ಗಲಭೆ ಬಳಿಕ ಮೊಬೈಲ್ ಅವಿತಿಟ್ಟಿದ್ದ| ಪೊಲೀಸ್ ತನಿಖೆ ವೇಳೆ ಬೆಳಕಿಗೆ| ಮನೆಗೆ ನವೀನ್‌ನನ್ನು ಕರೆತಂದು ಮಹಜರು| ಪೊಲೀಸರಿಂದ ಮೊಬೈಲ್ ಜಪ್ತಿ|
ಬೆಂಗಳೂರು(ಆ.16): ತನ್ನ ಮನೆಯಲ್ಲೇ ಕುಳಿತೇ ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮಗುರು ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಅನ್ನು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರಳಿಯ ನವೀನ್ ಮಾಡಿದ್ದ ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಕಾವಲ್‌ಬೈರಸಂದ್ರದಲ್ಲಿರುವ ನವೀನ್ ಮನೆಗೆ ಆತನನ್ನು ಶನಿವಾರ ಕರೆತಂದು ಪೊಲೀಸರು ಸ್ಥಳ ಮಹಜರ್ ನಡೆಸಿದ್ದಾರೆ.
undefined
ವಿವಾದಾತ್ಮಕ ಪೋಸ್ಟ್ ಮಾಡಿದ್ದ ಬಳಿಕ ಗಲಭೆ ಶುರುವಾದ ಕೂಡಲೇ ಭಯಗೊಂಡ ನವೀನ್, ತನ್ನ ಮೊಬೈಲ್ ಅನ್ನು ಮನೆಯಲ್ಲೇ ಅವಿತಿಟ್ಟಿದ್ದ. ಮೊದಲು ಮೊಬೈಲ್ ಕಳುವಾಗಿದೆ ಎಂದು ಹೇಳುತ್ತಿದ್ದ ಆರೋಪಿಯನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಯಿತು. ಮೊಬೈಲ್ ಅನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಂಧಲೆ: ಜನರನ್ನು ಗುಂಪುಗೂಡಿಸಲು ಫೇಸ್‌ಬುಕ್, ಇನ್‌ಸ್ಟಾ ಲೈವ್..!
ಫೈರೋಜ್‌ಗೆ ಪ್ರತಿಕ್ರಿಯಿಸಿದ್ದೆ:
ಫೇಸ್‌ಬುಕ್‌ನಲ್ಲಿ ರಾಮನ ಕುರಿತು ಆಕ್ಷೇಪಾರ್ಹ ಪೋಸ್ಟ್ ಮಾಡಿ ನನಗೆ ಎಸ್‌ಡಿಪಿಐ ಮುಖಂಡ ಫೈರೋಜ್ ಪಾಷ ಟ್ಯಾಗ್ ಮಾಡಿದ್ದ. ಇದಕ್ಕೆ ಪ್ರತಿಯಾಗಿ ಗೂಗಲ್‌ನಲ್ಲಿ ಸಿಕ್ಕಿದ ಇಮೇಜ್ ಅನ್ನು ಟ್ಯಾಗ್ ಮಾಡಿದೆ. ಇದು ಉದ್ದೇಶ ಪೂರ್ವಕ ಅಲ್ಲ. ಫೈರೋಜ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದೆ ಎಂದು ನವೀನ್ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ಹೇಳಿವೆ.
ಫೇಸ್‌ಬುಕ್‌ನಲ್ಲಿ ಮಂಗಳವಾರ ಮಧ್ಯಾಹ್ನ 1.46 ಗಂಟೆಗೆ ಫೈರೋಜ್ ಟ್ಯಾಗ್ ಮಾಡಿದ್ದ. ಈ ಪೋಸ್ಟ್ ಅನ್ನು ಸಂಜೆ 5.46 ನಿಮಿಷಕ್ಕೆ ನೋಡಿದ್ದ ನವೀನ್, ಫೈರೋಜ್‌ಗೆ ಪ್ರತ್ಯುತ್ತರ ನೀಡಲು ಮುಂದಾಗಿದ್ದಾನೆ. ಆಗ ಗೂಗಲ್‌ನಲ್ಲಿ ಇಸ್ಲಾಂ ಧರ್ಮಗುರು ಪೈಗಂಬರ್ ಕುರಿತ ಆಕ್ಷೇಪಾರ್ಹ ಬರಹದ ಇಮೇಜ್ ಅನ್ನು ಸ್ಕ್ರೀನ್ ಶಾಟ್ ತೆಗೆದು ಫೈರೋಜ್‌ಗೆ ಟ್ಯಾಗ್ ಮಾಡಿದ್ದಾನೆ. ಈ ಪೋಸ್ಟ್ ಮಾಡಿದ ಬಳಿಕ ಸಂಜೆ ಮನೆಯಿಂದ ನವೀನ್ ಹೊರ ಹೋಗಿದ್ದ. ಆ ಗಲಾಟೆ ಶುರುವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹೀಗಾಗಿ ಪೋಸ್ಟ್ ಮಾಡಿರುವ ಮನೆಯಲ್ಲಿ ಆಗಿರುವುದರಿಂದ ಬೆಳಗ್ಗೆ 10 ಗಂಟೆ ಸುಮಾರಿಗೆ ಆರೋಪಿಯನ್ನು ಕರೆ ತಂದು ಮಹಜರ್ ನಡೆಸಲಾಗಿದೆ. ಸೋಮವಾರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.