ಕೃಷಿ ಸಂಶೋಧನೆ ಫಲ ರೈತರಿಗೆ ಸಿಗಲಿ: ಸಚಿವ ಚಲುವರಾಯಸ್ವಾಮಿ

By Kannadaprabha News  |  First Published Jun 9, 2023, 7:02 AM IST

ಕೃಷಿ ವಿಶ್ವವಿದ್ಯಾಲಯಗಳು ಸಂಶೋಧಿಸುವ ಹೊಸ ತಳಿ, ತಂತ್ರಜ್ಞಾನ ಶೇಕಡ 70ರಷ್ಟು ರೈತರಿಗೆ ತಲುಪಲು ಕ್ರಮ ವಹಿಸಬೇಕು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಕರೆ ನೀಡಿದರು. 


ಬೆಂಗಳೂರು (ಜೂ.09): ಕೃಷಿ ವಿಶ್ವವಿದ್ಯಾಲಯಗಳು ಸಂಶೋಧಿಸುವ ಹೊಸ ತಳಿ, ತಂತ್ರಜ್ಞಾನ ಶೇಕಡ 70ರಷ್ಟು ರೈತರಿಗೆ ತಲುಪಲು ಕ್ರಮ ವಹಿಸಬೇಕು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಕರೆ ನೀಡಿದರು. ಗುರುವಾರ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆ-ಬೀಜ ವತಿಯಿಂದ ನಡೆದ ‘ಅಂತಾರಾಷ್ಟ್ರೀಯ ಬೀಜ ದಿನ’ ಉದ್ಘಾಟಿಸಿ ಅವರು ಮಾತನಾಡಿದರು. ರೈತರ ಅಭಿವೃದ್ಧಿಗೆ ಒತ್ತು ನೀಡಿದಾಗ ಮಾತ್ರ ಸುಭಿಕ್ಷತೆ ಸಾಧ್ಯ. ಕೃಷಿ ವಿಶ್ವವಿದ್ಯಾನಿಲಯಗಳು ಹೊರತಂದಿರುವ ನೂತನ ತಳಿಗಳು ಮತ್ತು ತಂತ್ರಜ್ಞಾನಗಳು ಪ್ರಸ್ತುತ ಕೇವಲ ಶೇ.45ರಷ್ಟುರೈತರಿಗೆ ತಲುಪುತ್ತಿವೆ. 

ಇದರಿಂದ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳು ಹಾಗೂ ಕೃಷಿ ಇಲಾಖೆ ರೈತರ ಜೊತೆಗೆ ನಿಕಟ ಸಂಪರ್ಕ ಸಾಧಿಸಬೇಕು. ಲ್ಯಾಬ್‌ನ ಸಂಶೋಧನೆಯ ಫಲ ಪ್ರತಿಯೊಬ್ಬ ರೈತನ ಹೊಲ ತಲುಪಿ ಹಸಿರು ಕ್ರಾಂತಿಗೆ ನಾಂದಿ ಹಾಡಬೇಕು ಎಂದರು. ಕೃಷಿಯಿಂದ ವಿಮುಖರಾಗುತ್ತಿರುವ ಯುವಜನತೆಯನ್ನು ಆಕರ್ಷಿಸಲು ಸೂಕ್ತ ಕಾರ್ಯಕ್ರಮ ಸಿದ್ಧಪಡಿಸಿ ಸಕಾಲದಲ್ಲಿ ಅನುಷ್ಠಾನಗೊಳಿಸಬೇಕು. ಪ್ರಮುಖವಾಗಿ ದ್ವಿತೀಯ ಕೃಷಿಗೆ ಒತ್ತು ನೀಡಿ ಲಾಭದಾಯಕ ಉದ್ದಿಮೆಯಾಗಿಸಲು ವಿಜ್ಞಾನಿಗಳು ಮತ್ತು ಅಧಿಕಾರಿಗಳು ಹೆಚ್ಚು ಶ್ರಮ ವಹಿಸಬೇಕು. 

Tap to resize

Latest Videos

ಸೋಲಿಗೆ 3 ಕಾರಣ ಹುಡುಕಿದ ಬಿಜೆಪಿ: ಮತಪ್ರಮಾಣ ಕುಸಿದಿಲ್ಲವೆಂದ ಸಿ.ಟಿ.ರವಿ

ಹವಾಮಾನ ವೈಪರೀತ್ಯ, ಅನಿಶ್ಚಿತತೆ ಸೇರಿ ಇತರೆ ಕಾರಣದಿಂದಾಗಿ ಆಹಾರ ಕೊರತೆಯಾಗುವ ಲಕ್ಷಣಗಳು ಕಂಡುಬರುತ್ತಿವೆ ಎಂದು ಹೇಳಿದರು. ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಸಿಇಒ ಡಾ.ಅಶೋಕ್‌ ದಳವಾಯಿ, ಉತ್ತಮ ಗುಣಮಟ್ಟದ ಬೀಜ ಉತ್ಪಾದನೆಗೆ ಹೆಚ್ಚು ಒತ್ತು ಸಿಗಬೇಕಿದೆ. ಗುಣಮಟ್ಟದ ಬೀಜ ಬಿತ್ತಿದಾಗ ಈಗಿನಕ್ಕಿಂತ ಶೇ.25ರಷ್ಟುಹೆಚ್ಚು ಫಸಲನ್ನು ಪಡೆಯಬಹುದು. 1964ರ ವೇಳೆ ವಿದೇಶಗಳಿಂದ ಬಿತ್ತನೆ ಬೀಜಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ, ಈಗ ನಾವು ಬೀಜೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ ವಿಶ್ವ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದೇವೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ.ಎಸ್‌.ವಿ.ಸುರೇಶ, ಉತ್ತಮ ಬೀಜ ಕೃಷಿಯ ಅಡಿಪಾಯವಿದ್ದಂತೆ. 

ರಾಜ್ಯದ ಡ್ಯಾಂಗಳು ಖಾಲಿ: 10 ಜಲಾಶಯಗಳಲ್ಲಿ ನೀರು ಬರಿದು!

ಇದನ್ನು ಮನಗೊಂಡು ಕೃಷಿ ವಿಶ್ವವಿದ್ಯಾನಿಲಯ ಸಂಶೋಧನೆಗಳ ಮೂಲಕ ಸಾಕಷ್ಟುಸುಧಾರಿತ ತಳಿಗಳನ್ನು ಬಿಡುಗಡೆಗೊಳಿಸಿದೆ. ಅವನ್ನು ರೈತರ ಮನೆಬಾಗಿಲಿಗೆ ಸಕಾಲಕ್ಕೆ ತಲುಪಿಸುವ ಕೆಲಸವನ್ನು ನಿರ್ವಹಿಸುತ್ತಿದೆ. ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಬೀಜೋತ್ಪಾದನೆ ಕೈಗೊಂಡು ತರಬೇತಿ ಕಾರ್ಯಕ್ರಮಗಳ ಮೂಲಕ ರೈತಾಪಿ ವರ್ಗಕ್ಕೆ ತಿಳಿವಳಿಕೆ ನೀಡಲಾಗುತ್ತಿದೆ ಎಂದರು. ಕೃವಿವಿ ಸಂಶೋಧನಾ ನಿರ್ದೇಶಕ ಡಾ.ಕೆ.ಬಿ.ಉಮೇಶ್‌, ವಿಶೇಷ ಅಧಿಕಾರಿ ಡಾ.ಕೆ.ಮಧುಸೂದನ್‌ ಇದ್ದರು. ಈ ವೇಳೆ ಕೃಷಿ ವಿಶ್ವವಿದ್ಯಾನಿಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್‌, ಖಾಸಗಿ ಬೀಜೋದ್ಯಮಗಳು, ರೈತ ಉತ್ಪಾದಕ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಂದ ವಸ್ತುಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿತ್ತು.

click me!