
ಬೆಂಗಳೂರು (ಅ.1) : ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಇಂದು ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್ಎಂ ಕೃಷ್ಣ ಅವರ ಜೀವನಗಾಥೆಯ 'ನೆಲದ ಸಿರಿ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ ಭಾಗಿಯಾದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಚಿವರು, ಇಂದು ಹಿರಿಯ ನಾಗರಿಕರ ದಿನ, ಇವತ್ತು ಕಾರ್ಯಕ್ರಮ ಇತ್ತು. ಆ ಕಾರ್ಯಕ್ರಮ ಬಿಟ್ಟು ಎಸ್ ಎಂ ಕೃಷ್ಣರ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಾವೆಲ್ಲ ಎಸ್‌ಎಂ ಕೃಷ್ಣ ಅವರ ಕುಟುಂಬಸ್ಥರು. ಮತ್ತೆ ಎಸ್ಎಂ ಕೃಷ್ಣ ಅವರ ಜೀವನಗಾಥೆ ತಿಳಿದುಕೊಳ್ಳುವ ಸಂದರ್ಭ ಬಂದಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.
ಕಾವೇರಿ ನೀರಿಗಾಗಿ ದೆಹಲಿಗ್ಹೋದ ಸಿಎಂ ಸಿದ್ದರಾಮಯ್ಯಗೆ ಸಿಕ್ಕಿದ್ದೇನು? ಇಲ್ಲಿದೆ ಸುದ್ದಿಗೋಷ್ಠಿ ವಿವರ
'ನೆಲದ ಸಿರಿ' ಓದಿದೆ. ಮುಂದಿನ ಪೀಳಿಗೆಗೆ ಬೇಕಾದ ಬಹಳಷ್ಟು ಅಂಶಗಳು ಇದರಲ್ಲಿವೆ. ಎಸ್ ಎಂ ಕೃಷ್ಣ ಅವರು ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಬಹಳ ಸಂಕಷ್ಟ ಪರಿಸ್ಥಿತಿ ಇತ್ತು. ಎಲ್ಲೆಡೆ ಬರ, ಕಾವೇರಿ ಹೋರಾಟ, ಡಾ ರಾಜ್ ಅಪಹರಣ ನಡೆದಿತ್ತು. ಇವೆಲ್ಲ ಸಂಕಷ್ಟಗಳ ನಡುವೆ ಎಸ್‌ಎಂ ಕೃಷ್ಣ ಅವರು ಸಮರ್ಥವಾಗಿ ಆಡಳಿತ ನಡೆಸಿದರು. ಅಂದು ನಾನೂ ಸಹ ಅವರ ಸಂಪುಟದ ಸದಸ್ಯನಾಗಿದ್ದೆ ಎಂದು ಸ್ಮರಿಸಿಕೊಂಡರು.
ಅಂದು ಡಿಕೆಶಿ ಜೊತೆ ಎಸ್‌ಎಂ ಕೃಷ್ಣ ಮಾತು ಬಿಟ್ಟಿದ್ರು!
ಎಸ್‌ಎಂ ಕೃಷ್ಣ ಅವರ ಆಡಳಿತಾವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಡೆ ದಾಫುಗಾಲು ಇಟ್ಟಿದ್ದು, ಕೆಂಪೇಗೌಡ ಬೆಂಗಳೂರು ಕಟ್ಟಿದರು, ಕೆಂಗಲ್ ಹನುಮಂತಯ್ಯ ವಿಧಾಸೌಧ ಕಟ್ಟಿದ್ರು, ಅಂತರಾಷ್ಟ್ರೀಯ ಏರ್‌ಪೋರ್ಟ್, ವಿಕಾಸ ಸೌಧ ಕಟ್ಟಿದ್ರು. ಬೆಂಗಳೂರನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಾಗಿ ರೂಪಿಸಿದವರು ಎಸ್‌ಎಂ ಕೃಷ್ಣ ಅವರು ಎಂದರು. ಮೋನೋ ರೈಲ್ವೆ ಬಗ್ಗೆ ನಾನು ಅಂದು ವಿರೋಧ ಮಾಡಿದ್ದೆ. ಅವತ್ತು ಎಸ್‌ಎಂ ಕೃಷ್ಣ ಅವರು ಮಾತು ಬಿಟ್ಟಿದ್ರು, ಇದರ ಬಗ್ಗೆ ಅವರ ಧರ್ಮಪತ್ನಿ ನನ್ನ ಕೇಳಿದ್ದರು. ನಮ್ಮ ರಾಜ್ಯಕ್ಕೆ ಮೋನೋ ಬದಲು ಮೆಟ್ರೊ ಬಗ್ಗೆ ನಾನು ಅವರಿಗೆ ವಿವರವಾಗಿ ಮಾಹಿತಿ ನೀಡಿದ್ದೆ. ಇವತ್ತು ಬೆಂಗಳೂರಿಗೆ ಮೆಟ್ರೋ ಬಂದಿದೆ ಎಂದರೆ ಅದು ಎಸ್‌ಎಂ ಕೃಷ್ಣರ ಕೊಡುಗೆ. ಅಂದು ಬೆಂಗಳೂರು ವಿಮಾನ ನಿಲ್ದಾಣ ಬಿಡದಿಯಲ್ಲಿ ಮಾಡಲು ಹೊರಟಿದ್ರು. ಬಳಿಕ ಬಚ್ಚೇಗೌಡರು ದೇವನಹಳ್ಳಿಗೆ ತೆಗೆದುಕೊಂಡು ಹೋದ್ರು. ನಾನು ಆಗ ನಗರಾಭಿವೃದ್ಧಿ ಸಚಿವನಾಗಿದ್ದೆ. ಇವತ್ತು ಬೆಂಗಳೂರು ಅಭಿವೃದ್ಧಿ ಸಚಿವನಾಗಿದ್ದೇನೆ ಎಂದು ಹಿಂದಿನ ಕಾಲಾವಧಿಯಲ್ಲಾದ ಘಟನೆಗಳ ಬಗ್ಗೆ ಸ್ಮರಿಸಿಕೊಂಡರು.
ಎಸ್‌ಎಂ ಕೃಷ್ಣ ಮೂಲ ಕಾಂಗ್ರೆಸಿಗರು, ಬದಲಾಯಿಸಲು ಸಾಧ್ಯವಿಲ್ಲ:
ಎಸ್‌ಎಂ ಕೃಷ್ಣ ಅವರು ಮೂಲ ಕಾಂಗ್ರೆಸಿಗರು, ಅದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಬಿಸಿಯೂಟ ಚಿಂತನೆ ಕಾರ್ಯಕ್ರಮ ರೂಪಿಸಿದವರು ಎಸ್‌ಎಂ ಕೃಷ್ಣ ಅವರು. ಇದರಿಂದ ಶಾಲೆ ಬಿಟ್ಟ ಮಕ್ಕಳು ಮತ್ತೆ ಶಾಲೆಗೆ ಬರಲು ಪ್ರಾರಂಭ ಮಾಡಿದ್ರು. ಅಂದಿನ ಯೋಜನೆ ಇವತ್ತಿಗೂ ಮುಂದುವರಿದಿದೆ. ಇಷ್ಟೇ ಅಲ್ಲ, ಮಹಿಳೆಯರ ಸಬಲಿಕರಣಕ್ಕಾಗಿ ಸ್ತ್ರೀ ಶಕ್ತಿ ಕಾರ್ಯಕ್ರಮ ಜಾರಿಗೆ ತಂದಿದ್ದು ಕೂಡ ಎಸ್‌ಎಂ ಕೃಷ್ಣಾ ಅವರ ಕಾಲದಲ್ಲೇ. ಈ ಯೋಜನೆಯಿಂದ ಮಹಿಳೆಯರು ಸ್ವಾವಲಂಬನೆ ಸಾಧಿಸುವಂತಾಯಿತು. ಆ ಮೂಲಕ ಹೆಣ್ಣು ಮಕ್ಕಳಿಗೆ ಆರ್ಥಿಕ ಶಕ್ತಿ ತುಂಬಿದ್ರು. ಯಶಸ್ವಿನಿ ಕಾರ್ಯಕ್ರಮ ರೂಪಿಸಿ, ಹೃದಯದ ಶಸ್ತ್ರಚಿಕಿತ್ಸೆ ಕೂಡ ಕಡಿಮೆ ಬೆಲೆಗೆ ಸಿಗುವ ರೀತಿ ಮಾಡಿದ್ರು. ಅವರ ಆಡಳಿತಾವಧಿಯಲ್ಲಿ ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಮಾಡಿದರು. ಅದರಿಂದ ಇಂದು ಬೆಂಗಳೂರು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂದರು.
ವಾಜಪೇಯಿ ನುಡಿದ ಭವಿಷ್ಯ ನಿಜವಾಯ್ತು:
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗೆ ಮಾಜಿ ಪ್ರಧಾನಿ ವಾಜಪೇಯಿ ಬಂದಿದ್ದರು. ಏರ್‌ಪೋರ್ಟ್ ಉದ್ಘಾಟನೆ ವೇಳೆ ಒಂದು ಮಾತು ಹೇಳಿದ್ರು, ಬೇರೆ ದೇಶದ ಅತಿಥಿಗಳು ದೆಹಲಿಗೆ ಬರ್ತಾ ಇದ್ರು, ಇನ್ನೂ ಮುಂದೆ ಬೆಂಗಳೂರಿಗೆ ಬರ್ತಾರೆ. ಬಳಿಕ ಬೇರೆ ನಗರಗಳಿಗೆ ಹೋಗ್ತಾರೆ ಎಂದಿದ್ದರು. ಅಂದು ಅವರು ನುಡಿದ ಭವಿಷ್ಯ ಇಂದು ನಿಜವಾಗಿದೆ ಎಂದರು.
ದೇವರು ವರವನ್ನೂ ಕೊಡಲ್ಲ, ಶಾಪಾನೂ ಕೊಡಲ್ಲ ಅವಕಾಶ ಮಾತ್ರ ಕೊಡ್ತಾನೆ. ಆ ಅವಕಾಶ ಹೇಗೆ ಬಳಸಿಕೊಳ್ಳುತ್ತೀವಿ ಎನ್ನೋದು ಮಾತ್ರ ಮುಖ್ಯ. ಸಿದ್ದರಾಮಯ್ಯ ಬೊಮ್ಮಾಯಿಯವರು ಯಡಿಯೂರಪ್ಪ ಬಂದವರಿಗೆಲ್ಲ ಬರೆದು ಬರೆದು ಕೊಡೋಕೆ ಎಸ್ಎಂಕೆ ಅವರ ನಿರ್ಧಾರವೇ ಕಾರಣ. ಅಂದು ಅವರು ಬೆವರೇಜಸ್ ಕಾರ್ಪೋರೇಷನ್ ಮಾಡಿದ್ರಿಂದ ಇವತ್ತು 3 ಲಕ್ಷ ಕೋಟಿ ಬಜೆಟ್ ಮಾಡಲು ಸಾಧ್ಯವಾಗ್ತಿದೆ ಎಂದರು.
ಎಸ್‌ಎಂ ಕೃಷ್ಣರವರು ತಮ್ಮ ಕ್ಯಾಬಿನೆಟ್‌ನಲ್ಲಿ ನನ್ನನ್ನೆ ಕೈಬಿಟ್ಟುಬಿಟ್ಟಿದ್ರು. ಆಮೇಲೆ ನಾನು ಜಗಳ ಮಾಡಿ ಅವರ ಕ್ಯಾಬಿನೆಟ್ ಸೇರಿಕೊಂಡೆ. ಧರ್ಮರಾಯನ ಧರ್ಮತ್ವ, ಅರ್ಜುನನ ಗುರಿ, ಕರ್ಣನ ದಾನತ್ವ ಕೃಷ್ಣನ ತಂತ್ರಗಾರಿಕೆ ಎಲ್ಲವೂ ಎಸ್ಎಂಕೆ ಯವರ ಬಳಿ ಇತ್ತು.
ವಿಮಾನದಲ್ಲಿ ಮಹಿಳೆಗೆ ಹೃದಯಸ್ತಂಭನ, ಚಿಕಿತ್ಸೆ ನೀಡಿ ರಕ್ಷಿಸಿದ ಎಸ್‌ಎಂ ಕೃಷ್ಣ ಅಳಿಯ!
ಕೃಷ್ಣ ಅವರು ಅವಧಿಪೂರ್ಣ ಚುನಾವಣೆಗೆ ಹೋಗಿ ಸೋತ ಬಗ್ಗೆ ಡಿಕೆಶಿ ಮಾತನಾಡುತ್ತಾ, ಅಂದು ನಾನು ಎಷ್ಟು ಹೇಳಿದ್ರು ಎಸ್‌ಎಂ ಕೃಷ್ಣ ಅವರು ಕೇಳಲೇ ಇಲ್ಲ. ಈಗ ನಿಮ್ಮ ಟೈಮ್ ಸರಿಯಿಲ್ಲ, ಬರಗಾಲ ಬೇರೆ ಇದೆ ಅಂದ್ರೂ ಕೇಳದೆ ಚುನಾವಣೆಗೆ ಹೋದ್ರು ಕೊನೆಗೆ ಸೋತು ಸರ್ಕಾರ ಹೋಯ್ತು. ನಾನು ಮರುದಿನ ಕೃಷ್ಣಾ ಅವರ ಮನೆಗೆ ಭೇಟಿಮಾಡಲು ಹೋಗಿದ್ದೆ. ಅವತ್ತು ತಬ್ಬಿ ನಿನ್ನ ಮಾತು ಕೇಳಬೇಕಿತ್ತು ಎಂದು ಅತ್ತುಬಿಟ್ಟರು ಎಂದು ಹಿಂದಿನ ಘಟನೆಗಳನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಮೆಲುಕು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ