
ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಶಂಕೆ ಮೇರೆಗೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಶಾಸಕನಿಗೆ ಜಾರಿ ನಿರ್ದೇಶನಾಲಯದ (ಇ.ಡಿ) ತನಿಖಾ ಸಂಕಷ್ಟ ಎದುರಾಗಿದೆ.
ವಿದೇಶದಲ್ಲಿ ಅಕ್ರಮ ಹಣ ಹೂಡಿಕೆ ಮಾಹಿತಿ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಅವರಿಗೆ ಇ.ಡಿ ತನಿಖೆ ಬಿಸಿ ತಟ್ಟಿದೆ. ಪ್ರಕರಣ ಸಂಬಂಧ ಶಾಸಕರಿಗೆ ಸಂಬಂಧಿಸಿದ ಬೆಂಗಳೂರಿನ ಮಾರತ್ತಹಳ್ಳಿಯ ಮನೆ, ಗೃಹ ಕಚೇರಿ, ಬಾಗೇಪಲ್ಲಿಯ ಮನೆ ಹಾಗೂ ಮುಂಬೈ, ದೆಹಲಿ ಸೇರಿ 37 ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಈ ವೇಳೆ ಕೆಲ ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ರಿಯಲ್ ಎಸ್ಟೇಟ್ ಹಾಗೂ ಹೋಟೆಲ್ ಉದ್ಯಮದಲ್ಲಿ ಸುಬ್ಬಾರೆಡ್ಡಿ ತೊಡಗಿದ್ದಾರೆ. ಬೆಂಗಳೂರು ಸೇರಿ ಇತರೆ ನಗರಗಳಲ್ಲಿ ಅವರ ಒಡೆತನದ ಹೋಟೆಲ್‌ಗಳಿವೆ ಎನ್ನಲಾಗಿದೆ. ರಾಜಕೀಯವಾಗಿ ಸಕ್ರಿಯವಾಗಿರುವ ಅವರು ಮೊದಲು ಪಕ್ಷೇತರ ಶಾಸಕರಾಗಿ ಬಾಗೇಪಲ್ಲಿ ಕ್ಷೇತ್ರದಿಂದ ಚುನಾಯಿತರಾಗಿದ್ದರು. ನಂತರ ಕಾಂಗ್ರೆಸ್ ಸೇರಿದರು. ಬಾಗೇಪಲ್ಲಿ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಅವರು ಆಯ್ಕೆಯಾಗಿದ್ದಾರೆ.
ಮಲೇಷ್ಯಾ, ಹಾಂಗ್‌ಕಾಂಗ್ ಹಾಗೂ ಜರ್ಮನಿ ದೇಶಗಳಲ್ಲೂ ಅವರು ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ವೇಳೆ ಅಕ್ರಮ ಹಣಕಾಸು ವಹಿವಾಟು ನಡೆದಿದೆ. ಅಲ್ಲದೆ, ವಿದೇಶಿ ವಿನಿಮಿಯ ನಿಯಂತ್ರಣ ಕಾಯ್ದೆ (ಫೆರಾ) ಉಲ್ಲಂಘನೆಯಾಗಿದೆ ಎಂದು ಇ.ಡಿ ಶಂಕೆ ವ್ಯಕ್ತಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ