ದೇಶದಲ್ಲಿ ಪ್ರಜಾಪ್ರಭುತ್ವ ಅತಂತ್ರವಾಗಿದೆ: ದೊರೆಸ್ವಾಮಿ

By Kannadaprabha NewsFirst Published Aug 16, 2020, 9:36 AM IST
Highlights

ಕೆಲ ಹಿಂದುತ್ವ ಪ್ರತಿಪಾದಕರು ಹಿಂದುಗಳನ್ನು ಪ್ರತ್ಯೇಕಗೊಳಿಸಿ ಈ ದೇಶವನ್ನು ಛಿದ್ರ ಮಾಡಬೇಕೆಂದು ವಿಚಾರ ಮಾಡುತ್ತಿದ್ದು ಅದಕ್ಕೆ ಯಾರೂ ಅವಕಾಶ ನೀಡಬಾರದು| ಸ್ವಸ್ಥ ಭಾರತ - ಎಸ್‌ಎಸ್‌ಎಫ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಭಿಮತ| 

ಬೆಂಗಳೂರು(ಆ.16): ದೇಶಕ್ಕೆ ಸ್ವಾತಂತ್ರ್ಯ ಬೇಕಾಬಿಟ್ಟಿ ಬಂದಿಲ್ಲ. ಹಲವರು ಪರಿಶ್ರಮ ಪಟ್ಟಿದ್ದು ತ್ಯಾಗ, ಬಲಿದಾನ ಮಾಡಿದ್ದಾರೆ. ಕೆಲ ಹಿಂದುತ್ವ ಪ್ರತಿಪಾದಕರು ಹಿಂದುಗಳನ್ನು ಪ್ರತ್ಯೇಕಗೊಳಿಸಿ ಈ ದೇಶವನ್ನು ಛಿದ್ರ ಮಾಡಬೇಕೆಂದು ವಿಚಾರ ಮಾಡುತ್ತಿದ್ದು ಅದಕ್ಕೆ ಯಾರೂ ಅವಕಾಶ ನೀಡಬಾರದು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹೇಳಿದರು.

ಶನಿವಾರ 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಸುನ್ನೀ ಸ್ಟುಡೆಂಟ್ಸ್‌ ಫೆಡರೇಷನ್‌(ಎಸ್‌ಎಸ್‌ಎಫ್‌) ಹಮ್ಮಿಕೊಂಡಿದ್ದ ‘ಸ್ವಸ್ಥ ಭಾರತ ನಿರ್ಮಾಣವಾಗಲಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಪ್ರಜಾಪ್ರಭುತ್ವ ಅತಂತ್ರವಾಗಿದ್ದು ಮಹಾತ್ಮರ ತ್ಯಾಗ, ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯ ಹರಣವಾಗುತ್ತಿದೆ. ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಕಾರ್ಮಿಕರನ್ನು ಹತೋಟಿ ಮಾಡುವ, ಸಾಮಾನ್ಯ ರೈತರಿಂದ ಜಮೀನು ಕಿತ್ತುಕೊಂಡು ಕಾರ್ಪೊರೇಟ್‌ ಕಂಪನಿಗಳು, ಖಾಸಗಿ ಶ್ರೀಮಂತರಿಗೆ ಮಾರುವಂತ ಕೆಲಸ ನಡೆಯುತ್ತಿದೆ. ಕೊರೋನಾವನ್ನೇ ನೆಪ ಮಾಡಿಕೊಂಡು ಜನವಿರೋಧಿ ಕೃತ್ಯಗಳನ್ನು ಎಸಗಲಾಗುತ್ತಿದೆ ಎಂದು ಆರೋಪಿಸಿದರು.

'ದೊರೆಸ್ವಾಮಿ ವಿರುದ್ಧ ಮಾತನಾಡುವವರಿಗೆ ಹುಚ್ಚು ಹಿಡಿದಿದ್ದು, ರೇಬಿಸ್‌ ಚುಚ್ಚುಮದ್ದು ಹಾಕಲಿ'

‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಕೋವಿಡ್‌ ಹಿನ್ನೆಲೆಯಲ್ಲಿ ಮಾಧ್ಯಮದ ಆರ್ಥಿಕತೆ ಸಂಪೂರ್ಣ ಕುಸಿದು ಹೋಗಿದೆ. ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು ನ್ಯಾಯಾಂಗದ ರೀತಿಯಲ್ಲಿ ಸೇವಾ ಕ್ಷೇತ್ರ ಎಂದು ಹೇಳಬಹುದು. ಆದರೂ ಅಂತಿಮವಾಗಿ ಆರ್ಥಿಕತೆಯೇ ಮುಖ್ಯವಾಗುತ್ತದೆ. ಮಾಧ್ಯಮ ನಡೆಸಲು ಕೋಟ್ಯಂತರ ರು. ವೆಚ್ಚವಾಗುತ್ತದೆ. ಆ ವೆಚ್ಚವನ್ನು ಭರಿಸಲು ಸಾಧ್ಯವಾದರೆ ಮಾತ್ರ ಮಾಧ್ಯಮವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯ ಎಂದರು.

ಒಂದು ಪತ್ರಿಕೆ ಮುದ್ರಿಸಲು 12 ರು.ಖರ್ಚಾಗುತ್ತದೆ. ಈಗ 12 ರು.ಗೆ ಮುದ್ರಿತವಾಗುವ ಪತ್ರಿಕೆಯನ್ನು ನಾಲ್ಕೈದು ರು.ಗಳಿಗೆ ಕೊಡುತ್ತಿದ್ದು, ಉಳಿದ ಆರು ರು.ಗಳ ಕೊರತೆ ತುಂಬಲು ಜಾಹೀರಾತುಗಳಿಗೆ ಆದ್ಯತೆ ನೀಡಬೇಕಾಗುತ್ತೆ. ಇದರಿಂದ ಸುದ್ದಿಯ ಜಾಗವನ್ನು ಜಾಹೀರಾತುಗಳು ಆಕ್ರಮಿಸಿಕೊಳ್ಳುತ್ತಿವೆ. ಸುದ್ದಿಗಳು ಓದುಗನ ಹಕ್ಕು ಆಗಿದ್ದರೂ ಜಾಹೀರಾತುಗಳ ನಡುವೆ ಸುದ್ದಿಯನ್ನು ತುರುಕಬೇಕಾದ ಪರಿಸ್ಥಿತಿ ಇದೆ. ಅದು ಆಗಬಾರದು ಎನ್ನುವುದಾದರೆ ಪತ್ರಿಕೆಗಳ ಬೆಲೆ ಇನ್ನಷ್ಟುಹೆಚ್ಚಾಗಬೇಕು. ಆಗ ಪತ್ರಿಕೆಯ ಓದುಗರ ಕೊಡುಗೆ ಜಾಸ್ತಿಯಾಗುತ್ತದೆ. ಜಾಹೀರಾತುಗಳ ಮೇಲಿನ ಹಂಗು ಕಡಿಮೆಯಾಗುತ್ತದೆ ಎಂದು ಹೇಳಿದರು.

ಹಿರಿಯ ಬರಹಗಾರ ಯೋಗೇಶ್‌ ಮಾಸ್ಟರ್‌, ಎಸ್‌ಎಸ್‌ಎಫ್‌ ಕಾರ್ಯದರ್ಶಿ ಯಾಕೂಬ್‌ ಮಾಸ್ಟರ್‌, ಕರ್ನಾಟಕ ಮುಸ್ಲಿಂ ಜಮಾತೇ ಪ್ರಧಾನ ಕಾರ್ಯದರ್ಶಿ ಶಫಿ ಸಅದಿ, ಪತ್ರಕರ್ತ ಬಿ.ಎಂ.ಹನೀಫ್‌, ಚಿಂತಕ ಅರವಿಂದ್‌ ಚೊಕ್ಕಾಡಿ, ಡಿವೈಎಫ್‌ ಅಧ್ಯಕ್ಷ ಮುನೀರ್‌ ಕಾಟಿಪಳ್ಳ, ಫ್ರೀಡಂ ಗೆಝಟ್‌ ಮುಖ್ಯಸಂಪಾದಕ ಮುಹಮ್ಮದ್‌ ಝೀಶಾನ್‌, ಎಸ್‌ಎಸ್‌ಎಫ್‌ ರಾಷ್ಟ್ರೀಯ ಕಾರ್ಯದರ್ಶಿ ಶರೀಫ್‌ ಮಾಸ್ಟರ್‌, ಬೆಂಗಳೂರು ಎಸ್‌ಎಸ್‌ಎಫ್‌ ಅಧ್ಯಕ್ಷ ಹಬೀಬ್‌ ನೂರಾನಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
 

click me!