ಕೋವಿಡ್‌, ಲಸಿಕೆಯಿಂದ ನರಮಂಡಲಕ್ಕೆ ಸಮಸ್ಯೆ: ನಿಮ್ಹಾನ್ಸ್‌ ಸಂಶೋಧನಾ ವರದಿ ಬಹಿರಂಗ

Kannadaprabha News, Govindaraj S |   | Kannada Prabha
Published : Jul 17, 2025, 10:39 AM ISTUpdated : Jul 18, 2025, 06:17 AM IST
Nimhans

ಸಾರಾಂಶ

ಸರಣಿ ವೈದ್ಯಕೀಯ ಸಂಶೋಧನೆಗಳಿಂದ ಕೋವಿಡ್‌-19 ಸೋಂಕು ಮತ್ತು ಕೋವಿಡ್‌ ಲಸಿಕೆಯಿಂದ ಮಾನವನ ನರಮಂಡಲ ಮತ್ತು ಮೆದುಳಿನ ಮೇಲೆ ನೇರ ಪರಿಣಾಮ ಆಗಿರುವುದು ಪತ್ತೆಯಾಗಿದೆ ಎಂದು ನಿಮ್ಹಾನ್ಸ್‌ ವೈದ್ಯರ ಸಂಶೋಧನಾ ವರದಿ ಬಹಿರಂಗಪಡಿಸಿದೆ.

ಬೆಂಗಳೂರು (ಜು.17): ಸರಣಿ ವೈದ್ಯಕೀಯ ಸಂಶೋಧನೆಗಳಿಂದ ಕೋವಿಡ್‌-19 ಸೋಂಕು ಮತ್ತು ಕೋವಿಡ್‌ ಲಸಿಕೆಯಿಂದ ಮಾನವನ ನರಮಂಡಲ ಮತ್ತು ಮೆದುಳಿನ ಮೇಲೆ ನೇರ ಪರಿಣಾಮ ಆಗಿರುವುದು ಪತ್ತೆಯಾಗಿದೆ ಎಂದು ನಿಮ್ಹಾನ್ಸ್‌ ವೈದ್ಯರ ಸಂಶೋಧನಾ ವರದಿ ಬಹಿರಂಗಪಡಿಸಿದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌)ಯ ನರ ರೋಗ ತಜ್ಞೆ ಡಾ। ಎಂ.ನೇತ್ರಾವತಿ ಅವರ ನೇತೃತ್ವದಲ್ಲಿ ನಡೆದಿರುವ ಅಧ್ಯಯನದಲ್ಲಿ ಈ ಮಾಹಿತಿ ಹೊರಬಿದ್ದಿದೆ. ಕೋವಿಡ್‌ ಸೋಂಕಿನ ಮೊದಲ ಅಲೆ ಮತ್ತು ನಂತರ ನೀಡಲಾಗಿದ್ದ ಕೋವಿಡ್ ಲಸಿಕೆಯಿಂದ ನರಮಂಡಲದ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಿದೆ ಎನ್ನುವ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿತ್ತು.

ನಿಮ್ಹಾನ್ಸ್‌ನಲ್ಲಿ 2020ರ ಮಾರ್ಚ್‌ ಮತ್ತು ಸೆಪ್ಟೆಂಬರ್‌ ಮಧ್ಯೆ ದಾಖಲಾಗಿದ್ದ 3200 ನರರೋಗಿ ಸಂಬಂಧಿತ ರೋಗಿಗಳನ್ನು ಅದ್ಯಯನಕ್ಕೆ ಒಳಪಡಿಸಲಾಗಿದ್ದು, ಈ ಪೈಕಿ 120 ಮಂದಿ ಕೋವಿಡ್‌ ಸೋಂಕಿಗೆ ಒಳಗಾಗಿದ್ದರು. ಅಲ್ಲದೇ ನರ ಸಂಬಂಧಿ ಸಮಸ್ಯೆಗಳನ್ನು ಅನುಭವಿಸಿದ್ದರು. ಇವರಲ್ಲಿ ಮೂರರಿಂದ 84 ವರ್ಷದ ಒಳಗಿನವರಿದ್ದು, ಸರಾಸರಿ 49 ವಯಸ್ಸಿನವರು ಹೆಚ್ಚಿದ್ದರು. ಹೆಚ್ಚಿನ ರೋಗಿಗಳು ತೀವ್ರ ಜ್ವರದ ಜೊತೆಗೆ ಪ್ರಜ್ಞೆ ತಪ್ಪುವುದು(ಶೇ.47), ವಾಸನೆ ರಹಿತ (ಶೇ.14.2) ರೀತಿಯ ಲಕ್ಷಣಗಳನ್ನು ಹೊಂದಿದ್ದರು. ಕೋವಿಡ್‌ ವೈರಸ್‌ ಸೋಂಕಿನಿಂದಾಗಿ ನೇರವಾಗಿ ನರಮಂಡಲಕ್ಕೆ ಸಮಸ್ಯೆ ಆಗಿದೆ ಎಂದು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.

ಕೋವಿಡ್‌ ಸೋಂಕಿತರು ಮತ್ತು ಕೋವಿಡ್‌ ಸೋಂಕಿಗೆ ಒಳಗಾದವರಲ್ಲಿ ನರ ಸಂಬಂಧಿ ಸಮಸ್ಯೆಗಳಿರುವುದನ್ನು ಪತ್ತೆ ಮಾಡಲಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಮೇಲೆ ದೀರ್ಘ ಕಾಲದ ನಿಗಾ ವಹಿಸುವ ಅಗತ್ಯತೆ ಇದೆ ಎಂದು ವೈದ್ಯರು ಸೂಚಿಸಿದ್ದಾರೆ. 2021ರ ಮೇ ತಿಂಗಳಿನಿಂದ ಡಿಸೆಂಬರ್‌ವರೆಗೆ ಕೋವಿಡ್‌ ಲಸಿಕೆ ಪಡೆದ 42 ದಿನಗಳ ಬಳಿಕ ನರ ರೋಗ ಸಮಸ್ಯೆಗೆ ಒಳಗಾಗಿ ನಿಮ್ಹಾನ್ಸ್‌ಗೆ ದಾಖಲಾದ 116 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಪೈಕಿ 29 ಮಂದಿಗೆ ವ್ಯಾಕ್ಸಿನ್‌ ನೀಡಿದ ಬಳಿಕ ಇಮ್ಯೂನ್‌ ಸಿಸ್ಟಂ ತೊಂದರೆಗೀಡಾಗಿ ನರರೋಗ ಸಮಸ್ಯೆ ಕಂಡು ಬಂದಿದೆ.

ಇದರಲ್ಲಿ 27 ಮಂದಿ ಕೋವಿಶೀಲ್ಡ್‌ ಲಸಿಕೆ ಪಡೆದವರಾಗಿದ್ದರೆ. ಇಬ್ಬರು ಕೋವ್ಯಾಕ್ಸಿನ್‌ ಲಸಿಕೆ ಪಡೆದವರಿದ್ದರು. ಇವರಿಗೆ ಮೊದಲ ಡೋಸ್‌ ಪಡೆದ 16 ದಿನಗಳ ಬಳಿಕ ತೊಂದರೆ ಎದುರಾಗಿತ್ತು. ಆದರೂ ಸಾರ್ವತ್ರಿಕವಾಗಿ ನೋಡಿದರೆ ಕೋವಿಡ್‌ ಸೋಂಕು ಮತ್ತು ಲಸಿಕೆಯಿಂದಾಗಿ ನರರೋಗ ಸಮಸ್ಯೆಗೀಡಾದವರ ಸಂಖ್ಯೆ ಆತ್ಯಲ್ಪ ಎಂದು ವರದಿಯಲ್ಲಿ ವೈದ್ಯರು ತಿಳಿಸಿದ್ದಾರೆ. ದೀರ್ಘ ಕೋವಿಡ್‌ ಪರಿಣಾಮಗಳ ಬಗ್ಗೆಯೂ ಅಧ್ಯಯನ ವರದಿಯಲ್ಲಿ ಹೇಳಲಾಗಿದ್ದು, ಕೆಲವರ ನಡವಳಿಕೆಯಲ್ಲಿ ವ್ಯತ್ಯಾಸಗಳು ಆಗಿರುವುದು ಕಂಡುಬಂದಿದೆ. ಆತಂಕ, ನಿರಾಸಕ್ತಿ, ನೆನಪಿನ ಶಕ್ತಿ ಕುಂದುವಿಕೆ ಇತ್ಯಾದಿ ಲಕ್ಷಣಗಳು ದೀರ್ಘ ಕೋವಿಡ್‌ನಿಂದ ಆಗಿರುವುದು ಪತ್ತೆಯಾಗಿದೆ.

ಶಿಫಾರಸುಗಳು: ಅಧ್ಯಯನ ವರದಿ ಆಧರಿಸಿ ನಿಮ್ಹಾನ್ಸ್‌ ಹಲವು ಶಿಫಾರಸುಗಳನ್ನು ಮಾಡಿದೆ. ಪ್ರಮುಖವಾಗಿ ದೇಶಾದ್ಯಂತ ಅಥವಾ ಪ್ರಾದೇಶಿಕವಾಗಿ ಕೋವಿಡ್‌ ಸೋಂಕು ಹಾಗೂ ಲಸಿಕೆ ನೀಡಿದ ನಂತರ ದೀರ್ಘಕಾಲಿನ ನರ ವೈಜ್ಞಾನಿಕ ಪರಿಣಾಮಗಳ ಬಗ್ಗೆ ರಿಜಿಸ್ಟ್ರರಿ ರಚಿಸಬೇಕು. ಆರೋಗ್ಯಕರ ಜೀವನಕ್ಕೆ ಪ್ರೋತ್ಸಾಹಿಸುವ ಮೂಲಕ ಮಿದುಳಿನ ಆರೋಗ್ಯ ಕಾಪಾಡುವ ಬಗ್ಗೆ ತಿಳಿಸಬೇಕು. ದೈಹಿಕ ಚಟುವಟಿಕೆ, ಸಾಕಷ್ಟು ನಿದ್ದೆಯ ಅಗತ್ಯತೆ ಬಗ್ಗೆ ತಿಳಿಸಬೇಕು. ಕೋವಿಡ್‌ ಹಾಗೂ ಲಸಿಕೆಯಿಂದ ದೀರ್ಘಕಾಲಿಕ ಪರಿಣಾಮಗಳ ಬಗ್ಗೆ ಭವಿಷ್ಯದ ಸಂಶೋಧನೆಗೆ ಜೈವಿಕ ಮಾದರಿ ಭಂಡಾರವನ್ನು ಕಾದಿರಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ