7 ತಿಂಗಳಿಂದ ರೈತರಿಗೆ ಸಿಕ್ಕಿಲ್ಲ ಹಾಲಿನ ಪ್ರೋತ್ಸಾಹಧನ..!

Published : Jun 01, 2023, 06:29 AM IST
7 ತಿಂಗಳಿಂದ ರೈತರಿಗೆ ಸಿಕ್ಕಿಲ್ಲ ಹಾಲಿನ ಪ್ರೋತ್ಸಾಹಧನ..!

ಸಾರಾಂಶ

ಸರ್ಕಾರದಿಂದ ಹಾಲಿನ ಪ್ರೋತ್ಸಾಹ ಧನ 403 ಕೋಟಿ ರು. ಬಾಕಿ, ಲೀಟರ್‌ಗೆ 5 ರು. ನೀಡುತ್ತಿರುವ ಸರ್ಕಾರ, ಹಣ ನೀಡದೇ ಹೋದರೆ ಕೆಎಂಎಫ್‌ಗೆ ಹಾಲು ಪೂರೈಕೆ ಕುಂಠಿತ ಭೀತಿ 

ಸಂಪತ್‌ ತರೀಕೆರೆ

ಬೆಂಗಳೂರು(ಜೂ.01):  ಕೆಎಂಎಫ್‌ ವ್ಯಾಪ್ತಿಯ 16 ಹಾಲು ಒಕ್ಕೂಟಗಳಿಗೆ ರೈತರು ಪೂರೈಕೆ ಮಾಡಿರುವ ಹಾಲಿಗೆ ಕಳೆದ ಏಳು ತಿಂಗಳಿನಿಂದ ರಾಜ್ಯ ಸರ್ಕಾರ 403 ಕೋಟಿ ರು.ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡಿದೆ. ರಾಜ್ಯದ 26 ಲಕ್ಷ ನೋಂದಾಯಿತ ರೈತರ ಪೈಕಿ 9 ಲಕ್ಷ ರೈತರಿಂದ ಹಾಲು ಒಕ್ಕೂಟಗಳು ದಿನಕ್ಕೆ ಸರಾಸರಿ 80ರಿಂದ 84 ಲಕ್ಷ ಲೀಟರ್‌ ಹಾಲನ್ನು ಸಂಗ್ರಹಿಸುತ್ತಿವೆ. ಹೀಗೆ ಸಂಗ್ರಹಿಸಿದ ಪ್ರತಿ ಲೀಟರ್‌ ಹಾಲಿಗೆ ಒಕ್ಕೂಟಗಳು ಕನಿಷ್ಠ 32 ರು.ಗಳನ್ನು ನೀಡುತ್ತಿವೆ. ರಾಜ್ಯ ಸರ್ಕಾರವು ಪ್ರತಿ ಲೀಟರ್‌ ಹಾಲಿಗೆ 5 ರು.ಗಳನ್ನು ಪ್ರೋತ್ಸಾಹ ಧನವಾಗಿ ನೀಡುತ್ತಿದೆ. ಆದರೆ, ಕಳೆದ ವರ್ಷ ನವೆಂಬರ್‌ನಿಂದ ಈವರೆಗೆ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ.

ಈ ಹಿಂದೆ ಪ್ರೋತ್ಸಾಹ ಧನ ಪಾವತಿಸುವಂತೆ ಕೆಎಂಎಫ್‌ ಪಶುಸಂಗೋಪನಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಅಕ್ಟೋಬರ್‌ವರೆಗಿನ ಪ್ರೋತ್ಸಾಹ ಧನ ಬಿಡುಗಡೆಯಾಗಿದ್ದು 2023 ಜನವರಿಯಲ್ಲಿ. ಇದೀಗ ಸರ್ಕಾರ ಬದಲಾಗಿದ್ದು ಪ್ರೋತ್ಸಾಹ ಧನ ಬಿಡುಗಡೆ ಇನ್ನಷ್ಟುವಿಳಂಬವಾಗಲಿದೆಯೇ ಎಂಬ ಆತಂಕ ರೈತರದ್ದು. ಪ್ರತಿ ದಿನ ಕೆಎಂಎಫ್‌ ಹಾಲು ನೀಡುವ ರೈತರಿಗೆ 28.27 ಕೋಟಿ ರು. ಪಾವತಿ ಮಾಡುತ್ತಿದೆ. ಈ ಮೊತ್ತದೊಂದಿಗೆ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ಪ್ರತಿ ಲೀಟರ್‌ಗೆ 5 ರು.ನಂತೆ ಸಂದಾಯ ಮಾಡಿದರೆ ಬಡ ರೈತರು ನಿರಾಳವಾಗಿ ಉಸಿರಾಡುವಂತಾಗುತ್ತದೆ ಎನ್ನುತ್ತಾರೆ ರೈತ ಸತೀಶ್‌ ಕುಮಾರ್‌.

ನೆರೆ ರಾಜ್ಯದಲ್ಲಿ ನಂದಿನಿಗೆ ವಿರೋಧ: ಕರ್ನಾಟಕದಲ್ಲಿ ಅಮುಲ್ ಪರ - ವಿರೋಧ ಚರ್ಚೆ ವೇಳೆ ಕೇರಳ ಕ್ಯಾತೆ

ಹಾಲಿನ ಕೊರತೆ ಭೀತಿ:

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ. ಬೇರೆ ರಾಜ್ಯಗಳಲ್ಲಿ ಪ್ರತಿ ಲೀಟರ್‌ ಹಾಲಿಗೆ 46ರಿಂದ 55 ರು. ಇದೆ. ಗಡಿ ಜಿಲ್ಲೆಗಳಲ್ಲಿ ಖಾಸಗಿ ಡೈರಿಗಳು ಪ್ರತಿ ಲೀಟರ್‌ ಹಾಲಿಗೆ 40ರಿಂದ 45 ರು.ಗಳನ್ನು ಕೊಟ್ಟು ಖರೀದಿಸುತ್ತಿವೆ. ಇದರಿಂದ ನಂದಿನಿ ಡೈರಿಗೆ ಹಾಲು ಹಾಕುವ ರೈತರ ಸಂಖ್ಯೆಯಲ್ಲೂ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದೆ. ಈ ನಡುವೆ ಪ್ರೋತ್ಸಾಹ ಧನ ನೀಡಲು ನಾಲ್ಕೈದು ತಿಂಗಳು ವಿಳಂಬ ಮಾಡುವುದರಿಂದ ಕೆಎಂಎಫ್‌ಗೆ ಹಾಲಿನ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚು ಎಂದು ಚಾಮರಾಜನಗರದ ರೈತರ ಗುರುಪ್ರಸಾದ್‌ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹ ಧನವೂ ಸೇರಿ ಪ್ರತಿ ಲೀಟರ್‌ ಹಾಲಿಗೆ ಕೇವಲ 37 ರು.ಗಳನ್ನು ಕೊಡಲಾಗುತ್ತಿದೆ. ಅದರಲ್ಲೂ ಪ್ರೋತ್ಸಾಹ ಧನವನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ. ಹಾಗೆಯೇ ಹಸುವಿನ ಹಾಲಿಗೆ ಶೇ.4ಜಿಡ್ಡು (ಫ್ಯಾಟ್‌) ಮತ್ತು ಶೇ 8.5 ಜಿಡ್ಡೇತರ(ಎಸ್‌ಎನ್‌ಎಫ್‌) ಅಂಶ ಇದ್ದರೆ ಮಾತ್ರ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪ್ರೋತ್ಸಾಹ ಧನ ಸಿಗುವುದಿಲ್ಲ, ಇದರಿಂದ ರೈತರು ಹೈನೋದ್ಯಮದ ಕುರಿತು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ಬದಲಾವಣೆಯ ಅವಶ್ಯಕತೆ ಇದೆ ಎಂದು ಕೆಲ ರೈತರು ಕನ್ನಡಪ್ರಭದೊಂದಿಗೆ ಅಳಲು ತೋಡಿಕೊಂಡರು.

ಸರ್ಕಾರ ರೈತರ ನೆರವಿಗೆ ಬರಲಿ

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಾಲು ಉತ್ಪಾದಕ ರೈತರ ನೆರವಿಗೆ ಬರಬೇಕು. ಕಳೆದ ಏಳು ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ಕೂಡಲೇ ಬಿಡುಗಡೆ ಮಾಡಬೇಕು. ಖಾಸಗಿ ಡೈರಿಗಳ ಹಾವಳಿ ನಡುವೆ ನಂದಿನಿ ಡೈರಿ ಉಳಿಯುವುದೇ ಕಷ್ಟವಾಗಿದೆ. ಜೊತೆಗೆ ಹಿಂಡಿ, ಬೂಸಾ, ವಿದ್ಯುತ್‌ ಬೆಲೆಯೂ ಹೆಚ್ಚಾಗಿದೆ. ಸರ್ಕಾರ ರೈತರೊಂದಿಗೆ ಕೆಎಂಎಫ್‌ ಉಳಿಸಬೇಕಿದ್ದು, ಈ ಸರ್ಕಾರ ನುಡಿದಂತೆ ನಡೆಯಬೇಕು ಅಂತ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!