Congress Guarantee: ನಾಳೆಯೇ 3 ಗ್ಯಾರಂಟಿ?: ಗೃಹ ಲಕ್ಷ್ಮೀಯದ್ದೇ ಗೊಂದಲ

By Kannadaprabha NewsFirst Published Jun 1, 2023, 5:35 AM IST
Highlights

4 ಗ್ಯಾರಂಟಿ ಯೋಜನೆಗಳ ಚಾಲನೆಗೆ ಅಗತ್ಯ ಪೂರ್ವಭಾವಿ ರೂಪರೇಷೆ ಬಹುತೇಕ ಅಂತಿಮಗೊಳಿಸಲಾಗಿದ್ದು, ಕೆಲವೊಂದು ಗೊಂದಲಗಳಿಗೆ ಗುರುವಾರ ಪರಿಹಾರ ಕಂಡುಕೊಳ್ಳುವ ಭರವಸೆಯಿದೆ. ಆದರೆ, ಯುವ ನಿಧಿ ಯೋಜನೆ ವಿಚಾರದಲ್ಲಿ ಗೊಂದಲ ಹಾಗೂ ಸವಾಲುಗಳು ಹೆಚ್ಚಿರುವ ಕಾರಣ ಅದು ಮಾತ್ರ ತುಸು ವಿಳಂಬವಾಗುವ ಸಾಧ್ಯತೆಯಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಬೆಂಗಳೂರು(ಜೂ.01):  ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ‘ಪಂಚ ಗ್ಯಾರಂಟಿ’ ಯೋಜನೆಗಳ ಪೈಕಿ ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮೂರು ಅಥವಾ ನಾಲ್ಕು ಗ್ಯಾರಂಟಿ ಯೋಜನೆಗಳ ಅಧಿಕೃತ ಚಾಲನೆಯ ಘೋಷಣೆ ಹೊರಬೀಳಲಿದೆ. ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯುವ ನಿಧಿ ಯೋಜನೆ ತುಸು ವಿಳಂಬವಾಗುವ ಸಾಧ್ಯತೆಯಿದೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸಚಿವರು ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಮಹತ್ವದ ಪೂರ್ವಸಿದ್ಧತಾ ಸಭೆ ನಡೆಸಿದರು. ಈ ವೇಳೆ 4 ಗ್ಯಾರಂಟಿ ಯೋಜನೆಗಳ ಚಾಲನೆಗೆ ಅಗತ್ಯ ಪೂರ್ವಭಾವಿ ರೂಪರೇಷೆ ಬಹುತೇಕ ಅಂತಿಮಗೊಳಿಸಲಾಗಿದ್ದು, ಕೆಲವೊಂದು ಗೊಂದಲಗಳಿಗೆ ಗುರುವಾರ ಪರಿಹಾರ ಕಂಡುಕೊಳ್ಳುವ ಭರವಸೆಯಿದೆ. ಆದರೆ, ಯುವ ನಿಧಿ ಯೋಜನೆ ವಿಚಾರದಲ್ಲಿ ಗೊಂದಲ ಹಾಗೂ ಸವಾಲುಗಳು ಹೆಚ್ಚಿರುವ ಕಾರಣ ಅದು ಮಾತ್ರ ತುಸು ವಿಳಂಬವಾಗುವ ಸಾಧ್ಯತೆಯಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಗ್ಯಾರಂಟಿ ಅನುಷ್ಠಾನ ಖಚಿತ: ಪರಮೇಶ್ವರ್‌

ತನ್ಮೂಲಕ ಮಹಿಳೆಯರ ಉಚಿತ ಬಸ್‌ ಪ್ರಯಾಣದ ‘ಶಕ್ತಿ’, 200 ಯುನಿಟ್‌ವರೆಗೆ ಉಚಿತ್‌ ವಿದ್ಯುತ್‌ ನೀಡುವ ‘ಗೃಹ ಜ್ಯೋತಿ’, ಪ್ರತಿ ಸದಸ್ಯರಿಗೆ 10 ಕೆ.ಜಿ. ಆಹಾರ ಧಾನ್ಯ ನೀಡುವ ‘ಅನ್ನಭಾಗ್ಯ’, ಪ್ರತಿ ಮನೆಯೊಡತಿಗೆ ಮಾಸಿಕ 2 ಸಾವಿರ ರು. ಸಹಾಯಧನ ನೀಡುವ ‘ಗೃಹ ಲಕ್ಷ್ಮೇ’ ಯೋಜನೆ ಅನುಷ್ಠಾನ ಮೊದಲ ಹಂತದಲ್ಲೇ ಘೋಷಣೆಯಾಗಲಿದೆ ಎಂದು ತಿಳಿದುಂದಿದೆ.

ಇನ್ನು ಪದವಿ ಪೂರೈಸಿ 6 ತಿಂಗಳವರೆಗೆ ಉದ್ಯೋಗ ಸಿಗದವರನ್ನು ಮಾತ್ರ ನಿರುದ್ಯೋಗಿ ಎಂದು ಪರಿಗಣಿಸಲು ನಿರ್ಧರಿಸಿರುವುದರಿಂದ ನಿರುದ್ಯೋಗಿಗಳ ಗುರುತಿಸುವಿಕೆ ಹಾಗೂ ನಿರುದ್ಯೋಗ ಭತ್ಯೆ ವಿತರಣೆ ರೂಪರೇಷೆ ಸಿದ್ಧಪಡಿಸುವ ಸಲುವಾಗಿ ‘ಯುವ ನಿಧಿ’ ಅನುಷ್ಠಾನ ಮುಂದೂಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಆರ್ಥಿಕ ಬಿಕ್ಕಟ್ಟು ಉಂಟಾಗದಂತೆ ಕೊಟ್ಟಮಾತು ಉಳಿಸಿಕೊಳ್ಳಲು ಇರುವ ಎಲ್ಲಾ ಆಯ್ಕೆಗಳ ಬಗ್ಗೆಯೂ ಚರ್ಚಿಸಿದ್ದು, ಈ ಯೋಜನೆಗಳ ಸಂಬಂಧ ಷರತ್ತುಗಳು ಹಾಗೂ ಫಲಾನುಭವಿ ಆಯ್ಕೆ ಪ್ರಕ್ರಿಯೆ ಬಗ್ಗೆ ಸಿದ್ದರಾಮಯ್ಯ ಶುಕ್ರವಾರವೇ ಘೋಷಣೆ ಮಾಡಲಿದ್ದಾರೆ. ತನ್ಮೂಲಕ ಯೋಜನೆಗಳ ಅನುಷ್ಠಾನದ ಬಗ್ಗೆ ಜನರಲ್ಲಿ ಇರುವ ಎಲ್ಲಾ ಗೊಂದಲಗಳಿಗೂ ಪರಿಹಾರ ನೀಡಲಿದ್ದಾರೆ.

ಬಸ್‌ ಪ್ರಯಾಣ ಉಚಿತ ರೂಪರೇಷೆ:

‘ಕನ್ನಡಪ್ರಭ’ಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ‘ಶಕ್ತಿ’ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಸಾಮಾನ್ಯ ಕೆಂಪು ಬಸ್ಸು ಹಾಗೂ ಹವಾನಿಯಂತ್ರಿತ ವ್ಯವಸ್ಥೆ ಹೊಂದಿಲ್ಲದ (ನಾನ್‌-ಎಸಿ) ಬಸ್ಸುಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ತೀರ್ಮಾನವಾಗಿದೆ. ಹೊರ ರಾಜ್ಯದ ಮಹಿಳೆಯರಿಗೆ ಈ ಅವಕಾಶವಿಲ್ಲ. ಇನ್ನು ಐರಾವತ, ಎ.ಸಿ., ಎಸಿ-ಸ್ಲೀಪರ್‌ ಬಸ್ಸುಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಇರುವುದಿಲ್ಲ. ರಾಜ್ಯವ್ಯಾಪಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಬೇಕೆ ಅಥವಾ ವಾಸಸ್ಥಳದಿಂದ 60 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ನೀಡಬೇಕೆ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಬೇಕಿದೆ. ಈ ವೇಳೆ ರಾಜ್ಯಾದ್ಯಂತ ಉಚಿತ ಪ್ರಯಾಣದ ಭರವಸೆ ನೀಡಿರುವುದರಿಂದ ಹಾಗೂ ಹೆಚ್ಚು ಹೊರೆ ಬೀಳದ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಉಚಿತ ಪ್ರಯಾಣ ಕಲ್ಪಿಸುವಂತೆ ಸಚಿವರು ಸಲಹೆ ನೀಡಿದ್ದಾರೆ. ಆದರೆ, ಈ ಯೋಜನೆ ಉದ್ಯೋಗಸ್ಥ ಮಹಿಳೆಯರಿಗೆ ಹೆಚ್ಚು ಅನುಕೂಲ ತಂದುಕೊಡುವ ಉದ್ದೇಶ ಹೊಂದಿದ್ದರಿಂದ 60 ಕಿ.ಮೀ.ಗೆ ಸೀಮಿತಗೊಳಿಸುವುದು ಉಚಿತ ಎಂಬ ಸಲಹೆ ಅಧಿಕಾರಿ ವರ್ಗದಿಂದ ಬಂದಿದೆ.

‘ಗೃಹ ಜ್ಯೋತಿಗೆ’ ಕಳೆದ ವರ್ಷದ ವಿದ್ಯುತ್‌ ಬಳಕೆ ಆಧಾರ?:

ಗೃಹ ಜ್ಯೋತಿ ಯೋಜನೆಯನ್ನು ಗರಿಷ್ಠ 200 ಯುನಿಟ್‌ ಉಚಿತ ವಿದ್ಯುತ್‌ ನೀಡುವ ರೂಪದಲ್ಲಿ ಜಾರಿಗೆ ತರುವ ಚಿಂತನೆಯಿದೆ. ಅಂದರೆ, ಸಂಬಂಧಪಟ್ಟವಿದ್ಯುತ್‌ ಸಂಪರ್ಕ ಪಡೆದವರ ಈ ಹಿಂದಿನ ವರ್ಷದ ಸರಾಸರಿ ವಿದ್ಯುತ್‌ ಬಳಕೆಯನ್ನು ಆಧರಿಸಿ ಅವರಿಗೆ ಎಷ್ಟುವಿದ್ಯುತ್‌ ಉಚಿತ ನೀಡಬೇಕು ಎಂಬುದನ್ನು ತೀರ್ಮಾನಿಸುವ ಸಾಧ್ಯತೆಯಿದೆ. ಇದರಿಂದ ಸಾಮಾನ್ಯವಾಗಿ ಮಾಸಿಕ 50 ಯೂನಿಟ್‌ ಬಳಸುವ ಗ್ರಾಹಕ ಉಚಿತವಿದೆ ಎಂಬ ಕಾರಣಕ್ಕೆ 200 ಯೂನಿಟ್‌ ಬಳಸಲು ಅವಕಾಶ ನೀಡುವುದು ಸರಿಯಲ್ಲ. ಇದರ ಬದಲಾಗಿ ಆತ ಕಳೆದ ವರ್ಷ ಸರಾಸರಿ 50 ಯೂನಿಟ್‌ ಬಳಸಿದರೆ ಶೇ.10ರಷ್ಟುಹೆಚ್ಚುವರಿ ವಿದ್ಯುತ್‌ ಬಳಸಲು ಅವಕಾಶ ನೀಡಿ ಅಷ್ಟನ್ನು ಮಾತ್ರ ಉಚಿತ ಮಾಡಬೇಕು ಎಂಬ ಸಲಹೆ ಬಂದಿದೆ.
ಇನ್ನು 200 ಯೂನಿಟ್‌ ಮಿತಿಗಿಂತ ಹೆಚ್ಚು ವಿದ್ಯುತ್‌ ಬಳಸುವ ಗ್ರಾಹಕರಿಗೆ ಹೆಚ್ಚುವರಿ ವಿದ್ಯುತ್‌ಗೆ ಮಾತ್ರ ಶುಲ್ಕು ವಿಧಿಸುವ ಚಿಂತನೆಯಿದೆ. ಅಂದರೆ, ಗ್ರಾಹಕ 250 ಯುನಿಟ್‌ ಬಳಸುತ್ತಿದ್ದರೆ ಅಂತಹವರಿಗೆ 200 ಯುನಿಟ್‌ ಉಚಿತವಾಗಿ ನೀಡಿ ಉಳಿದ 50 ಯುನಿಟ್‌ಗೆ ಶುಲ್ಕ ವಿಧಿಸಬೇಕು ಎಂದು ಚರ್ಚಿಸಲಾಗಿದೆ.

ಈ ವೇಳೆ 200 ಯುನಿಟ್‌ ಮೇಲ್ಪಟ್ಟು ವಿದ್ಯುತ್‌ ಬಳಕೆ ಮಾಡುವವರಿಂದ ದೆಹಲಿ, ತಮಿಳುನಾಡು ಮಾದರಿಯಲ್ಲಿ ಪೂರ್ಣ ಪ್ರಮಾಣದ ಶುಲ್ಕ ಸಂಗ್ರಹಿಸಬೇಕು ಎಂಬ ಚರ್ಚೆಯೂ ನಡೆದಿದೆ. ಆದರೆ, ಎಲ್ಲರಿಗೂ ವಿದ್ಯುತ್‌ ಉಚಿತ ಎಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಕಾರಣ ಇಂತಹ ತೀರ್ಮಾನ ಸೂಕ್ತವಲ್ಲ ಎಂದು ಸಚಿವರು ಹೇಳಿದರು ಎನ್ನಲಾಗಿದೆ.

ಇನ್ನು ವಿದ್ಯುತ್‌ ಬಳಕೆದಾರರು ಪೂರ್ಣ ಪ್ರಮಾಣದ ವಿದ್ಯುತ್‌ ಶುಲ್ಕವನ್ನು ಪಾವತಿಸಿ ಬಳಿಕ ಸರ್ಕಾರದಿಂದ ಡಿಬಿಟಿ (ಡೈರೆಕ್ಟ್ ಬ್ಯಾಂಕ್‌ ಟ್ರಾನ್ಸ್‌ಫರ್‌) ಮಾದರಿಯಲ್ಲಿ ಸಹಾಯಧನ ಹಿಂಪಡೆಯಬೇಕು. ಜತೆಗೆ ಉಚಿತ ವಿದ್ಯುತ್‌ ಅಗತ್ಯವಿಲ್ಲದ ಶ್ರೀಮಂತರು ಉಚಿತ ಕೊಡುಗೆಯನ್ನು ಬಡವರ ಅನುಕೂಲಕ್ಕಾಗಿ ಬಿಟ್ಟುಕೊಡಬಹುದು (ಗಿವ್‌ ಅವೇ) ಎಂದು ಹೇಳುವ ಸಾಧ್ಯತೆಯಿದೆ.

‘ಅನ್ನಭಾಗ್ಯ’ದಲ್ಲಿ ಅಕ್ಕಿ ಜತೆ ಇತರ ಧಾನ್ಯ:

ಅನ್ನಭಾಗ್ಯ ಅಕ್ಕಿ ಯೋಜನೆಯಡಿ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ಘೋಷಿಸಲಾಗಿದೆ. ಇದರಿಂದ ಮಾಸಿಕ 2.17 ಲಕ್ಷ ಟನ್‌ ಹೆಚ್ಚುವರಿ ಅಕ್ಕಿ ಅಗತ್ಯ ಬೀಳಲಿದೆ. ಇಷ್ಟುಪ್ರಮಾಣದ ಹೆಚ್ಚುವರಿ ಅಕ್ಕಿ ಕೇಂದ್ರದಿಂದ ಪಡೆಯುವುದು ಸಮಸ್ಯೆಯಾಗಬಹುದು. ಹೀಗಾಗಿ ಅಕ್ಕಿ ಅಥವಾ ರಾಗಿ, ಜೋಳ ಹಾಗೂ ಗೋಧಿಯನ್ನೂ ಆಯ್ಕೆಯಾಗಿ ವಿತರಿಸಲು ನಿರ್ಧರಿಸಲಾಗಿದೆ. ಇದರಿಂದ ಆಯಾ ಭಾಗದಲ್ಲಿ ರೂಢಿಯಲ್ಲಿರುವ ಆಹಾರ ಧಾನ್ಯವನ್ನು ಪಡಿತರ ಚೀಟಿದಾರರು ಪಡೆಯುತ್ತಾರೆ. ಇದರಿಂದ ಅವರ ಆರೋಗ್ಯಕ್ಕೂ ಪೂರಕವಾಗಲಿದೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.

ಗೃಹ ಲಕ್ಷ್ಮೀಯದ್ದೇ ಗೊಂದಲ:

ಗೃಹ ಲಕ್ಷ್ಮಿ ಯೋಜನೆಯಡಿ ಮನೆಯೊಡತಿಗೆ ಸೀಮಿತವಾಗಿ ಮಾಸಿಕ 2 ಸಾವಿರ ರು. ಪರಿಹಾರ ನೀಡುವುದಾಗಿ ಹೇಳಲಾಗಿದೆ. ಮನೆಯೊಡತಿಯನ್ನು ನಿರ್ಧರಿಸುವ ಕೆಲಸಕ್ಕೆ ಸರ್ಕಾರ ಮುಂದಾಗುವುದು ಬೇಡ. ಈ ಆಯ್ಕೆಯನ್ನು ಮನೆಯವರೇ ನಿರ್ಧರಿಸಿ ಅರ್ಜಿ ಸಲ್ಲಿಸಬೇಕು. ಅರ್ಹರನ್ನು ಪರಿಶೀಲಿಸಿ ಸರ್ಕಾರ ಸಹಾಯಧನ ನೀಡಲಿದೆ. ಇನ್ನು ಈ ಯೋಜನೆ ಎಪಿಎಲ್‌ ಹಾಗೂ ಬಿಪಿಎಲ್‌ ಎಲ್ಲರಿಗೂ ನೀಡಬೇಕೆ ಅಥವಾ ಬಿಪಿಎಲ್‌ ಕುಟುಂಬಗಳಿಗೆ ಸೀಮಿತಗೊಳಿಸಬೇಕೆ ಎಂಬ ಗೊಂದಲ ಮುಂದುವರೆದಿದೆ.

5 ವರ್ಷ ಸಿದ್ದರಾಮಯ್ಯ ಸಿಎಂ ಎಂದು ಗ್ಯಾರಂಟಿ ನೀಡಲಿ: ವಿಜಯೇಂದ್ರ ಟಾಂಗ್

ಹಣ ಹೊಂದಿಸಲು ಕಸರತ್ತು:

ಬುಧವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳು ಪಿಪಿಟಿ ಮೂಲಕ ಯೋಜನೆಗಳ ಅನುಷ್ಠಾನ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ವಿವರಣೆ ನೀಡಿದರು. ಜತೆಗೆ ಗ್ಯಾರಂಟಿ ಘೋಷಣೆಗಳನ್ನು ಘೋಷಿಸಿರುವಂತೆ ಯತಾವತ್ತಾಗಿ ಅನುಷ್ಠಾನಗೊಳಿಸುವುದು ಹಾಗೂ ಷರತ್ತು ವಿಧಿಸಿ ಅರ್ಹರಿಗೆ ಮಾತ್ರ ತಲುಪಿಸುವುದು ಸೇರಿದಂತೆ 3-4 ಮಾದರಿಗಳನ್ನು ವಿವರಿಸಿದರು. ಅವುಗಳ ಹಣಕಾಸು ಹೊರೆಯನ್ನೂ ವಿವರಿಸಿದರು ಎಂದು ತಿಳಿದುಬಂದಿದೆ.

ಕಾಲಮಿತಿ ಅನಿವಾರ್ಯ:

ಸಭೆಯಲ್ಲಿ ಎಲ್ಲಾ ಸಚಿವರೂ ಯೋಜನೆಗಳ ಅನುಷ್ಠಾನಕ್ಕೆ ಬದ್ಧವಾಗಿರಬೇಕು ಎಂದು ಅಭಿಪ್ರಾಯಪಟ್ಟರೂ ತರಾತುರಿ ಅನುಷ್ಠಾನ ಮಾಡುವುದು ಸರಿಯಲ್ಲ. ಕೆಲವು ಯೋಜನೆಗಳಿಗೆ ಕಾಲಮಿತಿ ಅನಿವಾರ್ಯ. ಹೀಗಾಗಿ ಈ ಯೋಜನೆಗಳು ಆ ದಿನದಿಂದಲೇ ಜಾರಿ ಅಸಾಧ್ಯ ಎನ್ನಲಾಗಿದೆ.

click me!