ಮಾಜಿ ಸಚಿವ ಹಾಗೂ ಬ್ಯಾಡಗಿ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಡಾ. ಹೆಗ್ಗಪ್ಪ ದೇಶಪ್ಪ ಲಮಾಣಿ (84) ಸೋಮವಾರ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಸಂಜೆ 8.40 ಹೊತ್ತಿಗೆ ತಾಲೂಕಿನ ದುಂಡಶಿ ತಾಂಡಾದ ಸ್ವಗೃಹದಲ್ಲಿ ಕೊನೆಯುಸಿರೆಳೆದರು.
ಶಿಗ್ಗಾಂವಿ (ಜ.17): ಮಾಜಿ ಸಚಿವ ಹಾಗೂ ಬ್ಯಾಡಗಿ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಡಾ. ಹೆಗ್ಗಪ್ಪ ದೇಶಪ್ಪ ಲಮಾಣಿ (84) ಸೋಮವಾರ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಸಂಜೆ 8.40 ಹೊತ್ತಿಗೆ ತಾಲೂಕಿನ ದುಂಡಶಿ ತಾಂಡಾದ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ, ನಾಲ್ಕು ಜನ ಪುತ್ರರು, ಅಪಾರ ಬಂಧು ಬಳಗ ಇದ್ದಾರೆ. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಅವರ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಮೃತರ ಸಂಬಂಧಿ ಸೀನಪ್ಪ ಲಮಾಣಿ ತಿಳಿಸಿದರು.
ಮಂತ್ರಿಯಾದ ಶಿಕ್ಷಕ: ಡಾ. ಎಚ್.ಡಿ. ಲಮಾಣಿ ಅವರು ಬಿಜಾಪುರ ಶಾಲೆಯಲ್ಲಿ ಶಿಕ್ಷಕರಾಗಿ ಸವೆ ಸಲ್ಲಿಸಿ ಧಾರವಾಡದ ಕೆಸಿಡಿಯಲ್ಲಿ ಹಿಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಿಂದಿ ವಿಭಾಗದ ಮಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಸೇರಿ 1983 ಹಾಗೂ 1989ರಲ್ಲಿ ಬ್ಯಾಡಗಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರು ಬಂಗಾರಪ್ಪ ಸರ್ಕಾರದಲ್ಲಿ ಸರ್ಕಾರದ ಮುಖ್ಯ ಸಚೇತಕರಾಗಿ, ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಸಕ್ಕರೆ ಮತ್ತು ಶಿಕ್ಷಣ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
undefined
10 ಬಾರಿ ಸಂಸತ್‌ಗೆ ಆಯ್ಕೆಯಾಗಿದ್ದ ಜೆಡಿಯು ಮಾಜಿ ಅಧ್ಯಕ್ಷ ಶರದ್ ಯಾದವ್ ನಿಧನ
ಸಂತಾಪ: ಹಿರಿಯರಾದ ಎಚ್.ಡಿ. ಲಮಾಣಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕ ಸೈಯ್ಯದ ಅಜ್ಜೀಂಪೀರ ಖಾದ್ರಿ, ವಿಧಾನಪರಿಷತ್ ಮಾಜಿ ಸದಸ್ಯ ಸೋಮಣ್ಣಾ ಬೇವಿನಮರದ, ಜಿಲ್ಲಾ ರೈತ ಸೇನಾ ಅಧ್ಯಕ್ಷ ವರುಣ ಎಂ. ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಕೆಪಿಸಿಸಿ ಸದಸ್ಯ ಷಣ್ಮಖ ಶಿವಳ್ಳಿ, ಹಾವೇರಿ ನಗರಸಭಾ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಕಾಂಗ್ರೆಸ್ ಯುವ ಮುಖಂಡ ಕಿರಣ ಎಂ. ಪಾಟೀಲ, ತಾಲೂಕು ಅಧ್ಯಕ್ಷ ಶಂಭುಲಿಂಗ ಆಜೂರ, ಎಪಿಎಂಸಿ ಮಾಜಿ ಅಧ್ಯಕ್ಷ ಅರ್ಜಪ್ಪ ಲಮಾಣಿ, ಬಂಜಾರ ಸಂಘದ ತಾಲೂಕು ಅಧ್ಯಕ್ಷ ದಾಮ್ಲಪ್ಪ ಲಮಾಣಿ, ಯುವ ಮುಖಂಡ ಸುಧೀರ ಲಮಾಣಿ, ಅಂಜುಮನ್ ಸಮಿತಿ ಮಾಜಿ ಅಧ್ಯಕ್ಷ ಆಸ್ಪಕಲಿ ಮತ್ತೇಖಾನ್ ಸಂತಾಪ ಸೂಚಿಸಿದ್ದಾರೆ.