ಕೆಳಹಂತದ ನೌಕರರೆಂದರೆ ಅವರನ್ನು ಮಾರು ದೂರ ಇಡುವ ವ್ಯವಸ್ಥೆಯೇ ಹೆಚ್ಚು. ಅಂತಹ ಕೆಳದರ್ಜೆಯ ನೌಕರರು ನಿವೃತ್ತರಾದಾಗ ಮೇಲಧಿಕಾರಿಗಳು ಬೀಳ್ಕೊಡುಗೆ ನೀಡುವುದೂ ಇಲ್ಲ.
ಶಿವಮೊಗ್ಗ/ಸಾಗರ (ಆ.02): ಕೆಳಹಂತದ ನೌಕರರೆಂದರೆ ಅವರನ್ನು ಮಾರು ದೂರ ಇಡುವ ವ್ಯವಸ್ಥೆಯೇ ಹೆಚ್ಚು. ಅಂತಹ ಕೆಳದರ್ಜೆಯ ನೌಕರರು ನಿವೃತ್ತರಾದಾಗ ಮೇಲಧಿಕಾರಿಗಳು ಬೀಳ್ಕೊಡುಗೆ ನೀಡುವುದೂ ಇಲ್ಲ. ಆಕಸ್ಮಿಕವಾಗಿ ಅಂತಹ ಸಮಾರಂಭಕ್ಕೆ ಹೋದರೂ ಕಾಟಾಚಾರಕ್ಕೆ ಎಂಬಂತೆ ಉಪಸ್ಥಿತರಿದ್ದು, ಅರ್ಧದಲ್ಲಿಯೇ ಹೊರಟು ಹೋಗುವ ಅಧಿಕಾರಿಗಳೇ ಹೆಚ್ಚು. ಆದರೆ ಜಿಲ್ಲೆಯಲ್ಲಿ ನಡೆದ ಎರಡು ಘಟನೆಗಳಲ್ಲಿ ಕೆಳದರ್ಜೆಯ ಅಧಿಕಾರಿಗಳನ್ನು ಕೂಡ ತಮ್ಮ ಸಮವೆಂದು ಭಾವಿಸಿ, ಕುಟುಂಬ ಸದಸ್ಯರಂತೆ ಆತ್ಮೀಯವಾಗಿ ಬೀಳ್ಕೊಟ್ಟ ಘಟನೆ ಮೇಲಧಿಕಾರಿಗಳ ಉತ್ತಮ ಮನಃಸ್ಥಿತಿ, ಮೇರುವ್ಯಕ್ತಿತ್ವ ಮತ್ತು ಮಾನವೀಯತೆಯ ನಡವಳಿಕೆಗೆ ಸಾಕ್ಷಿಯಾಗಿದೆ.
ಸಾಗರದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇಂತಹ ಘಟನೆಗಳು ನೆರೆದವರಿಗೆ ಅಚ್ಚರಿ ಉಂಟು ಮಾಡಿದರೆ, ಹಿರಿಯ ಅಧಿಕಾರಿಗಳ ಪ್ರೀತಿ ಕಂಡು ಕೆಲಸದಿಂದ ನಿವೃತ್ತಿಯಾಗಿ, ಕಚೇರಿ ಬಿಟ್ಟು ಹೊರಡುತ್ತಿರುವ ಕೆಳಹಂತದ ನೌಕರರು ಪ್ರೀತಿಯಲ್ಲಿ ಒದ್ದೆಯಾಗಿ ತೊಪ್ಪೆಯಾದರು. ಕಣ್ಣು ತೇವಗೊಂಡಿತು. ಹಿರಿಯ ಅಧಿಕಾರಿಗಳ ಪ್ರೀತಿಯನ್ನು ಮನಸ್ಸಿನ ತುಂಬ ತುಂಬಿಕೊಂಡರು.
ಸೌಜನ್ಯ ಕೇಸ್: ಭಕ್ತರು ಗೊಂದಲಕ್ಕೆ ಈಡಾಗದಂತೆ ಡಾ.ಹೆಗ್ಗಡೆ ಮನವಿ
ಪಾಲಿಕೆ ‘ಡಿ’ ದರ್ಜೆ ನೌಕರ ಕರಿಯಣ್ಣ: ನಗರಪಾಲಿಕೆಯ ಆಯುಕ್ತರ ಆಪ್ತ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ‘ಡಿ’ ದರ್ಜೆ ನೌಕರ ಕರಿಯಣ್ಣ ನಿವೃತ್ತರಾದರು. ಕರಿಯಣ್ಣ ಅವರ ನಿವೃತ್ತಿಯ ದಿನವನ್ನು ಅವಿಸ್ಮರಣಿಯವಾಗಿ ಮಾಡಿದವರು ಆಯುಕ್ತ ಮಾಯಣ್ಣಗೌಡ ಅವರು. ಸೇವೆಯ ಕೊನೆಯ ದಿನ ಬೆಳಗಿನಿಂದಲೇ ಆಯುಕ್ತ ಮಾಯಣ್ಣಗೌಡ ಅವರು ತಮ್ಮ ಕೆಲಸದ ನಡುವೆಯೇ ಕಾಫಿ, ತಿಂಡಿಯ ಕಡೆಗೆ ಗಮನ ಹರಿಸಿದರು. ಮಧ್ಯಾಹ್ನದ ಊಟವನ್ನು ತಮ್ಮ ಕೊಠಡಿಯಲ್ಲಿಯೇ ಬಾಳೆ ಎಲೆ ಹಾಕಿ, ಕರಿಯಣ್ಣನಿಗೆ ನೀಡಿದರಲ್ಲದೆ, ತಾವೇ ಮುಂದೆ ನಿಂತು ಖುದ್ದಾಗಿ ಪ್ರೀತಿಯಿಂದ ಊಟ ಬಡಿಸಿದರು.
ಸಂಕೋಚದ ಮುದ್ದೆಯಾಗಿ ಕುಳಿತಿದ್ದ ಕರಿಯಣ್ಣ ಅವರಿಗೆ ಸಂಕೋಚ ಕಳಚುವಂತೆ ನಡೆದುಕೊಂಡ ಮಾಯಣ್ಣಗೌಡ ಅವರು ಮೇಲ್ದರ್ಜೆ ಅಧಿಕಾರಿಗಳಿಗೆ ಮಾದರಿ ನಡೆಯೊಂದನ್ನು ತೋರಿಸಿದರು. ಊಟದ ಬಳಿಕ ಪ್ರೀತಿಯಿಂದ ತಬ್ಬಿಕೊಂಡು ವಿದಾಯ ಹೇಳಿದರು. ಕುರ್ಚಿಯಲ್ಲಿ ಕೂರಿಸಿ ಕುಶಲೋಪರಿ ವಿಚಾರಿಸಿದರು. ಸುತ್ತ ಇದ್ದವರ ಕಣ್ಣು ಕೂಡ ಈ ಪ್ರೀತಿ ಕಂಡು, ಈ ನಡವಳಿಕೆಯ ಕಂಡು ಅಕ್ಷರಶಃ ಫಿದಾ ಆದರು. ಅಪರೂಪದಲ್ಲಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು! ಇದನ್ನೆಲ್ಲಾ ನಿರೀಕ್ಷಿಸದೇ ಇದ್ದ ಕರಿಯಣ್ಣ ತಮ್ಮ ಜೀವನದಲ್ಲಿ ಮರೆಯದ ಕ್ಷಣವನ್ನು ಅನುಭವಿಸಿದರು. ತಮ್ಮ ಕಣ್ಣಿನಲ್ಲಿಯೇ ಕೃತಜ್ಞತೆ ಅರ್ಪಿಸಿದರು.
ಗುಮಾಸ್ತನನ್ನು ಮನೆಗೆ ತಲುಪಿಸಿ, ಗೌರವಿಸಿದ ಸಾಗರ ಎಸಿ: ಇದೇ ರೀತಿಯ ಇನ್ನೊಂದು ಘಟನೆ ನಡೆದಿದ್ದು ಸಾಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ. ಗುಮಾಸ್ತರೊಬ್ಬರ ಬಗ್ಗೆ ಮಾದರಿ ನಡೆಯನ್ನು ಪ್ರದರ್ಶಿಸಿದವರು ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿಯವರು. ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಗುಮಾಸ್ತ ಕೃಷ್ಣಪ್ಪ ಅವರಿಗೆ ಸೋಮವಾರ ನಿವೃತ್ತಿಯ ದಿನವಾಗಿತ್ತು. ಕಚೇರಿಯಲ್ಲಿ ಉಳಿದ ಸಿಬ್ಬಂದಿ ಎಂದಿನಂತೆ ಬೀಳ್ಕೊಡುಗೆ ನೀಡಿದರೆ, ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿಯವರು ವಿಶೇಷವಾಗಿ ಬೀಳ್ಕೊಟ್ಟರು. ಸಂಜೆ ತಮ್ಮ ಕೊನೆಯ ದಿನದ ಕರ್ತವ್ಯ ಮುಗಿಸಿದ ಗುಮಾಸ್ತ ಕೃಷ್ಣಪ್ಪ ಅವರನ್ನು ಪಲ್ಲವಿ ಅವರು ತಮ್ಮ ಕಚೇರಿಗೆ ಕರೆದರು. ಆಶ್ಚರ್ಯದಿಂದ ಅಲ್ಲಿಗೆ ಬಂದ ಕೃಷ್ಣಪ್ಪ ಅವರಿಗೆ ತಮ್ಮ ವಾಹನ ಏರುವಂತೆ ಸೂಚಿಸಿದರು.
ಉಡುಪಿ ಕಾಲೇಜು ಕೇಸ್‌ನಲ್ಲಿ ಎಸ್‌ಐಟಿ ತನಿಖೆ ಇಲ್ಲ: ಸಿದ್ದರಾಮಯ್ಯ
ಆಶ್ಚರ್ಯದಿಂದ ವಾಹನ ಏರಿದ ಕೃಷ್ಣಪ್ಪ ಅವರನ್ನು ಪಲ್ಲವಿಯವರು ಸಾಗರದಿಂದ ಕೃಷ್ಣಪ್ಪ ಅವರ ಊರಾದ ಶಿರವಂತೆ ಗ್ರಾಮದವರೆಗೆ ತಾವೇ ತಮ್ಮ ವಾಹನದಲ್ಲಿ ಅವರ ಮನೆಯವರೆಗೆ ಕರೆದೊಯ್ದು ಅಲ್ಲಿಯೇ ಕೊನೆಯ ಬೀಳ್ಕೊಡುಗೆ ನೀಡುವ ಮೂಲಕ ತಮ್ಮ ಮಾನವೀಯ ಕಳಕಳಿಯ ವ್ಯಕ್ತಿತ್ವವನ್ನು ಪ್ರದರ್ಶಿಸಿದರು. ಈ ಕೊನೆಯ ಹೃದಯಸ್ಪರ್ಶಿ ಬಿಳ್ಕೊಡುಗೆಯನ್ನು ತಮ್ಮ ಕರ್ತವ್ಯದ ಕೊನೆಯದ ದಿನದ ಕೊನೆಯ ಗಳಿಗೆಯಲ್ಲಿ ಪಡೆದ ಕೃಷ್ಣಪ್ಪ ಮೇಲಧಿಕಾರಿಯ ಈ ನಡೆಗೆ ಫಿದಾ ಆದರು. ಕುಟುಂಬದ ಸದಸ್ಯರು ಆಶ್ಚರ್ಯದಿಂದ ನೋಡುತ್ತಾ ನಿಂತರು. ಮಾತ್ರವಲ್ಲ, ಇಡೀ ಕಚೇರಿಯ ಸಿಬ್ಬಂದಿ ಈ ಕೊನೆಯ ಬಿಳ್ಕೊಡುಗೆಯ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.