ದುರ್ಗಾ ದೇವಸ್ಥಾನಕ್ಕೆ ನುಗ್ಗಿ ದಾಂಧಲೆ; ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

By Kannadaprabha NewsFirst Published Jul 18, 2023, 7:06 AM IST
Highlights

ಕ್ಯಾಂಪಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿರುವುದು ಸ್ವಾಗತಾರ್ಹ. ಇನ್ನುಳಿದ ಎಲ್ಲರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಬಂಗಾಲಿ ಸಮುದಾಯದ ಜನರಿಗೆ ಸೂಕ್ತ ಪೊಲೀಸ್‌ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಸಿಂಧನೂರು (ಜು.18) :  ತಾಲೂಕಿನ ಆರ್‌.ಎಚ್‌ ಕ್ಯಾಂಪ್‌ ನಂ. 2ರಲ್ಲಿರುವ ದುರ್ಗಾದೇವಿ ದೇವಸ್ಥಾನದೊಳಗೆ ನುಗ್ಗಿ ನಮಾಜ್‌ ಮಾಡಿ, ಅಲ್ಲಿದ್ದ ಮಹಿಳೆಯರು, ಪುರುಷರ ಮೇಲೆ ಹಲ್ಲೆ ಎಸಗಿ ದೌರ್ಜನ್ಯ ಮಾಡಿರುವ ಎಲ್ಲ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಆರ್‌.ಎಚ್‌ ನಂ.1, 2, 3 ಮತ್ತು 4 ಕ್ಯಾಂಪ್‌ಗಳ ಬಂಗಾಲಿ ನಿವಾಸಿಗಳು ಸೋಮವಾರ ನಗರದ ಮಿನಿವಿಧಾನಸೌಧ ಕಚೇರಿಯ ಮುಂದೆ ಬೃಹತ್‌ ಪ್ರತಿಭಟನೆ ನಡೆಸಿದರು.

ಜನಕಲ್ಯಾಣ ಸಂಘದ ಸಂಚಾಲಕ ಪ್ರಸೆನ್‌ ರಫ್ತಾನ್‌ ಮಾತನಾಡಿ, ಆರ್‌.ಎಚ್‌ ಕ್ಯಾಂಪ್‌ ನಂ. 2ರ 9ನೇ ತರಗತಿಯ ಬಾಲಕಿಗೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದ ಮೂಲಕ ಚುಡಾಯಿಸಿದ್ದಾರೆ. ಅಲ್ಲದೆ ಸುಮಾರು 60ಕ್ಕೂ ಅಧಿಕ ಯುವಕರ ಗುಂಪು ಕ್ಯಾಂಪ್‌ಗೆ ದುರ್ಗಾದೇವಿ ದೇವಸ್ಥಾನದ ಬಾಗಿಲು ಮುಂದೆ ನಮಾಜ್‌ ಮಾಡಿ, ಗುಡಿಯೊಳಗೆ ಪ್ರವೇಶಿಸಲು ಪ್ರಯತ್ನಿಸಿದಾಗ ತಡೆಯಲು ಮುಂದಾದ ಮಹಿಳೆಯರು, ಪುರುಷರ ಮೇಲೆ ದುಷ್ಕರ್ಮಿಗಳು ಹಲ್ಲೆ ಎಸಗಿರುವುದು ಖಂಡನೀಯ. ಇದಲ್ಲದೆ ಸಿಂಧನೂರಿನ ಶಾಲಾ-ಕಾಲೇಜಿಗೆ ಬರುವ ಬಂಗಾಲಿ ವಿದ್ಯಾರ್ಥಿನಿಯರನ್ನು ರೇಪ್‌ ಮಾಡುತ್ತೇವೆ, ವಿದ್ಯಾರ್ಥಿಗಳನ್ನು ಹೊಡೆಯುತ್ತೇವೆಂದು ಬೆದರಿಕೆ ಹಾಕಿದ್ದಾರೆ ಎಂದು ವಿವರಿಸಿದರು.

ಬಾಗಲಕೋಟೆಯಲ್ಲಿ ಕೋಮುಗಲಭೆ: ಏಳು ಮಂದಿಗೆ ಗಾಯ

ಈ ಘಟನೆಯಿಂದ ಕ್ಯಾಂಪಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿರುವುದು ಸ್ವಾಗತಾರ್ಹ. ಇನ್ನುಳಿದ ಎಲ್ಲರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಬಂಗಾಲಿ ಸಮುದಾಯದ ಜನರಿಗೆ ಸೂಕ್ತ ಪೊಲೀಸ್‌ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್‌ ಅರುಣ್‌ ಎಚ್‌. ದೇಸಾಯಿ ಮನವಿ ಪತ್ರ ಸ್ವೀಕರಿಸಿದರು. ನಗರಸಭೆ ಸದಸ್ಯರಾದ ಕೆ. ರಾಜಶೇಖರ, ಕೆ. ಹನುಮೇಶ, ಬಿಜೆಪಿ ಮುಖಂಡರಾದ ಈರೇಶ ಇಲ್ಲೂರು, ಸುರೇಶ ಹಚ್ಚೊಳ್ಳಿ, ಸುರೇಶ ಸಿದ್ದಾಪುರ, ಸೋಮಣ್ಣ ಪತ್ತಾರ, ರವಿಕುಮಾರ ಉಪ್ಪಾರ, ಬಂಗಾಲಿ ಸಮುದಾಯದ ಮುಖಂಡರಾದ ಸಹದೇವ ಮಾಲಿ, ಪ್ರಣಬ್‌ ಬಾಲಾ, ಅಮುಲ್‌ ಮಂಡಲ್‌, ಸುನೀಲ್‌ ಮೇಸ್ತ್ರಿ, ಜಗದೀಶ ಬವಾಲಿ, ಕೃಷ್ಣರಾಧ ವಿಶ್ವಾಸ, ಅಭಿಮನ್ಯು ಮಂಡಲ್‌, ಇಂದ್ರಜಿತ್‌ ಸೇರಿದಂತೆ 400ಕ್ಕೂ ಅಧಿಕ ಬಂಗಾಲಿಗರು ಇದ್ದರು.

ಸಮಾಜದ ಶಾಂತಿ ಕದಡುವ ಕೆಲಸ ಯಾರೂ ಮಾಡಬೇಡಿ

ಸಿಂಧನೂರು:  ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಯಾರು ಮಾಡಬಾರದು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

ನಗರದ ಸುಕಾಲಪೇಟೆಯ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಯುವಕರಿಗೆ ಈ ದೇಶವನ್ನು ಇಸ್ಲಾಂ ರಾಷ್ಟ್ರ ಮಾಡಬೇಕೆಂಬ ಗ್ಯಾಂಗ್‌ವೊಂದು ವಿಷಬೀಜ ಬಿತ್ತಿ ಕುಮ್ಮಕ್ಕು ನೀಡುತ್ತಿದೆಂಬ ಅನುಮಾನ ಮೂಡಿದೆ. ಆದ್ದರಿಂದಲೇ ಈ ಹಿಂದೆ ಸಾಲಗುಂದಾದಲ್ಲಿ ಹಿಂದೂ-ಮುಸ್ಲಿಂ ಗಲಭೆ ನಡೆದಿತ್ತು. ಈಗ ಆರ್‌.ಎಚ್‌ ನಂ.2 ಕ್ಯಾಂಪ್‌ಗೆ ಮುಸ್ಲಿಂ ಯುವಕರ ಗುಂಪು ನುಗ್ಗಿ ದಾಂಧಲೆ ನಡೆಸಿರುವುದು ಖಂಡನೀಯ ಎಂದರು.

ಇನ್‌ಸ್ಟಾಗ್ರಾಂನಲ್ಲಿ ಅಲ್ಲಾಹ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿರುವ ಕುರಿತು ಪೊಲೀಸ್‌ ಠಾಣೆಗೆ ದೂರು ನೀಡಿದ್ದರೆ ಕಾನೂನು ವ್ಯಾಪ್ತಿಯಲ್ಲಿ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸುತ್ತಿದ್ದರು. ಬದಲಿಗೆ ಗಲಭೆ ಸೃಷ್ಟಿಸಿ ಈ ಭಾಗವನ್ನು ಕರಾವಳಿ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಹೇಳಿದರು.

ಸಿಂಧನೂರು: ಅಶ್ಲೀಲ ಮೆಸೇಜ್ 2 ಕೋಮುಗಳ ನಡುವೆ ಘರ್ಷಣೆ, ಪರಿಸ್ಥಿತಿ ಉದ್ವಿಗ್ನ!

ಕೋಮು ಪ್ರಚೋದನೆ ನೀಡಿ ಗಲಭೆ ಸೃಷ್ಟಿಸಿ, ಶಾಂತಿ ಸೌಹಾರ್ದತೆಗೆ ಧಕ್ಕೆ ತರುವ ಶಕ್ತಿಗಳನ್ನು ಪೊಲೀಸ್‌ ಇಲಾಖೆ ಹತ್ತಿಕ್ಕಬೇಕು. ಇಂತಹ ಘಟನೆಗಳು ಮರುಕಳಿಸದಂತೆ ನಿಗಾ ವಹಿಸಬೇಕು. ಬಂಗಾಲಿ ನಿವಾಸಿಗಳಿಗೆ ತಾಲೂಕಾಡಳಿತ, ಪೊಲೀಸ್‌ ಇಲಾಖೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಕೆ. ಮರಿಯಪ್ಪ, ಹನುಮೇಶ ಸಾಲಗುಂದಾ, ಸುರೇಶ ಸಿದ್ದಾಂಪುರ ಇದ್ದರು.

click me!