RSS Leader's Statement: ಹೊಸಬಾಳೆ ಅವರ ಮನಸು 'ಮನುಸ್ಮೃತಿ' ತೋರಿಸಿದೆ: ಮಾಜಿ ಶಾಸಕ ಕಿಡಿ

Ravi Janekal   | Kannada Prabha
Published : Jun 29, 2025, 06:36 AM IST
Former MLA Prof. Raju Alagur condemns controversial statement of RESS leader Dattatreya Hosabale

ಸಾರಾಂಶ

ದತ್ತಾತ್ರೇಯ ಹೊಸಬಾಳೆ ಅವರ ಸಂವಿಧಾನ ವಿರೋಧಿ ಹೇಳಿಕೆಯನ್ನು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಖಂಡಿಸಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನವನ್ನು ವಿರೋಧಿಸುತ್ತಾ ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿ ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿ ದಲಿತ ನಾಯಕರು ಪಕ್ಷ ತೊರೆಯಬೇಕೆಂದು ಕರೆ ನೀಡಿದ್ದಾರೆ.

ವಿಜಯಪುರ (ಜೂ.29): ಸಂವಿಧಾನದ ಪೀಠಿಕೆಯಿಂದ ಸಮಾಜವಾದಿ ಮತ್ತು ಜಾತ್ಯಾತೀತ ಪದಗಳನ್ನು ಕಿತ್ತುಹಾಕಬೇಕೆಂದು ಆರ್‌ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿಕೆ ಖಂಡನೀಯ. ಬಿಜೆಪಿ ಹಾಗೂ ಆರ್​ಎಸ್​ಎಸ್ ನಾಯಕರು ಸಂವಿಧಾನವನ್ನು ಅದರ ರಚನೆಯ ದಿನದಿಂದಲೇ ವಿರೋಧಿಸುತ್ತಾ ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸಬಾಳೆ ಅವರ ಮನಸು ಮನುಸ್ಮೃತಿಯನ್ನು ಎತ್ತಿ ತೋರಿಸುತ್ತಿದೆ. ಬಿಜೆಪಿಯು ಬಿ.ಎನ್.ರಾವ್ ಸಂವಿಧಾನ ರಚನೆ ಮಾಡಿದ್ದಾರೆ ಎಂದು ಹೇಳುವ ಮೂಲಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಹಾಗೂ ಅವರ ಸಾಧನೆಯನ್ನು ದಲಿತರು ಎನ್ನುವ ಕಾರಣಕ್ಕೆ ತುಳಿಯುವ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನದ ಕರಡು ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಚುನಾಯಿತರಾಗಿಯೇ ಹೊರತು ನಾಮನಿರ್ದೇಶನಗೊಂಡಿಲ್ಲ ಎನ್ನುವುದನ್ನು ಬಿಜೆಪಿಗರು ತಿಳಿದುಕೊಳ್ಳಲಿ. ಬಿಜೆಪಿಯಲ್ಲಿರುವ ದಲಿತ ನಾಯಕರು ಸಂಘ ಪರಿವಾರದ ದುರುದ್ದೇಶ ಅರ್ಥಮಾಡಿಕೊಂಡು ಬಿಜೆಪಿ ತೊರೆಯಬೇಕು ಎಂದು ದಲಿತ ನಾಯಕರಿಗೆ ಕರೆ ನೀಡುತ್ತೇನೆ ಎಂದು ಹೇಳಿದರು.

ಬಿ.ಎನ್.ರಾವ್ ಅವರದ್ದು ಕೇವಲ ಕ್ಲರ್ಕ್ ಕೆಲಸ. ಕೇವಲ ಟೈಪ್ ಮಾಡುವುದಷ್ಟೇ ಅವರ ಕೆಲಸವಾಗಿತ್ತು. ಆದರೆ ಬಿಜೆಪಿಗರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಬ್ರಾಹ್ಮಣ ಶಾಹಿಗಳು, ಮನುವಾದಿಗಳು ರಾವ್ ಅವರು ಸಂವಿಧಾನ ಬರೆದಿದ್ದಾರೆ. ಸಂವಿಧಾನ ಅಂಬೇಡ್ಕರ್ ಬರೆದಿಲ್ಲ ಎನ್ನುವ ಸುಳ್ಳನ್ನು ಹರಡುವ ತಪ್ಪು ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದರು. ಇಂದಿರಾಗಾಂಧಿ ಅವರಿಗೆ ದೇಶದಲ್ಲಿ ಸಮಾನತೆ ತರುವುದು ಅತೀ ಮುಖ್ಯವಾಗಿತ್ತು. ದಲಿತರು, ಹಿಂದುಳಿದವರಿಗೆ ಸಮಾಜಿಕ ನ್ಯಾಯ ಕಲ್ಪಿಸುವ ಸದುದ್ದೇಶದಿಂದ ಸಂವಿಧಾನಕ್ಕೆ ೪೨ನೇ ತಿದ್ದುಪಡಿ ತಂದು ಸಮಾಜವಾದಿ, ಜಾತ್ಯಾತೀತ ಎಂಬ ಪದಗಳನ್ನು ಸಂವಿಧಾನದಲ್ಲಿ ಸೇರಿಸುವ ಕೆಲಸ ಮಾಡಿದರು. ಈ ತಿದ್ದುಪಡಿಯನ್ನು ಸಂಘ ಪರಿವಾರದವರು ಒಪ್ಪುತ್ತಿರಲಿಲ್ಲ. ಇದರಿಂದ ದೇಶದಲ್ಲಿ ಸಮಾನತೆ ತರುವುದು ಕಷ್ಟವಾಗುತ್ತಿತ್ತು ಎಂದರು.

ಅಮಿತ್ ಶಾ ಅವರು ಪಾರ್ಲಿಮೆಂಟ್‌ನಲ್ಲಿ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು. ಬಿಜೆಪಿ ಆರ್‌ಎಸ್‌ಎಸ್ ಅವರಿಗೆ ದೇಶದಲ್ಲಿ ಮನು ಸಂಸ್ಕೃತಿಯನ್ನು ಜಾರಿಗೆ ತರುವ ಉದ್ದೇಶ ಹೊಂದಿದ್ದಾರೆ. ದಲಿತರಿಗೆ ಹಿಂದುಳಿದವರಿಗೆ ಸಮಾನತೆ ಸಿಗಬಾರದು ಎನ್ನುವ ಆರ್‌ಎಸ್‌ಎಸ್‌ನ ಉದ್ದೇಶವನ್ನೇ ದತ್ತಾತ್ರೇಯ ಹೊಂಬಾಳೆ ಹೇಳಿದ್ದಾರೆ. ಸಾಮಾಜಿಕ ನ್ಯಾಯ ಬಿಜೆಪಿಗರಿಗೆ ಹಿಡಿಸುತ್ತಿಲ್ಲ ಎಂದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂವಿಧಾನಕ್ಕಾಗಿ, ದಲಿತರು, ಹಿಂದುಳಿದವರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಖರ್ಗೆ ಅವರು ಸಹಿತ ಸಂವಿಧಾನ ಉಳಿಯಬೇಕು ಎಂದು ಧ್ವನಿಗೂಡಿಸಿದ್ದಾರೆ. ದೇಶದ ಎಲ್ಲ ಜನರು ಒಂದಾಗಿ ರಾಹುಲ್ ಗಾಂಧಿ ಅವರಿಗೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದಲ್ಲಿಯೂ ಮನುವಾದಿಗಳು ಇದ್ದಾರೆ ಎಂದು ಹೇಳಿದ್ದಾರೆ. ನಾನೂ ಸಹಿತ ಅವರ ಮಾತಿಗೆ ಸಹಮತ ವ್ಯಕ್ತಪಡಿಸುತ್ತೇನೆ. ಕಾಂಗ್ರೆಸ್‌ನ ಕೆಲ ನಾಯಕರು ಸಂಕುಚಿತ ಭಾವನೆ ಹೊಂದಿದ್ದರಿಂದಲೇ ಜಾತಿವಾದಿಗಳಿಗೆ ಹಾಗೂ ಸಂವಿಧಾನ ವಿರೋಧಿಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಸಂವಿಧಾನ ಪ್ರತಿಯನ್ನು ರಾಮಲೀಲಾ ಮೈದಾನದಲ್ಲಿ ಸುಟ್ಟವರು ಯಾರು? ಎಂದು ಪ್ರಶ್ನೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ ಪ್ರಧಾನ ಕಾರ್ಯದರ್ಶಿ ಎಂ.ವೈ.ಯಂಕಂಚಿ, ವಸಂತ ಹೊನಮೊಡೆ, ಸುರೇಶ ಘೋಣಸಗಿ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಸಾಹೇಬ್‌ಗೌಡ ಬಿರಾದಾರ, ತಮಣ್ಣ ಮೇಲಿನಕೇರಿ, ಶಾಂತಪ್ಪ, ದೀಲಿಪ ಪ್ರಭಾಕರ ಮುಂತಾದವರು ಇದ್ದರು.

ಸಂಸದ ರಮೇಶ ಜಿಗಜಿಣಗಿ ಯಾವುದೇ ತತ್ವ-ಸಿದ್ಧಾಂತದ ಮೇಲೆ ರಾಜಕೀಯಕ್ಕೆ ಬಂದವರಲ್ಲ. ಅವರೊಬ್ಬ ಅವಕಾಶವಾದಿ ರಾಜಕಾರಣಿ. ಸಂಸದ ರಮೇಶ ಜಿಗಜಿಣಗಿ ದಲಿತರು, ಹಿಂದುಳಿದವರ ಉದ್ಧಾರಕ್ಕಾಗಿ ಹಾಗೂ ಸಂವಿಧಾನಕ್ಕಾಗಿ ರಾಜಕೀಯ ಮಾಡಿಲ್ಲ. ಅವರೊಬ್ಬ ಅವಕಾಶವಾದಿ ರಾಜಕಾರಣಿ ಎನ್ನುವುದನ್ನು ಗಟ್ಟಿಯಾಗಿ ಹೇಳುವೆ, ಬೇಕಿದ್ದರೆ ಜಿಗಜಿಣಗಿ ಅವರು ಬಹಿರಂಗ ಚರ್ಚೆಗೆ ಬರಲಿ, ನಾನು ಬರುತ್ತೇನೆ ಎಂದು ಪ್ರೊ.ರಾಜು ಆಲಗೂರ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!