂಕ ಹಾಗೂ ಜ. 6ರಂದು ಪೂರ್ವ ವಲಯ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆಗಳನ್ನು ಖುದ್ದು ಡಿ.ಕೆ. ಶಿವಕುಮಾರ್ ಅವರೇ ಆಲಿಸಿ, ಪರಿಹಾರ ನೀಡಲಿದ್ದಾರೆ. ಜನರು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ತಮ್ಮ ಸಮಸ್ಯೆಗಳ ಕುರಿತು ದೂರನ್ನು ನೀಡಬಹುದಾಗಿದೆ
ಮಂಡ್ಯ ಲೋಕಸಭಾ ಕಣದಲ್ಲಿ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿಗಳೇ ಇಲ್ಲ! ಜೆಡಿಎಸ್ ಸಜ್ಜು, ಸುಮಲತಾ ನಡೆ ಏನು?
ಸಾರ್ವಜನಿಕರ ಸಮಸ್ಯೆಗಳನ್ನು ಒಂದೇ ಸೂರಿನಡಿ ಬಗೆಹರಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಹೀಗಾಗಿ ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಜಲಮಂಡಳಿ, ಬಿಎಂಆರ್‌ಸಿಎಲ್, ಕೊಳಗೇರಿ ಅಭಿವೃದ್ಧಿ ಮಂಡಳಿ, ಪೊಲೀಸ್ ಇಲಾಖೆ, ಬಿಎಂಟಿಸಿ, ಕಂದಾಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದು ದೂರುಗಳನ್ನು ಪರಮಾರ್ಶಿಸಲಿದ್ದಾರೆ.
ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದಲ್ಲಿ ಅಹವಾಲು ನೀಡಲು ಬರುವ ಜನರಿಗೆ ಟೋಕನ್ ನೀಡಲಾಗುತ್ತಿದ್ದು, ಟೋಕನ್ ನೀಡಲು ತಲಾ 10 ಕೌಂಟರ್ ವ್ಯವಸ್ಥೆ ಮಾಡಲಾಗುತ್ತದೆ. ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.
ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಬಂದಂತಹ ದೂರುಗಳನ್ನು ‘ಸಮಗ್ರ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ’ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ. ಅದಕ್ಕಾಗಿ ಬಿಬಿಎಂಪಿ ಸಿಬ್ಬಂದಿ ಗೆ ತರಬೇತಿಯನ್ನು ನೀಡಲಾಗಿದೆ. ನಾಗರಿಕರ ಸಂಪೂರ್ಣ ವಿವರ ಹಾಗೂ ಅವರ ದೂರುಗಳು ಯಾವ ಇಲಾಖೆಗೆ ಸಂಬಂಧಿಸಿದ್ದು ಎಂಬ ಬಗ್ಗೆ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ. ಅದಕ್ಕಾಗಿ ಪ್ರತ್ಯೇಕವಾಗಿ 15 ಕೌಂಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ.
ಎಲ್ಲೆಲ್ಲಿ ಕಾರ್ಯಕ್ರಮ:
* ಜ.3ರಂದು ಕೆ.ಆರ್.ಪುರ ದೂರವಾಣಿ ನಗರದ ಐಟಿಐ ಕ್ರೀಡಾಂಗಣದಲ್ಲಿ ಮಹದೇವಪುರ ವಲಯದ ಕೆಆರ್ ಪುರ, ಮಹದೇವಪುರ ವಿಧಾನಸಭಾ ಕ್ಷೇತ್ರಗಳ ನಿವಾಸಿಗಳ ಅಹವಾಲು ಆಲಿಸಲಾಗುತ್ತದೆ.
* ಜ.5ರಂದು ಯಲಹಂಕ ನ್ಯೂಟೌನ್‌ನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಯಲಹಂಕ ವಲಯ ವ್ಯಾಪ್ತಿಯ ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಆಲಿಸಲಾಗುತ್ತದೆ.
ನನ್ನನ್ನು ಒಳಗೆ ಕಳಿಸಲು ಬಿಜೆಪಿ ನಾಯಕರಿಂದ ಷಡ್ಯಂತ್ರ, ನಾನು ಜೈಲಿಗೆ ಹೋಗಲು ಸಿದ್ಧ ಎಂದ ಡಿಕೆಶಿ
* ಜ.6ರಂದು ಶಿವನ್‌ಚೆಟ್ಟಿ ಗಾರ್ಡನ್‌ನ ಸೇಂಟ್ ಜಾನ್ಸ್ ರಸ್ತೆಯ ಆರ್‌ಬಿಎಎನ್‌ಎಂಎಸ್ ಹೈಸ್ಕೂಲ್ ಮೈದಾನದಲ್ಲಿ ಪೂರ್ವ ವಲಯದ ಹೆಬ್ಬಾಳ, ಶಿವಾಜಿ ನಗರ, ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ನಿವಾಸಿಗಳು ದೂರುಗಳನ್ನು ಸಲ್ಲಿಸಬಹುದಾಗಿದೆ.