ಕೋವಿಡ್‌ ಲಸಿಕೆ: ದೇಶದಲ್ಲೇ ಕರ್ನಾಟಕ ನಂ.1

By Kannadaprabha News  |  First Published Sep 2, 2021, 11:00 AM IST

*  ಈ ತಿಂಗಳು 1.5 ಕೋಟಿ ಲಸಿಕೆ ಗುರಿ
*  ರಾಜ್ಯದಲ್ಲಿ ಈವರೆಗೆ 4.35 ಕೋಟಿ ಡೋಸ್ ಲಸಿಕೆ ವಿತರಣೆ
*  ಡಿಸೆಂಬರ್‌ ವೇಳೆಗೆ ಎಲ್ಲರಿಗೂ ಲಸಿಕೆ 
 


ಬೆಂಗಳೂರು(ಸೆ.02):  ರಾಜ್ಯದಲ್ಲಿ ಕೋವಿಡ್ ಲಸಿಕೆ ಮೇಳ ಭರ್ಜರಿ ಯಶಕಂಡಿದ್ದು, ದೇಶದಲ್ಲೇ ಅತಿ ಹೆಚ್ಚು ಲಸಿಕೆಯನ್ನು ಬುಧವಾರ ರಾಜ್ಯದಲ್ಲಿ ನೀಡಲಾಗಿದೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ 11.36 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದ್ದು, ಇದು ಬುಧವಾರ ಒಂದೇ ದಿನ ದೇಶದಲ್ಲೇ ಅತಿ ಹೆಚ್ಚು ಲಸಿಕೆಯನ್ನು ಕರ್ನಾಟಕದಲ್ಲಿ ನೀಡಿದಂತಾಗಿದೆ.

ರಾಜ್ಯದ ಮಟ್ಟಿಗಂತೂ ಇದು ಸಾರ್ವಕಾಲಿಕ ದಾಖಲೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೂನ್ 11 ರಂದು ನಡೆದಿದ್ದ ಲಸಿಕಾ ಮೇಳದಂದು 11.24 ಲಕ್ಷ ಮಂದಿಗೆ ಲಸಿಕೆ ನೀಡಿ ರಾಜ್ಯ ದಾಖಲೆ ನಿರ್ಮಿಸಿತ್ತು. ಆ ದಾಖಲೆ ಮುರಿದು ಬಿದ್ದಿದೆ. 

Latest Videos

undefined

ನೀವೂ ಕೋವಿಡ್ ಲಸಿಕೆ ಮೂರನೇ ಡೋಸ್ ತೆಗೆದುಕೊಳ್ಳಬೇಕೇ?

ಬುಧವಾರ ಬಿಬಿಎಂಪಿಯಲ್ಲಿ 1.84 ಲಕ್ಷ ಮಂದಿ, ಬೆಳಗಾವಿ 95,032 ಮಂದಿ, ಮೈಸೂರು 50,351 ಮಂದಿ, ದಕ್ಷಿಣ ಕನ್ನಡ 49,040 ಮಂದಿ, ತುಮಕೂರಿನಲ್ಲಿ 37,563 ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಬುಧವಾರ ಹತ್ತು ಲಕ್ಷ ಮಂದಿಗೆ ಲಸಿಕೆ ನೀಡಬೇಕು ಎಂದು ಆರೋಗ್ಯ ಇಲಾಖೆ ಗುರಿ ಹಾಕಿಕೊಂಡಿತ್ತು. ಆದರೆ ಗುರಿಯನ್ನು ಮೀರಿದ ಸಾಧನೆ ಮಾಡಿದೆ. ರಾಜ್ಯದಲ್ಲಿ ಈವರೆಗೆ 4.35 ಕೋಟಿ ಡೋಸ್ ಲಸಿಕೆ ವಿತರಣೆಯಾಗಿದೆ. 

ಈ ತಿಂಗಳು 1.5 ಕೋಟಿ ಲಸಿಕೆ ಗುರಿ

ಮುಂಬರುವ ಡಿಸೆಂಬರ್ ವೇಳೆ ಎಲ್ಲಾ ವಯಸ್ಕರಿಗೂ ಸಂಪೂರ್ಣವಾಗಿ ಲಸಿಕೆ ನೀಡಲಾಗುವುದು. ಹೀಗಾಗಿ ಸೆಪ್ಟೆಂಬರ್ ತಿಂಗಳಲ್ಲಿ ಒಂದೂವರೆ ಕೋಟಿ ಡೋಸ್ ಲಸಿಕೆ ವಿತರಣೆ ಗುರಿ ಹೊಂದಿದ್ದೇವೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ಸಹ ಪೂರಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಡಿಸೆಂಬರ್‌ ವೇಳೆಗೆ ಎಲ್ಲರಿಗೂ ಲಸಿಕೆ ನೀಡುತ್ತೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
 

click me!