• ಮಹಾರಾಷ್ಟ್ರದಲ್ಲಿ ರಾರಾಜಿಸಿದ ಕನ್ನಡ ಭಾವುಟಗಳು, ಸೆಡ್ಡು ಹೊಡೆದ ಕನ್ನಡ ಭಾಷಿಕರು..!
• ಮಹಾ ಗಡಿ ಗ್ರಾಮಗಳಲ್ಲಿ ಸಿಎಂ ಬೊಮ್ಮಾಯಿ ಹವಾ..!
• ಭಾವುಟ, ಬ್ಯಾನರ್ ತೆರವು ಮಾಡಿಸಿದ ಉಮದಿ ಪೊಲೀಸರು..!
ವರದಿ- ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ನ.26) : ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿ ವಿವಾದ ಬೆಂಕಿ ಹೊತ್ತಿಕೊಂಡಿದೆ. ಮಹಾರಾಷ್ಟ್ರ ಗಡಿಯ ಸಾಂಗಲಿ, ಸೊಲ್ಲಾಪೂರ ಜಿಲ್ಲೆಗಳಲ್ಲಿ ಇರುವ ಕನ್ನಡ ಭಾಷಿಕರು ಸ್ವತಃ ಮಹಾರಾಷ್ಟ್ರ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಈ ನಡುವೆ ಮಿರಜ್ ಭಾಗದಲ್ಲಿ ಮರಾಠಿಗರು ಕರ್ನಾಟಕದ ವಾಹನಗಳ ಮೇಲೆ ಕಲ್ಲೆಸೆದು, ಸಾರಿಗೆ ಬಸ್ ಗಳಿಗೆ ಮಸಿ ಬಳಿಯುವ ಮೂಲಕ ಹದ್ದುಮೀರಿ ವರ್ತಿಸುತ್ತಿದ್ದಾರೆ. ಈ ನಡುವೆ ಕರ್ನಾಟಕದ ಗಡಿಯಲ್ಲಿರುವ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ತಿಕ್ಕುಂಡಿ ಗ್ರಾಮಸ್ಥರು ಕನ್ನಡ ಭಾವುಟಗಳನ್ನ ಹಾರಿಸುವ ಮೂಲಕ ಮಹಾರಾಷ್ಟ್ರ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಗಡಿ ವಿವಾದ: ಮರಾಠಿಗರ ಪುಂಡಾಟಕ್ಕೆ ಕನ್ನಡಿಗರ ಆಕ್ರೋಶ..!
ಕನ್ನಡ ಭಾವುಟ ಹಾರಿಸಿದ ಗ್ರಾಮಸ್ಥರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಇಂದು ನಿನ್ನೆಯದಲ್ಲ. ಆದ್ರೆ ತಣ್ಣಗಾಗಿದ್ದ ಗಡಿ ವಿವಾದ ಈಗ ಮತ್ತೆ ಶುರುವಾಗಿದೆ. ಮಿರಜ್ ಭಾಗದಲ್ಲಿ ಕರ್ನಾಟಕದ ಸಾರಿಗೆ ಬಸ್ ಗಳಿಗೆ ಕಲ್ಲೆಸೆದು ಮಸಿ ಬಳಿದು ಮರಾಠಿಗರು ಪುಂಡಾಟ ಮೆರೆದಿದ್ದಾರೆ. ಇದರಿಂದ ಅದೆ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಕನ್ನಡ ಭಾಷಿಕ ಹಳ್ಳಿಗಳ ಜನರು ಮಹಾ ಸರ್ಕಾರದ ವಿರುದ್ಧವೆ ಸೆಡ್ಡೆ ಹೊಡೆದಿದ್ದಾರೆ. ಜತ್ತ ತಾಲೂಕಿನ ತಿಕ್ಕುಂಡಿ ಗ್ರಾಮದಲ್ಲಿ ಕನ್ನಡ ಭಾವುಟ ಹಾರಿಸುವ ಮೂಲಕ ಮಹಾರಾಷ್ಟ್ರಕ್ಕೆ ಸೆಡ್ಡು ಹೊಡೆದಿದ್ದಾರೆ.
ಮಹಾರಾಷ್ಟ್ರಕ್ಕೆ ಎಚ್ಚರಿಕೆ ರವಾನೆ: ತಿಕ್ಕುಂಡಿ ಗ್ರಾಮದಲ್ಲಿ ಕನ್ನಡ ಭಾವುಟ ಹಾರಿಸಿರುವ ಗ್ರಾಮಸ್ಥರು ಮಹಾರಾಷ್ಟ್ರ ಸರ್ಕಾರಕ್ಕೆ ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ. ತಾವು ಗಡಿ ಗ್ರಾಮಗಳಿಗೆ ಸೌಲಭ್ಯಗಳನ್ನ ನೀಡಲ್ಲ. ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿ ಸಹಾಯ ಮಾಡುವುದಾಗಿ ಹೇಳಿದ್ರೆ ಅವರ ವಿರುದ್ಧವೇ ಹರಿಹಾಯ್ತಿರುವ ಮಹಾರಾಷ್ಟ್ರ ಸರ್ಕಾರ ಹಾಗೂ ಮರಾಠಿಗರ ವಿರುದ್ಧ ಗಡಿ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಕನ್ನಡ ಭಾವುಟಗಳನ್ನ ಗ್ರಾಮದೆಲ್ಲೆಡೆ ಹಾರಿಸಿ ಎಚ್ಚರಿಕೆಯ ಸಂದೇಶವನ್ನ ನೀಡಿದ್ದಾರೆ. ನಾವು ಕನ್ನಡ ಭಾಷಿಕರು ಯಾವಾಗ ಬೇಕಾದರೂ ಕರ್ನಾಟಕಕ್ಕೆ ಸೇರುತ್ತೇವೆ ಎನ್ನುವ ಖಡಕ್ ಸಂದೇಶವನ್ನ ನೀಡಿದ್ದಾರೆ.
ಗಡಿ ವಿವಾದ ಕೆದಕಿದ್ದ ಮಹಾ ನಾಯಕರಿಗೆ ಬೊಮ್ಮಾಯಿ ಖಡಕ್ ಎಚ್ಚರಿಕೆ
ನೆರೆ ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ಹವಾ: ಎರಡು ರಾಜ್ಯಗಳ ನಡುವೆ ವಿವಾದ ಬುಗಿಲೆದ್ದಿರುವಾಗ, ಇತ್ತ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ಸಿಎಂ ಬೊಮ್ಮಾಯಿ ಹವಾ ಜೋರಾಗಿದೆ. ಮಹಾರಾಷ್ಟ್ರದ ತಿಕ್ಕುಂಡಿ ಗ್ರಾಮದ ಅಗಸಿ ಕಮಾನಿಗೆ ಸಿಎಂ ಬೊಮ್ಮಾಯಿ ಭಾವಚಿತ್ರವನ್ನ ಹಾಕಿದ್ದಾರೆ. ಮೇಲೆ ಜೈ ಕರ್ನಾಟಕ ಎಂದು ಬರೆದು ಜೊತೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಪೋಟೊ ತೂಗು ಹಾಕಲಾಗಿದೆ. ಗ್ರಾಮಸ್ಥರು. ಕಯ್ಯಲ್ಲಿ ಕನ್ನಡ ಭಾವುಟ ಹಿಡಿದು, ಸಿಎಂ ಬೊಮ್ಮಾಯಿಗೆ ಜೈಕಾರ ಹಾಕಿದ್ದಾರೆ.
ಕನ್ನಡ ಭಾವುಟ ತೆರವುಗೊಳಿಸಿದ ಪೊಲೀಸರು: ಇತ್ತ ತಿಕ್ಕುಂಡಿ ಗ್ರಾಮದಲ್ಲಿ ಒಂದೆಡೆ ಗ್ರಾಮಸ್ಥರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸೆಡ್ಡು ಹೊಡೆದರೆ, ಮಹಾರಾಷ್ಟ್ರ ಪೊಲೀಸರು ಗ್ರಾಮಸ್ಥರ ಮೇಲೆ ಒತ್ತಡ ಹಾಕಿ ಭಾವುಟಗಳನ್ನ ತೆರವು ಮಾಡಿಸಿದ್ದಾರೆ. ಗ್ರಾಮದ ಅಗಸಿಗೆ ಹಾಕಲಾಗಿದ್ದ ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಬ್ಯಾನರ್ ಸಹ ತೆರವುಗೊಳಿಸಿದ್ದಾರೆ.. ಅಲ್ಲದೆ ನೀತಿ ಸಂಹಿತೆ ಇದೆ ಕನ್ನಡ ಭಾವುಟ ಹಾರಿಸಬೇಡಿ, ಕರ್ನಾಟಕ ಸಿಎಂ ಬ್ಯಾನರ್ ಗಳನ್ನ ಕಟ್ಟಬೇಡಿ ಅಂತಾ ಗ್ರಾಮಸ್ಥರಿಗೆ ಪೊಲೀಸರು ತಾಕೀತು ಮಾಡಿ ಹೋಗಿದ್ದಾರೆ.