ರಾಜ್ಯದ ಜನರಿಗೆ ತೊಳ್ಕೊಳ್ಳೋಕೆ ನೀರಿಲ್ಲ, ತೆಲಂಗಾಣಕ್ಕೆ ಕದ್ದುಮುಚ್ಚಿ 10 ಟಿಎಂಸಿ ನೀರು ಬಿಟ್ಟಿತಾ ಕಾಂಗ್ರೆಸ್?

ಕುಡಿಯುವ ನೀರಿಗಾಗಿ ತೆಲಂಗಾಣಕ್ಕೆ 1.5 ಟಿಎಂಸಿ ನೀರು ಬಿಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ಬಸವಸಾಗರ ಜಲಾಶಯದಿಂದ ರಾತ್ರೋ ರಾತ್ರಿ 10 ಟಿಎಂಸಿ ನೀರು ಹರಿಸಿದೆ ಎಂದು ರೈತ ಸಂಘ ಆರೋಪಿಸಿದೆ. ಸರ್ಕಾರದ ಈ ನಡೆ ಖಂಡಿಸಿ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.

Farmers BJP leaders express anger against Congress government over alleged release of 10 TMC water to Telangana

ಯಾದಗಿರಿ/ವಿಜಯಪುರ (ಮಾ.24) :  ಕುಡಿಯುವ ನೀರಿನ ಉದ್ದೇಶಕ್ಕಾಗಿ ನೆರೆಯ ತೆಲಂಗಾಣಕ್ಕೆ 1.5 ಟಿಎಂಸಿ ನೀರು ಬಿಡುಗಡೆ ಮಾಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕದ್ದು ಮುಚ್ಚಿ, ರಾತ್ರೋ ರಾತ್ರಿ 10 ಟಿಎಂಸಿ ನೀರು ಹರಿಸಿದೆ ಎಂದು ಬಿಜೆಪಿ ಹಾಗೂ ರಾಜ್ಯ ರೈತ ಸಂಘದ ನಾಯಕರು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರದ ಈ ನಡೆ ಖಂಡಿಸಿ ಮಾ. 24ರಂದು ಯಾದಗಿರಿ ಸಮೀಪದ ದೇವದುರ್ಗ ಕ್ರಾಸ್‌ ಬಳಿ ಬೃಹತ್‌ ಪ್ರತಿಭಟನೆಗೆ ರೈತಸಂಘ ಮುಂದಾಗಿದ್ದರೆ, ಮಾ.26ರಂದು ಕಲಬುರಗಿ ಜಿಲ್ಲೆ ಹುಣಸಗಿಯಲ್ಲಿ ಬೃಹತ್‌ ಟ್ರ್ಯಾಕ್ಟರ್‌ ಪ್ರತಿಭಟನಾ ರ್‍ಯಾಲಿ ನಡೆಸುವುದಾಗಿ ಮಾಜಿ ಸಚಿವ, ಬಿಜೆಪಿಯ ನರಸಿಂಹ ನಾಯಕ್‌ (ರಾಜೂಗೌಡ) ತಿಳಿಸಿದ್ದಾರೆ.

Latest Videos

ಸರ್ಕಾರದಿಂದ ಅಕ್ರಮ:

ದೆಹಲಿಯಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ತೆಲಂಗಾಣಕ್ಕೆ1.5 ಟಿಎಂಸಿ ನೀರನ್ನು ಮಾತ್ರ ಬಿಡುತ್ತೇವೆಂದು ಹೇಳಿ 10 ಟಿಎಂಸಿ ನೀರು ಬಿಡುವ ಮೂಲಕ ರಾಜ್ಯದ ಕಾಂಗ್ರೆಸ್‌ ಸರ್ಕಾರ ವಿಜಯಪುರ ಜಿಲ್ಲೆಯ ಜನರಿಗೆ ಮೋಸ ಮಾಡಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮುಸ್ಲಿಂ ವಿರೋಧಿಯಲ್ಲ, ಹಾಗಂತ ಓಲೈಕೆ ರಾಜಕಾರಣ ಮೆಚ್ಚೋದಿಲ್ಲ: ವಿಜಯೇಂದ್ರ

ಇದು ವಿಜಯಪುರ ಜಿಲ್ಲೆಯ ಜನರಿಗೆ ಮಾಡಿದ ಮೋಸ. ಮೂಲಗಳ ಪ್ರಕಾರ ತೆಲಂಗಾಣಕ್ಕೆ 10 ಟಿಎಂಸಿ ನೀರು ಬಿಡಲಾಗಿದೆ. ನಮ್ಮ ಜಿಲ್ಲೆಯಲ್ಲೇ ಕುಡಿಯುವ ನೀರಿನ ಸಮಸ್ಯೆಯಿದೆ, ನಗರದಲ್ಲಿ ಒಂದೆಡೆ ನಾಲ್ಕು ದಿನ, ಮತ್ತೊಂದೆಡೆ 8 ದಿನಕ್ಕೆ ನೀರು ಬಿಡಲಾಗುತ್ತಿದೆ. ನಮ್ಮಲ್ಲೇ ನೀರಿಲ್ಲ, ತೆಲಂಗಾಣಕ್ಕೆ ನೀರು ಬಿಡೋ ಅವಶ್ಯಕತೆ ಏನಿತ್ತು?. ಇದು ಸರಿಯಲ್ಲ. ಈ ಸರ್ಕಾರ ಇದೇ ರೀತಿ ಮಾಡಿದರೆ ಬಹಳ ದಿನ ಉಳಿಯಲ್ಲ ಎಂದು ಕಿಡಿ ಕಾರಿದ್ದಾರೆ.

ಈ ಮಧ್ಯೆ, ಕುಡಿಯುವ ನೀರಿಗಾಗಿ, ಬೆಳೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ಯಾದಗಿರಿ ಜಿಲ್ಲೆಯ ಹಲವೆಡೆ ಕಳೆದ ಕೆಲ ದಿನಗಳಿಂದ ಪ್ರತಿಭಟನೆಗಳು ನಡೆಸಲಾಗುತ್ತಿದೆ.

ಕದ್ದುಮುಚ್ಚಿ ನೀರು:

ಬಸವಸಾಗರ ಜಲಾಶಯದಿಂದ ರಾಜ್ಯ ಸರ್ಕಾರ ಕದ್ದುಮುಚ್ಚಿ ರಾತ್ರೋ ರಾತ್ರಿ ತೆಲಂಗಾಣಕ್ಕೆ ಸುಮಾರು 8-10 ಟಿಎಂಸಿ ನೀರು ಹರಿಸಿದೆ. ಸರ್ಕಾರದ ಮೌಖಿಕ ಆದೇಶದಿಂದಾಗಿ ನೀರು ಬಿಟ್ಟೆವು ಎಂಬುದಾಗಿ ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಈಗ ನಮ್ಮ ರೈತರ ಬೆಳೆಗಳಿಗೆ ನೀರು ಸಿಗುತ್ತಿಲ್ಲ, ಜಲಾಶಯದಲ್ಲಿ ನೀರು ಕಡಿಮೆ ಇದೆ ಅಂತಾರೆ. ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ಮಾ.25 ರವರೆಗೆ ನೀರು ಬಿಡುವುದಾಗಿ ಪ್ರಕಟಿಸಿದೆ, ಇದು ಅನ್ಯಾಯ. ಹೀಗಾಗಿ, ಮಾ.26 ರಂದು ಹುಣಸಗಿಯಲ್ಲಿ ಸಾವಿರಾರು ರೈತರ ಸಮ್ಮುಖದಲ್ಲಿ ಬೃಹತ್‌ ಟ್ರ್ಯಾಕ್ಟರ್‌ ಪ್ರತಿಭಟನಾ ರ್‍ಯಾಲಿ ನಡೆಸುತ್ತೇವೆ ಎಂದು ಸುರಪುರದ ಮಾಜಿ ಶಾಸಕ ರಾಜೂಗೌಡ ಎಚ್ಚರಿಕೆ ನೀಡಿದ್ದಾರೆ.

ರೈತರ ಹಿತಾಸಕ್ತಿ ಕಡೆಗಣಿಸಿರುವ ಸರ್ಕಾರ

ತೆಲಂಗಾಣಕ್ಕೆ ನೀರು ಬಿಡುವ ಸರ್ಕಾರ ನಮ್ಮ ರೈತರ ಹಿತಾಸಕ್ತಿ ಕಡೆಗಣಿಸಿದೆ. ನಾರಾಯಣಪುರ ಎಡ-ಬಲದಂಡೆ ನಾಲೆಗಳಿಗೆ ಮಾ.25ಕ್ಕೆ ನೀರು ಬಂದ್ ಮಾಡುವ ನಿರ್ಣಯ ಕೈಗೊಂಡಿರುವ ಸರ್ಕಾರದ ಕ್ರಮ ಖಂಡಿಸಿ ಮಾ.24 ರಂದು ಬೆಳಗ್ಗೆ ಯಾದಗಿರಿಗೆ ಸಮೀಪದ ದೇವದುರ್ಗ ಕ್ರಾಸ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲು ನಿರ್ಣಯಿಸಲಾಗಿದೆ.

- ಲಕ್ಷ್ಮೀಕಾಂತ ಪಾಟೀಲ್‌ ಮದ್ದರಕಿ, ರಾಜ್ಯ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ ರೈತ ಸೇನೆ, ಯಾದಗಿರಿ.


‘10 ಟಿಎಂಸಿ ನೀರು ಬಿಟ್ಟಿದ್ದು ಗೊತ್ತಿಲ್ಲ, ಬಿಟ್ಟಿದ್ದರೆ ಅನ್ಯಾಯ’

 ಮಾನವೀಯತೆ ದೃಷ್ಟಿಯಿಂದ ತೆಲಂಗಾಣಕ್ಕೆ ಒಂದೂವರೆ ಟಿಎಂಸಿಯಷ್ಟು ನೀರನ್ನು ಬಿಡಲಾಗಿದೆ. 10 ಟಿಎಂಸಿ ನೀರು ಬಿಡಲು ಸಾಧ್ಯವಿಲ್ಲ. ಒಂದು ವೇಳೆ ಹತ್ತು ಟಿಎಂಸಿ ನೀರು ಬಿಟ್ಟಿದ್ದೆ ಆದರೆ ಅದು ಅನ್ಯಾಯ. ಈ ಬಗ್ಗೆ ನಾನು ಅಧಿಕಾರಿಗಳಿಂದ ಮಾಹಿತಿ ಪಡೆಯುವೆ ಎಂದು ಸಚಿವ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಸಿಎಂ ಪರ ಮಾತಾಡಿದ್ರೆ ಕೆಲವರಿಗೆ ಹೊಟ್ಟೆ ಕಿಚ್ಚು, 'ಹನಿಟ್ರ್ಯಾಪ್' ಕುರಿತು ಹೆಚ್‌ಸಿ ಮಹದೇವಪ್ಪ ಸ್ಫೋಟಕ ಹೇಳಿಕೆ!

ತೆಲಂಗಾಣಕ್ಕೆ ಒಂದೂವರೆ ಟಿಎಂಸಿ ಬದಲಾಗಿ 10 ಟಿಎಂಸಿ ಕೃಷ್ಣಾ ನದಿಯ ನೀರು ಬಿಟ್ಟಿದ್ದಾರೆ ಎಂಬ ಸಂಸದ ರಮೇಶ ಜಿಗಜಿಣಗಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ.ಪಾಟೀಲ, ಈ ಕುರಿತು ನಾನು ಸ್ಪಷ್ಟೀಕರಣ ಬಯಸಿದ್ದೇನೆ. ಅಧಿಕಾರಿಗಳಿಂದ ಮಾಹಿತಿ ಪಡೆಯುವೆ. ತೆಲಂಗಾಣಕ್ಕೆ 10 ಟಿಎಂಸಿ ನೀರು ಬಿಡಲು ಸಾಧ್ಯವಿಲ್ಲ. ಮಾನವೀಯತೆ ದೃಷ್ಟಿಯಿಂದ ಒಂದೂವರೆ ಟಿಎಂಸಿ ನೀರನ್ನು ಬಿಡಲಾಗಿದೆ. ಒಂದು ವೇಳೆ ಹತ್ತು ಟಿಎಂಸಿ ನೀರು ಬಿಟ್ಟಿದ್ದೆ ಆದರೆ ಅದು ಅನ್ಯಾಯ. ಆದರೆ, 10 ಟಿಎಂಸಿ ನೀರು ಬಿಟ್ಟಿರೋಕೆ ಸಾಧ್ಯವಿಲ್ಲ ಎಂದರು.

vuukle one pixel image
click me!