ವಿಧಾನಸಭೆಗೆ 2026ರಲ್ಲಿ ಮಧ್ಯಂತರ ಚುನಾವಣೆ: ಸಂಸದ ಬೊಮ್ಮಾಯಿ ಭವಿಷ್ಯ

Kannadaprabha News   | Kannada Prabha
Published : Jun 28, 2025, 08:42 PM IST
Basavaraj Bommai

ಸಾರಾಂಶ

ರಾಜ್ಯದಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೂ ಮುಂಚೆಯೇ 2026ರಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.

ಡಂಬಳ (ಜೂ.28): ರಾಜ್ಯದಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೂ ಮುಂಚೆಯೇ 2026ರಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ. ಡಂಬಳ ಗ್ರಾಮದ ತೋಂಟದಾರ್ಯ ಕಲಾ ಭವನದಲ್ಲಿ ಬಿಜೆಪಿ ರೋಣ ವಿಧಾನಸಭಾ ಮತ ಕ್ಷೇತ್ರದ ಡಂಬಳ ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪದಗ್ರಹಣ ಹಾಗೂ ನಿಕಟಪೂರ್ವ ಪದಾಧಿಕಾರಿಗಳಿಗೆ ಏರ್ಪಡಿಸಿದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಡಂಬಳ ಮಂಡಳದ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು. ಪಕ್ಷ ನಿಮ್ಮ ಮೇಲೆ ನಂಬಿಕೆ ಇಟ್ಟಿದೆ. ಬೂತ್ ಮಟ್ಟದಲ್ಲಿ ಸಂಘಟಿಸಿ ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸುತ್ತೀರಿ ಎನ್ನುವ ವಿಶ್ವಾಸ ಇದೆ. ರಾಜಕಾರಣ ವೇಗವಾಗಿ ಬದಲಾಗುತ್ತಿದೆ. ಕೇವಲ ಎರಡು ವರ್ಷದಲ್ಲಿ ಕಾಂಗ್ರೆಸ್ ವಿರುದ್ಧ ಜನರ ಬಂಡಾಯ ಎದ್ದಿದೆ. ರಾಜ್ಯದ ಜನತೆಗೆ ಈ ಸರ್ಕಾರದ ಮೇಲೆ ಭ್ರಾಂತಿಯಾಗಿದೆ. ನಮ್ಮ ಸರ್ಕಾರ ಇದ್ದಾಗ ರೈತರ ಮಕ್ಕಳಿಗೆ ವಿದ್ಯಾನಿಧಿ ಮಾಡಿದ್ದೆವು. ಅದನ್ನು ನಿಲ್ಲಿಸಿದರು. ರೈತರಿಗೆ ಡೀಸೆಲ್ ಸಬ್ಸಿಡಿ ನೀಡುತ್ತಿದ್ದೆವು ಅದನ್ನು ನಿಲ್ಲಿಸಿದರು.

ರೈತರಿಗೆ ಸಬ್ಸಿಡಿಯಲ್ಲಿ ಪೈಪು, ಪಂಪುಗಳನ್ನು ನೀಡುತ್ತಿದ್ದೆವು. ರೈತರಿಗೆ ಒಳ್ಳೆಯ ಬೀಜ, ಗೊಬ್ಬರ ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಔಷಧ ಸಿಗುತ್ತಿಲ್ಲ. ರಾಜ್ಯದಲ್ಲಿ ಬಡವರ ವಿರೋಧಿ ಸರ್ಕಾರ ಇದೆ. ಎಲ್ಲದರಲ್ಲೂ ಭ್ರಷ್ಟಾಚಾರ ತುಂಬಿದೆ. ಪ್ರತಿಯೊಂದು ಕಾಗದ ಪಡೆಯಲು, ಮನೆ ಕಟ್ಡಿಸಲು ಭ್ರಷ್ಟಾಚಾರ, ಪಡಿತರ ಚೀಟಿ ಪಡೆಯಲು ಭ್ರಷ್ಟಾಚಾರ ತುಂಬಿದೆ ಎಂದು ವಾಗ್ದಾಳಿ ನಡೆಸಿದರು.

ಬೆಲೆ ಏರಿಕೆ ಬರೆ: ರಾಜ್ಯ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿದ್ಯುತ್ ದರ ಹೆಚ್ಚಳ, ಪೆಟ್ರೊಲ್ ಬೆಲೆ‌ ಹೆಚ್ಚಳ, ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿದರು. ಹಾಲಿನ ದರ ಹೆಚ್ಚಳ, ಸುಮಾರು ಅರವತ್ತು ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಜನರಿಂದ ಪಡೆಯುತ್ತಿದ್ದಾರೆ. ಎರಡು ವರ್ಷದಲ್ಲಿ ಮೂರು ಲಕ್ಷ ಕೋಟಿ ಹೆಚ್ಚು ಸಾಲ ಮಾಡಿದ್ದಾರೆ. ಪ್ರತಿಯೊಬ್ಬರ ತಲೆಯ ಮೇಲೆ ಒಂದು ಲಕ್ಷ ಕೋಟಿ ಸಾಲ ಹೊರಿಸಿದ್ದಾರೆ. ಮುಂದೆ ಬರುವ ಸರ್ಕಾರ ಇವರು ಮಾಡಿರುವ ಸಾಲ ತೀರಿಸಬೇಕು. ರಾಜ್ಯವನ್ನು ದಿವಾಳಿ ಮಾಡಿದ್ದಾರೆ.‌ ಇದರ ವಿರುದ್ಧ ನಾವು ಮಂಡಲ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರಿಗೆ ಮೋಸ ಮಾಡಿದ್ದಾರೆ. ಜಾತಿ ಗಣತಿ ಮಾಡಿ ಅದನ್ನು ಜಾರಿ ಮಾಡದೇ ಈಗ ಮತ್ತೆ ಜಾತಿ ಗಣತಿ ಮಾಡುತ್ತಿದ್ದಾರೆ. ಎಸ್ಸಿ ನಿಗಮದಲ್ಲಿ ಭ್ರಷ್ಟಾಚಾರ, ದೀನದಲಿತರ ವಿರೋಧಿ, ರೈತರ ವಿರೋಧಿ ಸರ್ಕಾರ ಇದೆಲ್ಲವನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೂ ಮುಂಚೆ 2026ರಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ. ಮತ್ತೊಮ್ಮೆ ಕಳಕಪ್ಪ ಬಂಡಿಯವರನ್ನು ಆಯ್ಕೆ ಮಾಡಬೇಕು. ಅದಕ್ಕಾಗಿ ಸಂಕಲ್ಪ ಮಾಡಿ ಪಣ ತೊಡೋಣ, ಒಗ್ಗಟ್ಟಿನಲ್ಲಿ ಬಲ ಇದೆ. ಭವಿಷ್ಯದ ದಿನಗಳು ಬಿಜೆಪಿ ದಿನಗಳು ಮತ್ತೆ ರಾಜ್ಯದಲ್ಲಿ ಬರುತ್ತೇವೆ ಎಂದು ಹೇಳಿದರು.

ಮಾಜಿ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ದೇಶದಲ್ಲೇ ಅತಿ ಹೆಚ್ಚು ಕಾರ್ಯಕರ್ತರ ಪಡೆಯನ್ನು ಬಿಜೆಪಿ ಹೊಂದಿದೆ. ರಾಜಕಾರಣಿಗಳು ಆದರ್ಶ ಸಮಾಜ ಸೇವಕರಾಗಿ ಕಾರ್ಯ ನಿರ್ವಹಿಸಬೇಕು, ಇನ್ನೂ ರಾಜ್ಯದಲ್ಲಿ 3 ವರ್ಷದವರಿಗೆ ಅಭಿವೃದ್ಧಿ ಕಾರ್ಯ ನಡೆಯಲ್ಲ, ಸ್ವಪಕ್ಷದ ಶಾಸಕರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ನಿರ್ಮಿಸಲು ಅನುದಾನ ಇಲ್ಲ ಎಂದು ಹೇಳುತ್ತಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌