ಸರ್ಕಾರಕ್ಕೆ ಸಡ್ಡು: ಹಲವೆಡೆ ಅದ್ಧೂರಿ ಚೌತಿ

By Kannadaprabha NewsFirst Published Sep 10, 2021, 8:14 AM IST
Highlights

* ಬರೀ 5 ದಿನ ಆಚರಣೆ, ಮೂರ್ತಿ ಎತ್ತರ ಮಿತಿಗೆ ಹಿಂದೂ ಸಂಘಟನೆಗಳ ಆಕ್ಷೇಪ
* ಕೇಸು ಹಾಕಿದ್ರೂ ಆಚರಿಸುವುದಾಗಿ ಘೋಷಣೆ
* ರಾಜ್ಯದ ಹಲವೆಡೆ ಪ್ರತಿಭಟನೆ
 

ಬೆಂಗಳೂರು(ಸೆ.10): ಕೋವಿಡ್‌ ಹಿನ್ನೆಲೆಯಲ್ಲಿ ಗಣೇಶೋತ್ಸವವನ್ನು ಸರಳವಾಗಿ ಆಚರಿಸುವಂತೆ ಸರ್ಕಾರ ಮಾರ್ಗಸೂಚಿ ವಿಧಿಸಿರುವುದಕ್ಕೆ ನಾಡಿನ ವಿವಿಧೆಡೆಯಿಂದ ಅಪಸ್ವರಗಳು ಕೇಳಿ ಬರುತ್ತಿವೆ. ಚುನಾವಣೆ, ರಾಜಕೀಯ ಸಮಾರಂಭಗಳಿಗೆ ಇರದ ನೀತಿ ನಿಯಮಗಳು ಕೇವಲ ಕ್ಕೆ ಮಾತ್ರ ಯಾಕೆ ಎಂದು ಖಾರವಾಗಿ ಪ್ರಶ್ನಿಸಿರುವ ಹಿಂದೂಪರ ಮುಖಂಡರು ಅದ್ಧೂರಿಯಾಗಿ ಚೌತಿ ಆಚರಿಸಿಯೇ ಸಿದ್ಧ ಎಂದು ಸರ್ಕಾರಕ್ಕೆ ಸಡ್ಡು ಹೊಡೆದಿದ್ದಾರೆ.

ಈ ವಿಚಾರವಾಗಿ ರಾಜ್ಯ ರಾಜಧಾನಿ ಬೆಂಗಳೂರು, ಗದಗ, ಮಹಾಲಿಂಗಪುರ ಸೇರಿದಂತೆ ಕೆಲವೆಡೆ ಪ್ರತಿಭಟನೆಗಳೂ ನಡೆದಿದ್ದು ನೀವು ಏನು ಮಾಡುತ್ತೀರೋ ಮಾಡಿ, ನಾವು ಗಣಪತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಯೇ ಸಿದ್ಧ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಅನಗತ್ಯವಾಗಿ ಧಾರ್ಮಿಕ ವಿ​ವಿಧಾನಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಒಪ್ಪಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರ್ಖತನದ ಪರಮಾವಧಿ:

ಕೇವಲ 5 ದಿನ ಮಾತ್ರ ಗಣಪತಿ ಇಟ್ಟು ವಿಸರ್ಜನೆ ಮಾಡಬೇಕು ಎಂಬ ಸರ್ಕಾರದ ನಿಬಂಧನೆಯನ್ನು ವಿರೋಧಿಸಿರುವ ಬಜರಂಗದಳ ಶಿವಮೊಗ್ಗ ವಿಭಾಗದ ಸಂಯೋಜಕ ಪ್ರಭಂಜನ್‌, ಚಿತ್ರದುರ್ಗದಲ್ಲಿ 21 ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವುದಾಗಿ ತಿಳಿಸಿದ್ದಾರೆ. ರಾಜ್ಯ ಸರ್ಕಾರ ವಿ​ಧಿಸಿರುವ ಷರತ್ತುಗಳು ಮೂರ್ಖತನದ ಪರಮಾವ​ಧಿಯಾಗಿದ್ದು ಗಣಪತಿ ವಿಗ್ರಹದ ಎತ್ತರಕ್ಕೂ ಕೋವಿಡ್‌ಗೂ ಏನು ಸಂಬಂಧ ಎಂದು ವ್ಯಂಗ್ಯವಾಡಿದ್ದಾರೆ. ಕೇವಲ ಐದು ದಿನದಲ್ಲಿ ಭಕ್ತರನ್ನು ನಿಯಂತ್ರಿಸುವುದು ಕಷ್ಟ. ಆದ್ದರಿಂದ ಚಿತ್ರದುರ್ಗದಲ್ಲಿ 21 ದಿನ ಇಟ್ಟು ವಿಸರ್ಜನೆ ಮಾಡುತ್ತೇವೆ. ಶೋಭಾಯಾತ್ರೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಗಣೇಶೋತ್ಸವ ನಿರ್ಬಂಧ ಸಡಿಲಿಕೆ ಇಲ್ಲ: ಪ್ರತಿ ವಾರ್ಡ್‌ಗೆ ಒಂದೇ ಗಣಪ, 3 ದಿನ ಉತ್ಸವ!

ನಿಬಂಧನೆ ಧಿಕ್ಕರಿಸಲು ಕರೆ:

ಯಾದಗಿರಿಯ ಶಿವಾಜಿ ಸೇನೆ ರಾಜ್ಯಾಧ್ಯಕ್ಷ ಪರಶುರಾಮ… ಶೇಗುರಕರ್‌ ಅವರು ಸರ್ಕಾರ ರೂಪಿಸಿರುವ ನಿಯ​ಮ​ ನಿಬಂಧನೆಗ​ಳನ್ನು ಧಿಕ್ಕ​ರಿ​ಸು​ವಂತೆ ತಿಳಿಸಿದ್ದಾರೆ. ಗಣೇಶ ಹಬ್ಬ ಬಹಳ ವಿಜೃಂಭಣೆಯಿಂದ 11 ದಿನ ಅಥವಾ 21 ದಿನ ಮಾಡಿ. ಯಾವನೇ ಬಂದರೂ ನಮ್ಮ ಸಂಘಟನೆ ಹೆಸರು ಹೇಳಿ. ಬಂದದ್ದು ಬರಲಿ ನೋಡೇ ಬಿಡೋಣ ಎಂದು ಘೋಷಿಸಿದ್ದಾರೆ. ಮಾತ್ರವಲ್ಲದೆ ಹಿಂದೂ​ಗಳು ಗಣೇ​ಶನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದನ್ನು ಯಾರಿಂ​ದಲೂ ತಡೆ​ಯ​ಲಾ​ಗ​ದು. ಹಿಂದೂಗಳು ಮನೆಗೊಂದು ತಲವಾರ್‌ ಇಡಬೇಕು ಎಂದು ಸಾರ್ವಜನಿಕವಾಗಿಯೇ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

ಜೈಲಿಗೂ ಹಾಕಿದರೂ ಜಗ್ಗಲ್ಲ:

ಇನ್ನು ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಹಿಂದೂ ಮಹಾಗಣಪತಿ ಮಹಾ ಮಂಡಳಿಯ ಗೌರವ ಉಪಾಧ್ಯಕ್ಷ ಕೆಸರಟ್ಟಿಯ ಶಂಕರಲಿಂಗ ಗುರುಪೀಠದ ಸೋಮಲಿಂಗ ಶ್ರೀ ಜೈಲಿಗೆ ಒಯ್ದರೂ ಗುಂಡು ಹಾಕಿದರೂ ಗಣೇಶೋತ್ಸವ ಆಚರಣೆ ಬಿಡುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಹಿಂದೂಗಳ ಹಬ್ಬ ಹರಿದಿನಗಳು ಬಂದಾಗ ಷರತ್ತುಗಳನ್ನು ವಿಧಿಸುವ ಮೂಲಕ ಭಕ್ತರ ಭಾವನೆಗಳಿಗೆ ಬೆಂಕಿ ಇಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಕೇವಲ 5 ದಿನಗಳ ಕಾಲ ಗಣೇಶೋತ್ಸವ ಆಚರಣೆಗೆ ಗಣೇಶ ಆಚರಣೆ ಮಂಡಳಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಂಗಳೂರಿನಲ್ಲಿ ಸಿಎಂ ಭೇಟಿಯಾಗಿ ಮಾತನಾಡಿರುವ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಬೆಳಗಾವಿಯಲ್ಲಿ 11 ದಿನಗಳ ಗಣೇಶೋತ್ಸವಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಯಿಂದ ಇದುವರೆಗೆ ಅಧಿಕೃತ ಆದೇಶವಾಗಿಲ್ಲ.

ಅಲ್ಲಲ್ಲಿ ಪ್ರತಿಭಟನೆ:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾರ್ಡಿಗೆ ಒಂದೇ ಗಣಪತಿ, ಮೂರು ದಿನಕ್ಕೆ ಸೀಮಿತ ಆಚರಣೆ ಎಂಬ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಾರ್ಗಸೂಚಿಯನ್ನು ವಿರೋಧಿಸಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಕಾರ್ಯಕರ್ತರು ಗುರುವಾರ ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗದಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಶ್ರೀರಾಮ ಸೇನಾ ಕಾರ್ಯಕರ್ತರು, ಸರ್ಕಾರ ಸ್ಪಂದಿಸಲಿ ಬಿಡಲಿ ನಾವು ಮಾತ್ರ 9 ದಿನಗಳ ಕಾಲ ಆಚರಣೆ ಮಾಡುತ್ತೇವೆ ಎಂದು ಘೋಷಿಸಿದರು. ಇನ್ನು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ನಾವು ಗಣಪತಿ ಕೂರಿಸುತ್ತೇವೆ. ನಿಮಗೆ ತಾಕತ್ತಿದ್ದರೆ ನಮ್ಮ ಮೇಲೆ ಕೇಸ್‌ ಹಾಕಿ ಏನು ಬೇಕಾದರೂ ಮಾಡಿ. ನಾವು ಮಾತ್ರ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದು ಹಿಂದೂ ಪರ ಸಂಘಟನೆಗಳು ಮಾನ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟಿಸಿದರು.
 

click me!