Kumble Sundar Rao: ಯಕ್ಷ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ ಇನ್ನಿಲ್ಲ

By Suvarna News  |  First Published Nov 30, 2022, 8:29 AM IST

ಯಕ್ಷರಂಗದ ಅಪ್ರತಿಮ ಕಲಾವಿದ ಕುಂಬ್ಳೆ ಸುಂದರ್ ರಾವ್ ಅಸ್ತಂಗತರಾಗಿದ್ದಾರೆ.ಯಕ್ಷಗಾ‌ನ ಕಲಾವಿದರೂ ಮಾಜಿ ಶಾಸಕರೂ ಆಗಿದ್ದ ಕುಂಬ್ಳೆ ಸುಂದರ್ ರಾವ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. 


ಮಂಗಳೂರು (ನ.30): ಯಕ್ಷರಂಗದ ಅಪ್ರತಿಮ ಕಲಾವಿದ ಕುಂಬ್ಳೆ ಸುಂದರ್ ರಾವ್ ಅಸ್ತಂಗತರಾಗಿದ್ದಾರೆ.ಯಕ್ಷಗಾ‌ನ ಕಲಾವಿದರೂ ಮಾಜಿ ಶಾಸಕರೂ ಆಗಿದ್ದ ಕುಂಬ್ಳೆ ಸುಂದರ್ ರಾವ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಯಕ್ಷಗಾನ ಮತ್ತು ತಾಳ-ಮದ್ದಳೆ (ಸಾಂಪ್ರದಾಯಿಕ ನೃತ್ಯ) ಕಲಾವಿದರೂ ಆಗಿದ್ದ ಸುಂದರ್ ರಾವ್, ಮಂಗಳೂರಿನ ಆಗಿನ ಸುರತ್ಕಲ್ ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದರು. 1994 ರಿಂದ 1999ರವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಸೇವೆ ‌ಮಾಡಿದ್ದರು. 

ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು, ಯಕ್ಷಗಾನ ಕಲಾವಿದರೊಬ್ಬರು ನೇರವಾಗಿ ಮತದಾರರಿಂದಲೇ ಆರಿಸಲ್ಪಟ್ಟ ಪ್ರಪ್ರಥಮ ಶಾಸಕರೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ನೇ  ಮಾರ್ಚ್ 20ರಲ್ಲಿ ಕೇರಳ ರಾಜ್ಯದ ಕುಂಬಳೆಯಲ್ಲಿ ಜನಿಸಿದ ಅವರು ಪ್ರಸ್ತುತ ಮಂಗಳೂರಿನ ಪಂಪ್ ವೆಲ್ ಬಳಿ ವಾಸವಾಗಿದ್ದರು. ‌

Tap to resize

Latest Videos

ಕೋಲಾರದಲ್ಲಿ ಸ್ಪರ್ಧಿಸುವಂತೆ ಸಿದ್ದುಗೆ ಮನವಿ ಮಾಡಿದ್ದೇ ನಾನು: ಶಾಸಕ ಶ್ರೀನಿವಾಸಗೌಡ

ಯಕ್ಷರಂಗದ ಮೇರು ಸಾಧಕ ಕುಂಬ್ಳೆ: ಕುಂಬ್ಳೆ ಸುಂದರ್ ರಾವ್ ಯಕ್ಷಗಾನ, ರಾಜಕೀಯ, ಧಾರ್ಮಿಕ, ಸಾಮಾಜಿಕ ವಲಯದಲ್ಲಿಯೂ ಗುರುತಿಸಿಕೊಂಡವರು . ಯಕ್ಷಗಾನ ಕಲಾವಿದರೊಬ್ಬರು ನೇರವಾಗಿ ಮತದಾರರಿಂದಲೇ  ಆರಿಸಲ್ಪಟ್ಟ ಪ್ರಪ್ರಥಮ ಶಾಸಕರೆಂಬ ಹೆಗ್ಗಳಿಕೆಗೆ ಪಾತ್ರರಾದವರು. ಶ್ರೀಕೃಷ್ಣ, ಶ್ರೀರಾಮ, ನಹುಷ, ಚ್ಯವನ, ವಿಶ್ವಾಮಿತ್ರ, ಭರತ, ಕರ್ಣ , ವಿಷ್ಣು , ದ್ರೋಣ ,ಅತಿಕಾಯ , ಪರೀಕ್ಷಿತ , ಹನೂಮಂತ , ಋತುಪರ್ಣ , ಅಗ್ನಿವರ್ಣ , ಜಮದಗ್ನಿ , ಭೀಷ್ಮ , ದೇವವೃತ ,ಉತ್ತರ ,  ಪರಶುರಾಮ , ಈಶ್ವರ ,  ಕ್ಷೇತ್ರಮಹಾತ್ಮೆಯ  ಗೋವಿಂದ ದೀಕ್ಷಿತ , ಹೆಗ್ಗಡೆ  ಮುಂತಾದ ಪಾತ್ರಗಳಲ್ಲಿ ಜನಪ್ರಿಯರಾಗಿ ಜನಮಾನಸದಲ್ಲಿ ಪ್ರಸಿದ್ದರಾಗಿದ್ದ ಕಲಾವಿದ. 

ಶ್ರೀಕೃಷ್ಣನ ಪಾತ್ರವಂತೂ ಕುಂಬ್ಳೆಯವರಿಗೆ ಅಪಾರ ಪ್ರಸಿದ್ಧಿ ತಂದಿತ್ತು. ತನ್ನ ಅಸ್ಖಲಿತ ವಾಕ್ಪಟುತ್ವದಿಂದ ಕನ್ನಡ ಭಾಷೆಯ ಸೊಗಸಾದ ನಿರೂಪಣೆ ಮತ್ತು ಸಂಭಾಷಣೆಗಳಿಂದ ಕುಂಬ್ಳೆ ಸುಂದರ ರಾವ್ ಕಲಾಭಿಮಾನಿಗಳ ಮನಗೆದ್ದವರು. ಸರಳ ಹಾಗೂ ಸುಂದರ ಭಾಷೆ, ಪುರಾಣ , ಉಪನಿಷತ್,  ರಾಮಾಯಣ ,ಮಹಾಭಾರತ ಗಳ ಆಳವಾದ ಜ್ಞಾನವಿತ್ತು. ಕಲಿತದ್ದು ಕೇವಲ ಏಳನೆಯ ತರಗತಿ. ಸುಪ್ರಸಿದ್ಧ ವೇಷಧಾರಿ  ಕುಂಬ್ಳೆ ಕುಟ್ಯಪ್ಪನವರಿಂದ ಯಕ್ಷಗಾನದ ಪ್ರಾಥಮಿಕ  ನಾಟ್ಯಾಭ್ಯಾಸ ಮಾಡಿ 1953ರಲ್ಲಿ ಕೂಡ್ಲು ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯಲ್ಲಿ ತಮ್ಮ ಪ್ರಥಮ ತಿರುಗಾಟ ನಡೆಸಿದರು. 

ಮುಂದೆ ಇರಾ ಸೋಮನಾಥೇಶ್ವರ, ಸುರತ್ಕಲ್ ಮತ್ತು ಧರ್ಮಸ್ಥಳ ಮೇಳಗಳಲ್ಲಿ ನಾಲ್ಕು ದಶಕಗಳ ಕಾಲ ಕಲಾವಿದನಾಗಿ ದುಡಿದ ಅನುಭವ ಅವರದು. ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ಇಪ್ಪತ್ತೈದು ವರ್ಷ ಸತತ ಕಲಾಸೇವೆ ಮಾಡಿರುವುದು ಅವರ ಹೆಚ್ಚುಗಾರಿಕೆ.  ಯಕ್ಷಗಾನ ಹಾಗೂ ತಾಳಮದ್ದಲೆ ಕ್ಷೇತ್ರದಲ್ಲಿ ಬಹು ಬೇಡಿಕೆಯ ಅರ್ಥಧಾರಿಯಾಗಿ ಗುರುತಿಸಿಕೊಂಡಿದ್ದ  ಕುಂಬಳೆಯವರದ್ದು ಸರಳ, ಸುಂದರ ಹಾಗೂ ಆಕರ್ಷಕ ಶೈಲಿಯ ವಾದ - ಸಂವಾದಗಳು. 1994ರಲ್ಲಿ ಸುರತ್ಕಲ್ ಕ್ಷೇತ್ರದ ಬಿ.ಜೆ.ಪಿ. ಶಾಸಕರಾಗಿ ಆಯ್ಕೆಯಾದ ಅವರು 1998ರ ತನಕ ಕರ್ನಾಟಕದ ವಿಧಾನಸಭೆಯಲ್ಲಿ ತನ್ನ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2009ರಿಂದ 2012ರ ವರೆಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿ ದುಡಿದಿದ್ದಾರೆ. ಸಂಸ್ಕಾರ ಭಾರತಿಯ ಕರ್ನಾಟಕ ಪ್ರಾಂತ್ಯ ರಾಜ್ಯಾಧ್ಯಕ್ಷರಾಗಿ  ಕಾಯನಿರ್ವಹಿಸಿದ್ದಾರೆ. 

ಸುಳ್ಳು ಭರವಸೆ ನೀಡುವವರನ್ನು ನಂಬಬೇಡಿ: ಸಿದ್ದರಾಮಯ್ಯ

ಅಮೆರಿಕದ ಚಿಕಾಗೋದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಅವರು ಪಾಲ್ಗೊಂಡಿದ್ದಾರೆ. ಕರ್ನಾಟಕ ರಾಜ್ಯ ಪ್ರಶಸ್ತಿ, ಬೆಹರಿನ್ ಕರ್ನಾಟಕ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ , ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ , ಪೇಜಾವರ ವಿಶ್ವೇಶ್ವ ತೀರ್ಥರಿಂದ ವಿಜಯವಿಠಲ ಪ್ರಶಸ್ತಿ, ಸೋದೆ ಮಠದ ಪರ್ಯಾಯ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ,  ಮೂಡಬಿದಿರೆ ಯಕ್ಷಸಂಗಮ ಪ್ರಶಸ್ತಿ , ಪಾವಂಜೆ ಯಕ್ಷಗಾನ ಸಪ್ತಾಹ ಪ್ರಶಸ್ತಿ ಇತ್ಯಾದಿ ನೂರಾರು ಮಾನ-ಸಂಮಾನಗಳಿಗೆ ಕುಂಬಳೆ ಪಾತ್ರರಾಗಿದ್ದಾರೆ. 2007ರಲ್ಲಿ ಡಾ.ಡಿ.ಕೆ. ಚೌಟ ಪ್ರತಿಷ್ಠಾನದಿಂದ ಸುಂದರರಾಯರಿಗೆ ಸಾರ್ವಜನಿಕ ಸಮ್ಮಾನ ಮತ್ತು ಸುಂದರಕಾಂಡ ಗ್ರಂಥ ಸಮರ್ಪಣೆಯಾಗಿದೆ.

click me!