ಬೆಂಗಳೂರು: ಬಿಐಇಸಿ ಆರೈಕೆ ಕೇಂದ್ರದಲ್ಲಿ ಕುಡಿವ ನೀರಿಗೂ ಪರದಾಟ

By Kannadaprabha NewsFirst Published Aug 16, 2020, 8:20 AM IST
Highlights

ಬಿಐಇಸಿ ಆವರಣದಲ್ಲಿಯೇ ಟ್ಯಾಂಕ್‌ ನೀರನ್ನು ನೇರವಾಗಿ 30 ಲೀಟರ್‌ನ ಬಾಟಲ್‌ಗೆ ತುಂಬಿ ಆ ನೀರನ್ನು ಅಲ್ಲಿನ ಸೋಂಕಿತರಿಗೆ ಪೂರೈಕೆ| ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌|  ಆರೈಕೆ ಪಡೆಯುತ್ತಿರುವ ಸೋಂಕಿತರು ಕಳವಳ| 

ಬೆಂಗಳೂರು(ಆ.16): ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನಾ ಕೇಂದ್ರದಲ್ಲಿ (ಬಿಐಇಸಿ) ನಿರ್ಮಿಸಲಾಗಿರುವ ಕೊರೋನಾ ಆರೈಕೆ ಕೇಂದ್ರ ಅವ್ಯವಸ್ಥೆಗಳ ಆಗರವಾಗಿದ್ದು, ಸೋಂಕಿತರು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋಟ್ಯಂತರ ರು. ವೆಚ್ಚದಲ್ಲಿ ತುಮಕೂರು ರಸ್ತೆಯ ಬಿಐಇಸಿಯಲ್ಲಿ 6 ಸಾವಿರ ಹಾಸಿಗೆಯ ಕೊರೋನಾ ಆರೈಕೆ ಕೇಂದ್ರ ನಿರ್ಮಿಸಲಾಗಿದ್ದು, ಸದ್ಯ 1500 ಹಾಸಿಗೆಗಳನ್ನು ಸೋಂಕಿತರ ಚಿಕಿತ್ಸೆಗೆ ಮುಕ್ತಗೊಳಿಸಲಾಗಿದೆ. ಆದರೆ, ಬಿಐಇಸಿಯ ಆರೈಕೆ ಕೇಂದ್ರದಲ್ಲಿರುವ ಸೋಂಕಿತರಿಗೆ ಟ್ಯಾಂಕ್‌ ನೀರನ್ನು ಕುಡಿಯುವುದಕ್ಕೆ ಪೂರೈಕೆ ಮಾಡಲಾಗುತ್ತಿದೆ.

ಬೆಂಗಳೂರಿನ ದೊಡ್ಡ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಬೆರಳೆಣಿಕೆ ಸೋಂಕಿತರು..!

ಬಿಐಇಸಿ ಆವರಣದಲ್ಲಿಯೇ ಟ್ಯಾಂಕ್‌ ನೀರನ್ನು ನೇರವಾಗಿ 30 ಲೀಟರ್‌ನ ಬಾಟಲ್‌ಗೆ ತುಂಬಿ ಆ ನೀರನ್ನು ಅಲ್ಲಿನ ಸೋಂಕಿತರಿಗೆ ಪೂರೈಕೆ ಮಾಡಲಾಗುತ್ತಿದೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅಲ್ಲಿ ಆರೈಕೆ ಪಡೆಯುತ್ತಿರುವ ಸೋಂಕಿತರು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಹಾಗೂ ಸರ್ಕಾರ ತಮ್ಮನ್ನು ಕೊರೋನಾ ಸೋಂಕು ಗುಣಪಡಿಸುವುದಕ್ಕಾಗಿ ಆರೈಕೆ ಕೇಂದ್ರಕ್ಕೆ ಕರೆತಂದಿದಾರೋ ಅಥವಾ ರೋಗ ಬರುವಂತೆ ಮಾಡುವುದಕ್ಕೆ ಕರೆದುಕೊಂಡು ಬಂದಾರೋ ಎಂದು ಆರೈಕೆ ಕೇಂದ್ರದಲ್ಲಿರುವ ರೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಆರೈಕೆ ಕೇಂದ್ರದಲ್ಲಿ ಶೌಚಾಲಯದಲ್ಲಿ ಬಳಕೆ ಮಾಡುವುದಕ್ಕೆ ಮತ್ತು ಸ್ನಾನ, ಬಟ್ಟೆತೊಳೆಯುವುದಕ್ಕೂ ನೀರಿನ ಸಮಸ್ಯೆ ಉಂಟಾಗಿದೆ. ಒಟ್ಟಾರೆ ಆರೈಕೆ ಕೇಂದ್ರ ಅವ್ಯವಸ್ಥೆಗಳ ಆಗರವಾಗಿದೆ ಎಂಬುದು ಮಾತ್ರ ಸುಳ್ಳಲ್ಲ.
ಈ ಕುರಿತು ಪ್ರತಿಕ್ರಿಯೆ ನೀಡಿ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಕುಡಿಯುವ ನೀರಿನ ಸಮಸ್ಯೆ ಹಾಗೂ ಆರೈಕೆ ಕೇಂದ್ರದ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
 

click me!