ಜಾತಿಗಣತಿ ಪರ ಹೋರಾಟ ಎಲ್ಲೇ ನಡೆದರೂ ಬೆಂಬಲ: ಸಿದ್ದು

By Kannadaprabha NewsFirst Published Sep 3, 2021, 7:22 AM IST
Highlights

*   ಕಾಂಗ್ರೆಸ್‌ ಪಕ್ಷದ ವೇದಿಕೆಯಲ್ಲಿ ಹೋರಾಟ ಸಂಘಟಿಸಲು ನಿರಾಕರನೆ
*   ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವರದಿ ಸ್ವೀಕರಿಸಲು ಹಿಂದೇಟು ಹಾಕಿದ್ದ ಎಚ್‌ಡಿಕೆ
*   ಜಾತಿ ಗಣತಿ ಜಾರಿಗೆ ತರುವ ವಿಚಾರದಲ್ಲಿ ನನ್ನ ಸಂಪೂರ್ಣ ಬೆಂಬಲ 

ಬೆಂಗಳೂರು(ಸೆ.03): ಕಾಂಗ್ರೆಸ್‌ ಜಾತಿ ಜನ ಗಣತಿ ವರದಿ ಜಾರಿ ಪರ ಇದೆ. ಈ ಕುರಿತು ಹೋರಾಟ ನಡೆಸುತ್ತಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟಕ್ಕೆ ನನ್ನ ಬೆಂಬಲವಿದೆ. ಈ ವಿಚಾರವಾಗಿ ರಾಜ್ಯದಲ್ಲಿ ಎಲ್ಲೇ ಹೋರಾಟ ನಡೆದರೂ ಅದನ್ನು ನಾನು ಬೆಂಬಲಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಅಲ್ಲದೆ, ‘ಕಾಂಗ್ರೆಸ್‌ ಪಕ್ಷ ಅಹಿಂದ ಪರ ಇರುವ ಪಕ್ಷ’ ಎಂದು ಹೇಳುವ ಮೂಲಕ ಮತ್ತೆ ಅಹಿಂದ ವರ್ಗಗಳ ಪರ ಸಿದ್ದರಾಮಯ್ಯ ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ ಮತ್ತು ಜಾತಿ ಗಣತಿ ವರದಿ ಜಾರಿಗೆ ವಿಧಾನಮಂಡಲ ಅಧಿವೇಶನದಲ್ಲೂ ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ವರದಿಯನ್ನು ಸ್ವೀಕರಿಸಿ ಅನುಷ್ಠಾನಗೊಳಿಸಲು ಒತ್ತಾಯಿಸಿದ್ದೇನೆ. ಈ ಕುರಿತು ಹಿಂದುಳಿದ ವರ್ಗಗಳ ಒಕ್ಕೂಟವು ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಹೇಳಿದೆ. ಜಾತಿ ಗಣತಿ ಜಾರಿಗೆ ತರುವ ವಿಚಾರದಲ್ಲಿ ನನ್ನ ಸಂಪೂರ್ಣ ಬೆಂಬಲವಿದೆ. ಈ ವಿಚಾರವಾಗಿ ರಾಜ್ಯದಲ್ಲಿ ಎಲ್ಲೇ ಹೋರಾಟ ನಡೆದರೂ ಅದಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದ್ದಾರೆ.

ಜಾತಿ ಗಣತಿ ವರದಿ ಜಾರಿಗಾಗಿ ಕಲಾಪದಲ್ಲಿ ಹೋರಾಟ: ಸಿದ್ದು

ಪ್ರತ್ಯೇಕ ಹೋರಾಟವಿಲ್ಲ:

ಕಾಂಗ್ರೆಸ್‌ ಪಕ್ಷದ ವೇದಿಕೆಯಲ್ಲಿ ಹೋರಾಟ ಸಂಘಟಿಸಲು ನಿರಾಕರಿಸಿದ ಅವರು, ಕಾಂಗ್ರೆಸ್‌ ಪಕ್ಷ ಅಹಿಂದ ಪರವಾಗಿರುವ ಪಕ್ಷ. ಅದಕ್ಕಾಗಿ ಪ್ರತ್ಯೇಕ ಹೋರಾಟದ ಪ್ರಶ್ನೆ ಉದ್ಭವಿಸುವುದಿಲ್ಲ. ಜನರಿಗೆ ಸಾಮಾಜಿಕ ನ್ಯಾಯವನ್ನು ನೀಡಿದ್ದು ಕಾಂಗ್ರೆಸ್‌ ಸರ್ಕಾರ. ಹೀಗಾಗಿ ಪ್ರತ್ಯೇಕ ಹೋರಾಟ ನಡೆಸುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದರು.

ಶೋಷಣೆಗೆ ಒಳಗಾಗಿರುವ ಸಮಾಜಗಳಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ನಮ್ಮ ಸರ್ಕಾರ ಜಾತಿ ಗಣತಿ (ಆರ್ಥಿಕ, ಸಾಮಾಜಿಕ ಸಮೀಕ್ಷೆ) ನಡೆಸಿತ್ತು. ನನ್ನ ಅವಧಿಯಲ್ಲಿ ವರದಿ ಪೂರ್ಣಗೊಂಡಿರಲಿಲ್ಲ. ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ವರದಿ ಸ್ವೀಕರಿಸಲು ಹಿಂದೇಟು ಹಾಕಿದ್ದರು ಎಂದು ಪುನರುಚ್ಚರಿಸಿದರು.
 

click me!