ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ ವಿಧಿವಶ

By Gowthami K  |  First Published Feb 16, 2023, 9:07 PM IST

ತೆಂಕುತಿಟ್ಟು ಯಕ್ಷರಂಗದ ಭೀಷ್ಮರೆಂದೇ ಖ್ಯಾತರಾದ  ಭಾಗವತರಾದ ಬಲಿಪ ನಾರಾಯಣ ಭಾಗವತರು ವಿಧಿವಶರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


ಕಾಸರಗೋಡು (ಫೆ.16): ತೆಂಕುತಿಟ್ಟು ಯಕ್ಷರಂಗದ ಭೀಷ್ಮರೆಂದೇ ಖ್ಯಾತರಾದ  ಭಾಗವತರಾದ ಬಲಿಪ ನಾರಾಯಣ ಭಾಗವತರು ಗುರುವಾರ ಸಂಜೆ 6:30ಕ್ಕೆ  ದ‌.ಕ ಜಿಲ್ಲೆಯ ಮೂಡಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ‌ನಿಧನರಾಗಿದ್ದಾರೆ. ಅವರ ಅಂತಿಮ ವಿಧಿ ವಿಧಾನಗಳು ಇಂದು ರಾತ್ರಿ 1.30 ಗಂಟೆಯ ಸುಮಾರಿಗೆ ಅವರ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಯಕ್ಷರಂಗ ಕಂಡ ತೆಂಕುತಿಟ್ಟಿನ ಪ್ರಖ್ಯಾತ ಭಾಗವತರಾಗಿದ್ದ ಬಲಿಪ ನಾರಾಯಣ ಭಾಗವತ ಅವರು  ತನ್ನ 84ನೇ ವಯಸ್ಸಿಗೆ ಅಸೌಖ್ಯದಿಂದ ಕೊನೆಯುಸಿರೆಳೆದಿದ್ದಾರೆ. ಬಲಿಪ ನಾರಾಯಣ ಭಾಗವತರು ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದವರು. ಸದ್ಯ ಮೂಡಬಿದಿರೆ ಸಮೀಪದ ನೂಯಿ ಎಂಬಲ್ಲಿ ವಾಸವಾಗಿದ್ದರು. ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಹಲವು ವರ್ಷ ಭಾಗವತರಾಗಿ ಸೇವೆ ಸಲ್ಲಿಸಿರುವ ಇವರು ಯಕ್ಷಗಾನದ ಹಲವು ಪ್ರಸಂಗಗಳನ್ನು ರಚಿಸಿ ಯಕ್ಷಗಾನ ಹಾಡುಗಳ ಅನೇಕ ಕೃತಿಗಳನ್ನೂ ರಚಿಸಿದ್ದರು. ದೇವಿ ಮಾಹಾತ್ಮೆ, ಕಟೀಲು ಕ್ಷೇತ್ರ ಮಾಹಾತ್ಮೆ, ತೆಂಕು ತಿಟ್ಟಿನ ಎಲ್ಲಾ ಪೌರಾಣಿಕ ಪ್ರಸಂಗಳ ಭಾಗವತರಾಗಿದ್ದರು. 

Tap to resize

Latest Videos

ಬಲಿಪ ನಾರಾಯಣ ಭಾಗವತರು 60ಕ್ಕೂ ಹೆಚ್ಚು ವರ್ಷಗಳ ಕಾಲ ಸುದೀರ್ಘ ಯಕ್ಷಗಾನ ಕಲಾ ಸೇವೆ ಸಲ್ಲಿಸಿದ್ದಾರೆ. ಪಡ್ರೆ ಜಠಾಧಾರಿ ಮೇಳವನ್ನು ಮೊದಲಿಗೆ ಆರಂಭಿಸಿದ್ದ ಇವರಿಗೆ ಯಕ್ಷಗಾನದ 50ಕ್ಕೂ ಹೆಚ್ಚು ಪ್ರಸಂಗಗಳ ಕಂಠಪಾಠ ಬಲಿಪ ಭಾಗವತರಿಗಿತ್ತು. 30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ.  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಾವಿರಾರು ಸನ್ಮಾನಗಳು ಅವರಿಗೆ ಸಂದಿವೆ.

ಶಾಲೆಗಳಲ್ಲಿ ಯಕ್ಷಗಾನ ಕಲಿಸಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಯಕ್ಷಗಾನದಲ್ಲಿ ವಿಶೇಷ ಶೈಲಿಯ ಭಾಗವತಿಕೆಯಲ್ಲಿ ಹೆಸರುವಾಸಿಯಾಗಿದ್ದ ಬಲಿಪ ನಾರಾಯಣ "ಬಲಿಪಜ್ಜ"  ಎಂದೇ ಖ್ಯಾತರಾಗಿದ್ದರು. 1952 ರಿಂದ 2003ರ ತನಕ ಬಲಿಪ‌ ನಾರಾಯಣ ಭಾಗವತರು ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ್ದರು.

ಯಕ್ಷ​ಗಾ​ನದ ಡಾಟಾ ಬ್ಯಾಂಕ್‌ ಆಗ​ಬೇ​ಕಿ​ದೆ: ಸಚಿವ ಸುನಿ​ಲ್‌

ಜೀವನ: ಬಲಿಪರು ಕಾಸರಗೋಡಿನ ಪಡ್ರೆ ಗ್ರಾಮದಲ್ಲಿ ಮಾರ್ಚ್ 13, 1938ರಂದು ಜನಿಸಿದರು. ಇವರ ತಂದೆ ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ. ಬಲಿಪರು 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ತಮ್ಮ ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು 13ನೇ ವರ್ಷದಲ್ಲಿ ರಂಗ ಪ್ರವೇಶಗೈದರು. ಇವರ ಪತ್ನಿ ಶ್ರೀಮತಿ ಜಯಲಕ್ಷ್ಮಿ. ಇವರ ನಾಲ್ವರು ಪುತ್ರರ ಪೈಕಿ, ಮಾಧವ ಬಲಿಪ  ಹಿಮ್ಮೇಳವಾದನ ಪರಿಣಿತರು, ಶಿವಶಂಕರ ಬಲಿಪ ಮತ್ತು ಪ್ರಸಾದ ಬಲಿಪರು ಉತ್ತಮ ಭಾಗವತರು, ಪ್ರಸಾದ ಬಲಿಪರು ಕಟೀಲು ಮೇಳದಲ್ಲಿ ಮುಖ್ಯ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೋರ್ವ ಪುತ್ರ ಶಶಿಧರ್ ಬಲಿಪ ಕೃಷಿಕರಾಗಿದ್ದಾರೆ.

click me!