Raita Ratna Award: ಗಾಳಿ, ನೀರಿನಷ್ಟೇ ರೈತರು ಅವಶ್ಯ: ರವಿ ಹೆಗಡೆ

By Kannadaprabha NewsFirst Published Mar 18, 2023, 12:03 PM IST
Highlights

ಅನ್ನದಾತನನ್ನು ನಿರ್ಲಕ್ಷಿಸಿ ಜನಪ್ರಿಯರು, ಹಣವಂತರ ಹಿಂದೆ ಹೋಗುತ್ತೇವೆ. ಆದರೆ, ಬೆಳೆ ಬೆಳೆವ ರೈತ ಒಮ್ಮೆ ಮಳೆ ಬಂದು, ಇನ್ನೊಮ್ಮೆ ಮಳೆ ಬಾರದೆ ನಷ್ಟ ಅನುಭವಿಸುತ್ತಾನೆ. ಮಳೆ, ಬೆಳೆ ಎರಡೂ ಬಂದರೆ ಬೆಲೆ ಬಾರದೆ ಸಂಕಷ್ಟಕ್ಕೆ ಒಳಗಾಗುತ್ತಾನೆ. ಹೀಗೆ ಎಲ್ಲ ರೀತಿಯ ಸಮಸ್ಯೆಗಳನ್ನು ಎದುರಿಸುವ ರೈತರಿಗೆ ಆದ್ಯತೆ ನೀಡಬೇಕಾದುದು ನಮ್ಮ ಕರ್ತವ್ಯ: ರವಿ ಹೆಗಡೆ 

ಬೆಂಗಳೂರು(ಮಾ.18):  ಬದುಕಿನ ಮೂಲಭೂತಗಳಷ್ಟೇ ಅವಶ್ಯವಾದರೂ ಸದಾ ಸಂಕಷ್ಟದಲ್ಲಿರುವ ರೈತರಿಗೆ ಆದ್ಯತೆ ನೀಡಲು ‘ರೈತ ರತ್ನ’ ಪ್ರಶಸ್ತಿ ಮೂಲಕ ಕೃಷಿ ಕ್ಷೇತ್ರದ ಅತ್ಯುತ್ತಮ ಮಾದರಿಗಳನ್ನು ಸಮಾಜದೆದುರು ಪ್ರಸ್ತುತಪಡಿಸಲಾಗುತ್ತಿದೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌-ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.

ರಾಜಕಾರಣಿಗಳು, ಕ್ರಿಕೆಟ್‌, ಸಿನಿಮಾ ತಾರೆಯರು, ಮಾಧ್ಯಮಗಳು ಇಲ್ಲದಿದ್ದರೂ ನಡೆಯುತ್ತದೆ. ಆದರೆ, ರೈತರು ಇಲ್ಲದಿದ್ದರೆ ಆಗಲ್ಲ. ಗಾಳಿ, ನೀರು, ಆಹಾರದಷ್ಟೇ ಅವಶ್ಯರಾದ ರೈತರು ಸದಾ ಸಂಕಷ್ಟದಲ್ಲೇ ಇರುವುದು ವಿಪರಾರ‍ಯಸ. ಅವರು ನಮ್ಮ ಮೂಲಭೂತ ಅಗತ್ಯವಾದರೂ ನಮ್ಮ ಮಹತ್ವ ಕೇವಲ ದೌಲತ್ತಿಗೆ ಸೀಮಿತವಾಗುತ್ತಿದೆ. ಈ ಕಹಿ ಸತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅನ್ನದಾತನನ್ನು ನಿರ್ಲಕ್ಷಿಸಿ ಜನಪ್ರಿಯರು, ಹಣವಂತರ ಹಿಂದೆ ಹೋಗುತ್ತೇವೆ. ಆದರೆ, ಬೆಳೆ ಬೆಳೆವ ರೈತ ಒಮ್ಮೆ ಮಳೆ ಬಂದು, ಇನ್ನೊಮ್ಮೆ ಮಳೆ ಬಾರದೆ ನಷ್ಟ ಅನುಭವಿಸುತ್ತಾನೆ. ಮಳೆ, ಬೆಳೆ ಎರಡೂ ಬಂದರೆ ಬೆಲೆ ಬಾರದೆ ಸಂಕಷ್ಟಕ್ಕೆ ಒಳಗಾಗುತ್ತಾನೆ. ಹೀಗೆ ಎಲ್ಲ ರೀತಿಯ ಸಮಸ್ಯೆಗಳನ್ನು ಎದುರಿಸುವ ರೈತರಿಗೆ ಆದ್ಯತೆ ನೀಡಬೇಕಾದುದು ನಮ್ಮ ಕರ್ತವ್ಯ ಎಂದರು.

Raita Ratna Award: ರೈತರು ಬೆಳೆ ಬ್ರ್ಯಾಂಡ್‌ ಮಾಡಿ: ಸಚಿವ ಬಿ.ಸಿ.ಪಾಟೀಲ್‌

ಈ ದೃಷ್ಟಿಯಿಂದ ಏಷ್ಯಾನೆಟ್‌ ಮಾಧ್ಯಮ ಸಂಸ್ಥೆಯ ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ರೈತರನ್ನು ಆದ್ಯತೆಯಾಗಿ ಗುರುತಿಸಿದೆ. ಸುದ್ದಿ ಪ್ರಸ್ತುತಿಯಲ್ಲಿ, ಲೇಖನಗಳಲ್ಲಿ ಕೃಷಿ ಕ್ಷೇತ್ರದ ಅಗತ್ಯತೆ, ರೈತರ ಸಮಸ್ಯೆ ಪರಿಹಾರದ ಕುರಿತು ಒತ್ತು ನೀಡಲಾಗುತ್ತಿದೆ. ಮಾಧ್ಯಮ ಎಂದರೆ ಸುದ್ದಿ ಕೊಡುವುದು ಮಾತ್ರವಲ್ಲ, ಅದಕ್ಕಿಂತ ಹೆಚ್ಚಿನ ಸಾಮಾಜಿಕ ಕಳಕಳಿ ಅಗತ್ಯ. ಹೀಗಾಗಿ ನಾವು ಕೃಷಿ ಕ್ಷೇತ್ರದ ಆಶಾಕಿರಣಗಳನ್ನು ಗುರುತಿಸಿ ‘ರೈತರತ್ನ’ ಪ್ರಶಸ್ತಿ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಹಾಗೆ ನೋಡಿದರೆ ಪ್ರಶಸ್ತಿ ಎಂಬುದು ನೆಪ ಮಾತ್ರ. ನಮ್ಮ ನಡುವೆ ಇರುವ ಕೃಷಿ ಮಾದರಿಗಳು, ಮಾದರಿ ರೈತರು, ಅತ್ಯುತ್ತಮ ಮಾರುಕಟ್ಟೆ, ತಂತ್ರಜ್ಞಾನವನ್ನು ಆರಿಸಿ ತಂದು ಜನರೆದುರು ಪ್ರಸ್ತುತಪಡಿಸುವುದು ನಮ್ಮ ಉದ್ದೇಶ. ಇದಕ್ಕಾಗಿ ಒಂದು ವರ್ಷ ಸಿದ್ಧತೆ ನಡೆಯುತ್ತದೆ. ರೈತರನ್ನು ಹುಡುಕುವುದು, ಪ್ರಶಸ್ತಿಗೆ ಗುರುತಿಸುವುದು, ಆಯ್ಕೆ ಮಾಡುವುದು ಪ್ರಕ್ರಿಯೆ. ನಾವು ಗುರುತಿಸಿ ಪ್ರಶಸ್ತಿ ಪಡೆದವರು ಬಳಿಕ ರಾಜ್ಯ, ರಾಷ್ಟ್ರಮಟ್ಟದ ಪುರಸ್ಕಾರಗಳಿಗೆ ಭಾಜನರಾಗಿರುವುದು ಹೆಮ್ಮೆಯ ವಿಚಾರ ಎಂದರು.

click me!