ಶಾಸಕ ಸಿ.ಎಸ್.ನಿರಂಜನಕುಮಾರ್ ತವರೂರಾದ ತಾಲೂಕಿನ ಚೌಡಹಳ್ಳಿ ಗ್ರಾಮದ ಬಳಿ ಹುಲಿ ರೈತನ ಮೇಲೆರಗಿದಾಗ ಹಸುಗಳ ಗೀಳು ಹಾಗೂ ರೈತನ ಕೈಯಲ್ಲಿದ್ದ ದೊಣ್ಣೆ ಬೀಸಿದಾಗ ಹುಲಿ ಓಡಿ ಹೋದ ಘಟನೆ ನಡೆದಿದೆ.
ಗುಂಡ್ಲುಪೇಟೆ (ಡಿ.05): ಶಾಸಕ ಸಿ.ಎಸ್.ನಿರಂಜನಕುಮಾರ್ ತವರೂರಾದ ತಾಲೂಕಿನ ಚೌಡಹಳ್ಳಿ ಗ್ರಾಮದ ಬಳಿ ಹುಲಿ ರೈತನ ಮೇಲೆರಗಿದಾಗ ಹಸುಗಳ ಗೀಳು ಹಾಗೂ ರೈತನ ಕೈಯಲ್ಲಿದ್ದ ದೊಣ್ಣೆ ಬೀಸಿದಾಗ ಹುಲಿ ಓಡಿ ಹೋದ ಘಟನೆ ನಡೆದಿದೆ. ಚೌಡಹಳ್ಳಿ ಗ್ರಾಮದ ನಾಗರಾಜ್ ಹುಲಿ ಬಾಯಿಂದ ಬದುಕುಳಿದ ಅದೃಷ್ಟಶಾಲಿಯಾಗಿದ್ದು, ಹುಲಿ ದಾಳಿಗೆ ರೈತನ ಬಟ್ಟೆಹರಿದು ಹೋಗಿದೆ.
ರೈತ ನಾಗರಾಜು ತಮ್ಮ ಜಮೀನಿಗೆ ಹೋದ ವೇಳೆ ಹುಲಿ ರೈತನ ಮೇಲೆ ಎರಗುವುದನ್ನು ಕಂಡ ಹಸುಗಳು ಗೀಳಾಟ ಜೋರಾಗಿರುವ ಜೊತೆಗೆ ರೈತ ನಾಗರಾಜು ದೊಣ್ಣೆ ಬೀಸಿದ ಪರಿಣಾಮ ಅದೃಷ್ಟವಶಾತ್ ರೈತ ಬದುಕಿದ್ದಾನೆ. ಕಳೆದ ಎರಡು ವರ್ಷಗಳ ಹಿಂದೆ ಹುಲಿ ದಾಳಿ ಮಾಡಿರುವ ಸ್ಥಳದ ಬಳಿ ಇಬ್ಬರು ರೈತರು ಹುಲಿ ದಾಳಿಗೆ ಸಾವನ್ನಪ್ಪಿದ್ದರು. ಇತ್ತೀಚೆಗೆ ಹುಲಿ ಹಸುವೊಂದನ್ನು ಸಾಯಿಸಿದೆ. ಈಗ ಅದೇ ಸ್ಥಳದಲ್ಲಿ ಹುಲಿ ಕಾಟ ಹೆಚ್ಚಾಗಿರುವ ಕಾರಣ ಈ ಭಾಗದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
undefined
Chamarajanagar: ಚರ್ಮಗಂಟು ರೋಗಕ್ಕೆ 26 ಜಾನುವಾರು ಬಲಿ
ಅರಣ್ಯ ಇಲಾಖೆ ನಿರ್ಲಕ್ಷ್ಯ: ಚೌಡಹಳ್ಳಿ ಬಳಿ ಹುಲಿಯೊಂದು ರೈತನ ಮೇಲೆ ಭಾನುವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ದಾಳಿ ನಡೆಸಿದ್ದರೂ ಅರಣ್ಯ ಇಲಾಖೆ ನಿರ್ಲಕ್ಷ್ಯಎದ್ದು ಕಾಣುತ್ತಿದೆ. ರೈತನ ಮೇಲೆ ದಾಳಿ ನಡೆಸಿದೆ ಎಂದು ಬಂಡೀಪುರ ಯೋಜನೆ ನಿರ್ದೇಶಕರಿಗೆ ಗ್ರಾಮಸ್ಥರೊಬ್ಬರು ದೂರು ಹೇಳಿದ್ದರೂ ಭಾನುವಾರ ಸಂಜೆಯ ತನಕ ಓರ್ವ ಸಿಬ್ಬಂದಿ ಇತ್ತ ತಿರುಗಿ ನೋಡಿಲ್ಲ. ರೈತನ ಮೇಲೆ ದಾಳಿ ಎಂದಾಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದು ಹುಲಿ ದಾಳಿ ಸಂಬಂಧ ಕನಿಷ್ಟಯಾರು ಗ್ರಾಮಕ್ಕೆ ಬಂದಿಲ್ಲ.
ಕಾಡಿನಿಂದ ಹೊರಕ್ಕೆ ಬಂದಿರುವ ಹುಲಿ ಮರಿಗಳು: ಒಂದು ವರ್ಷದ ಎರಡು ಹುಲಿಮರಿಗಳು ಕಾಡಿನಿಂದ ಹೊರಕ್ಕೆ ಬಂದಿದ್ದು, ಅರಣ್ಯದಂಚಿನ ಜನರು ಎಚ್ಚರಿಕೆ ವಹಿಸುವಂತೆ ವಲಯ ಅರಣ್ಯಾಧಿಕಾರಿ ಸಿದ್ದರಾಜು ಹೇಳಿದ್ದಾರೆ. ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯದಲ್ಲಿ ತಾಯಿ ಮೃತಪಟ್ಟು ಅನಾಥವಾಗಿದ್ದ ಮೂರು ಹುಲಿ ಮರಿಗಳ ಪೈಕಿ ಒಂದು ಗಂಡು ಹುಲಿ ಮರಿ ಮೃತಪಟ್ಟಿದ್ದು, ಇನ್ನೆರಡು ಹುಲಿಗಳು ಕಾಡಿನಲ್ಲಿಯೆ ಪತ್ತೆಯಾಗಿದ್ದವು. ಹುಲಿ ಮರಿಗಳ ಚಲನವಲನವನ್ನು ಆನೆಗಳ ಮೂಲಕ ನಿರಂತರವಾಗಿ ಗಮನಿಸಲಾಗುತ್ತಿತ್ತು, ಆದರೆ ಕಳೆದ ಎರಡು ದಿನಗಳಿಂದ ಹುಲಿಮರಿಗಳು ಕಾಡಿನಿಂದ ಹೊರ ಬಂದಿದ್ದು, ಕಾಡಿನಲ್ಲಿ ಕಾಣಿಸಿಲ್ಲ, ಹೀಗಾಗಿ ಸಾರ್ವಜನಿಕರು ಎಚ್ಚರವಹಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Bandipur: ಬೇಸಿಗೆಯಲ್ಲಿ ಜೀರೋ ಫೈರ್‌ಗೆ ಸೂಚನೆ
ತಾಲೂಕಿನ ತಾರಕ, ಸತ್ತಿಗೆ ಹುಂಡಿ, ಹುಣಸೆಕುಪ್ಪೆ, ಪೆಂಜಹಳ್ಳಿ, ಕೊತ್ತನಹಳ್ಳಿ, ಹಿರೇಹಳ್ಳಿ, ಅಂಕನಾಥಪುರ, ಮಾಚನಾಯಕನಹಳ್ಳಿ, ನಾಗನಹಳ್ಳಿ, ಶೀರನ ಹುಂಡಿ, ಅಂತರಸಂತೆ, ತಾರಕ ನಾಲೆ ಹಾಗೂ ತಾರಕ ನದಿಯ ಅಕ್ಕಪಕ್ಕದ ಜಮೀನುಗಳಲ್ಲಿ, ಮರಿ ಹುಲಿಗಳೆರಡು ಓಡಾಡುತ್ತಿರುವ ಸಂಶಯವಿರುವುದರಿಂದ ಸಾರ್ವಜನಿಕರು ಜಮೀನುಗಳಿಗೆ ನೀರು ಹಾಯಿಸಲು ಮತ್ತು ಇತರೆ ಕೃಷಿ ಚಟುವಟಿಕೆಗಳನ್ನು ನಿರ್ವಹಿಸಲು ರಾತ್ರಿ ಸಮಯದಲ್ಲಿ ಹಾಗೂ ಬೆಳಗಿನ ಜಾವದಲ್ಲಿ ಏಕಾಂಗಿಯಾಗಿ ತೆರಳದೆ ಜಾಗರೂಕತೆ ವಹಿಸುವುದು ಹಾಗೂ ಜಾನುವಾರುಗಳನ್ನು ತಾರಕ ನದಿಯ ಇಕ್ಕೆಲಗಳಲ್ಲಿ ಕಟ್ಟಿ ಹಾಕಿ ಮೇಯಿಸದೆ ಮುತುವರ್ಜಿ ವಹಿಸಬೇಕೆಂದು ಮತ್ತು ಮರಿ ಹುಲಿಯ ಚಲನವಲಗಳು ಕಂಡುಬಂದಲ್ಲಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿಯನ್ನು ಒದಗಿಸಬೇಕೆಂದು ಸಾರ್ವಜನಿಕರು, ರೈತರಲ್ಲಿ ಕೋರಿದ್ದಾರೆ.