
ಬೆಂಗಳೂರು (ಜು.17): ಗೋಕರ್ಣ ಕಾಡಿನ ನಡುವಿನ ಗುಹೆಯಲ್ಲಿ ತನ್ನಿಬ್ಬರು ಹೆಣ್ಣುಮಕ್ಕಳೊಂದಿಗೆ ಪತ್ತೆಯಾಗಿದ್ದ ರಷ್ಯಾ ಮೂಲದ ಮಹಿಳೆ ನೀನಾ ಕುಟಿನಾ ಅವರನ್ನು ಹುಡುಕಿಕೊಂಡು ಅವರ ಇಸ್ರೇಲ್ ಮೂಲದ ಮಾಜಿ ಪತಿ ಇದೀಗ ಕರ್ನಾಟಕಕ್ಕೆ ಬಂದಿದ್ದಾರೆ. ಹೆಣ್ಣುಮಕ್ಕಳಿಬ್ಬರ ಕಸ್ಟಡಿ ಹಂಚಿಕೊಳ್ಳಲು ಬಯಸಿದ್ದಾರೆ. ಸದ್ಯ ನೀನಾ ಕುಟಿನಾ, ಇಬ್ಬರು ಮಕ್ಕಳನ್ನು ತುಮಕೂರಿನ ಪುನರ್ವಸತಿ ಕೇಂದ್ರದಲ್ಲಿರಿಸಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರಿಗೆ ಆಗಮಿಸಿರುವ ಅವರ ಮಾಜಿ ಪತಿ ಡ್ರೋರ್ ಗೋಲ್ಡ್ ಸ್ಟೇನ್, ತಮ್ಮಿಬ್ಬರು ಮಕ್ಕಳ ಕಸ್ಟಡಿಗೆ ಪಡೆಯಲೆತ್ನಿಸುತ್ತಿದ್ದಾರೆ. ಮಕ್ಕಳ ಪಾಲನೆ ಜವಾಬ್ದಾರಿ ಹಂಚಿಕೊಳ್ಳಲು, ಅವರಿಗೆ ಹತ್ತಿರವಾಗಿರಲು ನಾನು ಬಯಸುತ್ತೇನೆ. ,ಮಕ್ಕಳ ಜತೆ ಹೆಂಡತಿ ಒಂದು ವೇಳೆ ವಾಪಸ್ ರಷ್ಯಾಗೆ ಹೋದರೆ ಮತ್ತೆ ಅವರ ಜತೆ ಸಂಪರ್ಕ ಕಷ್ಟವಾಗಲಿದೆ. ಅವರು ಭಾರತದಲ್ಲೇ ಇರಲಿ ಎಂಬುದು ನನ್ನ ಬಯಕೆ ಎಂದು ಮಾಜಿ ಪತಿ ಹೇಳಿಕೊಂಡಿದ್ದಾರೆ.
8 ವರ್ಷದ ಹಿಂದಿನ ಪ್ರೇಮ್ ಕಹಾನಿ: ಗೋಲ್ಡ್‌ಸ್ಟೇನ್ (38) ಅವರಿಗೆ 2017ರಲ್ಲಿ ಗೋವಾ ಬೀಚ್‌ನಲ್ಲಿ ರಷ್ಯಾ ಮೂಲದ ಪರ್ಯಟಕಿ, ಕಲಾವಿದೆ ನೀನಾ ಕುಟಿನಾ (40) ಪರಿಚಯವಾಗಿ ಪ್ರೇಮವಾಗಿತ್ತು. ಗೋಲ್ಡ್‌ಸ್ಟೇನ್ ಅವರು ವೀಸಾ ಕಾರಣಗಳಿಗಾಗಿ ವರ್ಷದ 6 ತಿಂಗಳಷ್ಟೇ ಗೋವಾದಲ್ಲಿದ್ದರು. ಆರಂಭದಲ್ಲಿ ಚೆನ್ನಾಗಿದ್ದ ದಂಪತಿ ಕೆಲ ವರ್ಷಗಳಿಂದ ಪ್ರತ್ಯೇಕವಾಗಿಯೇ ಬದುಕುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಮಕ್ಕಳ ಜತೆಗೆ ನೀನಾ ದಿಢೀರ್ ಗೋವಾ ತೊರೆದಿದ್ದು, ಬಳಿಕ ಆಕೆಯ ಜತೆಗೆ ಸಂಪರ್ಕ ಇಲ್ಲದಂತಾಗಿತ್ತು.
‘ನಂತರ ಅವರನ್ನು ಗೋಕರ್ಣಾದ ಬೀಚ್‌ನಲ್ಲಿ ನಾನು ಪತ್ತೆ ಹಚ್ಚಿದ್ದೆ. ನಾನು ಪ್ರತ್ಯೇಕವಾಗಿ ನೆಲೆಸುತ್ತಿದ್ದ ಕಾರಣ ಮಕ್ಕಳ ಜತೆಗಿರಲು ನನಗೆ ಅವಕಾಶ ಕೊಡಲಿಲ್ಲ. ಕಳೆದ ವರ್ಷದ ಮಾರ್ಚ್‌ನಲ್ಲಿ ನಾನು ಇಸ್ರೇಲ್‌ಗೆ ವಾಪಸ್ ಹೋಗಿದ್ದೆ. ಯುದ್ಧದ ಕಾರಣಗಳಿಂದಾಗಿ ವಾಪಸಸಾಗಲು ಸಾಧ್ಯವಾಗಿರಲಿಲ್ಲ. ಇದೀಗ ನನ್ನ ಪತ್ನಿ, ಮಕ್ಕಳು ಗುಹೆಯಲ್ಲಿ ಪತ್ತೆಯಾದ ಸುದ್ದಿ ತಿಳಿದು ಬಂದಿದ್ದೇನೆ. ಅವರ ಭೇಟಿಗೆ ಪ್ರಯತ್ನಿಸುತ್ತಿದ್ದೇನೆ’ ಎಂದು ಗೋಲ್ಡ್‌ಸ್ಟೇನ್ ತಿಳಿಸಿದ್ದಾರೆ. ‘ನೀನಾ ತನ್ನಿಬ್ಬರು ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಲು ಬಯಸುತ್ತಿದ್ದಾಳೆ. ಒಂದು ವೇಳೆ ನಾನು ಅವರ ಜತೆ ಒಂದೇ ಮನೆಯಲ್ಲಿ ನೆಲೆಸದಿದ್ದರೆ ಸಂಪರ್ಕ ಕಡಿದುಕೊಳ್ಳಬೇಕು ಎಂದು ಮೊದಲೇ ಸ್ಪಷ್ಟವಾಗಿ ಹೇಳಿದ್ದಳು’ ಎಂದು ಇದೇ ವೇಳೆ ಗೋಲ್ಡ್‌ಸ್ಟೇನ್ ಹೇಳಿಕೊಂಡಿದ್ದಾರೆ.
ನೀನಾ 5 ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದಾರೆ. ನನ್ನ ಕಿರಿಯ ಪುತ್ರಿ ಆಮಾ( 4) ಭಾರತದಲ್ಲೇ ಜನಿಸಿದ್ದು. ಆಕೆ ಭಾರತೀಯ ಪ್ರಜೆ. ಹೀಗಾಗಿ ಯಾವುದೇ ಕಾರಣಕ್ಕೂ ದೇಶದಿಂದ ಹೊರಗೆ ಕಳುಹಿಸಬಾರದು ಎಂದು ಮನವಿ ಮಾಡಿದ್ದಾರೆ. ಗೋಕರ್ಣ ಸಮೀಪದ ರಾಮತೀರ್ಥ ಗುಡ್ಡದ ಗುಹೆಯೊಂದರಲ್ಲಿ ನೀನಾ ಕುಟಿನಾ ಅವರು ತನ್ನಿಬ್ಬರು ಹೆಣ್ಣುಮಕ್ಕಳಾದ ಪ್ರೇಮಾ(6), ಆಮಾ(4) ಜತೆಗೆ ಜು.11ರಂದು ಪತ್ತೆಯಾಗಿದ್ದರು. 3 ವಾರಗಳ ಕಾಲ ಅವರು ಅಲ್ಲೇ ನೆಲೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ