Bengaluru: 20 ರೈಲ್ವೆ ನಿಲ್ದಾಣದಲ್ಲಿ ಶೀಘ್ರ ವಾಹನ ವಿದ್ಯುತ್‌ ಚಾರ್ಜಿಂಗ್‌ ಸೌಲಭ್ಯ

By Kannadaprabha NewsFirst Published Feb 21, 2023, 5:38 AM IST
Highlights

ನಗರದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ, ಯಶವಂತಪುರ ಸೇರಿ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಶೀಘ್ರವೇ ಎಲೆಕ್ಟ್ರಾನಿಕ್‌ ವೆಹಿಕಲ್‌ ಚಾರ್ಜಿಂಗ್‌ ಸೌಲಭ್ಯ ಲಭ್ಯವಾಗಲಿದೆ.

ಮಯೂರ್‌ ಹೆಗಡೆ

ಬೆಂಗಳೂರು (ಫೆ.21) : ನಗರದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ, ಯಶವಂತಪುರ ಸೇರಿ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಶೀಘ್ರವೇ ಎಲೆಕ್ಟ್ರಾನಿಕ್‌ ವೆಹಿಕಲ್‌ ಚಾರ್ಜಿಂಗ್‌ ಸೌಲಭ್ಯ ಲಭ್ಯವಾಗಲಿದೆ.

ರೈಲ್ವೆ ಮಂಡಳಿ(Railway Board)ಯು ಪರಿಸರ ಸಂರಕ್ಷಣೆ(Environmental protection)ಯ ಭಾಗವಾಗಿ 2024ರೊಳಗೆ ವಾರ್ಷಿಕ 10 ಲಕ್ಷದಿಂದ 40 ಲಕ್ಷ ಪ್ರಯಾಣಿಕರಷ್ಟುದಟ್ಟಣೆ ಇರುವ ರೈಲ್ವೆ ನಿಲ್ದಾಣಗಳಲ್ಲಿ ಇವಿ ಚಾರ್ಜಿಂಗ್‌ ಸೌಲಭ್ಯ(EV charging facility) ಕಲ್ಪಿಸುತ್ತಿದೆ. ಅದರನ್ವಯ ನೈಋುತ್ಯ ರೈಲ್ವೆ ವಲಯವು ಮೊದಲ ಹಂತವಾಗಿ ಬೆಂಗಳೂರು ವಿಭಾಗದ 20 ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಈ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದೆ. ಬಳಿಕ ಎರಡನೇ ಹಂತದಲ್ಲಿ (2025ರೊಳಗಾಗಿ) ಇತರೆ ನಿಲ್ದಾಣದಲ್ಲೂ ಚಾರ್ಜಿಂಗ್‌ ಸೌಕರ್ಯ ಅಳವಡಿಸಲಾಗುತ್ತದೆ.

ಬೆಂಗಳೂರು: ಕಲಾಸಿಪಾಳ್ಯ ನೂತನ ಬಸ್‌ ನಿಲ್ದಾಣ ಸೇವೆಗೆ ಸಿದ್ಧ

ಇದಕ್ಕಾಗಿ ಎನ್‌ಆರ್‌ಎಫ್‌ (Non fair revenue) ಮಾದರಿಯ ಟೆಂಡರ್‌ ಕರೆಯಲು ಮುಂದಾಗಿದೆ. ಅಂದರೆ, ಗುತ್ತಿಗೆದಾರರು ರೈಲ್ವೆ ಇಲಾಖೆಗೆ ಪರವಾನಗಿ ಮೊತ್ತ ಕಟ್ಟಬೇಕಾಗುತ್ತದೆ. ಬಳಿಕ ತಾವೇ ಇವಿ ಚಾರ್ಜಿಂಗ್‌ ಯಂತ್ರ ಅಳವಡಿಸಿ ನಿರ್ವಹಣೆ ಮಾಡುತ್ತಾರೆ. ಪ್ರಯಾಣಿಕರಿಗೆ ಚಾರ್ಜಿಂಗ್‌ ಸೌಕರ್ಯ ಒದಗಿಸಿ ಶುಲ್ಕ ಪಡೆಯಲಿದ್ದಾರೆ. ರೈಲ್ವೆ ಇಲಾಖೆ ಅಗತ್ಯ ಸ್ಥಳಾವಕಾಶ ಹಾಗೂ ವಿದ್ಯುತ್‌ ಸೌಲಭ್ಯವನ್ನು ಗುತ್ತಿಗೆದಾರರಿಗೆ ನೀಡುತ್ತದೆ. ಆರಂಭದಲ್ಲಿ ಒಂದು ವರ್ಷದ ಗುತ್ತಿಗೆ ಅವಧಿ ಇದಾಗಿದ್ದು, ಸಮರ್ಪಕ ಸೇವೆ ಇದ್ದರೆ ಮುಂದುವರಿಯಲಿದ್ದಾರೆ.

ಸಂಗೊಳ್ಳಿ ರಾಯಣ್ಣ ನಿಲ್ದಾಣ(Sangolli Rayanna Railway Station)ದ ವಾಹನ ನಿಲುಗಡೆ ಸ್ಥಳದಲ್ಲೇ ಈ ಚಾರ್ಜಿಂಗ್‌ ಸೆಂಟರ್‌ಗಳು ನಿರ್ಮಾಣ ಆಗಲಿವೆ. ಮೊದಲ ಹಾಗೂ ಎರಡನೇ ಪ್ರವೇಶ ದ್ವಾರದಲ್ಲಿ ಬೈಕ್‌ ಹಾಗೂ ಕಾರುಗಳಿಗೆ ಪ್ರತ್ಯೇಕವಾಗಿ ಇವಿ ಚಾರ್ಜಿಂಗ್‌ ಸೌಲಭ್ಯ ಇರಲಿದೆ. ಅದೇ ರೀತಿ ಇತರೆ ನಿಲ್ದಾಣದಲ್ಲಿ ಅಲ್ಲಿನ ಪ್ರಯಾಣಿಕರ ಸಂಖ್ಯೆ ಆಧರಿಸಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ನಿಲ್ದಾಣಗಳಲ್ಲಿ ಎಷ್ಟುಚಾರ್ಜಿಂಗ್‌ ಪಾಯಿಂಟ್‌ಗಳನ್ನು ರೂಪಿಸಬೇಕು ಹಾಗೂ ಎಷ್ಟುದರ ನಿಗದಿಸಬೇಕು ಎಂಬುದರ ಬಗ್ಗೆ ಇನ್ನಷ್ಟೇ ತೀರ್ಮಾನವಾಗಬೇಕಿದೆ. ಈ ಬಗ್ಗೆ ವಿಭಾಗದಿಂದ ಅಧ್ಯಯನ ಮಾಡಲಾಗುತ್ತಿದೆ. ಇದೇ ವಾರ ಇವೆಲ್ಲವನ್ನು ನಿರ್ಧರಿಸಲಿದ್ದೇವೆ. ಸದ್ಯಕ್ಕೆ ಕಾರುಗಳಿಗಿಂತ ಹೆಚ್ಚಾಗಿ ದ್ವಿಚಕ್ರ ವಾಹನಗಳ ಚಾರ್ಜಿಂಗ್‌ ಪಾಯಿಂಟನ್ನೇ ನೀಡಲು ನಿರ್ಧಾರವಾಗಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.

ಎಲ್ಲೆಲ್ಲಿ ಸೌಲಭ್ಯ?

ಮೊದಲ ಹಂತದಲ್ಲಿ ನಗರದ ಕೆಎಸ್‌ಆರ್‌(ಮೆಜೆಸ್ಟಿಕ್‌), ಯಶವಂತಪುರ, ದಂಡು ರೈಲ್ವೆ ನಿಲ್ದಾಣ, ಕೃಷ್ಣರಾಜಪುರ ಉಪನಗರ, ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌, ಯಲಹಂಕ, ಹೂಡಿ, ಬಂಗಾರಪೇಟೆ, ವೈಟ್‌ಫೀಲ್ಡ್‌, ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತಮ್ಮ ವಿದ್ಯುತ್‌ ಚಾಲಿತ ವಾಹನಗಳನ್ನು ಚಾಜ್‌ರ್‍ ಮಾಡಿಕೊಳ್ಳುವ ಅವಕಾಶ ಒದಗಲಿದೆ. ಇನ್ನು, ಬೆಂಗಳೂರು ವಿಭಾಗದ ಮಂಡ್ಯ, ರಾಮನಗರ, ಕುಪ್ಪಂ, ತುಮಕೂರು, ಹೊಸೂರು, ಮಾಲೂರು, ಶಾಂತಿಗ್ರಾಮ ಪುಟ್ಟಪರ್ತಿಗಳಲ್ಲೂ ಈ ಸೌಲಭ್ಯ ಸಿಗಲಿದೆ. 2ನೇ ಹಂತದಲ್ಲಿ ಇನ್ನಷ್ಟುನಿಲ್ದಾಣಗಳನ್ನು ಗುರುತಿಸಿ ಸೌಲಭ್ಯ ವಿಸ್ತರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಯಾರಿಗೆ ಅನುಕೂಲ?

ರೈಲ್ವೆ ನಿಲ್ದಾಣದಲ್ಲಿ ಇವಿ ಬೈಕ್‌ ನಿಲ್ಲಿಸಿ ತುಮಕೂರು ಸೇರಿ ಭಾಗಕ್ಕೆ ನೌಕರಿಗೆ ತೆರಳಿ ರಾತ್ರಿ ವೇಳೆ ಹಿಂದಿರುಗುವವರು, ದಿನಗಟ್ಟಲೆ ಪಾರ್ಕ್ ಮಾಡಿ ತೆರಳುವವರು, ನಗರದಲ್ಲೇ ಸುತ್ತಾಡುವಾಗ ಬೈಕ್‌ನ ಚಾರ್ಜಿಂಗ್‌ ಸಮಸ್ಯೆ ಎದುರಿಸುವವರಿಗೆ ಇದು ಅನುಕೂಲ. ಕೆಎಸ್‌ಆರ್‌, ಯಶವಂತಪುರ ನಿಲ್ದಾಣದಲ್ಲಿ ಇವಿ ಬೈಕ್‌ಗಳ ಪಾರ್ಕಿಂಗ್‌ ಕೂಡ ಹೆಚ್ಚುತ್ತಿದೆ. ಇವರಿಗೆಲ್ಲ ಈ ಸೌಲಭ್ಯದಿಂದ ಅನುಕೂಲವಾಗಲಿದೆ.

ವಿಧಾನಸಭೆ: ಸಾರ್ವಜನಿಕ ಶೌಚಾಲಯ ನಿಲ್ಲಿಸಿ: ಬಿಎಸ್‌ವೈ ಸಲಹೆ

ಶೀಘ್ರವೇ 20 ರೈಲ್ವೆ ನಿಲ್ದಾಣದಲ್ಲಿ ಇವಿ ಚಾರ್ಜಿಂಗ್‌ ಸೆಂಟರ್‌ ಆರಂಭಿಸಲು ಟೆಂಡರ್‌ ಕರೆಯಲಿದ್ದೇವೆ. ಪ್ರಯಾಣಿಕ ಸ್ನೇಹಿ ಹಾಗೂ ವಾಯುಮಾಲಿನ್ಯ ತಡೆಗೆ ಇವಿ ವಾಹನಗಳ ಬಳಕೆ ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆ.

-ಕುಸುಮಾ ಹರಿಪ್ರಸಾದ್‌, ಹೆಚ್ಚುವರಿ ವಿಭಾಗ ವ್ಯವಸ್ಥಾಪಕಿ, ನೈಋುತ್ಯ ರೈಲ್ವೆ ಬೆಂಗಳೂರು ವಿಭಾಗ

click me!