
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಮಾ.21): ವಾಹನ ಕಳವು, ಮನೆಗಳ್ಳತನ ಹಾಗೂ ಕುಟುಂಬದ ಸದಸ್ಯರ ನಾಪತ್ತೆ ಬಗ್ಗೆ ಪೊಲೀಸ್ ಠಾಣೆಗೆ (Police Station) ಹೋಗಿ ದೂರು ಸಲ್ಲಿಸಲು ಗಂಟೆಗಟ್ಟಲೆ ಕಾದು ಸಾರ್ವಜನಿಕರು ಪಡಿಪಾಟಲು ಪಡುವ ಅವಶ್ಯಕತೆ ಇನ್ನಿಲ್ಲ. ಇನ್ನು ಮುಂದೆ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಕುಳಿತ ಜಾಗದಿಂದಲೇ ದೂರು ಸಲ್ಲಿಸಿ ನಾಗರಿಕರು ಎಫ್‌ಐಆರ್ (FIR) ಪ್ರತಿ ಪಡೆಯಬಹುದು! ಅಪರಾಧ ಕೃತ್ಯಗಳ ಬಗ್ಗೆ ದೂರು ಸಲ್ಲಿಸಿ ಎಫ್‌ಐಆರ್ ಪ್ರತಿ ಪಡೆಯುವ ವಿನೂತನ ವ್ಯವಸ್ಥೆಯನ್ನು ಅತಿ ಶೀಘ್ರದಲ್ಲೇ ರಾಜ್ಯ ಪೊಲೀಸ್ ಇಲಾಖೆ (Karnataka Police Department) ಜಾರಿಗೊಳಿಸಲಿದೆ.
ಈಗ ಮೊಬೈಲ್, ಪರ್ಸ್ ಹಾಗೂ ಎಂಟಿಎಂ (ATM) ಕಳ್ಳತನದ ಬಗ್ಗೆ ರಾಜ್ಯ ಪೊಲೀಸ್ ಇಲಾಖೆಯ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸಿ ಸ್ವೀಕೃತಿ ಪತ್ರ ಪಡೆಯುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಆದರೆ ಆ ದೂರಿಗೆ ಎಫ್‌ಐಆರ್ ಬದಲಿಗೆ ಸ್ವೀಕೃತಿ ಪತ್ರವನ್ನು ಮಾತ್ರವಷ್ಟೇ ಆನ್‌ಲೈನ್‌ನಲ್ಲಿ ಪಡೆಯಬಹುದು. ಹೊಸ ವ್ಯವಸ್ಥೆ ಪ್ರಕಾರ ದೂರು ಸಲ್ಲಿಸಿ ಎಫ್‌ಐಆರ್ ಪ್ರತಿ ಪಡೆಯಬಹುದಾಗಿದೆ. ಇದರಿಂದ ಜನರ ಸಮಯ ಉಳಿತಾಯವಾಗಲಿದೆ. ಪೊಲೀಸ್ ಠಾಣೆಗೆ ತೆರಳುವ ಪ್ರಮೇಯವೂ ಇರುವುದಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಈ 1ರೂ. ನಾಣ್ಯ ನಿಮ್ಮ ಬಳಿಯಿದ್ರೆ 10 ಕೋಟಿ ರೂ.ಗಳಿಸಬಹುದು; ಹೇಗೆ ಅಂತೀರಾ? ಇಲ್ಲಿದೆ ವಿವರ
ದೆಹಲಿ, ತೆಲಂಗಾಣ ಮಾದರಿ: ವಾಹನ ಕಳವು, ನಾಪತ್ತೆ ಸೇರಿದಂತೆ ಕೆಲವು ಅಪರಾಧ ಕೃತ್ಯಗಳ ಸಂಬಂಧ ರಾಜ್ಯ ಪೊಲೀಸ್ ಇಲಾಖೆಯ ವೆಬ್‌ಸೈಟ್‌ನಲ್ಲಿ (https://ksp.karnataka.gov.in) ಸಾರ್ವಜನಿಕರು ದೂರು ಸಲ್ಲಿಸುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಈ ರೀತಿ ಆನ್‌ಲೈನ್ ದೂರು ಸ್ವೀಕಾರ ವ್ಯವಸ್ಥೆ ದೆಹಲಿ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಆ ರಾಜ್ಯಗಳ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ ಎಂದು ಎಸ್‌ಸಿಆರ್‌ಬಿ (ಅಪರಾಧ ದಾಖಲಾತಿ ಕೇಂದ್ರ) ಹಾಗೂ ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ದೂರು ಸಲ್ಲಿಕೆ ಹೇಗೆ?: ಕೆಎಸ್‌ಪಿ ವೆಬ್‌ಸೈಟ್‌ನಲ್ಲಿ ದೂರು ಸ್ವೀಕಾರಕ್ಕೆ ಪ್ರತ್ಯೇಕ ಲಿಂಕ್ ಇರುತ್ತದೆ. ಆ ಲಿಂಕ್ ಕ್ಲಿಕ್ ಮಾಡಿದರೆ ಪುಟ ತೆರೆದುಕೊಳ್ಳಲಿದೆ. ಅದರಲ್ಲಿ ದೂರುದಾರರ ಹೆಸರು, ಮನೆ ವಿಳಾಸ, ಅಪರಾಧ ಕೃತ್ಯದ ವಿವರ ಹಾಗೂ ಆಧಾರ್ ಸಂಖ್ಯೆ ನಮೂದಿಸಬೇಕು. ದೂರು ದಾಖಲಾದ ಕೂಡಲೇ ಸಂಬಂಧಪಟ್ಟಠಾಣೆಗೆ ಮಾಹಿತಿ ರವಾನೆಯಾಗಲಿದೆ. ಆ ಠಾಣೆಯಲ್ಲಿ ಆನ್‌ಲೈನ್ ದೂರಿನನ್ವಯ ಅಪರಾಧ ಕೃತ್ಯ ಆಧರಿಸಿ ಎಫ್‌ಐಆರ್ ದಾಖಲಾಗುತ್ತದೆ. ಆ ಎಫ್‌ಐಆರ್ ಪ್ರತಿಯನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು. ನಂತರ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ.
ವಾಹನ ಕಳ್ಳತನ ಸಂಬಂಧ ಕೇಂದ್ರ ಸರ್ಕಾರದ ಪರಿವಾಹನ ಹಾಗೂ ರಾಜ್ಯ ಸಾರಿಗೆ ಇಲಾಖೆಯ ಸಾರಥಿ ವೆಬ್ ಪೋರ್ಟಲ್ ಜತೆ ಕೆಎಸ್‌ಪಿ ವೆಬ್‌ಸೈಟನ್ನು ಲಿಂಕ್ ಮಾಡಲಾಗುತ್ತಿದೆ. ವಾಹನ ಕಳ್ಳತನ ಬಗ್ಗೆ ದೂರಿನ ಜೊತೆ ಚಾಸಿ ಹಾಗೂ ನೋಂದಣಿ ಪ್ರಮಾಣ ಪತ್ರ (ಆರ್‌ಸಿ) ಸಂಖ್ಯೆಯನ್ನು ಜನರು ನಮೂದಿಸಬೇಕು. ಆಗ ಸಾರಥಿ ಮತ್ತು ಪರಿವಾಹನದಲ್ಲಿ ಆ ವಾಹನದ ಬಗ್ಗೆ ಮಾಹಿತಿ ಸಿಗುತ್ತದೆ. ಇದರಿಂದ ಕಳ್ಳತನವಾದ ವಾಹನದ ಪತ್ತೆಗೆ ಪೊಲೀಸರಿಗೆ ಅನುಕೂಲವಾಗಲಿದೆ.
Online Gambling:ಆನ್‌ಲೈನ್ ಜೂಜು ಬಂದ್ ಮಾಡದಂತೆ ಸಿಎಂಗೆ ಆಮಿಷ ಒಡ್ಡಿದ್ದರಂತೆ!
ತಾಂತ್ರಿಕತೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡು ಪೊಲೀಸರ ಕಾರ್ಯನಿರ್ವಹಣೆಯನ್ನು ಸ್ಮಾರ್ಟ್ ಆಗಿಸುವ ಯೋಜನೆ ರೂಪಿಸಲಾಗುತ್ತಿದೆ. ಅದರ ಭಾಗವಾಗಿ ಈಗ ಆನ್‌ಲೈನ್‌ನಲ್ಲಿ ಅಪರಾಧ ಕೃತ್ಯಗಳ ದೂರು ಸ್ವೀಕಾರ ವ್ಯವಸ್ಥೆ ಉನ್ನತೀಕರಣಗೊಳಿಸಲಾಗುತ್ತಿದೆ.
-ಉಮೇಶ್ ಕುಮಾರ್, ಎಡಿಜಿಪಿ ಸಿಐಡಿ-ಎಸ್‌ಸಿಆರ್‌ಬಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ