ಎಸ್‌.ಎಂ.ಕೃಷ್ಣ: ತಾಳಿದವನು ಬಾಳಿಯಾನು ಎಂಬುದಕ್ಕೆ ನಿದರ್ಶನ - ಬಸವರಾಜ ಬೊಮ್ಮಾಯಿ

Published : Dec 11, 2024, 07:17 AM IST
ಎಸ್‌.ಎಂ.ಕೃಷ್ಣ: ತಾಳಿದವನು ಬಾಳಿಯಾನು ಎಂಬುದಕ್ಕೆ ನಿದರ್ಶನ - ಬಸವರಾಜ ಬೊಮ್ಮಾಯಿ

ಸಾರಾಂಶ

ದಕ್ಷತೆ, ತಾಳ್ಮೆ, ಸಂಯಮ, ಸ್ಥಿತಪ್ರಜ್ಞೆ ಮಾಜಿ ಮುಖ್ಯಮಂತ್ರಿ ಹಾಗೂ ಮುತ್ಸದ್ದಿ ರಾಜಕಾರಣಿ ಎಸ್‌.ಎಂ.ಕೃಷ್ಣ ಅವರ ವ್ಯಕ್ತಿತ್ವ ಮತ್ತು ನಾಯಕತ್ವಕ್ಕೆ ಹಿಡಿದ ಕೈಗನ್ನಡಿ. ಹಲವು ಬಾರಿ ರಾಜಕೀಯವಾಗಿ ಹಿನ್ನಡೆಯಾದಾಗಲೂ ಅವರು ತಮ್ಮ ಚಿಂತನೆಯ ಸಮತೋಲನವನ್ನು ಎಂದೂ ಕಳೆದುಕೊಂಡಿರಲಿಲ್ಲ. ಅವರ ಜೊತೆಗಿದ್ದವರೇ ಅವರ ಕೈಬಿಟ್ಟ ಉದಾಹರಣೆ ಇದೆ. ಆಗ ವಿರೋಧ ಪಕ್ಷಗಳು ಅವರ ಜೊತೆಗೆ ನಿಂತ ನಿದರ್ಶನವಿದೆ.

- ಬಸವರಾಜ ಬೊಮ್ಮಾಯಿ, ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿ

ದಕ್ಷತೆ, ತಾಳ್ಮೆ, ಸಂಯಮ, ಸ್ಥಿತಪ್ರಜ್ಞೆ ಮಾಜಿ ಮುಖ್ಯಮಂತ್ರಿ ಹಾಗೂ ಮುತ್ಸದ್ದಿ ರಾಜಕಾರಣಿ ಎಸ್‌.ಎಂ.ಕೃಷ್ಣ ಅವರ ವ್ಯಕ್ತಿತ್ವ ಮತ್ತು ನಾಯಕತ್ವಕ್ಕೆ ಹಿಡಿದ ಕೈಗನ್ನಡಿ. ಹಲವು ಬಾರಿ ರಾಜಕೀಯವಾಗಿ ಹಿನ್ನಡೆಯಾದಾಗಲೂ ಅವರು ತಮ್ಮ ಚಿಂತನೆಯ ಸಮತೋಲನವನ್ನು ಎಂದೂ ಕಳೆದುಕೊಂಡಿರಲಿಲ್ಲ. ಅವರ ಜೊತೆಗಿದ್ದವರೇ ಅವರ ಕೈಬಿಟ್ಟ ಉದಾಹರಣೆ ಇದೆ. ಆಗ ವಿರೋಧ ಪಕ್ಷಗಳು ಅವರ ಜೊತೆಗೆ ನಿಂತ ನಿದರ್ಶನವಿದೆ.

ಕಾವೇರಿ ಹೋರಾಟದ ವೇಳೆ ಅವರ ಪಕ್ಷದವರೇ ಅವರನ್ನು ಮುಳುಗಿಸುವ ಪ್ರಯತ್ನ ನಡೆಸಿದರು. ಆಗ ರಾಜ್ಯದ ಹಿತದೃಷ್ಟಿಯಿಂದ, ರೈತರ ಹಿತದೃಷ್ಟಿಯಿಂದ ಪಕ್ಷ ಭೇದ ಮರೆತು ವಿರೋಧ ಪಕ್ಷಗಳು ಅವರಿಗೆ ಬೆಂಬಲ ನೀಡಿದ್ದವು. ಸುಪ್ರೀಂ ಕೋರ್ಟ್‌ನಲ್ಲಿ ಅವರಿಗೆ ರಿಲೀಫ್ ಸಿಕ್ಕು ಕಾವೇರಿಯಲ್ಲಿ ಮುಳುಗದೇ ಪುಟಿದೆದ್ದು ಮತ್ತೆ ಎರಡು ವರ್ಷ ಅಧಿಕಾರ ನಡೆಸಿರುವುದು ಸ್ಮರಣೀಯ.

ತಾಳ್ಮೆಗೆ ಒಲಿದ ಸಿಎಂ ಸ್ಥಾನ

1992-93ರಲ್ಲಿ ಅವರು ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿ ಹಿನ್ನಡೆಯಾಗಿತ್ತು. ಆಗ ಉಪ ಮುಖ್ಯಮಂತ್ರಿ ಸ್ಥಾನ ಒಪ್ಪಿಕೊಂಡಿದ್ದು ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಅವಕಾಶ ಆಯಿತು‌. ಆಗ ತಾಳ್ಮೆ ವಹಿಸಿದ್ದರಿಂದ ಮುಂದೆ 1999ರಲ್ಲಿ ಅವರು ಮುಖ್ಯಮಂತ್ರಿ ಆಗುವ ಅವಕಾಶ ದೊರೆಯಿತು. 1994ರಲ್ಲಿ ಎಸ್‌.ಎಂ.ಕೃಷ್ಣ ಸೋತಾಗ ರಾಜ್ಯಸಭೆ ಪ್ರವೇಶಿಸಲು ಚಿಂತಿಸಿದ್ದರು. ಆದರೆ, ಸ್ವಪಕ್ಷದವರೇ ಮತ ಹಾಕುವುದಿಲ್ಲ ಎನ್ನುವ ಆತಂಕ ಅವರಿಗೆ ಕಾಡಿತ್ತು. ಅವರಿಗೆ ಬೇಕಿದ್ದ ನಾಲ್ಕು ಮತಗಳನ್ನು ಬೇರೆ ಪಕ್ಷಗಳಲ್ಲಿನ ಅವರ ಸ್ನೇಹಿತರು ನೀಡಿದ್ದರು. ಅವರ ವಿರುದ್ಧ ಗೆದ್ದಿದ್ದ ಮದ್ದೂರಿನ ಶಾಸಕರೂ ಅವರ ಹಿರಿತನ ಹಾಗೂ ಒಳ್ಳೆಯತನ ನೋಡಿ ಪರೋಕ್ಷವಾಗಿ ಬೆಂಬಲಕ್ಕೆ ನಿಂತಿದ್ದರು. ರಾಜ್ಯ ರಾಜಕೀಯ ಇತಿಹಾಸದಲ್ಲಿ ಈ ರೀತಿಯ ಪ್ರಸಂಗ ಅತ್ಯಂತ ವಿರಳ.

ಇನ್ನೊಂದು ಘಟನೆ ಅವರು ರಾಜ್ಯಸಭಾ ಸದಸ್ಯರಾದ ಮೇಲೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಸ್ವೀಕರಿಸುವ ಬಗ್ಗೆ ಜಿಜ್ಞಾಸೆಯಲ್ಲಿ ಇದ್ದರು. ನಾನು ಆಕಸ್ಮಿಕವಾಗಿ ದೆಹಲಿಯಲ್ಲಿ ಸಿಕ್ಕಾಗ ‘ನೀವು ಕರ್ನಾಟಕದ ಬಿಸಿಲು ಹಾಗೂ ಕರ್ನಾಟಕದ ಧೂಳು ಅನುಭವಿಸಿದರೆ ನಿಮಗೆ ಒಳ್ಳೆಯ ಅವಕಾಶ ಇದೆ’ ಎಂದಿದ್ದೆ. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಕರ್ನಾಟಕವನ್ನು ಸುತ್ತಿ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಆದರು.

ಮುಖ್ಯಮಂತ್ರಿಯಾದ ಬಳಿಕ ನನಗೆ ಕರೆ ಮಾಡಿ, ನೀನು ಹೇಳಿದ್ದು ನಿಜವಾಯಿತು. ನನಗೆ ಅನುಕೂಲವಾಯಿತು ಎಂದಿದ್ದರು. ಅವರು ಎಲ್ಲೂ ತಮ್ಮ ಇಂಟಿಗ್ರಿಟಿ, ನಿಷ್ಠೆ ಮತ್ತು ಪ್ರಾಮಾಣಿಕತೆ ಬಿಟ್ಟವರಲ್ಲ. ಎಸ್.ಎಂ.ಕೃಷ್ಣ ಅವರಿಂದ ಲಾಭ ತೆಗೆದುಕೊಂಡವರು ಬಹಳ. ಆದರೆ, ಅವರ ಕಷ್ಟ ಕಾಲದಲ್ಲಿ ಸಹಾಯ ಮಾಡಿದವರ ಸಂಖ್ಯೆ ಕಡಿಮೆ. ಇದರ ಮಧ್ಯೆಯೂ ಬೆಳೆದು ನಿಂತು ಧೀಮಂತಿಕೆ ಮೆರೆದಿದ್ದಾರೆ.

ಎಂಜಿಆರ್‌ ರೀತಿ ಬಿಸಿಯೂಟ ಯೋಜನೆ

ಸುಪ್ರೀಂಕೋರ್ಟ್ ಆದೇಶದಂತೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ಹಣಕಾಸಿನ ಹೊರೆಯಾಗುತ್ತದೆ ಎಂದಾಗ ಮಕ್ಕಳಿಗೆ ವಿದ್ಯೆ ಮತ್ತು ಅನ್ನ ಯಾವಾಗಲೂ ಕಡಿಮೆಯಾಗಬಾರದು ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಜಿ.ಆರ್. ಮಾದರಿಯಲ್ಲಿ ಮಾನವೀಯತೆಯಿಂದ ಜಾರಿ ಯೋಜನೆ ಜಾರಿ ಮಾಡಿದರು. ಇದರಿಂದ ಇಂದಿಗೂ ಲಕ್ಷಾಂತರ ಮಕ್ಕಳು ಅನ್ನ, ಊಟ ಮಾಡುತ್ತಿದ್ದಾರೆ.

ರೈತರಿಗೆ ಆ ಕಾಲದಲ್ಲಿ ಯಾವುದೇ ವಿಮೆ ಯೋಜನೆ ಇರಲಿಲ್ಲ. ರೈತರ ಅನಾರೋಗ್ಯದ ವೇಳೆ ನೆರವಾಗಲೆಂದು ಸರ್ಕಾರವೇ ವಿಮೆ ಹಣ ಕಟ್ಟುವ ಯಶಸ್ವಿನಿ ಯೋಜನೆಯಡಿ ಹಣಕಾಸು ವ್ಯವಸ್ಥೆಯಾಗುವ ಯೋಜನೆ ಮಾಡಿದ್ದರು. ಆರಂಭದಲ್ಲಿ ₹60 -₹70 ಕೋಟಿ ವೆಚ್ಚ ಆಗುತ್ತಿತ್ತು. ದುರ್ದೈವವೆಂದರೆ, ಮುಂದೆ ಬಂದ ಸರ್ಕಾರಗಳು ಅದನ್ನು ಮುಂದುವರೆಸಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಯಶಸ್ವಿನಿ ಯೋಜನೆಯನ್ನು ಪುನರ್ ಜಾರಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡಿದ್ದೆ. ಅವರು ರೂಪಿಸಿದ ಯೋಜನೆಯಿಂದ ರೈತರಿಗೆ ಅನುಕೂಲವಾಗಿದ್ದು ಕಂಡು ಮರು ಜಾರಿ ಮಾಡಿದ್ದೆ.

ಮೆಚ್ಚುಗೆಯ ಸರ್ಟಿಫಿಕೆಟ್

ನಮ್ಮ ತಂದೆ ಹಾಗೂ ಎಸ್.ಎಂ ಕೃಷ್ಣ ಆತ್ಮೀಯರು ಇಬ್ಬರೂ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಅವರು ಲೋಕಸಭಾ ಸದಸ್ಯರಾಗಿದ್ದಾಗ ಇವರು ವಿಧಾನಸಭೆ ಪ್ರವೇಶ ಮಾಡಿದ್ದರು. ಒಮ್ಮೆ ನಮ್ಮ ಮನೆಗೆ ಬಂದಿದ್ದಾಗ ತಂದೆಯ ಮುಂದೆ ‘ನಿಮ್ಮ ಮಗ ಒಳ್ಳೆಯ ಸಂಸದೀಯ ಪಟು. ಅವರಿಗೆ ಒಳ್ಳೆಯ ಭವಿಷ್ಯ ಇದೆ. ಅವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಂಡು ದೊಡ್ಡ ಹುದ್ದೆ ಕೊಡುತ್ತೇನೆ’ ಎಂದು ಅಭಿಮಾನದಿಂದ ಪ್ರೀತಿಯ ಮಾತು ಹೇಳಿದ್ದರು. ಈ ಮಾತು ನಾನು ಸಂಸದೀಯಪಟುವಾಗಿ ಮಾಡಿದ ಕೆಲಸಕ್ಕೆ ಸರ್ಟಿಫಿಕೆಟ್ ಸಿಕ್ಕಂತಾಗಿತ್ತು.

ವರ್ಣರಂಜಿತ ವ್ಯಕ್ತಿತ್ವ, ಸ್ವಚ್ಛ ಗುಣದ ವ್ಯಕ್ತಿ

ಕೃಷ್ಣ ಅವರದು ವರ್ಣ ರಂಜಿತ ವ್ಯಕ್ತಿತ್ವ. ಅವರು ತೊಡುವ ವಸ್ತ್ರ ಎಷ್ಟು ಸ್ವಚ್ಛವಾಗಿತ್ತೋ ಅವರ ಗುಣ, ವ್ಯಕ್ತಿತ್ವವೂ ಅಷ್ಟೇ ಸ್ವಚ್ಛವಾಗಿತ್ತು. ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾಗ ಅವರ ಸಿಬ್ಬಂದಿ ಭೇಟಿಗೆ ಸಮಯ ಕೊಟ್ಟಿರಲಿಲ್ಲ. ಅದನ್ನು ತಿಳಿದು ಖುದ್ದು ತಾವೇ ಕರೆ ಮಾಡಿ ತಮ್ಮ ನಿವಾಸಕ್ಕೆ ನನ್ನನ್ನು ಕರೆಸಿಕೊಂಡು ಊಟ ಹಾಕಿ ಸುಮಾರು ಮೂರು, ನಾಲ್ಕು ಗಂಟೆಗಳ ಕಾಲ ಹರಟೆ ಹೊಡೆದಿದ್ದು ಅವರ ಔದಾರ್ಯಕ್ಕೆ, ಕನ್ನಡ ಅಭಿಮಾನಕ್ಕೆ ಸಾಕ್ಷಿ.

ಸಂಯಮದ ನಿರ್ಧಾರ

ವರ ನಟ ಡಾ.ರಾಜ್‌ಕುಮಾರ್ ಅಪಹರಣವಾದಾಗ ಸಂಯಮ ಕಳೆದುಕೊಳ್ಳದೆ ಟೀಕೆ ಟಿಪ್ಪಣಿ ಬದಿಗೊತ್ತಿ ಹಲವು ರೀತಿ ಸರ್ವಪ್ರಯತ್ನ ಮಾಡಿ ಡಾ.ರಾಜ್‌ ಕುಮಾರ್ ಅವರನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬಂದಿದ್ದು ಅವರ ಧೀಮಂತ ನಾಯಕತ್ವಕ್ಕೆ ಸಾಕ್ಷಿ.

ಎಸ್‌.ಎಂ.ಕೃಷ್ಣ ಅವರನ್ನು ಕಳೆದುಕೊಂಡ ಕರ್ನಾಟಕ ಬಡವಾಗಿದೆ. ದೇಶ, ವಿದೇಶದಲ್ಲಿ, ದೆಹಲಿಯಲ್ಲಿ ಕನ್ನಡದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಕರ್ನಾಟಕ ಹೆಮ್ಮೆಪಡುವಂತೆ ಕೆಲಸ ಮಾಡಿದ್ದಾರೆ. ಸಮಕಾಲಿನ ರಾಜಕಾರಣದಲ್ಲಿ ಅವರಂಥ ನಾಯಕನ ಬಹಳ ಅವಶ್ಯಕತೆ ಇದೆ. ಅವರು ನಮ್ಮನ್ನು ಅಗಲಿರುವುದು ನೋವಿನ ಸಂಗತಿ. ತಮ್ಮ ಜೀವನದ ಕುರಿತು ನಾಲ್ಕು ಸಂಪುಟಗಳಲ್ಲಿ ಬರೆದಿರುವ ಪುಸ್ತಕಗಳಲ್ಲಿ ಅವರ ಜೀವನದ ಆದರ್ಶಗಳ ಬಗ್ಗೆ ಮಾಹಿತಿ ಇದೆ. ಅದನ್ನು ಓದಿಕೊಂಡು ಆ ಮಾರ್ಗದಲ್ಲಿ ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!