
ಬೆಂಗಳೂರು(ಜೂ.11): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ ಯೋಜನೆ’ಗೆ ಭಾನುವಾರ ಬೆಳಗ್ಗೆ 11ಕ್ಕೆ ವಿಧಾನಸೌಧದ ಪೂರ್ವ ದ್ವಾರದ ಮುಂಭಾಗ (ಗ್ರಾಂಡ್ ಸ್ಟೆಫ್ಸ್) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದಲೇ ರಾಜ್ಯದ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸಬಹುದು.
ಕಾರ್ಯಕ್ರಮದಲ್ಲಿ ಬಿಎಂಟಿಸಿಯ ಎರಡು ಬಸ್‌ಗಳಿಗೆ ಚಾಲನೆ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ ಆಯ್ದ ಮಹಿಳೆಯರಿಗೆ ಸ್ಮಾರ್ಚ್‌ಕಾರ್ಡ್ ವಿತರಿಸುವರು. ನಂತರ ವಿಧಾನಸೌಧದಿಂದ ಮೆಜೆಸ್ಟಿಕ್‌ವರೆಗೆ ಬಿಎಂಟಿಸಿ ಬಸ್‌ನಲ್ಲಿ ಆಗಮಿಸುವರು. ಮೆಜೆಸ್ಟಿಕ್‌ನಲ್ಲಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಾಂಕೇತಿಕವಾಗಿ ಪ್ರಯಾಣಿಕರಿಗೆ ಶೂನ್ಯದರದ ಟಿಕೆಟ್ ವಿತರಿಸುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಮತ್ತಿತರರು ಸಾಥ್ ನೀಡಲಿದ್ದಾರೆ.
ಬಸ್ಸಿನಲ್ಲಿ ಶೋಭಾ ಕರಂದ್ಲಾಜೆಗೂ ಫ್ರೀ ಎಂದ ಕಾಂಗ್ರೆಸ್‌ಗೆ ಕೇಂದ್ರ ಸಚಿವೆ ತರಾಟೆ
ಮಹಿಳೆಯರು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಇನ್ನಿತರೇ ಸೂಕ್ತ ದಾಖಲೆ ತೋರಿಸಿ ಪ್ರಯಾಣ ಮಾಡಬಹುದು. ಆದರೆ, ಎಸಿ, ರಾಜಹಂಸ, ಅಂಬಾರಿ ಸೇರಿದಂತೆ ಐಷಾರಾಮಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಅನ್ವಯವಾಗುವುದಿಲ್ಲ.
ಭಾನುವಾರ ಮಧ್ಯಾಹ್ನದಿಂದ ಸೇವಾಸಿಂಧು ಪೋರ್ಟಲ್‌ನಲ್ಲಿ ಶಕ್ತಿ ಸ್ಮಾರ್ಚ್ ಕಾರ್ಡ್ ನೋಂದಣಿ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಲಿದೆ. ಸ್ಮಾರ್ಚ್‌ಕಾರ್ಡ್‌ಗಳನ್ನು ಪಡೆಯಲು ಸರ್ಕಾರ ಮೂರು ತಿಂಗಳವರೆಗೆ ಗಡುವು ನೀಡಿದ್ದು, ಉಚಿತ ಪ್ರಯಾಣಕ್ಕೆ ಇದು ಕಡ್ಡಾಯವಾಗಿದೆ.
ವಿಧಾನಸೌಧ ಸಜ್ಜು:
ಶಕ್ತಿ ಯೋಜನೆಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಧಾನಸೌಧದ ಪೂರ್ವ ದ್ವಾರದ ಮುಂಭಾಗ ಶಾಮಿಯಾನ ಹಾಕಲಾಗಿದ್ದು, ವೇದಿಕೆಯನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು, ಅಧಿಕಾರಿಗಳು, ಸಾರ್ವಜನಿಕರಿಗಾಗಿ 2500ಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಪೂರ್ವ ಸಿದ್ಧತಾ ಕಾರ್ಯಗಳನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ಜಿಲ್ಲಾಧಿಕಾರಿ ದಯಾನಂದ್ ಸೇರಿದಂತೆ ಮತ್ತಿತರರು ಪರಿಶೀಲಿಸಿದರು. ಇದೇ ವೇಳೆ, ರಾಜ್ಯಾದ್ಯಂತ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಉಚಿತ ಬಸ್ ಪ್ರಯಾಣ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಸ್ಟಿಕರ್, ಫಲಕ ಅಳವಡಿಕೆ:
ಮಹಿಳೆಯರು ಸುಲಭವಾಗಿ ಬಸ್‌ಗಳನ್ನು ಗುರುತಿಸಲು ಸಾಮಾನ್ಯ ಮತ್ತು ವೇಗದೂತ ಬಸ್‌ಗಳಿಗೆ ‘ಉಚಿತ ಬಸ್ ಪ್ರಯಾಣ ಸೇವೆ’ ಎಂಬ ಫಲಕಗಳು ಮತ್ತು ಎಲೆಕ್ಟ್ರಾನಿಕ್ ಫಲಕಗಳನ್ನು ಅಳವಡಿಸಲಾಗುತ್ತಿದೆ. ಹಾಗೆಯೇ ಅಂತರ್ ರಾಜ್ಯ ಬಸ್‌ಗಳ ಮುಂಭಾಗದಲ್ಲಿ ‘ಅಂತರ್‌ರಾಜ್ಯ’ ಎಂಬ ಸ್ಟಿಕ್ಕರ್ ಅಳವಡಿಸಲಾಗುತ್ತಿದೆ. ಈ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ಈಗಾಗಲೇ ಶೂನ್ಯ ದರದ ಟಿಕೆಟ್ ವಿತರಣೆಗೆ ಅಗತ್ಯವಿರುವ ಎಲೆಕ್ಟ್ರಾನಿಕ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮದ ಉದ್ಘಾಟನೆ ಆದ ನಂತರ ಮಧ್ಯಾಹ್ನ 1 ಗಂಟೆಯ ಬಳಿಕ ಉಚಿತ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದೇವೆ. ಅದಕ್ಕೂ ಮೊದಲು ಗೊಂದಲ ಮಾಡಿಕೊಳ್ಳಬಾರದು. ಮೂರು ತಿಂಗಳ ಒಳಗಾಗಿ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸುತ್ತೇವೆ. ಏಕೆಂದರೆ ಹೊರ ರಾಜ್ಯದ ಮಹಿಳೆಯರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ನಮ್ಮ ರಾಜ್ಯದ ಮಹಿಳೆಯರ ಅನುಕೂಲಕ್ಕೆ ಸ್ಮಾರ್ಟ್ ಕಾರ್ಡ್ ವಿತರಿಸುತ್ತೇವೆ ಅಂತ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಹೇಳಿದ್ದಾರೆ.
News Hour: ಕೈ ಸರ್ಕಾರದ ಮೊದಲ ಗ್ಯಾರಂಟಿ ಜಾರಿಗೆ ಕ್ಷಣಗಣನೆ!
ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣಿಸುವ ‘ಶಕ್ತಿ’ ಯೋಜನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ ಅಗತ್ಯವಿರುವ ತರಬೇತಿ ಕೊಡಲಾಗಿದೆ. ಭಾನುವಾರ ಮಧ್ಯಾಹ್ನದಿಂದಲೇ ಮಹಿಳಾ ಪ್ರಯಾಣಿಕರಿಗೆ ಎಲೆಕ್ಟ್ರಾನಿಕ್ ಟಿಕೆಟ್ ವಿತರಣೆ ಮಾಡಲಾಗುವುದು ಅಂತ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ತಿಳಿಸಿದ್ದಾರೆ.
ಸಾಂಕೇತಿಕವಾಗಿ ಸಿಎಂ ಸಿದ್ದು ಟಿಕೆಟ್ ವಿತರಣೆ
ವಿಧಾನಸೌಧ ಮುಂಭಾಗ ‘ಶಕ್ತಿ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಆಯ್ದ ಮಹಿಳೆಯರಿಗೆ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸಲಿದ್ದಾರೆ. ಬಳಿಕ ಬಿಎಂಟಿಸಿ ಬಸ್‌ನಲ್ಲಿ ವಿಧಾನಸೌಧದಿಂದ ಮೆಜೆಸ್ಟಿಕ್‌ವರೆಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ಸಾಂಕೇತಿಕವಾಗಿ ಮಹಿಳೆಯರಿಗೆ ಶೂನ್ಯ ಪ್ರಯಾಣದರದ ಟಿಕೆಟ್ ಅನ್ನು ನೀಡಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ