ಒಂದೇ ದಿನದಲ್ಲಿ ಪ್ರವಾಹ ಇಳಿಮುಖ: ಮಲೆನಾಡು, ಕರಾವಳಿ ಜನಜೀವನ ಸಹಜ ಸ್ಥಿತಿಗೆ

Published : Jul 29, 2023, 05:16 AM IST
ಒಂದೇ ದಿನದಲ್ಲಿ ಪ್ರವಾಹ ಇಳಿಮುಖ: ಮಲೆನಾಡು, ಕರಾವಳಿ ಜನಜೀವನ ಸಹಜ ಸ್ಥಿತಿಗೆ

ಸಾರಾಂಶ

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ 1.38 ಲಕ್ಷ ಕ್ಯುಸೆಕ್ಸ್‌ ನೀರು ಹರಿದು ಬರುತ್ತಿದೆ. ಉತ್ತರ ಕರ್ನಾಟಕದಲ್ಲಿ ಮುಳುಗಿರುವ 14 ಸೇತುವೆಗಳಲ್ಲಿ ಶನಿವಾರದಿಂದ ಸಂಚಾರ ಸಾಧ್ಯತೆ,  12 ದಿನಗಳ ಬಳಿಕ ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡಲ್ಲಿ ಮಳೆಯಬ್ಬರ ಸಂಪೂರ್ಣ ಇಳಿಕೆ. 

ಬೆಂಗಳೂರು(ಜು.29):  ಕಳೆದ ಎರಡ್ಮೂರು ದಿನಗಳಿಂದ ಮಳೆಯಬ್ಬರ ಬಹುತೇಕ ಕ್ಷೀಣಿಸಿದ್ದರಿಂದ ರಾಜ್ಯಾದ್ಯಂತ ಕಾಣಿಸಿಕೊಂಡಿದ್ದ ಪ್ರವಾಹದಾತಂಕ ಒಂದೇ ದಿನದಲ್ಲಿ ಬಹುತೇಕ ತಗ್ಗಿದೆ. ಕರಾವಳಿ ಮತ್ತು ಮಲೆನಾಡಿನ ನದಿಪಾತ್ರಗಳ ಜನಜೀವನ ಪ್ರವಾಹದ ಭಯ ಮರೆತು ಶುಕ್ರವಾರ ಸಹಜ ಸ್ಥಿತಿಗೆ ಮರಳಿದೆ. ಉಳಿದೆಡೆ ಹೋಲಿಸಿದರೆ ಕೃಷ್ಣಾ ಮತ್ತಿತರ ನದಿಗಳು ಇನ್ನೂ ತುಂಬಿ ಹರಿಯುತ್ತಿದ್ದರೂ ಮಹಾರಾಷ್ಟ್ರ ಭಾಗದಲ್ಲಿ ಮಳೆ ಇಳಿಮುಖವಾದ ಕಾರಣ ಸಂಜೆಯ ಬಳಿಕ ಬೆಳಗಾವಿ ಭಾಗದಲ್ಲಿ ಪ್ರವಾಹದ ಮಟ್ಟನಿಧಾನವಾಗಿ ಇಳಿಮುಖವಾಗುತ್ತಿದೆ.

ಮಹಾರಾಷ್ಟ್ರ ಹಾಗೂ ಬೆಳಗಾವಿಯ ಪಶ್ಚಿಮಘಟ್ಟಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ದೂಧ್‌ಗಂಗಾ ನದಿಗಳಲ್ಲಿ ಕಳೆದೆರಡು ವಾರಗಳಿಂದ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಮಲಪ್ರಭಾ, ದೂಧ್‌ಗಂಗಾ ಪ್ರವಾಹದಿಂದಾಗಿ ಸಾವಿರಾರು ಎಕ್ರೆ ಕೃಷಿ ಪ್ರದೇಶ ಜಲಾವೃತವಾಗಿತ್ತು. ಗುರುವಾರ ಆಲಮಟ್ಟಿಜಲಾಶಯಕ್ಕೆ 1.70 ಲಕ್ಷ ಕ್ಯುಸೆಕ್‌ ನೀರು ಹರಿದುಬಂದಿದ್ದು, 1.50 ಲಕ್ಷದಷ್ಟುಕ್ಯುಸೆಕ್‌ ನೀರು ಹೊರಬಿಡಲಾಗುತ್ತಿತ್ತು. ಆದರೆ ಶುಕ್ರವಾರದಿಂದ ಪರಿಸ್ಥಿತಿ ನಿಧಾನವಾಗಿ ಬದಲಾಗುತ್ತಿದೆ. ಜಲಾಶಯಕ್ಕೆ 1.38 ಲಕ್ಷ ಕ್ಯುಸೆಕ್‌ ಒಳ ಹರಿವಿದ್ದು, 1.25 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ಅಂದರೆ ಸುಮಾರು 32 ಸಾವಿರ ಕ್ಯುಸೆಕ್‌ನಷ್ಟುಒಳಹರಿವು ಒಂದೇ ದಿನ ಇಳಿಮುಖವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ದೂಧ್‌ಗಂಗಾ ನದಿಗಳ ಒಳಹರಿವಿನ ಪ್ರಮಾಣ ಇನ್ನಷ್ಟುತಗ್ಗಿ ಈಗಾಗಲೇ ಮುಳುಗಡೆಯಾಗಿರುವ ಜಿಲ್ಲೆಯ 12ರಿಂದ 14 ಸೇತುವೆಗಳಲ್ಲಿ ಬಹುತೇಕವು ಶನಿವಾರವೇ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

ಕೊಡಗಿನ 44 ಪ್ರದೇಶಗಳಲ್ಲಿ ಭೂಕುಸಿತ ಸಾಧ್ಯತೆ: ಭಾರತೀಯ ಭೂವಿಜ್ಞಾನ ವರದಿಯಲ್ಲೇನಿದೆ?

ಅದೇ ರೀತಿ ಬಸವರಾಜ ಸಾಗರ ಜಲಾಶಯದಿಂದ ಕೃಷ್ಣಾನದಿಗೆ 1.66 ಲಕ್ಷ ಕ್ಯುಸೆಕ್‌ ನೀರು ಹರಿಬಿಡುತ್ತಿರುವ ಪರಿಣಾಮ ರಾಯಚೂರು ತಾಲೂಕಿನ ನಡುಗಡ್ಡೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಶೀಲಹಳ್ಳಿ ಸೇತುವೆ ಬೆಳಗ್ಗೆ ಜಲಾವೃತವಾಗಿದ್ದರೂ ಸಂಜೆ ವೇಳೆಗೆ ನೀರಿನಮಟ್ಟತಗ್ಗಿ, ಸಂಚಾರಕ್ಕೆ ಮುಕ್ತಗೊಂಡಿದೆ.

ಬಿಸಿಲ ದರ್ಶನ: ಸುಮಾರು 12 ದಿನಗಳ ಬಳಿಕ ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡಲ್ಲಿ ಮಳೆಯಬ್ಬರ ಸಂಪೂರ್ಣ ಇಳಿದಿದ್ದು, ಶುಕ್ರವಾರ ದಿನವಿಡೀ ಬಿಸಿಲಿನ ದರ್ಶನವಾಗಿದೆ. ಈ ಭಾಗದ ಪ್ರಮುಖ ನದಿಗಳಾದ ಕಾವೇರಿ, ತುಂಗಾ, ಭದ್ರಾ, ಗಂಗಾವಳಿ, ಅಘನಾಶಿನಿ ನದಿ ನೀರಿನ ಮಟ್ಟಬಹುತೇಕ ತಗ್ಗಿದೆ. ಶೃಂಗೇರಿಯಲ್ಲಿ ತುಂಗಾ ನದಿ ಪ್ರವಾಹದಿಂದಾಗಿ ಕೆಲ ದಿನಗಳಿಂದ ಜಲಾವೃತವಾಗಿದ್ದ ಕಪ್ಪೆಶಂಕರ ದೇಗುಲಕ್ಕೂ ಇದೀಗ ಪ್ರವಾಹದಿಂದ ಮುಕ್ತಿ ಸಿಕ್ಕಿದೆ. ಭದ್ರಾ ಜಲಾಶಯದ ಒಳಹರಿವು ಕೂಡ 12,255 ಕ್ಯುಸೆಕ್‌ನಷ್ಟುಕಡಿಮೆಯಾಗಿದೆ. ಕೆಆರ್‌ಎಸ್‌ ಜಲಾಶಯಕ್ಕೂ ಹರಿದು ಬರುತ್ತಿದ್ದ ಒಳಹರಿವಿನ ಪ್ರಮಾಣ ಒಂದೇ ದಿನ 26,135 ಕ್ಯುಸೆಕ್‌ನಷ್ಟು ಕಡಿಮೆಯಾಗಿದೆ.

ಅದೇ ರೀತಿ ಹಾವೇರಿಯಲ್ಲಿ ವರದೆ ಪ್ರವಾಹದಿಂದಾಗಿ ಹೊಸರಿತ್ತಿ ರಾಘವೇಂದ್ರ ಸ್ವಾಮಿ ಮೂಲಸಂಸ್ಥಾನ ಮಠದ ಆವರಣಕ್ಕೆ ನುಗ್ಗಿದ್ದ ನೀರು ಕೂಡ ಬಹುತೇಕ ಇಳಿಮುಖವಾಗಿದೆ. ಧರ್ಮಾ, ವರದಾ ನದಿಯಿಂದ ಜಲಾವೃತಗೊಂಡಿದ್ದ ಹೊಲ, ಗದ್ದೆಗಳಿಂದಲೂ ನೀರು ಹಿಂದೆ ಸರಿದಿದ್ದು, ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ರಾಯಚೂರು: ಜಿಟಿಜಿಟಿ ಮಳೆಗೆ ಸೋರುತ್ತಿವೆ ಸರ್ಕಾರಿ ‌ಶಾಲೆಗಳು..!

ಕಲಬುರಗಿಯಲ್ಲಿ ಮಳೆಯಿಂದಾಗಿ ಅಸ್ತವ್ಯಸ್ತಗೊಂಡಿದ್ದ ಜನಜೀವನ ಸಹಜಸ್ಥಿತಿಗೆ ಮರಳುತ್ತಿದ್ದರೂ ತೆಲಂಗಾಣದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಗಿಣಾ ನದಿ ಪ್ರವಾಹ ಮಾತ್ರ ಯಥಾಸ್ಥಿತಿಯಲ್ಲಿದೆ. ಸೇಡಂ ತಾಲೂಕಿನ ಮಳಖೇಡ ಬಳಿಯ ಕಾಗಿಣಾ ಸೇತುವೆ ಶುಕ್ರವಾರವೂ ಸಂಚಾರಕ್ಕೆ ಮುಕ್ತವಾಗಿಲ್ಲ. ನದಿಪಕ್ಕದಲ್ಲಿರುವ ಉತ್ತರಾದಿ ಮಠ, ಜಯತೀರ್ಥರ ವೃಂದಾವನ ಸ್ಥಳಗಳೂ ಇನ್ನೂ ಜಲಾವೃತಗೊಂಡಿರುವ ಸ್ಥಿತಿಯಲ್ಲೇ ಇವೆ.

ಶವ ಪತ್ತೆ:

ನಾಲ್ಕೈದು ದಿನದ ಹಿಂದೆ ತುಂಬಿ ಹರಿಯುತ್ತಿದ್ದ ಸೇತುವೆ ಮೇಲಿಂದಲೇ ಸೇತುವೆ ದಾಟಲೆತ್ನಿಸಿದಾಗ ಕೊಚ್ಚಿಕೊಂಡು ಹೋಗಿ ಕಾಣೆಯಾಗಿದ್ದ ಬಸವಕಲ್ಯಾಣ ತಾಲೂಕಿನ ಧನ್ನೂರ(ಆರ್‌) ಗ್ರಾಮದ ಮಲ್ಲಪ್ಪ ಶರಣಪ್ಪ ಕರೆಪ್ಪನೋರ್‌(25) ಮೃತದೇಹ ಇದೀಗ ಪತ್ತೆಯಾಗಿದೆ. ಧನ್ನೂರು ಗ್ರಾಮದಿಂದ ಎರಡು ಕಿ.ಮೀ. ದೂರದಲ್ಲಿ ಗಿಡಗಂಟಿಗಳ ನಡುವೆ ಶವ ಸಿಕ್ಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೋರಾಟದ ದನಿ ಅಡಗಿಸಲು ಈ ದೂರೇ? ರೈತರು, ಕನ್ನಡ ಪರ ಹೋರಾಟಗಾರರ ವಿರುದ್ಧ ತಲಾ 41 ಪ್ರಕರಣ ದಾಖಲು!
ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!