
ಉತ್ತರ ಕನ್ನಡ (ಜ.15): ರಾಜ್ಯದಲ್ಲಿ ಅರಣ್ಯ ಹಾಗೂ ತೋಟಗಾರಿಕೆ ಕಾಲೇಜುಗಳನ್ನು ಹೊಂದಿರುವ ಶಿರಸಿಯಲ್ಲಿ ಮೊಟ್ಟ ಮೊದಲ ಬಾರಿಗೆ ಸಮಗ್ರವಾಗಿ ಪರಿಸರ ಅಧ್ಯಯನ ಮಾಡುವ ಪರಿಸರ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ಶಿರಸಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಹಾಗೂ ತೋಟಗಾರಿಕೆ ಕಾಲೇಜುಗಳು ಇಲ್ಲಿರುವುದರಿಂದ ಇವೆರಡನ್ನೂ ಸಂಯೋಜಿಸಿ, ತೋಟಗಾರಿಕೆ, ಕೃಷಿ, ಜೀವ ವೈವಿಧ್ಯತೆ, ವನ್ಯಜೀವಿ ರಕ್ಷಣೆ, ಜನರ ಅಭಿವೃದ್ಧಿ, ಪರಿಸರ ಸಮತೋಲನ ಮಾಡುವ ಹಿನ್ನೆಲೆಯಲ್ಲಿ ಪರಿಸರ ವಿಶ್ವವಿದ್ಯಾಲಯವನ್ನು ಇಲ್ಲಿ ಸ್ಥಾಪಿಸುವುದು ಸೂಕ್ತ ಎಂದು ಭಾವಿಸಲಾಗಿದೆ ಎಂದರು. ಪರಿಸರ ವಿಶ್ವವಿದ್ಯಾಲಯದ ಜೊತೆಗೆ ಕಲಾ, ವಿಜ್ಞಾನ, ವಾಣಿಜ್ಯ ಮುಂತಾದ ಸಾಮಾನ್ಯ ಕಲಿಕೆಗೂ ಅವಕಾಶ ಕಲ್ಪಿಸಲಾಗುವುದು. ಸಂಯೋಜಿತ ವಿಶ್ವವಿದ್ಯಾಲಯದ ಇದಾಗಲಿದೆ. ವಿಶೇಷವಾಗಿ ಪರಿಸರದ ಬಗ್ಗೆ ಕೆಲಸ ಮಾಡಲಿದೆ. ಬರುವ ಬಜೆಟ್ ನಲ್ಲಿ ಅದಕ್ಕೆ ಅನುದಾನ ನೀಡಲಾಗುವುದು. ಈ ಭಾಗದ ಜನರಿಗೆ ಕೊಡುಗೆಯಾಗಿ ನೀಡಲಾಗುತ್ತಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸೊಲ್ಲ: ತಲೆ-ತಲಾಂತರದಿಂದ ನೆಲೆಸಿ, ಸಾಗುವಳಿ ಮಾಡಿರುವ ಅರಣ್ಯ ವಾಸಿಗಳ ಸಮಸ್ಯೆ ಸುಪ್ರೀಂಕೋರ್ಟ್ ನಲ್ಲಿ ಇದ್ದರೂ ಕೂಡ ಎಲ್ಲಾ ರಾಜ್ಯಗಳಲ್ಲಿ ಈ ಸಮಸ್ಯೆ ಇದೆ. ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇವೆ. ಮೂರು ತಲೆಮಾರುಗಳನ್ನು ತೆಗೆದುಕೊಳ್ಳುವ ಬದಲು ಒಂದೇ ತಲೆಮಾರನ್ನು ತೆಗೆದುಕೊಂಡು ಅರಣ್ಯ ವಾಸಿಗಳೆಂದು ನಿರ್ಣಯ ಮಾಡಿ ಹಕ್ಕುಪತ್ರಗಳನ್ನು ನೀಡಲು ವ್ಯವಸ್ಥೆ ಮಾಡಲು ರಾಜ್ಯದ ಅಭಿಪ್ರಾಯವನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಅದರ ಕೆಲಸ ವಾಗುತ್ತದೆ. ಕನ್ನಡ ನಾಡಿನ ಅರಣ್ಯವಾಸಿಗಳಿಗೆ ಯಾವುದೇ ಕಾರಣಕ್ಕೂ ಒಕ್ಕಲು ಎಬ್ಬಿಸುವ ಕೆಲಸ ವನ್ನು ರಾಜ್ಯ ಸರ್ಕಾರ ಮಾಡುವುದಿಲ್ಲ ಎಂದರು.
ತೊಂದರೆ ಕೊಡದಂತೆ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್: ರಾಜ್ಯದಲ್ಲಿ ಅಭಿವೃದ್ಧಿ ಜೊತೆಗೆ ಅರಣ್ಯ ಪ್ರದೇಶ ಹೆಚ್ಚಿಸಿ ಪರಿಸರ ಸಮತೋಲನ ಕಾಯ್ದುಕೊಳ್ಳಬೇಕು. ವಿಶೇಷವಾಗಿ ಇಲ್ಲಿ ಪ್ರವಾಹ, ಅಭಿವೃದ್ಧಿ ಯೋಜನೆ ನೀಡುವಾಗ ಅರಣ್ಯ ವಾಸಿಗಳ ಸಮಸ್ಯೆ ಎದುರಾಗುತ್ತಿದೆ. ಕಾನೂನಿನಲ್ಲಿ ಹಲವಾರು ಸಮಸ್ಯೆಗಳಿವೆ. ಪ್ರವಾಹ ಉಂಟಾದಾಗ ಅರಣ್ಯ ವಾಸಿಗಳಿಗೆ ಪರಿಹಾರ ನೀಡಿದ್ದೇವೆ. ಮನೆಯನ್ನು ಸಹ ನೀಡಿದ್ದೇವೆ. ಅರಣ್ಯ ನಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ಸಭೆಯಲ್ಲಿ ಸ್ಪಷ್ಟವಾಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ಯಾವುದೇ ರೀತಿಯ ತೊಂದರೆ ನೀಡಬಾರದೆಂದು ಸೂಚನೆ ನೀಡಲಾಗಿದೆ. ಯಾರೂ ಆತಂಕ ಪಡುವ ಪ್ರಶ್ನೆಯೇ ಇಲ್ಲ. ಎಲ್ಲಿಯೂ ಅವರಿಗೆ ತೊಂದರೆ ಮಾಡುವ ಪ್ರಶ್ನೆ ಇಲ್ಲ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಕಿರಿಕ್ ಕೊಟ್ಟ ಕುಡುಕ: ಬೇಕಂತಲೇ ಕುಡಿಸಿ ಕಳಿಸ್ತಾರೆ ಎಂದು ಆಕ್ರೋಶ
ವರಿಷ್ಠರ ಸೂಚನೆ ನಂತರವೇ ಸಚಿವ ಸಂಪುಟ ವಿಸ್ತರಣೆ: ಅದರ ಪ್ರಸ್ತಾವನೆ ಚರ್ಚೆಯಾಗಿದೆ. ವರಿಷ್ಠರು ಸೂಚನೆ ನೀಡಿದ ಕೂಡಲೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತಿಳಿಸಲಾಗುವುದು. ನಿಗಮ ಮಂಡಳಿಗಳ ನೇಮಕಾತಿ ಬಗ್ಗೆ ಉತ್ತರಿಸಿ, ಕೆಲವರ ಅವಧಿ ಮುಗಿದಿದೆ ಕೆಲವರದ್ದು ಮುಗಿದಿಲ್ಲ. ಪರಿಶೀಲನೆ ಮಾಡಿ ಅಧ್ಯಕ್ಷರು ಮತ್ತು ಸದಸ್ಯ ನೇಮಕ ಮಾಡಲಾಗುವುದು. ಇನ್ನು ಹೊಸ ಜಿಲ್ಲೆ ರಚನೆ ಬಗ್ಗೆ ಮನವಿ, ಮನವರಿಕೆ ಮಾಡಿಕೊಟ್ಟಿದ್ದಾರೆ. ಇಡೀ ರಾಜ್ಯದಲ್ಲಿ ಈ ರೀತಿಯ ಬೇಡಿಕೆಗಳಿವೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡುವ ಅವಶ್ಯಕತೆ ಇದೆ. ಸಾಧಕ ಬಾಧಕಗಳನ್ನು ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ