ಕೊರೋನಾತಂಕ ನಡುವೆ ಗುಡ್ ನ್ಯೂಸ್: ರಾಜ್ಯದಲ್ಲೀಗ ಸೋಂಕಿತರಿಗಿಂತ ಚೇತರಿಕೆ ಹೆಚ್ಚು!

By Kannadaprabha News  |  First Published May 5, 2020, 7:27 AM IST

ರಾಜ್ಯದಲ್ಲಿ ಈಗ ಸೋಂಕಿತರಿಗಿಂತ ಚೇತರಿಕೆ ಹೆಚ್ಚು!| ಸಕ್ರಿಯ ಕೇಸ್‌: 302| ಗುಣಮುಖ: 321| ನಿನ್ನೆ 16 ಮಂದಿಗೆ ಸೋಂಕು, ಇಬ್ಬರು ಸಾವು| ಬೀದರ್‌ 7, ಮಂಡ್ಯ, ಕಲಬುರಗಿ ತಲಾ 2| ಹಾವೇರಿಯಲ್ಲಿ ಮೊದಲ ಕೊರೋನಾ ಕೇಸ್‌


ಬೆಂಗಳೂರು(ಮೇ. 05): ರಾಜ್ಯದಲ್ಲಿ ಸೋಮವಾರ 16 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 651ಕ್ಕೆ ತಲುಪಿದೆ. ಇದೇ ವೇಳೆ ದಾವಣಗೆರೆ ಹಾಗೂ ಕಲಬುರಗಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.

ಉಳಿದಂತೆ ಸೋಮವಾರ 28 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು ಸಕ್ರಿಯ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿರುವುದು ತುಸು ನೆಮ್ಮದಿ ತಂದಿದೆ. 651 ಮಂದಿ ಸೋಂಕಿತರ ಪೈಕಿ 27 ಮಂದಿ ಮೃತಪಟ್ಟಿದ್ದು, 321 ಮಂದಿ ಗುಣಮುಖರಾಗಿದ್ದಾರೆ. ಉಳಿದ 302 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Latest Videos

undefined

ಸೋಮವಾರ ಸೋಂಕು ದೃಢಪಟ್ಟಪ್ರಕರಣಗಳ ಪೈಕಿ ಬೀದರ್‌ನ ಏಳು ಮಂದಿ, ಮಂಡ್ಯ ಹಾಗೂ ಕಲಬುರಗಿಯ ಇಬ್ಬರು, ಬೆಂಗಳೂರು, ಚಿಕ್ಕಬಳ್ಳಾಪುರ, ಹಾವೇರಿ, ದಾವಣಗೆರೆ, ವಿಜಯಪುರದಲ್ಲಿ ತಲಾ ಒಬ್ಬರು ಸೋಂಕಿತರಾಗಿದ್ದಾರೆ. ಹಸಿರು ವಲಯದಲ್ಲಿದ್ದ ಹಾವೇರಿಯಲ್ಲೂ ಈಗ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರು ನಗರದಲ್ಲಿ ಬೇಗೂರು ಠಾಣೆ ಪೊಲೀಸ್‌ ಪೇದೆಗೆ ಸೋಂಕು ಉಂಟಾಗಿರುವುದು ಆತಂಕ ಸೃಷ್ಟಿಸಿದೆ.

ದಾವಣಗೆರೆಯಲ್ಲಿ ಮತ್ತೊಬ್ಬರು 48 ವರ್ಷದ ಕೊರೊನಾ ವೈರಸ್‌ ಸೋಂಕಿತ ಮಹಿಳೆ ಮೃತಪಟ್ಟಿದ್ದು, ಇವರಿಗೆ ಇತ್ತೀಚೆಗೆ ಸೋಂಕಿಗೊಳಗಾಗಿದ್ದ ನರ್ಸ್‌ (ಸೋಂಕಿತೆ 533) ದ್ವಿತೀಯ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಪರೀಕ್ಷೆಯಿಂದ ದೃಢಪಟ್ಟಿದೆ. ಮತ್ತೊಂದು ಪ್ರಕರಣದಲ್ಲಿ ಕಲಬುರಗಿಯ 56 ವರ್ಷದ ಸೋಂಕಿತ ಪುರುಷ ಸಾವಿಗೀಡಾಗಿದ್ದಾರೆ. ಈ ಮೂಲಕ ಕಲಬುರಗಿಯ ಸಾವಿನ ಸಂಖ್ಯೆ 6ಕ್ಕೆ ಏರಿದೆ.

ದಾವಣಗೆರೆಯ 21ರಲ್ಲಿ 19 ಮಂದಿಗೆ ಶುಶ್ರೂಷಕಿಯಿಂದ ಸೋಂಕು:

ದಾವಣಗೆರೆಯಲ್ಲಿ ಕಳೆದ ಎರಡು ದಿನಗಳಲ್ಲಿ ದೃಢಪಟ್ಟ22 ಪ್ರಕರಣಗಳಲ್ಲಿ 19 ಮಂದಿಗೆ ದಾವಣಗೆರೆಯ ಖಾಸಗಿ ಆಸ್ಪತ್ರೆಯ ಶುಶ್ರೂಷಕಿಯಿಂದ (533ನೇ ಸೋಂಕಿತೆ) ಸೋಂಕು ಹರಡಿದೆ. ಇವರು ಬಾಗಲಕೋಟೆಯ ಮದುವೆಯೊಂದಕ್ಕೆ ಹೋಗಿರುವ ಮಾಹಿತಿ ಇದೆ. ಸೋಂಕಿತರೆಲ್ಲರೂ ಅವರ ಸಂಬಂಧಿಕರಾಗಿದ್ದು, 19 ಮಂದಿಯಲ್ಲಿ ಮೂವರು ಬಾಲಕರು, ಒಬ್ಬ ಬಾಲಕಿ, ಏಳು ಮಂದಿ ಮಹಿಳೆಯರು, ಆರು ಮಂದಿ ಪುರುಷರು, ಒಬ್ಬರು ವೃದ್ಧರಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ದಾವಣಗೆರೆಯಲ್ಲಿ ಈವರೆಗೂ 1,147 ಮಾದರಿಗಳನ್ನು ಪರೀಕ್ಷಿಸಿದ್ದು, 31 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನೂ 269 ಫಲಿತಾಂಶ ಬರಬೇಕಿದೆ.

ಬೀದರ್‌ನಲ್ಲಿ ಮತ್ತೆ 7 ಮಂದಿಗೆ ಸೋಂಕು:

ಬೀದರ್‌ನಲ್ಲಿ ಸೋಂಕಿನಿಂದ ಸಾವಿಗೀಡಾದ 82 ವರ್ಷದ ವೃದ್ಧನ ಸಂಪರ್ಕದಿಂದ 3 ಪುರುಷರು ಹಾಗೂ ನಾಲ್ವರು ಮಹಿಳೆಯರಿಗೆ ಸೋಂಕು ತಗುಲಿದೆ. ಈ ಮೂಲಕ ಬೀದರ್‌ನಲ್ಲಿ ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ಉಳಿದಂತೆ ಮಂಡ್ಯದಲ್ಲಿ ಮುಂಬೈಗೆ ಪ್ರಯಾಣ ಮಾಡಿದ್ದ ಹಿನ್ನೆಲೆ ಹೊಂದಿದ್ದ ಇಬ್ಬರು ಯುವತಿಯರು ಸೋಂಕಿತರಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ, ವಿಜಯಪುರದಲ್ಲಿ ಸೋಂಕಿತರ ದ್ವಿತೀಯ ಸಂಪರ್ಕದಿಂದ ಸೋಂಕು ತಗುಲಿದೆ.

ಹಾವೇರಿ ಹಸಿರು ವಲಯದಿಂದ ಔಟ್‌:

ಮುಂಬೈ ಪ್ರಯಾಣ ಹಿನ್ನೆಲೆ ಹೊಂದಿರುವ ಹಾವೇರಿ ಜಿಲ್ಲೆಯ ಸವಣೂರಿನ 32 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಈವರೆಗೆ ಹಸಿರು ವಲಯದಲ್ಲಿದ್ದ ಹಾವೇರಿಗೂ ಕೊರೋನಾ ಲಗ್ಗೆ ಇಟ್ಟಿದ್ದು, ಸೋಂಕಿತ ಜಿಲ್ಲೆಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

click me!