ರಾಜ್ಯದಲ್ಲಿ ‘ಭೂ ಬಳಕೆ ನೀತಿ’ ಜಾರಿ ತರಬೇಕು: ಬಡಗಲಪುರ ನಾಗೇಂದ್ರ ಮುಖಾಮುಖಿ ಸಂದರ್ಶನ

Kannadaprabha News   | Kannada Prabha
Published : Jul 17, 2025, 08:56 AM IST
badagalapura nagendra

ಸಾರಾಂಶ

ಭೂಸ್ವಾಧೀನ ವಿರೋಧಿಸಿ ಬರೋಬ್ಬರಿ 1198 ದಿನ ರೈತರು ಅವಿರತ ಹೋರಾಟ ನಡೆಸಿದರು. ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿರುವ ರೈತ ಮುಖಂಡ ಬಡಗಲಪುರ ನಾಗೇಂದ್ರ.

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಜು.17): ರೈತರ ಕೃಷಿ ಜಮೀನು ಭೂಸ್ವಾಧೀನ ವಿರೋಧಿಸಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ‘ಐತಿಹಾಸಿಕ ಹೋರಾಟ’ ತಾರ್ಕಿಕ ಅಂತ್ಯ ಕಂಡಿದೆ. ಪ್ರತಿಭಟನೆಯ ‘ಕಿಚ್ಚು’ ಆರಿರುವಂತೆ ಕಂಡರೂ ಇದು ‘ಭವಿಷ್ಯ’ದಲ್ಲಿ ರೈತರ ಜಮೀನುಗಳ ‘ಅವೈಜ್ಞಾನಿಕ’ ಭೂ ಸ್ವಾಧೀನ ವಿರೋಧಿಸಲು ಭದ್ರ ಅಡಿಪಾಯವನ್ನಂತು ಹಾಕಿಕೊಟ್ಟಿರುವಂತೆ ಭಾಸವಾಗುತ್ತಿದೆ. 13 ಹಳ್ಳಿಯ ಸುಮಾರು 800 ಕುಟುಂಬದ 1,777 ಎಕರೆ ಕೃಷಿ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಏರೋಸ್ಪೇಸ್‌ ಪಾರ್ಕ್‌ ನಿರ್ಮಿಸಲು ಭೂ ಸ್ವಾಧೀನಕ್ಕೆ ಮುಂದಾಗಿದ್ದೇ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಭೂಸ್ವಾಧೀನ ವಿರೋಧಿಸಿ ಬರೋಬ್ಬರಿ 1198 ದಿನ ರೈತರು ಅವಿರತ ಹೋರಾಟ ನಡೆಸಿದರು. ಹಲವು ಗಣ್ಯರೂ ಪ್ರತಿಭಟನೆಗೆ ಬೆಂಬಲ ಸೂಚಿಸಿ, ರಾಷ್ಟ್ರಮಟ್ಟದಲ್ಲೂ ಇದು ಸುದ್ದಿಯಾಯಿತು. ಕೊನೆಗೆ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಭೂ ಧೀನ ಪ್ರಕ್ರಿಯೆಯನ್ನು ಕೈಬಿಟ್ಟಿದೆ. ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿರುವ ರೈತ ಮುಖಂಡ ಬಡಗಲಪುರ ನಾಗೇಂದ್ರ ಅವರು, ರೈತರ ಹೋರಾಟದ ಹಿನ್ನೆಲೆ, ವ್ಯಕ್ತವಾದ ಬೆಂಬಲ, ಉಂಟಾದ ಅಡ್ಡಿ-ಆತಂಕ, ಕೊನೆಗು ಜಯ ದೊರಕಿದ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ.

* ಭೂಸ್ವಾಧೀನ ವಿರೋಧಿಸಿ ಹೋರಾಟ ನಡೆಸುವುದರಿಂದ ಅಭಿವೃದ್ಧಿಗೆ ಹಿನ್ನಡೆ ಆಗುವುದಿಲ್ಲವೇ?
ಖಂಡಿತ ಇಲ್ಲ. ಎಂತಹ ಜಮೀನನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು ಎಂಬುದರ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇರಬೇಕು. ಭೂಸ್ವಾಧೀನವು ಪರಿಸರಕ್ಕೆ ಮಾರಕವಾಗಬಾರದು, ಹೆಚ್ಚು ಉದ್ಯೋಗ ಸೃಷ್ಟಿಸಬೇಕು. ಪ್ರಮುಖವಾಗಿ ಫಲವತ್ತಾದ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳಲೇಬಾರದು. ಆದರೆ ಸರ್ಕಾರಕ್ಕೆ ಈ ಬಗ್ಗೆ ನಿಖರತೆಯೇ ಇಲ್ಲವಾಗಿದೆ. ಜನರ ಬದುಕನ್ನು ಹಾಳು ಮಾಡುವ ಕೈಗಾರಿಕೆಗಳಿಗೆ ಆದ್ಯತೆ ನೀಡಬಾರದು.

* ಹೋರಾಟಕ್ಕೆ ಪ್ರೇರಣೆ ಏನು?
ಈ ಹಿಂದೆ 2008ರಲ್ಲಿ ಸರ್ಕಾರ ದೇವನಹಳ್ಳಿ ಸಮೀಪ 6000 ಎಕರೆ ಭೂಮಿಯನ್ನು ರೈತರಿಂದ ಸ್ವಾಧೀನ ಪಡಿಸಿಕೊಂಡಿತ್ತು. ಅದರಲ್ಲಿ ಇನ್ನೂ 2000 ಎಕರೆ ಈಗಲೂ ಪಾಳು ಬಿದ್ದಿದೆ. ಜಮೀನನ್ನು ಮಾರಾಟ ಮಾಡಿದ ಬಹಳಷ್ಟು ಮಂದಿ ಈಗ ಎಲ್ಲಿ ನೆಲೆಸಿದ್ದಾರೆ ಎಂಬುದೇ ಗೊತ್ತಿಲ್ಲ. ಭೂಮಿ ಕಳೆದುಕೊಂಡವರಲ್ಲಿ ಕೆಲವರು ಸೆಕ್ಯುರಿಟಿ ಗಾರ್ಡ್‌, ಉದ್ಯಾನವನ ನಿರ್ವಹಣೆ ಮತ್ತಿತರ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಇದನ್ನೆಲ್ಲ ಕಣ್ಣಾರೆ ಕಂಡ ಚನ್ನರಾಯಪಟ್ಟಣದ ರೈತರು ನಮಗೂ ಇದೇ ಪರಿಸ್ಥಿತಿ ಬರಲಿದೆ ಎಂದು ಅರಿತು, ಸುತಾರಾಂ ಭೂಮಿ ನೀಡಬಾರದು ಎಂದು ಪಟ್ಟು ಹಿಡಿದರು.

* ಭೂಸ್ವಾಧೀನಕ್ಕೆ ಬದಲಾಗಿ ಸರ್ಕಾರ ಸೂಕ್ತ ಪರಿಹಾರ ನೀಡಲು ಸಿದ್ಧವಾಗಿತ್ತಲ್ವ?
ಆಹಾರದ ಭದ್ರತೆಯೇ ಇಲ್ಲದಿರುವಾಗ ಪರಿಹಾರ ಪಡೆದುಕೊಂಡು ಏನು ಮಾಡುವುದು. ದೇಶದಲ್ಲಿ ಕೃಷಿಯು ಶೇ.60 ರಷ್ಟು ನೇರ ಉದ್ಯೋಗ ಸೃಷ್ಟಿಸುತ್ತದೆ. ಪರೋಕ್ಷವಾಗಿ ನೀಡುವ ಉದ್ಯೋಗಗಳ ಸಂಖ್ಯೆಯೂ ಕಡಿಮೆಯಿಲ್ಲ. ಕೃಷಿ ಉತ್ಪನ್ನಗಳಿಲ್ಲದೆ ಜೀವನ ಸಾಗಿಸುವುದನ್ನು ಊಹಿಸಲೂ ಸಾಧ್ಯವಿಲ್ಲ. ಲಂಗುಲಗಾಮಿಲ್ಲದೇ ಭೂಮಿ ಕಿತ್ತುಕೊಂಡರೆ ರೈತರು ಬೀದಿ ಪಾಲಾಗುತ್ತಾರೆ. ಜೀವನವೇ ಡೋಲಾಯಮಾನವಾಗುವಾಗ ಪರಿಹಾರ ಯಾರಿಗೆ ಬೇಕು.

* ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಯ ಅಗತ್ಯವಿಲ್ಲವೇ?
ನಾವು ಯಾವತ್ತೂ ಕೈಗಾರಿಕೆ, ವಿಶೇಷ ಆರ್ಥಿಕ ವಲಯ, ವಿಮಾನ ನಿಲ್ದಾಣಗಳ ವಿರೋಧಿಗಳಲ್ಲ. ಆದರೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ರೈತರಿಂದ ವಶಪಡಿಸಿಕೊಂಡ ಜಮೀನನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ವಶಪಡಿಸಿಕೊಂಡ ಭೂಮಿಯಲ್ಲಿ ಶೇ.38.6ರಷ್ಟು ಜಮೀನನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರವನ್ನು ನಂಬುವುದಾದರೂ ಹೇಗೆ?

* ನೆರೆಯ ಆಂಧ್ರದವರು ಉದ್ಯಮ ಸ್ಥಾಪನೆಗೆ ಆಹ್ವಾನ ನೀಡುತ್ತಿದ್ದಾರಲ್ಲ?
ಕರ್ನಾಟಕದ ಭೂಮಿಗೂ, ಆಂಧ್ರದ ಭೂಮಿಗೂ ಸಾಕಷ್ಟು ವ್ಯತ್ಯಾಸವಿದೆ. ಕರ್ನಾಟಕದಲ್ಲಿ ಫಲವತ್ತಾದ ಭೂಮಿ ಹೆಚ್ಚಿನ ಪ್ರಮಾಣದಲ್ಲಿದ್ದರೆ ಆಂಧ್ರದಲ್ಲಿ ಈ ಪ್ರಮಾಣ ಬಹಳ ಕಡಿಮೆ. ಮತ್ತೊಂದೆಡೆ, ಅಲ್ಲಿ ಪ್ರತಿ ರೈತರ ಭೂ ಹಿಡುವಳಿ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ ನಮ್ಮಲ್ಲಿ ತುಂಡು ಹಿಡುವಳಿ ಇದೆ. ಒಂದೆರಡು ಎಕರೆ ಭೂಮಿಯನ್ನು ಹೊಂದಿರುವ ರೈತರ ಪ್ರಮಾಣ ನಮ್ಮಲ್ಲಿ ಹೆಚ್ಚಾಗಿದೆ. ಆಂಧ್ರದ ಪ್ರತಿ ಜಿಲ್ಲೆಯಲ್ಲೂ ವ್ಯವಸಾಯ ಯೋಗ್ಯವಾದ ಭೂಮಿ ಎಷ್ಟು, ಉದ್ಯಮ ಸ್ಥಾಪನೆಗೆ ಇರುವ ಭೂಮಿ ಎಷ್ಟು ಎಂಬುದನ್ನು ಗುರುತು ಮಾಡಲಾಗಿದೆ. ಇದನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕು.

* ನಿಮ್ಮ ಹೋರಾಟಕ್ಕೆ ಪಕ್ಷಾತೀತ ಬೆಂಬಲ ವ್ಯಕ್ತವಾಗಿತ್ತಾ?
2021ರಿಂದಲೂ ರೈತರು ಭೂ ಸ್ವಾಧೀನ ವಿರೋಧಿಸಿ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದರು. ಬಳಿಕ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆ ಅಖಾಡಕ್ಕೆ ಇಳಿದಿದ್ದರಿಂದ ಹೋರಾಟ ಹೊಸ ದಿಕ್ಕು ಪಡೆಯಿತು. ಹಲವು ಸಂಘಟನೆಗಳ ಮುಂಚೂಣಿ ನಾಯಕರು ಬೆಂಬಲ ನೀಡಿದರು. ಆಡಳಿತಾರೂಢ ಪಕ್ಷ ಭೂ ಸ್ವಾಧೀನಕ್ಕೆ ಮುಂದಾದರೆ, ವಿರೋಧ ಪಕ್ಷಗಳು ಯಾವುದೇ ಬೆಂಬಲ ನೀಡಲಿಲ್ಲ. ಪ್ರತಿಭಟನೆಯಲ್ಲೂ ಪಾಲ್ಗೊಳ್ಳಲಿಲ್ಲ. ಆದರೆ, ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತರು ಪಕ್ಷಾತೀತವಾಗಿದ್ದರು.

* ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಯಿತಾ?
ಹೋರಾಟವನ್ನು ಹತ್ತಿಕ್ಕಲು, ಒಡಕುಂಟು ಮಾಡಲು ಬಹಳಷ್ಟು ಪ್ರಯತ್ನಿಸಲಾಯಿತು. ಆದರೆ 13 ಹಳ್ಳಿಯ ಜನರು ಇದಕ್ಕೆ ಬಗ್ಗಲಿಲ್ಲ, ಜಗ್ಗಲಿಲ್ಲ. ಹೋರಾಟ ಯಶಸ್ವಿ ಆಗಲಿದೆ ಎಂಬ ಅಚಲ ವಿಶ್ವಾಸ ಹೊಂದಿದ್ದರು.

* ಕೆಲ ರೈತರು ಭೂಮಿ ನೀಡಲು ಮುಂದೆ ಬಂದಿದ್ದಾರಲ್ಲಾ?
ಇಲ್ಲಿನ ಜಮೀನು ಫಲವತ್ತಾದ ಕೆಂಪು ಮಣ್ಣನ್ನು ಹೊಂದಿದ್ದು ರೈತರು ದ್ರಾಕ್ಷಿ, ರೇಷ್ಮೆ, ಹಣ್ಣು-ತರಕಾರಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಎರಡು ಹಳ್ಳಿಯ ಶೇ.80 ರಷ್ಟು ದಲಿತ ಸಮುದಾಯದವರಿಗೆ 500 ಎಕರೆಗಿಂತ ಹೆಚ್ಚಿನ ಜಮೀನು ದರಖಾಸ್ತಿನಿಂದ ಸಿಕ್ಕಿದೆ. ಈ ರೈತರ ಹೆಸರಿನಲ್ಲಿ ಪಹಣಿ ಇದ್ದರೂ ಪೋಡಿ ಆಗಿಲ್ಲ, ಉಳುಮೆ ಮಾಡುತ್ತಿರುವ ಜಮೀನು ನಿಖರವಾಗಿ ಅದೇ ಸ್ಥಳದಲ್ಲಿದೆ ಎಂಬುದೂ ಆ ರೈತರಿಗೆ ತಿಳಿದಿಲ್ಲ. ಇಂತಹವರ ಜಮೀನನ್ನು ಕೆಲವರು ಜಿಪಿಎ(ಜನರಲ್‌ ಪವರ್‌ ಆಫ್‌ ಅಟಾರ್ನಿ) ಮಾಡಿಸಿಕೊಂಡಿದ್ದು, ಹಣ ಮಾಡುವ ಉದ್ದೇಶದಿಂದ ಭೂಮಿ ನೀಡಲು ಮುಂದೆ ಬಂದಿದ್ದಾರೆ. ಈಗ ನಾವು ಇಂತಹ ರೈತರಿಗೂ ಅರಿವು ಮೂಡಿಸುತ್ತಿದ್ದೇವೆ.

* ಕಾನೂನು ಪ್ರಕಾರವೇ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತಾ?
ಕಾಂಗ್ರೆಸ್‌ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರ ಭೂ ಸ್ವಾಧೀನ ಮತ್ತು ಪುನರ್‌ವಸತಿ ಕಾಯ್ದೆ 2013 ಅನ್ನು ಜಾರಿಗೆ ತಂದಿದ್ದು, ಇದರನ್ವಯ ಭೂ ಸ್ವಾಧೀನ ಮಾಡಬೇಕು. ಈ ಕಾಯ್ದೆ ಪ್ರಕಾರ ಫಲವತ್ತಾದ ಭೂಮಿ ಸ್ವಾಧೀನ ಪಡಿಸಿಕೊಳ್ಳುವಂತಿಲ್ಲ, ಶೇ.80ಕ್ಕಿಂತಲೂ ಅಧಿಕ ಜನ ಒಪ್ಪಿಗೆ ಸೂಚಿಸಿರಬೇಕು, ಭೂ ಸ್ವಾಧೀನದಿಂದ ಉಂಟಾಗುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಬೇಕು. ಆದರೆ ಇದ್ಯಾವುದನ್ನೂ ಮಾಡದೆ ಕೆಐಎಡಿಬಿ ಕಾಯ್ದೆ 1966 ರ ಅಡಿ ಭೂ ಸ್ವಾಧೀನ ಮಾಡಲಾಗಿದೆ. ಪರಿಹಾರ ನಿಗದಿಗೆ ಮಾತ್ರ 2013 ರ ಕೇಂದ್ರದ ಕಾಯ್ದೆ ಬಳಸಲಾಗುತ್ತಿದೆ. ಇದು ವಿಪರ್ಯಾಸ.

* ನಿಮ್ಮ ಪ್ರಕಾರ ಭೂ ಸ್ವಾಧೀನ ಪ್ರಕ್ರಿಯೆ ಯಾವ ರೀತಿ ಇರಬೇಕು?
ನಮ್ಮಲ್ಲಿ ವಿವಿಧ ಕ್ಷೇತ್ರಗಳ ತಜ್ಞರಿದ್ದು, ಇವರನ್ನು ಒಳಗೊಂಡ ಸಮಿತಿ ರಚಿಸಬೇಕು. ರಾಜ್ಯದಲ್ಲಿರುವ ಭೂಮಿಯನ್ನು ಕೃಷಿಗೆ ಯೋಗ್ಯವಾದ ಭೂಮಿ, ಉದ್ಯಮ ಸ್ಥಾಪನೆಗೆ ಪೂರಕವಾದ ಭೂಮಿ ಎಂದು ಜಿಲ್ಲಾವಾರು ವಿಂಗಡಿಸಬೇಕು. ಕೃಷಿ ಯೋಗ್ಯ ಭೂಮಿ ಹೊರತುಪಡಿಸಿ ಉಳಿದ ಭೂಮಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ನೀಡಬೇಕು. ನಗರಾಭಿವೃದ್ಧಿಗೂ ಭೂಮಿ ಮೀಸಲಿಡಬೇಕು. ತಮಿಳುನಾಡಿನಲ್ಲಿ ಈ ರೀತಿ ಗುರುತಿಸಿದ್ದು ಜಿಲ್ಲಾ ಮಟ್ಟದಲ್ಲೂ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ. ಈ ರೀತಿ ಆದರೆ ರೈತರಿಂದ ಯಾವುದೇ ಆಕ್ಷೇಪ ವ್ಯಕ್ತವಾಗುವುದಿಲ್ಲ. ಪ್ರಮುಖವಾಗಿ ರಾಜ್ಯದಲ್ಲಿ ‘ಭೂ ಬಳಕೆ ನೀತಿ’ ಜಾರಿಗೆ ತರಬೇಕು. ಇದರಿಂದ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ
ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !