
ಹೊಸಪೇಟೆ[ಜ.07]: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿಗೆ ಬಂದ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಕಪ್ಪು ಬಾವುಟ ಪ್ರದರ್ಶಿಸಿ, ಗೋ ಬ್ಯಾಕ್, ಗೋ ಬ್ಯಾಕ್ ಎಂದು ಕೂಗಿ ಘೇರಾವ್ ಹಾಕಿದ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆಯ ಚಲವಾದಿ ಕೇರಿಯಲ್ಲಿ ಸೋಮವಾರ ನಡೆಯಿತು.
ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ನಲತ್ವಾಡ ಮತ್ತು ಬಿಜೆಪಿ ಮಹಿಳಾ ಮುಖಂಡರಾದ ಕವಿತಾ ಈಶ್ವರ್ ಸಿಂಗ್ ನೇತೃತ್ವದಲ್ಲಿ ನಗರದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಜನಜಾಗೃತಿ ಅಭಿಯಾನ ನಡೆಸಲು ಚಲವಾದಿ ಕೇರಿ ದ್ವಾರ ಬಾಗಿಲು ಬಳಿ ಹೋದಾಗ ಸ್ಥಳೀಯ ವಾರ್ಡ್ ಮುಖಂಡರು, ಯುವಕರು, ಅಲ್ಪಸಂಖ್ಯಾತ ಮುಖಂಡರು ಬಿಜೆಪಿಯವರನ್ನು ತಡೆದು ನಿಲ್ಲಿಸಿ, ನಮ್ಮ ಓಣಿಗೆ ಬರುವುದು ಬೇಡ, ನಮಗೆ ಪೌರತ್ವದ ಬಗ್ಗೆ ತಿಳಿದಿದೆ ಎಂದು ಹೇಳಿದರು.
ಆಗ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮಾತನಾಡಿ, ನಾವು ಪೌರತ್ವ ಕಾಯ್ದೆಯ ಕುರಿತು ಕರಪತ್ರಗಳನ್ನು ಕೊಟ್ಟು ಹೋಗಲು ಬಂದಿದ್ದೇವೆ. ಅದಕ್ಕೆ ನೀವ್ಯಾಕೆ ತಡೆಯುತ್ತೀರಿ? ನಮಗೆ ಅವಕಾಶ ಕಲ್ಪಿಸಿಕೊಡಿ ಎಂದು ಸ್ಥಳೀಯ ಯುವಕರಿಗೆ ಹೇಳಿದರು. ಪರಸ್ಪರ ವಾಗ್ವಾದ ನಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಮಧ್ಯಪ್ರವೇಶಿಸಿ, ಪರಿಸ್ಥಿತಿ ನಿಭಾಯಿಸಿ, ಗುಂಪು ಚದುರಿಸಿದರು. ಬಿಜೆಪಿ ಮುಖಂಡರು ವಾಪಸ್ ಹೋದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ