ಬರೀ 20 ಕಿಮೀ ದೂರ ಪ್ರಯಾಣಕ್ಕೆ ಒಂದು ಟ್ರೇನ್‌ಗೆ 45 ನಿಮಿಷ, ಇನ್ನೊಂದು ರೈಲಿಗೆ 2 ಗಂಟೆ, ಏನು ಕಾರಣ?

By Santosh Naik  |  First Published Sep 22, 2023, 5:35 PM IST

ಸಾಮಾನ್ಯವಾಗಿ ರೈಲಿನಲ್ಲಿ 20 ಕಿಲೋಮೀಟರ್‌ ದೂರ ಪ್ರಯಾಣಕ್ಕೆ ಎಷ್ಟುಸಮಯ ಹಿಡಿಯಬಹುದು. ಹೆಚ್ಚೆಂದರೆ, 35 ನಿಮಿಷ. ಕೆಲ ರೈಲುಗಳು ಕೆಲ ಮಾರ್ಗದಲ್ಲಿ ನಿಧಾನವಾಗಿ ಚಲಿಸುವ ಕಾರಣ 45 ನಿಮಿಷ ತೆಗೆದುಕೊಳ್ಳಬಹುದು. ಆದರೆ, ಬೆಂಗಳೂರು-ಮುರ್ಡೇಶ್ವರ ಎಕ್ಸ್‌ಪ್ರೆಸ್‌ನಲ್ಲಿ ಮಂಗಳೂರಿನಿಂದ ಸುರತ್ಕಲ್‌ ನಡುವಿನ 20 ಕಿ.ಮೀ ಪ್ರಯಾಣಕ್ಕೆ ಬರೋಬ್ಬರಿ 2 ಗಂಟೆ ಹಿಡಿಯುತ್ತದೆ.


ಬೆಂಗಳೂರು (ಸೆ.22): ಕರಾವಳಿಯನ್ನು ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಸಂಪರ್ಕಿಸುವ ನಿಟ್ಟಿನಲ್ಲಿ ಬೆಂಗಳೂರು (ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌)-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ರೈಲನ್ನು ಮುರ್ಡೇಶ್ವರಕ್ಕೆ ವಿಸ್ತರಣೆ ಮಾಡಲಾಗಿದೆ. ವಿಸ್ತೃತ ವೇಳಾಪಟ್ಟಿಯಲ್ಲಿ ರೈಲು ಓಡಾಡಲು ಆರಂಭಿಸಿ ಒಂದು ವಾರವಾಗಿವೆ. ಈ ನಡುವೆ ರೈಲು ಪ್ರಯಾಣಿಕರು ಹಾಗೂ ರೈಲ್ವೇ ಪ್ರಯಾಣಿಕರ ಸಂಘಗಳು ಒಂದು ಪ್ರಮುಖವಾದ ಪ್ರಶ್ನೆಯನ್ನು ಎತ್ತಿದ್ದಾರೆ. ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಂಗಳೂರು ಸೆಂಟ್ರಲ್‌ಗೆ ಬರುತ್ತಿದ್ದ ರೈಲು ಅಲ್ಲಿಂದ ಮುರ್ಡೇಶ್ವರಕ್ಕೆ ಪ್ರಯಾಣ ಮಾಡಬೇಕು. ಆದರೆ, ಮಂಗಳೂರು ಸೆಂಟ್ರಲ್‌ನಿಂದ 20 ಕಿ.ಮೀ ದೂರವಿರುವ ಸುರತ್ಕಲ್‌ಗೆ ಪ್ರಯಾಣ ನಡೆಸಲು ಈ ರೈಲು ಬರೋಬ್ಬರಿ 2 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಇದನ್ನು ಪ್ರಯಾಣಿಕರು ಕೂಡ ಪ್ರಶ್ನೆ ಮಾಡುತ್ತಿದ್ದಾರೆ. ಮಂಗಳೂರು ಸೆಂಟ್ರಲ್-ಮುಂಬೈ ಎಲ್‌ಟಿಟಿ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಸೇರಿದಂತೆ ಇತರ ರೈಲುಗಳು ಈ ದೂರವನ್ನು ಕ್ರಮಿಸಲು ಕೇವಲ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದನ್ನು ಅವೈಜ್ಞಾನಿಕ ಎಂದು ಬಣ್ಣಿಸಿರುವ ಕುಂದಾಪುರ ರೈಲು ಪ್ರಯಾಣಿಕ ಹಿತರಕ್ಷಣಾ ಸಮಿತಿ, ಮಂಗಳೂರು ಮತ್ತು ಮುರ್ಡೇಶ್ವರ ನಡುವಿನ ವೇಳಾಪಟ್ಟಿಯನ್ನು ಕೂಡಲೇ ಬಿಗಿಗೊಳಿಸುವಂತೆ ರೈಲ್ವೆ ಸಚಿವಾಲಯವನ್ನು ಒತ್ತಾಯಿಸಿದೆ.

ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಈ ಕುರಿತಾಗಿ ಮಾತನಾಡಿದ್ದು, ರೈಲು (ಸಂಖ್ಯೆ 16585) ಮಂಗಳೂರು ಸೆಂಟ್ರಲ್‌ನಿಂದ ಬೆಳಿಗ್ಗೆ 8.40 ಕ್ಕೆ ಹೊರಟು 10.32 ಕ್ಕೆ ಸುರತ್ಕಲ್ ಮತ್ತು ಮಧ್ಯಾಹ್ನ 1.35 ಕ್ಕೆ ಮುರ್ಡೇಶ್ವರ ತಲುಪುತ್ತದೆ. (4 ಗಂಟೆ 55 ನಿಮಿಷಗಳ ಪ್ರಯಾಣ). ಹಿಂದಿರುಗುವ ದಿಕ್ಕಿನಲ್ಲೂ ರೈಲು ನಂ. 16586 ಮುರ್ಡೇಶ್ವರದಿಂದ ಮಧ್ಯಾಹ್ನ 2.10 ಕ್ಕೆ ಹೊರಡುತ್ತದೆ. ಮತ್ತು 6.20 ಗಂಟೆಗೆ ಸೆಂಟ್ರಲ್ ತಲುಪುತ್ತದೆ. (4 ಗಂಟೆ 10 ನಿಮಿಷಗಳ ಪ್ರಯಾಣ). ಮಂಗಳೂರು ಸೆಂಟ್ರಲ್-ಮಡ್ಗಾಂವ್ ಎಕ್ಸ್‌ಪ್ರೆಸ್ ವಿಶೇಷ (ಹಿಂದಿನ ಪ್ಯಾಸೆಂಜರ್ ರೈಲು) ಈ 164-ಕಿಮೀ ದೂರವನ್ನು ಕ್ರಮಿಸಲು ಕೇವಲ ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Tap to resize

Latest Videos

undefined

ಮಂಗಳೂರು ಜಂಕ್ಷನ್‌ನಲ್ಲಿ ನಿಲುಗಡೆ ಇಲ್ಲ: ದಕ್ಷಿಣ ರೈಲ್ವೇ ಮತ್ತು ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ ಅನ್ನು ಅಂತರ-ವಲಯ ಪ್ರದೇಶವಾದ ತೊಕ್ಕೂರ್‌ನಲ್ಲಿ ರೈಲನ್ನು ಕಳುಹಿಸುವಲ್ಲಿ ಮತ್ತು ಸ್ವೀಕರಿಸುವಲ್ಲಿ ನಿರಾಸಕ್ತಿ ಹೊಂದಿದ್ದಾರೆ ಎಂದು ಆರೋಪಿಸಿದರು. ರೈಲು ಸೇವೆಗಳಿಗೆ ಮಂಗಳೂರು ಜಂಕ್ಷನ್‌ನಲ್ಲಿ (MAJN) ವಾಣಿಜ್ಯ ನಿಲುಗಡೆ ಇಲ್ಲ. ಹಾಗಿದ್ದರೂ, 8.55 ಗಂಟೆಗೆ ಮಂಗಳೂರು ಜಂಕ್ಷನ್‌ ಮೂಲಕ ಹಾದುಹೋದಾಗ, ರೈಲು ನಂ. 16585 ಈ ಜಂಕ್ಷನ್‌ನ ಹೊರಭಾಗದಲ್ಲಿ 40 ನಿಮಿಷಗಳ ಕಾಲ ಮತ್ತು ಸುರತ್ಕಲ್‌ನಲ್ಲಿ ಇನ್ನೂ 40 ನಿಮಿಷಗಳ ಕಾಲ ನಿಲ್ಲಿಸಿ ಇಡಲಾಗುತ್ತಿದೆ ಎಂದು ಅವರು ವಿಷಾದಿಸಿದರು.

ಕಾರವಾರದವರೆಗೆ ಸಾಗಬಹುದು: ತಜ್ಞರ ಅಭಿಪ್ರಾಯಗಳನ್ನು ಉಲ್ಲೇಖಿಸಿ ಮಾತನಾಡಿದ ಪುತ್ರನ್‌, ರೈಲನ್ನು ನಿಜವಾದ ಅಗತ್ಯವಿರುವ ಸಮಯಕ್ಕೆ ಓಡಿಸಿದರೆ ಅದನ್ನು ಕಾರವಾರದವರೆಗೆ ಓಡಿಸಬಹುದು. ಕಾರವಾರಕ್ಕೆ ಹೋಗುವ ರೈಲು, ವಾಪಾಸ್‌ ಬೆಂಗಳುರಿಗೆ ಬರುವ ನಿಟ್ಟಿನಲ್ಲಿ6.35ರ ಒಳಗಾಗಿ ಮಂಗಳೂರಿಗೆ ಬರುವ ಎಲ್ಲಾ ಅವಕಾಶವಿದೆ ಎಂದು ತಿಳಿಸಿದ್ದಾರೆ. ನೈಋತ್ಯ ರೈಲ್ವೆ (SWR) ಬೆಂಗಳೂರು-ಮುರ್ಡೇಶ್ವರ ರೈಲನ್ನು ಇನ್ನೂ 15 ನಿಮಿಷಗಳ ಮೊದಲು ಪಡೀಲ್‌ನಲ್ಲಿ ದಕ್ಷಿಣ ರೈಲ್ವೆಗೆ ಹಸ್ತಾಂತರಿಸಲು ಸಹ ಸಿದ್ಧವಾಗಿದೆ ಎಂದು ಹೇಳಿದ  ಪುತ್ರನ್, ರೈಲು ನಂತರ 8 ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪಬಹುದು, ಅದು 8.20 ಕ್ಕೆ ಮುರ್ಡೇಶ್ವರದ ಕಡೆಗೆ ಹೊರಡಬಹುದು ಎಂದು ಹೇಳಿದರು. ಹಿಂದಿನ ಮಂಗಳೂರು ಸೆಂಟ್ರಲ್-ಮಡ್ಗಾಂವ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನ ಮಾರ್ಗದಲ್ಲಿ ಕುಂದಾಪುರಕ್ಕೆ ಬೆಳಿಗ್ಗೆ 10.30 ಮತ್ತು ಮುರ್ಡೇಶ್ವರಕ್ಕೆ 11.30 ಗಂಟೆಗೆ ತಲುಪಲು ರೈಲ್ವೆ ಸಚಿವಾಲಯವು ಮೂರು ವಲಯಗಳಾದ ಎಸ್‌ಡಬ್ಲ್ಯೂಆರ್, ಎಸ್‌ಆರ್ ಮತ್ತು ಕೆಆರ್‌ಸಿಎಲ್‌ಗೆ ಪ್ರಯಾಣಿಕ ಸ್ನೇಹಿ ವೇಳಾಪಟ್ಟಿಯನ್ನು ರೂಪಿಸಲು ನಿರ್ದೇಶಿಸಬೇಕು ಎಂದು ಅವರು ಹೇಳಿದರು.

Bengaluru- Murdeshwar train: ಬುಕಿಂಗ್ ಓಪನ್ ಆಗಿ ಕೆಲವೇ ನಿಮಿಷಗಳಲ್ಲಿ ಸೀಟು ಭರ್ತಿ! ವೈಟಿಂಗ್ ಲಿಸ್ಟ್ನಲ್ಲಿ 231 ಜನ

ಕಟ್ಟುನಿಟ್ಟಿನ ವೇಳಾಪಟ್ಟಿಯಡಿಯಲ್ಲಿ ರೈಲು ಸಂಚಾರವನ್ನು ಕಾರವಾರದವರೆಗೆ ವಿಸ್ತರಿಸಿದರೆ ನೂರಾರು ಪ್ರವಾಸಿಗರು ಮೈಸೂರು, ಮುರ್ಡೇಶ್ವರ, ಗೋಕರ್ಣ ಮತ್ತು ಸುತ್ತಮುತ್ತಲಿನ ಪ್ರಮುಖ ಸ್ಥಳಗಳ ನಡುವೆ ಪ್ರಯಾಣಿಸಲು ಅನುಕೂಲವಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು-ಮಂಗಳೂರು ರೈಲು ಮುರ್ಡೇಶ್ವರಕ್ಕೆ ವಿಸ್ತರಣೆ, ಪ್ರತಾಪ್‌ ಸಿಂಹ ಮನವಿ ಒಪ್ಪಿದ ರೈಲ್ವೆ ಇಲಾಖೆ!

click me!