ಬೆಂಗಳೂರು ಟ್ರಾಫಿಕ್: ಶಾಲೆ, ಕೈಗಾರಿಕೆಗಳ ಸಮಯ ಬದಲಿಗೆ ಹೈಕೋರ್ಟ್ ಸೂಚನೆ

By Kannadaprabha News  |  First Published Sep 13, 2023, 12:37 PM IST

ನಗರದಲ್ಲಿ ನಿತ್ಯ ಉಂಟಾಗುತ್ತಿರುವ ಸಂಚಾರದ ದಟ್ಟಣೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಹಾಗೂ ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳು ಮತ್ತು ಕಂಪನಿಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡುವ ಬಗ್ಗೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೋಮವಾರ ಸಲಹೆ ನೀಡಿದೆ.


ಬೆಂಗಳೂರು (ಸೆ.13): ನಗರದಲ್ಲಿ ನಿತ್ಯ ಉಂಟಾಗುತ್ತಿರುವ ಸಂಚಾರದ ದಟ್ಟಣೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಹಾಗೂ ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳು ಮತ್ತು ಕಂಪನಿಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡುವ ಬಗ್ಗೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೋಮವಾರ ಸಲಹೆ ನೀಡಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸಲು ಬಸವೇಶ್ವರ ವೃತ್ತದಿಂದ ಹೆಬ್ಬಾಳದ ಎಸ್ಟೀಮ್‌ ಮಾಲ್‌ವರೆಗೆ ರಸ್ತೆ ಅಗಲೀಕರಣ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಸಲಹೆ ನೀಡಿದೆ.

Tap to resize

Latest Videos

Bengaluru Traffic ಅವ್ಯವಸ್ಥೆಗೆ ವರ್ಷಕ್ಕೆ 20,000 ಕೋಟಿ ನಷ್ಟ: ಬಯಲಾಯ್ತು ಶಾಕಿಂಗ್ ಅಧ್ಯಯನ

ಶಾಲೆಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡುವ ಕುರಿತಂತೆ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮೂಲಕ ಖಾಸಗಿ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ ಬಸ್‌ ಆಪರೇಟರ್‌ಗಳು, ಪೋಷಕರ ಸಂಘಗಳು ಪ್ರತಿನಿಧಿಗಳ ಜೊತೆಗೆ ಸಭೆ ಕರೆದು ಸಮಾಲೋಚಿಸಬೇಕು. ಈ ವೇಳೆ ಸಂಚಾರ ದಟ್ಟಣೆ ನಿವಾರಿಸುವ ಮತ್ತು ಶಾಲಾ ಮಕ್ಕಳ ಸುರಕ್ಷತೆ ಮತ್ತು ಭದ್ರತೆ ವಿಚಾರಗಳನ್ನು ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಅಲ್ಲದೆ, ಕೈಗಾರಿಕೆಗಳು, ಕಾರ್ಖಾನೆ, ವಾಣಿಜ್ಯ ಸಂಸ್ಥೆಗಳು ಮತ್ತು ಕಂಪನಿಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡುವ ಕುರಿತಂತೆ ರಾಜ್ಯ ಕೈಗಾರಿಕೆ ಮತ್ತು ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು, ರಾಜ್ಯದಲ್ಲಿ ಕೈಗಾರಿಕೆ ಒಕ್ಕೂಟ, ಕಾರ್ಖಾನೆ, ಕಾರ್ಮಿಕ ಸಂಘಟನೆಗಳು, ಚೇಂಬರ್‌ ಆಫ್‌ ಕಾಮರ್ಸ್‌, ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿಗಳ (ಸ್ಟೇಕ್‌ ಹೋಲ್ಡರ್ಸ್‌) ಸಭೆ ಕರೆದು ಚರ್ಚಿಸಿ ಸಲಹೆ ಪಡೆಯಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಸಾದರಹಳ್ಳಿ ಗೇಟ್‌ನಿಂದ ಹೆಬ್ಬಾಳ ಮೇಲ್ಸೇತುವೆರೆಗೆ ಸಂಜೆ 6ರಿಂದ ರಾತ್ರಿ 10ಗಂಟೆಯವರೆಗೆ ಭಾರೀ ಗಾತ್ರದ ವಾಹನಗಳು ಸಂಚರಿಸುವುದನ್ನು ನಿಷೇಧಿಸಿ 2014ರಲ್ಲಿ ಅಂದಿನ ನಗರ ಪೊಲೀಸ್‌ ಆಯುಕ್ತರು ಹೊರಡಿಸಿದ ಆದೇಶವನ್ನು ಉಲ್ಲೇಖಿಸಿ ನ್ಯಾಯಪೀಠ ಈ ಸಲಹೆಯನ್ನು ನೀಡಿದೆ. 

ಒಂದು ಗಂಟೆಯ ದಾರಿಗೆ ಮೂರು ಗಂಟೆ ವೈಟಿಂಗ್ ಟೈಂ; ರಾಪಿಡೋ ಆಟೋ ಪೋಸ್ಟ್ ವೈರಲ್‌

ನ್ಯಾಯಾಲಯದ ಹಾಗೂ ಅರ್ಜಿದಾರರು ನೀಡಿರುವ ನಿರ್ದೇಶನಗಳನ್ನು ಆಧರಿಸಿ ವಾಹನ ದಟ್ಟಣೆ ತಗ್ಗಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡು ಆರು ವಾರಗಳಲ್ಲಿ ವಸ್ತು ಸ್ಥಿತಿ ವರದಿ ಹಾಗೂ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.

ಮೆಟ್ರೊ ರೈಲು ಮಾರ್ಗ ವಿಸ್ತರಣೆ, ರೈಲುಗಳ ಸಮಯ ವಿಸ್ತರಣೆ ಸೇರಿದಂತೆ 2023-24 ವರ್ಷಕ್ಕೆ ಯೋಜನಾ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು, ಆ ಕಾರ್ಯವನ್ನು ತ್ವರಿತವಾಗಿ ಮಾಡಬೇಕು ಎಂದು ನ್ಯಾಯಾಲಯ ಇದೇ ವೇಳೆ ಸರ್ಕಾರಕ್ಕೆ ಸೂಚನೆ ನೀಡಿತು.

click me!