ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ‘ಬೇಡಿಕೆ ಮತ್ತು ಸ್ವೀಕಾರ’ ಕುರಿತು ಸ್ಪಷ್ಟ ಪುರಾವೆಗಳಿರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಗದಗದ ನಿವೃತ್ತ ಸಬ್ ರಿಜಿಸ್ಟ್ರಾರ್ ಶ್ರೀಕಾಂತ್ ವಿರುದ್ಧ ಎಸಿಬಿ ಪೊಲೀಸರು ದಾಖಲಿಸಿದ್ದ ಲಂಚ ಪ್ರಕರಣವನ್ನು ರದ್ದುಪಡಿಸಿದೆ.
ಬೆಂಗಳೂರು (ಜ.2) : ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ‘ಬೇಡಿಕೆ ಮತ್ತು ಸ್ವೀಕಾರ’ ಕುರಿತು ಸ್ಪಷ್ಟ ಪುರಾವೆಗಳಿರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಗದಗದ ನಿವೃತ್ತ ಸಬ್ ರಿಜಿಸ್ಟ್ರಾರ್ ಶ್ರೀಕಾಂತ್ ವಿರುದ್ಧ ಎಸಿಬಿ ಪೊಲೀಸರು ದಾಖಲಿಸಿದ್ದ ಲಂಚ ಪ್ರಕರಣವನ್ನು ರದ್ದುಪಡಿಸಿದೆ.
ಲಂಚ ಸ್ವೀಕಾರ ಆರೋಪದ ಮೇಲೆ ತಮ್ಮ ವಿರುದ್ಧ ಎಸಿಬಿ ಪೊಲೀಸರು ದಾಖಲಿಸಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಶ್ರೀಕಾಂತ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಗುತ್ತಿಗೆ ನೌಕರರಿಗೂ ಗ್ರ್ಯಾಚ್ಯುಟಿ ಅನ್ವಯ; ಹೈಕೋರ್ಟ್ ಮಹತ್ವದ ಆದೇಶ!
ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸೆಕ್ಷನ್ 7(ಎ) ಪ್ರಕಾರ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ದಾಳಿ ನಡೆಸುವಂತಹ ಸಂದರ್ಭದಲ್ಲಿ ಆರೋಪಿ ಸರ್ಕಾರಿ ಅಧಿಕಾರಿ ಮುಂದೆ ಕೆಲಸ ಬಾಕಿಯಿದ್ದು, ಅದನ್ನು ನಿರ್ವಹಿಸಲು ಅವರು ಲಂಚಕ್ಕಾಗಿ ಬೇಡಿಕೆ ಇಟ್ಟಿರಬೇಕಾಗುತ್ತದೆ ಹಾಗೂ ಲಂಚ ಸ್ವೀಕರಿಸಿರಬೇಕಾಗುತ್ತದೆ. ಆಗಷ್ಟೇ ಆರೋಪ ಸಾಬೀತುಪಡಿಸಲು ಸಾಧ್ಯವಿದೆ ಎಂದು ಪೀಠ ಹೇಳಿದೆ.
ಈ ಪ್ರಕರಣದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯ ಶೋಧನೆ ನಡೆಸಿದ್ದ ಎಸಿಬಿ ತನಿಖಾಧಿಕಾರಿಗಳು ಅರ್ಜಿದಾರರ ಕೈಯಲ್ಲಿದ್ದ 9,390 ರು. ಮತ್ತು ಅವರ ಜೇಬಿನಿಂದ 50 ರು. ವಶಕ್ಕೆ ಪಡೆದುಕೊಂಡಿದ್ದರು. ಆ ಮೊತ್ತವನ್ನು ಕಚೇರಿಯಲ್ಲಿ ದಾಖಲೆಗಳ ನೋಂದಣಿಗಾಗಿ ಶುಲ್ಕ ಸ್ವೀಕರಿಸಲಾಗಿದೆ ಎಂದು ಅರ್ಜಿದಾರರು ವಿವರಿಸಿದ್ದಾರೆ. ಹೀಗಿರುವಾಗ ಅರ್ಜಿದಾರರು ಬೇಡಿಕೆಯಿಟ್ಟು ಲಂಚ ಸ್ವೀಕರಿಸಿದ್ದಾರೆ ಎಂಬ ಅಂಶ ನಿಗೂಢವಾಗಿದೆ. ಮೇಲಾಗಿ ಎಸಿಬಿ ಅಧಿಕಾರಿಗಳು ಶೋಧನೆ ವೇಳೆ ಅರ್ಜಿದಾರರು ಬೇಡಿಕೆಯಿಟ್ಟ ಲಂಚ ಸ್ವೀಕರಿಸಿದ ಘಟನೆಯ ಪಂಚನಾಮೆ ಮಾಡಿಲ್ಲ. ಆದ್ದರಿಂದ ಪ್ರಕರಣ ವಿಚಾರಣೆಗೆ ಮುಂದುವರೆಸಿದರೆ ಕಾನೂನಿನ ದುರ್ಬಳಕೆಯಾಗಲಿದೆ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ.
ಇಂಥದ್ದೇ ಸ್ಥಳಕ್ಕೆ ವರ್ಗಾವಣೆ ಕೇಳುವ ಹಕ್ಕು ನೌಕರರಿಗಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು !
ಪ್ರಕರಣದ ವಿವರ:
ಗದಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಿಬ್ಬಂದಿ ಸಾರ್ವಜನಿಕರ ಕೆಲಸ ನಿರ್ವಹಣೆಗಾಗಿ ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆ. ಹೀಗಾಗಿ, ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಸತ್ಯಾಂಶ ಪರಿಶೀಲಿಸಬೇಕು ಹಾಗೂ ಅಗತ್ಯ ಕ್ರಮ ಜರುಗಿಸಬೇಕು ಎಂದು ಕೋರಿ 2019ರಲ್ಲಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್‌ಪಿಗೆ ಅನಾಮಧೇಯ ದೂರು ಸಲ್ಲಿಕೆಯಾಗಿತ್ತು. ಈ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿ ಪೊಲೀಸರು, ಗದಗ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿ ಶೋಧಿಸಿದ್ದರು. ಈ ವೇಳೆ ಅರ್ಜಿದಾರರ ಕೈಯಲ್ಲಿ 9,390 ರು. ಇದ್ದವು. ಆ ಹಣ ವಶಪಡಿಸಿಕೊಂಡಿದ್ದ ಎಸಿಬಿ ಪೊಲೀಸರು, ಶ್ರೀಕಾಂತ್ ವಿರುದ್ಧ ಲಂಚಕ್ಕೆ ಬೇಡಿಕೆಯಿಟ್ಟ ಹಾಗೂ ಲಂಚ ಸ್ವೀಕರಿಸಿದ ಆರೋಪದ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿತ್ತು. ಅದನ್ನು ಪ್ರಶ್ನಿಸಿ ಶ್ರೀಕಾಂತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.