ರಾಜ್ಯದ ಪ್ರತಿ ವ್ಯಕ್ತಿಯ ಹೆಲ್ತ್ ರಿಜಿಸ್ಟರ್: ದೇಶದಲ್ಲೇ ಪ್ರಥಮ| ಆರೋಗ್ಯ ದತ್ತಾಂಶ ಸಂಗ್ರಹಿಸುವ ಯೋಜನೆಗೆ ಸರ್ಕಾರ ನಿರ್ಧಾರ| ಚಿಕ್ಕಬಳ್ಳಾಪುರದಲ್ಲಿ ಪ್ರಾಯೋಗಿಕವಾಗಿ ಜಾರಿ: ಸಚಿವ ಡಾ. ಸುಧಾಕರ್
ಬೆಂಗಳೂರು(ಮೇ.05): ರಾಜ್ಯದ ಪ್ರತಿ ನಾಗರಿಕನ ಹೆಲ್ತ್ ರಿಜಿಸ್ಟರ್ (ಆರೋಗ್ಯ ದತ್ತಾಂಶ) ಸಿದ್ಧಪಡಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಾಲನೆ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಪ್ರತಿಯೊಬ್ಬರ ಆರೋಗ್ಯದ ಸ್ಥಿತಿಯ ಬಗ್ಗೆ ಸರ್ಕಾರ ಸಮೀಕ್ಷೆ ನಡೆಸಲಿದ್ದು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಸಮೀಕ್ಷೆ ನಿಯಮಿತವಾಗಿ ಪುನರಾವರ್ತನೆಯಾಗುತ್ತಿರುತ್ತದೆ. ಇದರಿಂದ ಪ್ರತಿಯೊಬ್ಬ ನಾಗರಿಕನ ಆರೋಗ್ಯ ಸ್ಥಿತಿ ಇಲಾಖೆಗೆ ತಿಳಿಯುತ್ತದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳನ್ನು ಸಿದ್ಧಪಡಿಸಲು ಹಾಗೂ ಅನುಷ್ಠಾನಗೊಳಿಸಲು ಈ ಮಾಹಿತಿ ನೆರವಾಗುತ್ತದೆ. ಇಂತಹ ಯೋಜನೆ ನಮ್ಮ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಯಾಗುತ್ತಿದೆ ಎಂದು ತಿಳಿಸಿದ್ದಾರೆ.
undefined
ಊರಿಗೆ ತೆರಳುವ ಕಾರ್ಮಿಕರಿಗೆ ಇನ್ನೂ 3 ದಿನ ‘ಫ್ರೀ ಬಸ್’ ಸೇವೆ!
ಕೊರೋನಾ ಸೋಂಕಿತನ ಸಂಪರ್ಕದ ಹಿನ್ನೆಲೆಯಲ್ಲಿ ಸ್ವಯಂ ದಿಗ್ಬಂಧನದಲ್ಲಿರುವ ಸಚಿವರು, ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸೋಮವಾರ ತಮ್ಮ ನಿವಾಸದಿಂದ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿದರು.
ಕೊರೋನಾ ಸೋಂಕು ನಮಗೆ ಸಾಕಷ್ಟುಅನುಭವ ನೀಡಿದೆ. ಹೀಗಾಗಿ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ವಿಶೇಷ ಒತ್ತು ನೀಡುವ ಸಲುವಾಗಿ ಪ್ರತಿ ಮನೆ ಹಾಗೂ ಕುಟುಂಬದ ಸದಸ್ಯರ ಆರೋಗ್ಯ ಮಾಹಿತಿ ಸಂಗ್ರಹಿಸಲು ನಿರ್ಧರಿಸಲಾಗಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಆರೋಗ್ಯ, ಕಂದಾಯ, ಶಿಕ್ಷಣ ಮತ್ತು ಸ್ಥಳೀಯ ಸಂಸ್ಥೆ ಸಿಬ್ಬಂದಿಗಳ ಜೊತೆ ಆಶಾ ಕಾರ್ಯಕರ್ತೆಯರ ತಂಡ ರಚಿಸಿ ಪ್ರತಿ ಮನೆಗೂ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯದ ಪ್ರತಿ ವ್ಯಕ್ತಿಯ ಹೆಲ್ತ್ ರಿಜಿಸ್ಟರ್: ದೇಶದಲ್ಲೇ ಪ್ರಥಮ!
ಸಮೀಕ್ಷೆಯಲ್ಲಿ ಸಂಗ್ರಹಿಸಬೇಕಿರುವ ಮಾಹಿತಿ, ಸಮೀಕ್ಷೆ ಸ್ವರೂಪ ಹಾಗೂ ಕಾರ್ಯವಿಧಾನಗಳ ಕರಡು ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ಕರಡು ಸಿದ್ಧವಾದ ಬಳಿಕ ತಜ್ಞರ ಜೊತೆ ಸಮಾಲೋಚಿಸಿ ಅಂತಿಮಗೊಳಿಸಲಾಗುವುದು. ಸದ್ಯದಲ್ಲೇ ಪ್ರಕ್ರಿಯೆ ಮುಗಿಸಿ ಸಮೀಕ್ಷೆಗೆ ಚಾಲನೆ ನೀಡಲಾಗುವುದು. ಮುಂದುವರಿದ ರಾಷ್ಟ್ರಗಳಲ್ಲಿ ಇದೇ ವಿಧಾನ ಅಳವಡಿಸಿಕೊಂಡು ಆರೋಗ್ಯ ಸೇವೆ ನೀಡಲಾಗುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳನ್ನು ಸಿದ್ಧಪಡಿಸಲು ಮತ್ತು ಅನುಷ್ಠಾನಗೊಳಿಸಲು ಇದು ನೆರವಾಗಲಿದೆ. ಪಿಎಚ್‌ಸಿ ವ್ಯಾಪ್ತಿಯಲ್ಲಿ ಈ ಸಮೀಕ್ಷಾ ಕಾರ್ಯವು ನಿಯಮಿತವಾಗಿ ನಡೆಯುತ್ತಿರುತ್ತದೆ. ಇದರಿಂದ ಪ್ರತಿ ನಾಗರಿಕನ ನಿಖರ ಆರೋಗ್ಯ ಮಾಹಿತಿ ಆಗಿಂದಾಗ್ಗೆ ಲಭ್ಯವಿರುತ್ತದೆ ಎಂದರು.