
ಬೆಂಗಳೂರು(A.09): ಮಲೆನಾಡು, ಕರಾವಳಿಯಲ್ಲಿ ಶನಿವಾರ ಸಂಜೆಯಿಂದ ಅಬ್ಬರಿಸಲಾರಂಭಿಸಿದ ಮಳೆಯಿಂದಾಗಿ ಮತ್ತೆ ಪ್ರವಾಹ-ಭೂಕುಸಿತದ ಆತಂಕ ತಂದೊಂಡಿದ್ದು, ಮಹಾರಾಷ್ಟ್ರದಲ್ಲಿ ಮುಂದುವರಿದ ವರುಣನಾರ್ಭಟದಿಂದ ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಮತ್ತೊಮ್ಮೆ ಮುಳುಗಡೆಯ ಭೀತಿ ಮನೆ ಮಾಡಿದೆ. ಮಹಾರಾಷ್ಟ್ರದ ಡ್ಯಾಂಗಳಿಂದ ಯಾವುದೇ ಕ್ಷಣದಲ್ಲೂ ಭಾರೀ ಪ್ರಮಾಣದ ನೀರು ಹೊರಬಿಡುವ ಸಾಧ್ಯತೆ ಇದ್ದು, ಉತ್ತರ ಕರ್ನಾಟಕದ 5 ಜಿಲ್ಲೆಗಳ ನದಿ ತೀರದ ಜನರಲ್ಲಿ ನಡುಕ ಶುರುವಾಗಿದೆ. ಪ್ರವಾಹದ ಆತಂಕ ಇರುವ ಕೊಡಗು, ಚಿಕ್ಕಮಗಳೂರು, ಉಡುಪಿ ಸೇರಿ 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಏತನ್ಮಧ್ಯೆ, ಮಳೆ ಸಂಬಂಧಿ ಅನಾಹುತಕ್ಕೆ ಮಂಡ್ಯ ಮತ್ತು ಚಿಕ್ಕಮಗಳೂರಲ್ಲಿ ಬಾಲಕಿ ಸೇರಿ ಇಬ್ಬರು ಬಲಿಯಾಗಿದ್ದಾರೆ.
ಕೊರೋನಾ ವೈರಸ್ ಆತಂಕದ ಮಧ್ಯೆ ಪ್ರವಾಹ ಭೀತಿ: ಕೆಲವೊಂದಷ್ಟು ಪರಿಹಾರ ಘೋಷಿಸಿದ ಸರ್ಕಾರ
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಮುಂದುವರಿದಿರುವ ಹೊರತಾಗಿಯೂ ಅಲ್ಲಿನ ಡ್ಯಾಂಗಳಿಂದ ಈವರೆಗೆ ದೊಡ್ಡಪ್ರಮಾಣದ ನೀರು ಹೊರಬಿಟ್ಟಿಲ್ಲ. ಆದರೂ ಬೆಳಗಾವಿ, ಬಾಗಲಕೋಟೆಯ ಹಲವು ಜಿಲ್ಲೆಗಳಲ್ಲಿ ಕೃಷ್ಣಾ, ಘಟಪ್ರಭಾದಂಥ ಜೀವನದಿಗಳು ಅಪಾಯಮಟ್ಟಮೀರಿ ಹರಿಯುತ್ತಿವೆ. ಈಗಾಗಲೇ ಆಲಮಟ್ಟಿಗೆ 2.20 ಲಕ್ಷ ಕ್ಯುಸೆಕ್ಗೂ ಹೆಚ್ಚು ನೀರು ಹರಿದುಬರುತ್ತಿದ್ದು, ಇಷ್ಟೇ ಪ್ರಮಾಣದ ನೀರನ್ನು ಮುನ್ನೆಚ್ಚರಿಕಾ ಕ್ರಮವಾಗಿ ನಾರಾಯಣಪುರ ಡ್ಯಾಂನಿಂದ ಹೊರಬಿಡಲಾಗುತ್ತಿದೆ. ಇದರಿಂದ ಯಾದಗಿರಿ, ಬಾಗಲಕೋಟೆ, ಕಲಬುರಗಿ, ರಾಯಚೂರು, ವಿಜಯಪುರ ಹಾಗೂ ಬೆಳಗಾವಿಯ ಕೃಷ್ಣಾ ತೀರದ ಅನೇಕ ತಗ್ಗುಪ್ರದೇಶಗಳ, 30ಕ್ಕೂ ಹೆಚ್ಚು ಸೇತುವೆಗಳು ಜಲಾವೃತವಾಗಿವೆ. ಒಂದು ವೇಳೆ ಕೊಯ್ನಾ ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಟ್ಟರೆ ಉತ್ತರ ಕರ್ನಾಟಕಕ್ಕೆ ಮತ್ತೊಂದು ಮಹಾಪ್ರಳಯದ ಆತಂಕ ಎದುರಾಗಲಿದೆ.
ಮಲೆನಾಡಲ್ಲಿ ಗುಡ್ಡಕುಸಿತ: ಕೊಡಗಿನಲ್ಲಿ ಮತ್ತೆ ಮಳೆ ಆರಂಭವಾಗಿದ್ದು ಈಗಾಗಲೇ 600ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಲಕ್ಷ್ಮಣತೀರ್ಥ, ಕಾವೇರಿ ನದಿಗಳು ಪ್ರವಾಹಮಟ್ಟದಲ್ಲೇ ಹರಿಯುತ್ತಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 10ಕ್ಕೂ ಹೆಚ್ಚು ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ. ಅಲ್ಲಲ್ಲಿ ಸಣ್ಣಪುಟ್ಟಭೂಕುಸಿತಗಳು ಮುಂದುವರಿದಿದ್ದು, ಮತ್ತೆ ಭಾರೀ ಮಳೆಯಾದರೆ ಕಳೆದ ವರ್ಷದಂತೆ ಮತ್ತೊಂದು ಜಲಕಂಟಕ ಈ ಭಾಗದಲ್ಲಿ ಕಾಡುವ ಆತಂಕ ಹೆಚ್ಚಾಗಿದೆ.
ಆಲಮಟ್ಟಿ: ವರುಣನ ಅಬ್ಬರ, 1.80 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ
ಇನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ ಹಾಗೂ ಎನ್.ಆರ್.ಪುರದಲ್ಲಿ ಮಳೆ ಮುಂದುವರಿದಿದ್ದು, ತುಂಗೆ, ಹೇಮಾವತಿ ಮತ್ತು ಭದ್ರಾ ಅಪಾಯಮಟ್ಟದಲ್ಲೇ ಹರಿಯುತ್ತಿದೆ. ಕಳಸ ರಸ್ತೆಯ ಹೆಬ್ಬಾಳ್ ಸೇತುವೆ, ಮಹಲ್ಗೋಡು ಸೇತುವೆ ಮುಳುಗಡೆಯಾಗಿದ್ದು ಕೆಲವೆಡೆ ಭೂಕುಸಿತವಾಗಿದೆ. ಮೂಡಿಗೆರೆ ತಾಲೂಕಿನ ಜನ್ನಾಪುರದದ ರುದ್ರಮ್ಮ (87) ಹೇಮಾವತಿ ನದಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಭಾರೀ ಗಾಳಿ ಮಳೆ ಮುಂದುವರಿದಿದ್ದು, ನೂರಾರು ಎಕರೆ ಕಾಫಿ ತೋಟ ಮಳೆಗೆ ಆಹುತಿಯಾಗಿದೆ. ಹಲವೆಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಬಿನಿ ಡ್ಯಾಂನಿಂದ ನೀರು ಹೊರಬಿಡುತ್ತಿರುವ ಕಾರಣ ಕಪಿಲಾ ನದಿ ಪಾತ್ರದ ನಂಜನಗೂಡಲ್ಲಿ 48 ಮನೆಗಳಿಗೆ ನೀರು ನುಗ್ಗಿದೆ. ಈ ಮಧ್ಯೆ, ಮಂಡ್ಯಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ವೆಲ್ಲಸ್ಲಿ ಸೇತುವೆ ಬಳಿ ನದಿ ನೋಡಲು ಬಂದಿದ್ದ ಕೀರ್ತನ(2) ಕಾಲುಜಾರಿ ಕಾವೇರಿ ನದಿಗೆ ಬಿದ್ದು ಕೊಚ್ಚಿಹೋಗಿದ್ದಾಳೆ.
ಕಳೆದ ವರ್ಷಕ್ಕಿಂತ 5 ಲಕ್ಷ ಹೆಕ್ಟೇರ್ ಹೆಚ್ಚು ಬಿತ್ತನೆ!
ಕರಾವಳಿಯಲ್ಲಿ ಮತ್ತೆ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜೀವನದಿಗಳಾದ ಕುಮಾರಧಾರಾ, ನೇತ್ರಾವತಿ, ಸುವರ್ಣಾ ನದಿಗಳು ಉಕ್ಕಿಹರಿಯುತ್ತಿವೆ. ಬಂಟ್ವಾಳದಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ಉತ್ತರ ಕರ್ನಾಟಕದ ಶರಾವತಿ, ಗಂಗಾವಳಿ ನದಿಯಲ್ಲೂ ನೀರು ಪ್ರವಾಹ್ಮ ಮಟ್ಟದಲ್ಲೇ ಇದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ