ಹುಲಿ ಯೋಜನೆ ಕಾರ್ಯಕ್ರಮಕ್ಕೆ ಮೋದಿ ಮೈಸೂರು ಭೇಟಿ; ₹3.3 ಕೋಟಿ ಬಿಲ್‌ ಬಾಕಿ!

By Kannadaprabha News  |  First Published May 26, 2024, 7:09 AM IST

ಕಳೆದ ವರ್ಷ ಏಪ್ರಿಲ್‌ನಲ್ಲಿ ಮೈಸೂರಿನಲ್ಲಿ ಆಯೋಜಿಸಿದ್ದ ಹುಲಿ ಯೋಜನೆ 50ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪ್ರಧಾನಿ ಮೋದಿ ಅವರ ಆತಿಥ್ಯದ ಬಿಲ್‌ ಬಾಕಿ ಪಾವತಿಸಲು ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿದರು.


ಬೆಂಗಳೂರು (ಮೇ.26): ಕಳೆದ ವರ್ಷದ ಏಪ್ರಿಲ್‌ನಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಮೈಸೂರಿನಲ್ಲಿ ಆಯೋಜಿಸಿದ್ದ ಹುಲಿ ಯೋಜನೆ 50ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯದ ಬಿಲ್‌ ಬಾಕಿಯನ್ನು ಪಾವತಿಸಲು ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ(PM Modi) ಮೈಸೂರು ಭೇಟಿಯ ಸಮಯದಲ್ಲಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಸೇವೆಯನ್ನು ಬಳಸಿಕೊಳ್ಳಲಾಗಿತ್ತು. ಅದರ ವೆಚ್ಚ 6.33 ಕೋಟಿ ರು. ಆಗಿತ್ತು. ಅದು ಪಾವತಿಯಾಗಿಲ್ಲ ಎಂಬ ದೂರುಗಳು ಕೇಳಿಬಂದಿರುವುದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಈಶ್ವರ್‌ ಖಂಡ್ರೆ, ಹುಲಿ ಯೋಜನೆ ಕಾರ್ಯಕ್ರಮ ಏಪ್ರಿಲ್‌ನಲ್ಲಿ ನಡೆದಿದ್ದು, ಆ ಸಂದರ್ಭದಲ್ಲಿ ವಿಧಾನಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿತ್ತು. ಹೀಗಾಗಿ ಆ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರ ಭಾಗಿಯಾಗಿರಲಿಲ್ಲ ಹಾಗೂ ರಾಜ್ಯ ಲಾಂಛನವೂ ಬಳಕೆಯಾಗಿರಲಿಲ್ಲ. ಸಂಪೂರ್ಣವಾಗಿ ಎನ್‌ಟಿಸಿಎ ಕಾರ್ಯಕ್ರಮ ಆಯೋಜಿಸಿತ್ತು. ದೇಶದ ಪ್ರಧಾನಿ ರಾಜ್ಯಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಆತಿಥ್ಯ ನಿರ್ವಹಣೆಗಾಗಿ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳೂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸ್ಥಳೀಯವಾಗಿ ಸಮಿತಿ ರಚಿಸಲಾಗಿತ್ತು. ಅದನ್ನು ಹೊರತುಪಡಿಸಿ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಯ ಪಾತ್ರ ಇದರಲ್ಲಿ ಇಲ್ಲ. ಅಲ್ಲದೆ, ಕಾರ್ಯಕ್ರಮ ಮತ್ತು ಆತಿಥ್ಯದ ಸಂಪೂರ್ಣ ವೆಚ್ಚವನ್ನು ಎನ್‌ಟಿಸಿಎ ಭರಿಸುವುದಾಗಿ ತಿಳಿಸಿತ್ತು. ಹೀಗಾಗಿ ಆ ಕಾರ್ಯಕ್ರಮದ ಬಗ್ಗೆ ನಾವು ಯಾವುದೇ ಜವಾಬ್ದಾರರಲ್ಲ ಎಂದರು.

Tap to resize

Latest Videos

ಪ್ರಧಾನಿಗಳು ಜನ ಸಾಮಾನ್ಯರ ದೂತರೇ ಹೊರತು ದೇವದೂತರಲ್ಲ: ಎಚ್ ಸಿ ಮಹದೇವಪ್ಪ

ಕಾರ್ಯಕ್ರಮಕ್ಕೆ ಒಟ್ಟು 6.33 ಕೋಟಿ ರು. ವೆಚ್ಚವಾಗಿದ್ದು, ಅದರಲ್ಲಿ ಎನ್‌ಟಿಸಿಎ ಈಗಾಗಲೆ 3 ಕೋಟಿ ರು. ನೀಡಿದೆ. ಇನ್ನೂ 3.33 ಕೋಟಿ ರು. ಬಾಕಿ ಬರಬೇಕಿದೆ. ಅದರಲ್ಲಿ ಖಾಸಗಿ ಹೋಟೆಲ್‌ನ ಆತಿಥ್ಯ ವೆಚ್ಚ 80 ಲಕ್ಷ ರು. ಕೂಡ ಸೇರಿದೆ. ಇದೀಗ ಆ ಬಿಲ್‌ ಬಾಕಿ ಉಳಿದಿರುವ ಬಗ್ಗೆ ಚರ್ಚೆಯಾಗುತ್ತಿದೆ. ಅಲ್ಲದೆ, ಈ ಬಾಕಿ ಬಿಲ್‌ ಪಾವತಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಎನ್‌ಟಿಸಿಎ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದಿದ್ದು, ದೂರವಾಣಿ ಕರೆಯನ್ನೂ ಮಾಡಲಾಗಿದೆ. ಆದರೂ, ಎನ್‌ಟಿಸಿಎ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಈ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಸೌಹಾರ್ದಯುತವಾಗಿ ಬಾಕಿ ಬಿಲ್‌ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಈ ಬಗ್ಗೆ ಸರ್ಕಾರದ ಮಟ್ಟದಲ್ಲೂ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.

click me!