ಕೆಲಸ ಪಡೆಯಲು ಸರದಿಯಲ್ಲಿ ನಿಲ್ಲುತ್ತಿರುವ ಸಿಬ್ಬಂದಿ|ಕೊರೋನಾ ಹಿನ್ನೆಲೆಯಲ್ಲಿ ಪಾಳಿ ಆಧಾರಿತ ಬಸ್ ಕಾರ್ಯಾಚರಣೆ ಸ್ಥಗಿತ| ಸದ್ಯ ಬೆಳಗ್ಗೆ 7ಕ್ಕೆ ಸಾಮಾನ್ಯ ಪಾಳಿ ಮಾತ್ರ ಉಳಿಸಿಕೊಂಡಿದೆ| ಮೊದಲು ಬಂದವರಿಗೆ ಕೆಲಸಕ್ಕೆ ನಿಯೋಜಿಸುವುದರಿಂದ ಚಾಲಕರು ಹಾಗೂ ನಿರ್ವಾಹಕರು ಮುಂಜಾನೆ 4.30ಕ್ಕೆ ಡಿಪೋಗೆ ಹಾಜರಾಗುತ್ತಿದ್ದಾರೆ|
ಬೆಂಗಳೂರು(ಆ.09): ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರು ಕೆಲಸ ಪಡೆಯಲು ಡಿಪೋ ಆವರಣದಲ್ಲಿ ಸರತಿ ಸಾಲಿನಲ್ಲಿ ಚಪ್ಪಲಿ ಇರಿಸಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ!
ಕೊರೋನಾ ಸೋಂಕು ಹರಡುವ ಭೀತಿಯಲ್ಲಿ ಜನ ಬಿಎಂಟಿಸಿ ಬಸ್‌ಗಳು ಸೇರಿದಂತೆ ಸಮೂಹ ಸಾರಿಗೆ ಏರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಬಿಎಂಟಿಸಿಯು ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಸ್ ಕಾರ್ಯಾಚರಣೆ ಮಾಡುತ್ತಿದೆ. ಹೀಗಾಗಿ ಎಲ್ಲ ಚಾಲಕ ಮತ್ತು ನಿರ್ವಾಹಕರಿಗೆ ಕೆಲಸ ನೀಡುತ್ತಿಲ್ಲ. ಇದಕ್ಕಾಗಿಯೆ ನಿಗಮ ನೌಕರರಿಗೆ ವೇತನ ರಹಿತ ರಜೆ ಪಡೆಯಲು ಅವಕಾಶ ಕಲ್ಪಿಸಿತ್ತು. ಹೀಗಾಗಿ ಆರಂಭದಲ್ಲಿ ಸಾಕಷ್ಟು ಚಾಲಕ ಮತ್ತು ನಿರ್ವಾಹಕರು ರಜೆ ಪಡೆದು ಊರುಗಳತ್ತ ಮುಖ ಮಾಡಿದ್ದರು.
ಕೊರೋನಾತಂಕದ ಮಧ್ಯೆ ಬಸ್ ಪ್ರಯಾಣಿಕರ ಸಂಖ್ಯೆ ಏರಿಕೆ..!
ಕೆಲಸ ಕಳೆದುಕೊಳ್ಳುವ ಭಯ:
ಆದರೆ ದೀರ್ಘಕಾಲ ರಜೆಯಲ್ಲಿ ಇದ್ದರೆ ಮುಂದಿನ ದಿನಗಳಲ್ಲಿ ಉದ್ಯೋಗಕ್ಕೆ ಕುತ್ತು ಬರಬಹುದು ಎಂದು ಭಯಗೊಂಡಿರುವ ಚಾಲನಾ ಸಿಬ್ಬಂದಿ, ಇದೀಗ ಮತ್ತೆ ಕರ್ತವ್ಯಕ್ಕೆ ಹಿಂದಿರುಗುತ್ತಿದ್ದಾರೆ. ಆದರೆ, ನಿಗಮ ಪ್ರಯಾಣಿಕರ ಕೊರತೆ ಇರುವುದರಿಂದ ಕಡಿಮೆ ಸಂಖ್ಯೆಯ ಬಸ್ ಕಾರ್ಯಾಚರಣೆ ಮಾಡುತ್ತಿದೆ. ಹೀಗಾಗಿ ಕರ್ತವ್ಯಕ್ಕೆ ಹಾಜರಾಗುವ ಎಲ್ಲ ಚಾಲಕ ಮತ್ತು ನಿರ್ವಾಹಕರಿಗೆ ಕರ್ತವ್ಯ ನೀಡಲು ಸಾಧ್ಯವಾಗುತ್ತಿಲ್ಲ. ಕೆಲ ಡಿಪೋಗಳ ಅಧಿಕಾರಿಗಳು ಮೊದಲು ಬರುವ ನೌಕರರನ್ನು ಆ ದಿನದ ಕರ್ತವ್ಯಕ್ಕೆ ನಿಯೋಜಿಸುತ್ತಿದ್ದಾರೆ.
ಡಿಪೋ ಆವರಣದಲ್ಲಿ ಚಪ್ಪಲಿ ಸಾಲು:
ಕೊರೋನಾ ಹಿನ್ನೆಲೆಯಲ್ಲಿ ಪಾಳಿ ಆಧಾರಿತ ಬಸ್ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ನಿಗಮ ಸದ್ಯ ಬೆಳಗ್ಗೆ 7ಕ್ಕೆ ಸಾಮಾನ್ಯ ಪಾಳಿ ಮಾತ್ರ ಉಳಿಸಿಕೊಂಡಿದೆ. ಮೊದಲು ಬಂದವರಿಗೆ ಕೆಲಸಕ್ಕೆ ನಿಯೋಜಿಸುವುದರಿಂದ ಚಾಲಕರು ಹಾಗೂ ನಿರ್ವಾಹಕರು ಮುಂಜಾನೆ 4.30ಕ್ಕೆ ಡಿಪೋಗೆ ಹಾಜರಾಗುತ್ತಿದ್ದಾರೆ. 6 ಗಂಟೆಗೆ ಪಾಳಿ ಆರಂಭವಾಗುವುದರಿಂದ ಡಿಪೋ ಆವರಣದಲ್ಲಿ ಸರತಿ ಸಾಲಿನಲ್ಲಿ ಚಪ್ಪಲಿ ಇರಿಸಿ ಹರಟುತ್ತಾ ಕಾಲ ಕಳೆಯುತ್ತಾರೆ. ಪಾಳಿ ಆರಂಭವಾದ ಕೂಡಲೇ ತಮ್ಮ ಚಪ್ಪಲಿ ಇರುವ ಜಾಗದಲ್ಲಿ ನಿಂತು ಬಳಿಕ ಕರ್ತವ್ಯ ಪಡೆದು ಮಾರ್ಗಗಳಿಗೆ ಬಸ್ ತೆಗೆದುಕೊಂಡು ತೆರಳುತ್ತಿದ್ದಾರೆ.