ಸಿಎಂ ಬೊಮ್ಮಾಯಿ ಹೇಳಿಕೆ ಮಹಾರಾಷ್ಟ್ರ ವಿರೋಧಿ: ಎನ್‌ಸಿಪಿ

By Kannadaprabha NewsFirst Published Mar 18, 2023, 11:43 AM IST
Highlights

ಆರೋಗ್ಯ ವಿಮೆಯನ್ನು ಗಡಿಭಾಗದ 865 ಗ್ರಾಮಗಳ ಜನರಿಗೆ ವಿಸ್ತರಿಸಿದರೆ ಅದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದ ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಜಯಂತ್‌ ಪಾಟೀಲ್‌. 

ಮುಂಬೈ(ಮಾ.18): ಕರ್ನಾಟಕದ 865 ಗ್ರಾಮಗಳಿಗೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಯೋಜನೆ ವಿಸ್ತರಣೆ ಮಾಡಿದ್ದನ್ನು ಕ್ಷಮಿಸಲಾಗದ ಅಪರಾಧ ಎಂದ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಯನ್ನು ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಜಯಂತ್‌ ಪಾಟೀಲ್‌ ಟೀಕಿಸಿದ್ದಾರೆ.

ವಿಧಾನಸಭೆಯಲ್ಲಿ ಶುಕ್ರವಾರ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪಾಟೀಲ್‌, ‘ಆರೋಗ್ಯ ವಿಮೆಯನ್ನು ಗಡಿಭಾಗದ 865 ಗ್ರಾಮಗಳ ಜನರಿಗೆ ವಿಸ್ತರಿಸಿದರೆ ಅದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದರು.
ಜೊತೆಗೆ ‘ಬೊಮ್ಮಾಯಿ ಪಂಢರಾಪುರ ಮತ್ತು ತುಳಜಾಪುರ ದೇಗುಲ ಟ್ರಸ್ಟ್‌ಗೆ ದೇಣಿಗೆ ನೀಡುವುದಾಗಿ ಹೇಳಿದ್ದಾರೆ’ ಎಂದು ಸದನದ ಗಮನ ಸೆಳೆದರು. ಈ ಮೂಲಕ ಮಹಾರಾಷ್ಟ್ರ ವಿಚಾರದಲ್ಲಿ ಬೊಮ್ಮಾಯಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಿದರು.

ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಸುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ಕೂಡಲೇ ವಜಾಗೊಳಿಸಿ: ಸಿದ್ದರಾಮಯ್ಯ

ಗುರುವಾರ ಮಹಾರಾಷ್ಟ್ರ ಸರ್ಕಾರ ವಿಮಾ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ್ದ ಬೊಮ್ಮಾಯಿ, ‘ಮಹಾರಾಷ್ಟ್ರ ಸಚಿವ ಸಂಪುಟದ ನಿರ್ಣಯ ಖಂಡನೀಯ. ಇದು ಅಕ್ಷಮ್ಯ ಅಪರಾಧ. ಗಡಿ ವಿಷಯ ಸುಪ್ರೀಂಕೋರ್ಚ್‌ನಲ್ಲಿ ಇತ್ಯರ್ಥ ಆಗುವವರೆಗೂ ಪ್ರಚೋದನೆ ನೀಡಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೂಚಿಸಿದ ಹೊರತಾಗಿಯೂ ಮಹಾ ಸರ್ಕಾರ ಮಾತು ಉಲ್ಲಂಘಿಸಿದೆ ಎಂದಿದ್ದರು.

ಈ ರೀತಿಯ ಯೋಜನೆಗಳನ್ನು ನಾವೂ ಕೂಡ ಪ್ರಕಟಿಸಬಹುದು. ಹಲವಾರು ತಾಲ್ಲೂಕುಗಳು, ಗ್ರಾಮ ಪಂಚಾಯ್ತಿಗಳು ಮಹಾರಾಷ್ಟ್ರದಲ್ಲಿ ನಮಗೆ ನ್ಯಾಯ ಸಿಗುತ್ತಿಲ್ಲ, ಕರ್ನಾಟಕಕ್ಕೆ ಸೇರಬೇಕು ಎಂದು ಈಗಾಗಲೇ ನಿರ್ಣಯ ಮಾಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಇದ್ದಾಗ ಮಹಾರಾಷ್ಟ್ರದ ಸರ್ಕಾರ ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದಿದ್ದರು.

click me!