KSRTC:ತಿಂಗಳಾಂತ್ಯದಲ್ಲಿ ಕೆಎಸ್‌ಆರ್ ಟಿಸಿಗೂ ಬರಲಿವೆ ಎಲೆಕ್ಟ್ರಿಕ್ ಬಸ್‌ಗಳು..!

By Sathish Kumar KHFirst Published Nov 15, 2022, 6:34 PM IST
Highlights

ಹಲವು ವರ್ಷಗಳಿಂದ ಬಸ್‌ಗಳನ್ನು ಡೀಸೆಲ್‌ (Diesel)ಇಂಧನದ ಮೂಲಕ ಚಾಲನೆ ಮಾಡುತ್ತಿದ್ದ ಸಾರಿಗೆ ನಿಗಮಗಳು ಹೆಚ್ಚು ಆರ್ಥಿಕ ನಷ್ಟವನ್ನು (Finance Loss) ಅನುಭವಿಸಿವೆ. ಈಗ ಆರ್ಥಿಕ ನಷ್ಟದಿಂದ ಹೊರಬರುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೂ (ಕೆಎಸ್‌ಆರ್‍‌ಟಿಸಿ) ವಿದ್ಯುತ್‌ ಚಾಲಿತ ಬಸ್‌ಗಳನ್ನು ಬಳಸಲು ಮುಂದಾಗಿದೆ. ಈ ತಿಂಗಳಾಂತ್ಯದಲ್ಲಿ 50 ಎಲೆಕ್ಟ್ರಿಕ್‌ ಬಸ್‌ಗಳು ರಾಜ್ಯ ಸಾರಿಗೆ ನಿಗಮದಿಂದ ಸಂಚಾರ ಆರಂಭಿಸಲಿವೆ.

ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ನ.15): ಡಿಸೇಲ್ ವಾಹನಗಳ ಪರ್ವ ಮುಗಿಯಿತು. ಇನ್ನೇನಿದ್ದರೂ ಎಲೆಕ್ಟ್ರಿಕ್ ವಾಹನಗಳದ್ದೇ ದರ್ಬಾರ್ ಆಗಲಿದೆ. ದೇಶದ ಎಲ್ಲಾ ಸಾರಿಗೆ ನಿಗಮಗಳು ಎಲೆಕ್ಟ್ರಿಕ್ ಬಸ್ ನತ್ತ ಚಿತ್ತ ಹರಿಸಿವೆ. ಈಗಾಗಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಆಗಮಿಸಿರುವ ವಿದ್ಯುತ್‌ ಚಾಲಿತ ಬಸ್‌ಗಳು ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ. ಈಗ ತಿಂಗಳಾಂತ್ಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೂ (ಕೆಎಸ್‌ಆರ್‍‌ಟಿಸಿ) ವಿದ್ಯುತ್‌ ಚಾಲಿತ ಬಸ್‌ಗಳು ಲಗ್ಗೆ ಇಡಲಿವೆ.

ಹಲವು ವರ್ಷಗಳಿಂದ ಬಸ್‌ಗಳನ್ನು ಡೀಸೆಲ್‌ (Diesel)ಇಂಧನದ ಮೂಲಕ ಚಾಲನೆ ಮಾಡುತ್ತಿದ್ದ ಸಾರಿಗೆ ನಿಗಮಗಳು ಹೆಚ್ಚು ಆರ್ಥಿಕ ನಷ್ಟವನ್ನು (Finance Loss) ಅನುಭವಿಸಿವೆ. ಆಡುಭಾಷೆಯಲ್ಲಿ ಹೇಳುವುದಾದರೆ ಬರ್ಬಾದ್‌ ಆಗಿವೆ. ಈಗ ನಷ್ಟದಿಂದ ಹೊರಬರಲು ದಾರಿ ಕಂಡುಕೊಳ್ಳುತ್ತಿದ್ದು, ವಿದ್ಯುತ್‌ ಮತ್ತು ಬ್ಯಾಟರಿ ಚಾಲಿತ ಬಸ್‌ಗಳನ್ನು ಬಳಸುವತ್ತ ತನ್ನ ಚಿತ್ತವನ್ನು ಹರಿಸಿದೆ. ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು ಸಂಚಾರ ಮಾಡುತ್ತಾ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ಗಳಿಸಿಕೊಂಡಿರುವ ಎಲೆಕ್ಟ್ರಿಕ್ ಬಸ್‌ (Electric Bus)ಗಳು ಇದೇ ಮಾಸಾಂತ್ಯದಲ್ಲಿ ಕೆಎಸ್‌ಆರ್‍‌ಟಿಸಿಯಲ್ಲೂ ಸೇವೆ ನೀಡುವುದಕ್ಕೆ ಬರುತ್ತಿದೆ. 

ಕೆಎಸ್‌ಆರ್‌ಟಿಸಿ ಮೊದಲ ಎಲೆಕ್ಟ್ರಿಕ್‌ ಬಸ್‌ ಸಂಚಾರ ಶೀಘ್ರ

50 ಬಸ್‌ಗಳ ಆಗಮನ: ಕೆಎಸ್‌ಆರ್‍‌ಟಿಸಿಗೆ ಒಟ್ಟು 50 ಎಲೆಕ್ಟ್ರಿಕ್ ಬಸ್ ಗಳು ಸೇರ್ಪಡೆ ಆಗಮಿಸುತ್ತಿವೆ. ಈಗ ಬರಲಿರುವ ಬಸ್‌ಗಳನ್ನ ಬೆಂಗಳೂರು- ಮೈಸೂರು (Bangalore-Mysore), ತುಮಕೂರು, ಕೋಲಾರ, ಹಾಸನ ಸೇರಿದಂತೆ ಬೆಂಗಳೂರಿನಿಂದ 200 ಕಿ.ಮೀ ವ್ಯಾಪ್ತಿಯಲ್ಲಿನ ನಗರಗಳಿಗೆ ಸೇವೆ ಕಲ್ಪಿಸಲು ನಿಗಮ ಉದ್ದೇಶಿಸಿದೆ. ಇದರಿಂದ ಬಸ್‌ಗಳು ಒಂದು ಚಾರ್ಜಿಂಗ್‌ನಿಂದ ಎಷ್ಟು ಕಿ.ಮೀ.ವರೆಗೆ ಸಂಚಾರ ಮಾಡಲಿವೆ ಎಂಬುದು ನೈಜವಾಗಿ ತಿಳಿಯುತ್ತದೆ. ಇದು ಯಶಸ್ವಿಯಾದ ನಂತರ ಮುಂದಿನ ಹಂತಗಳಲ್ಲಿ ದೂರದ ಪ್ರದೇಶಗಳಿಗೂ (Long Distance) ಸಂಚರಿಸಲು ಕ್ರಮ ಕೂಗೊಳ್ಳಲು ಚಿಂತನೆ ನಡೆಸಿದೆ.

ನಿರ್ವಹಣೆ ವೆಚ್ಚ ಕಡಿಮೆ: ವಿದ್ಯುತ್‌ ಬ್ಯಾಟರಿ ಚಾಲಿತ ಬಸ್‌ಗಳು ಪರಿಸರ ಸ್ನೇಹಿಯಾಗಿದ್ದು, ನಿರ್ವಹಣೆ (Maintenance) ಮತ್ತು ಕಾರ್ಯಾಚರಣೆ (Operation) ವೆಚ್ಚ ಕೂಡ ಡೀಸೆಲ್‌ ಇಂಧನದ ಬಸ್‌ಗಳಿಗಿಂತ ಕಡಿಮೆಯಾಗಿದೆ.  ವಿದ್ಯುತ್ ಚಾಲಿತ ಬಸ್‌‌ಗಳಿಂದ ಶಬ್ದವೂ ಇಲ್ಲ, ಹೊಗೆಯೂ ಇರುವುದಿಲ್ಲ. ಹಾಗಾಗಿ ಇದು ಶಬ್ದಮಾಲಿನ್ಯ (Sound Pollution) ಹಾಗೂ  ವಾಯು ಮಾಲಿನ್ಯ (Air Pollution) ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಪರಿಸರ ಹಾನಿ ಹಾಗೂ ಡಿಸೇಲ್ ಬಸ್‌ಗಳ ಹೊರೆ ತಗ್ಗಿಸಲು ಕೆಎಸ್‌ಆರ್‍‌ಟಿಸಿ ಈಗ ದುಬಾರಿ ಬೆಲೆಯ ಬಸ್ ಗಳ ಖರೀದಿಗೆ ಕೈಹಾಕಿದೆ. ಈಗ ನಿಗಮದ ಸಿಬ್ಬಂದಿಗೆ ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಹಣೆ ತರಬೇತಿ ನೀಡಲಾಗುತ್ತಿದ್ದು, ಪ್ರಮುಖ ಡಿಪೋಗಳಲ್ಲಿ ಬಸ್‌ಗಳ ಚಾರ್ಜಿಂಗ್‌ ಪಾಯಿಂಟ್‌ (Charging point) ವ್ಯವಸ್ಥೆ ಮಾಡಲಾಗುತ್ತಿದೆ. ನಂತರ ಸಂಬಂಧಪಟ್ಟ ಡಿಪೋಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗುತ್ತದೆ. 

ಆ.15ರಂದು ಮತ್ತೆ 75ಎಲೆಕ್ಟ್ರಿಕ್‌ ಬಸ್‌ಗಳು ರಸ್ತೆಗೆ, ಯಲಹಂಕದಿಂದ ಆರಂಭ

ಕೇಂದ್ರದಿಂದ ಅನುದಾನ: ಅಂತರ ನಗರ (Inter City) ಸೇವೆಗೆ ವಿದ್ಯುತ್‌ ಬ್ಯಾಟರಿ ಚಾಲಿತ ಬಸ್ ಗಳನ್ನ ಖರೀದಿಸಲು ಕೇಂದ್ರ ಸರ್ಕಾರವು ಅನುದಾನ (Grant) ನೀಡಿದೆ. ಮೊದಲ ಹಂತದಲ್ಲಿ 25 ಬಸ್ ಬರಲಿದ್ದು, ಬಳಿಕ ಹಂತ ಹಂತವಾಗಿ ಹೆಚ್ಚಿನ ಬಸ್ ಸೇರ್ಪಡೆ ಆಗಲಿವೆ. ಒಂದು ಬಸ್‌ಗೆ 6 ಗಂಟೆ ಜಾರ್ಜ್ ಮಾಡಿದರೆ 250 ಕಿ.ಮೀ. ಸಂಚಾರ ಮಾಡುತ್ತದೆ. ಬಸ್ ನಲ್ಲಿ 30 ಆಸನಗಳಿದ್ದು, ಪ್ರತಿ ಕಿ. ಮೀಟರ್ ಗೆ 1.2 ಕಿಲೋ ವ್ಯಾಟ್​ ವಿದ್ಯುತ್ ಬಳಕೆಯಾಗುತ್ತದೆ. ಈಗಾಗಲೇ ಬೆಂಗಳೂರು ಮಹಾನಗರ ಸಾರಿಗೆಯು ಎನ್‌ಟಿಪಿಸಿಎಲ್‌, ಅಶೋಕ ಲೈಲ್ಯಾಂಡ್‌ ಕಂಪನಿಯಿಂದ ಎಲೆಕ್ಟ್ರಿಕ್‌ ಬಸ್‌ಗಳನ್ನು ಖರೀದಿ ಮಾಡಿ ನಷ್ಟ ಅನುಭವಿಸಿದೆ ಎಂದು ಹೇಳಲಾಗುತ್ತಿದೆ. ಈಗ ಕೆಎಸ್‌ಆರ್‍‌ಟಿಸಿ ಕೂಡ ಅವಿವೇಕತನದಿಂದಲೋ ಅಥವಾ ಕಮಿಷನ್ ಆಸೆಯಿಂದಲೋ ಎಲೆಕ್ಟ್ರಿಕ್ ಬಸ್‌ಗಳ ಖರೀದಿಸುತ್ತಿದೆ. ಆದರೆ, ಇದು ನಿಗಮಕ್ಕೆ ವರದಾನ (Boon) ಅಗುತ್ತದೆಯೇ ಅಥವಾ ಶಾಪ (Curse) ಆಗುತ್ತದೆಯೋ ಎನ್ನುವುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.
 

click me!