* 1074 ಜನರಲ್ಲಿ ಸೋಂಕು, 1136 ಜನ ಚೇತರಿಕೆ
* ಗುರುವಾರ 1.57 ಲಕ್ಷ ಮಂದಿ ಕೋವಿಡ್ ಲಸಿಕೆ
* ರಾಜ್ಯದ ಪಾಸಿಟಿವಿಟಿ ದರ ಶೇ.0.63 ದಾಖಲು
ಬೆಂಗಳೂರು(ಸೆ.10): ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಇಳಿದಿದ್ದು, ಗುರುವಾರ ನಾಲ್ಕು ಮಂದಿ ಮೃತರಾಗಿದ್ದಾರೆ. 1,074 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. 1,136 ಮಂದಿ ಚೇತರಿಸಿಕೊಂಡಿದ್ದಾರೆ.
ಕಳೆದ ಮಾರ್ಚ್ 21ರಂದು ಇಬ್ಬರು ಮೃತರಾಗಿದ್ದರು. ಆ ಬಳಿಕ ಕೋವಿಡ್ ಪ್ರಕರಣಗಳ ಏರಿಕೆ ಹಾಗೂ ಮೃತಪಡುವವರ ಸಂಖ್ಯೆಯಲ್ಲಿಯೂ ಏರಿಕೆ ದಾಖಲಾಗಿತ್ತು. ಇದೀಗ 172 ದಿನಗಳ ಬಳಿಕ ಕನಿಷ್ಠ ಸಂಖ್ಯೆಯ ಸಾವು ಗುರುವಾರ ವರದಿಯಾಗಿದೆ. ಮರಣ ದರ ಕೂಡ ಶೇ.0.37ಕ್ಕೆ ಕುಸಿದಿದೆ.
undefined
ಬೆಂಗಳೂರು ನಗರದಲ್ಲಿ 3, ಹಾಸನದಲ್ಲಿ 1 ಸಾವು ವರದಿಯಾಗಿದೆ. 28 ಜಿಲ್ಲೆಯಲ್ಲಿ ಗುರುವಾರ ಕೋವಿಡ್ ಸಾವು ದಾಖಲಾಗಿಲ್ಲ. ಸದ್ಯ 16,992 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು ಬೆಂಗಳೂರು ನಗರ (7,208) ಮತ್ತು ದಕ್ಷಿಣ ಕನ್ನಡ (2,082) ಜಿಲ್ಲೆಯಲ್ಲಿದೆ. ಬಾಗಲಕೋಟೆ, ಬೀದರ್, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಸೋಂಕಿನ ಹೊಸ ಪ್ರಕರಣ ಪತ್ತೆಯಾಗಿಲ್ಲ.
ಇನ್ಮುಂದೆ ವೀಕೆಂಡ್ ಕರ್ಫ್ಯೂ ಇಲ್ಲ, ರಾಜ್ಯ ಸರ್ಕಾರ ಆದೇಶ
13 ಜಿಲ್ಲೆಯಲ್ಲಿ ಒಂದಂಕಿಯಲ್ಲಿ ಪ್ರಕರಣ ವರದಿಯಾಗಿದೆ. ಅತಿ ಹೆಚ್ಚು ಪ್ರಕರಣ ಬೆಂಗಳೂರು ನಗರ (343), ದಕ್ಷಿಣ ಕನ್ನಡ (176) ಮತ್ತು ಉಡುಪಿ (126) ಜಿಲ್ಲೆಯಲ್ಲಿ ಪತ್ತೆಯಾಗಿದೆ. ರಾಜ್ಯದ ಪಾಸಿಟಿವಿಟಿ ದರ ಶೇ.0.63 ದಾಖಲಾಗಿದೆ.
ರಾಜ್ಯದಲ್ಲಿ ಈವರೆಗೆ ಒಟ್ಟು 29.59 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 29.04 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 37,462 ಮಂದಿ ಮರಣವನ್ನಪ್ಪಿದ್ದಾರೆ. ಗುರುವಾರದ 1.69 ಲಕ್ಷ ಸೇರಿದಂತೆ ಒಟ್ಟು 4.49 ಕೋಟಿ ಕೋವಿಡ್ ಪರೀಕ್ಷೆ ನಡೆದಿದೆ.
ಲಸಿಕೆ ಅಭಿಯಾನ:
ಗುರುವಾರ 1.57 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಮೊದಲ ಡೋಸ್ 79,274 ಮಂದಿ ಮತ್ತು 78,389 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ. ಈವರೆಗೆ ಒಟ್ಟು 4.70 ಕೋಟಿ ಡೋಸ್ ಲಸಿಕೆ ವಿತರಣೆಯಾಗಿದ್ದು 1.20 ಕೋಟಿ ಮಂದಿ ಎರಡೂ ಡೋಸ್ ಪೂರ್ಣಗೊಳಿಸಿದ್ದಾರೆ. 3.49 ಕೋಟಿ ಮಂದಿ ಮೊದಲ ಡೋಸ್ ಪಡೆದಿದ್ದಾರೆ.
ಗುರುವಾರ ಆರೋಗ್ಯ ಕಾರ್ಯಕರ್ತರು 9 ಮಂದಿ, ಮುಂಚೂಣಿ ಕಾರ್ಯಕರ್ತರು 13 ಮಂದಿ, 18 ರಿಂದ 44 ವರ್ಷದೊಳಗಿನ 59,888 ಮಂದಿ, 45 ವರ್ಷ ಮೇಲ್ಪಟ್ಟ78,389 ಮಂದಿ ಮೊದಲ ಡೋಸ್ ಪಡೆದಿದ್ದಾರೆ. ಆರೋಗ್ಯ ಕಾರ್ಯಕರ್ತರು 848 ಮಂದಿ, ಮುಂಚೂಣಿ ಕಾರ್ಯಕರ್ತರು 2,827 ಮಂದಿ, 18 ರಿಂದ 44 ವರ್ಷದೊಳಗಿನ 49,459 ಮಂದಿ, 45 ವರ್ಷ ಮೇಲ್ಪಟ್ಟ 25,255 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ.