ದೇಶದಲ್ಲಿ ಒಂದನೇ ಅಲೆಗಿಂತ ಎರಡನೆ ಅತ್ಯಂತ ಭೀಕರವಾಗಿದ್ದು ಮತ್ತೊಮ್ಮೆ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುವುದು ಖಚಿತ ಅದಕ್ಕೆ ಈಗಲೇ ಸಿದ್ಧತೆ ನಡೆಸಿದರೆ ಒಳಿತು. ಮುಂದಿನ ದಿನಗಳಲ್ಲಿ ಮಹಾ ಗಂಡಾಂತರವನ್ನೇ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪುಣೆ/ಬೆಂಗಳೂರು (ಏ.30): ದೇಶದಲ್ಲಿ ಕೊರೋನಾ 2ನೇ ಅಲೆ ದಿನೇ ದಿನೇ ತನ್ನ ಭೀಕರತೆಯನ್ನು ಹೆಚ್ಚಿಸುತ್ತಿರುವ ಬೆನ್ನಲ್ಲೇ, ಮುಂದಿನ ದಿನಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಭಾರೀ ಕೊರತೆ ಕಾಣಿಸಿಕೊಳ್ಳಲಿದೆ ಎಂದು ಇದೀಗ ಸ್ವತಃ ಆಸ್ಪತ್ರೆಗಳ ಮುಖ್ಯಸ್ಥರೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರುವ ಆತಂಕವನ್ನು ಹುಟ್ಟುಹಾಕಿದೆ.
ಬೆಂಗಳೂರಿನ ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿಶೆಟ್ಟಿಮತ್ತು ಕರ್ನಾಟಕದ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್‌ಗಳ ಒಕ್ಕೂಟ(ಫನಾ)ದ ಅಧ್ಯಕ್ಷ ಡಾ. ಎಚ್.ಎಂ. ಪ್ರಸನ್ನ ಮುಂಬರುವ ದಿನಗಳಲ್ಲಿ ಕರ್ನಾಟಕ ಮತ್ತು ದೇಶದ ಇತರೆ ರಾಜ್ಯಗಳು ಎದುರಿಸಲಿರುವ ಸಮಸ್ಯೆಗಳ ಪಟ್ಟಿಮಾಡಿದ್ದಾರೆ.
5 ಲಕ್ಷ ಐಸಿಯು ಬೆಡ್ ಬೇಕು: ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನ ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿಶೆಟ್ಟಿ, ಕೊರೋನಾ 2ನೇ ಅಲೆ ಭಾರತದಲ್ಲಿ ಇನ್ನಷ್ಟುಭೀಕರ ಸ್ಥಿತಿಗೆ ತಲುಪಲಿದ್ದು, ಅದನ್ನು ಎದುರಿಸಲು ಮುಂದಿನ ಕೆಲವು ವಾರಗಳಲ್ಲಿ ಹೆಚ್ಚುವರಿ 5 ಲಕ್ಷ ಐಸಿಯು ಹಾಸಿಗೆಗಳು, 1.5 ಲಕ್ಷ ವೈದ್ಯರು, ಕನಿಷ್ಠ 2 ಲಕ್ಷ ನರ್ಸ್‌ಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಸ್ಪತ್ರೆಗಳು ಹೇಳೋದೇನು?
- ಆಮ್ಲಜನಕ ಕೊರತೆ ಶೀಘ್ರ ಪರಿಹಾರವಾಗುತ್ತೆ
- ಮುಂದೆ ವೈದ್ಯ ಸಿಬ್ಬಂದಿ, ಐಸಿಯು ಸಿಗದೆ ಸಾವು ಹೆಚ್ಚಳ ಸಂಭವ
- ಒಬ್ಬರಿಗೆ ಪಾಸಿಟಿವ್ ಬಂದರೆ 10 ಮಂದಿಗೆ ಕೊರೋನಾ ಬರುತ್ತೆ
ಮುಂದೆ ಡಾಕ್ಟರ್, ನರ್ಸ್ ತೀವ್ರ ಕೊರತೆ : ಈಗಲೇ ಸಿದ್ಧರಾಗಿ ಎಂದು ಡಾ.ದೇವಿಶೆಟ್ಟಿ ಎಚ್ಚರಿಕೆ ...
ಪುಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ. ಶೆಟ್ಟಿ, ದೇಶದಲ್ಲಿ ಈಗ ಕಾಣಿಸಿಕೊಂಡಿರುವ ಆಮ್ಲಜನಕದ ಕೊರತೆ ಮುಂದಿನ ದಿನಗಳಲ್ಲಿ ಪರಿಹಾರವಾಗುವ ಭರವಸೆ ಇದೆ. ಆದರೆ ಮುಂದೆ, ವೈದ್ಯರು, ದಾದಿಯರು ಹಾಗೂ ಐಸಿಯು ಬೆಡ್ ಸಿಗದೇ ರೋಗಿಗಳು ಸಾವನ್ನಪ್ಪಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಒಬ್ಬ ರೋಗಿ ಕೊರೋನಾ ಪಾಸಿಟೀವ್ ಆದರೆ, ಪರೀಕ್ಷೆ ಮಾಡಿಸಿಕೊಳ್ಳದೇ ಇರುವ ಇನ್ನೂ 10 ಮಂದಿಗೆ ಕೊರೋನಾ ಬಂದಿರುತ್ತದೆ. ಅಂದರೆ ಈಗ ಭಾರತದಲ್ಲಿ ಸದ್ಯ 10ರಿಂದ 15 ಲಕ್ಷ ಮಂದಿ ಪ್ರತಿನಿತ್ಯ ಕೊರೋನಾ ಸೋಂಕಿತರಾಗುತ್ತಿದ್ದಾರೆ. ಅವರಲ್ಲಿ ಕನಿಷ್ಠ ಶೇ.5ರಷ್ಟುಮಂದಿಗಾದರೂ ಐಸಿಯು ಬೆಡ್‌ಗಳ ಅವಶ್ಯಕತೆ ಬೀಳಲಿದೆ. ಒಬ್ಬ ರೋಗಿ ಕನಿಷ್ಠ 10 ದಿನದ ಮಟ್ಟಿಗೆ ಐಸಿಯು ಬೆಡ್ ಬಳಕೆ ಮಾಡುತ್ತಾನೆ. ಒಂದು ವೇಳೆ ಇಂತಹ ಪರಿಸ್ಥಿತಿ ಎದುರಾದರೆ ನಾವು ಏನು ಮಾಡಲು ಸಾಧ್ಯ? ದುರದೃಷ್ಟಕರವೆಂದರೆ ಕೇವಲ ಹಾಸಿಗೆಗಳಷ್ಟೇ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ. ಅವರನ್ನು ನೋಡಿಕೊಳ್ಳಲು ನರ್ಸ್‌ಗಳು, ವೈದ್ಯರು ಕೂಡ ಅಷ್ಟೇ ಪ್ರಮಾಣದಲ್ಲಿ ಬೇಕು. ಮುಂದಿನ ಕೆಲವು ವಾರಗಳಲ್ಲಿ ನಮಗೆ ಏನಿಲ್ಲವೆಂದರೂ 2 ಲಕ್ಷ ನರ್ಸ್‌ಗಳು, 1.5 ಲಕ್ಷ ವೈದ್ಯರ ಬೇಕಾಗಲಿದ್ದಾರೆ. ಇವರ ಸೇವೆ ಒಂದು ವರ್ಷಗಳ ಕಾಲ ಅಗತ್ಯವಿದೆ. ಭಾರತದಲ್ಲಿ ಕೊರೋನಾ 2ನೇ ಅಲೆ ಇನ್ನೂ ತನ್ನ ತುತ್ತತುದಿಯನ್ನು ಮುಟ್ಟಿಲ್ಲ. 2ನೇ ಅಲೆ ಇನ್ನೂ ನಾಲ್ಕೈದು ತಿಂಗಳ ಕಾಲ ಇರಲಿದೆ. ಬಳಿಕ ನಾವು 3ನೇ ಅಲೆಗೆ ಸಿದ್ಧವಾಗಬೇಕಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಇದಕ್ಕೊಂದು ಪರಿಹಾರೋಪಾಯವನ್ನು ಸೂಚಿಸಿರುವ ದೇವಿ ಶೆಟ್ಟಿ, ಭಾರತದಲ್ಲಿ ಮೂರು ವರ್ಷಗಳ ಪದವಿ ಮುಗಿಸಿರುವ 2.2 ಲಕ್ಷ ನರ್ಸಿಂಗ್ ವಿದ್ಯಾರ್ಥಿಗಳಿದ್ದಾರೆ. ಅವರನ್ನು ಪದವೀಧರರೆಂದು ಪರಿಗಣಿಸಿ ತಕ್ಷಣವೇ ಸೇವೆಗೆ ಬಳಸಿಕೊಳ್ಳುವುದಕ್ಕೆ ಆರೊಗ್ಯ ಸಚಿವಾಲಯ ಹಾಗೂ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಕ್ರಮ ಕೈಗೊಳ್ಳಬೇಕು. ಅದೇ ರೀತಿ ಸ್ನಾತಕೋತ್ತರ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿರುವ 1.3 ಲಕ್ಷ ಯುವ ವೈದ್ಯರು ನಮ್ಮಲ್ಲಿದ್ದಾರೆ. ಅವರಿಗೆ ಆನ್‌ಲೈನ್ ನೀಟ್ ಪರೀಕ್ಷೆ ನಡೆಸಿ ಆದಷ್ಟುಬೇಗ ಫಲಿತಾಂಶ ನೀಡಬೇಕು. ಎಷ್ಟುಸಾಧ್ಯವೋ ಅಷ್ಟುಹೊಸ ವೈದ್ಯರನ್ನು ಸೇವೆಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ವೈದ್ಯರು, ದಾದಿಯರ ಕೊರತೆ:
ಈ ನಡುವೆ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್ ಚಿಕಿತ್ಸೆ ನೀಡುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಕೊರತೆ ದೊಡ್ಡ ಮಟ್ಟದಲ್ಲಿ ಆಗಲಿದೆ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್‌ಗಳ ಒಕ್ಕೂಟದ ಅಧ್ಯಕ್ಷ ಡಾ. ಎಚ್.ಎಂ. ಪ್ರಸನ್ನ ಹೇಳಿದ್ದಾರೆ.
ಮೊದಲ ಕೊರೋನಾ ಅಲೆಯ ಬಳಿಕ ಕೆಲಸ ಬಿಟ್ಟವರು ವಾಪಾಸ್ ಬಂದಿಲ್ಲ, ಇನ್ನು ಕೆಲವರು ವಿದೇಶಕ್ಕೆ ಹಾರಿದ್ದಾರೆ. ಮೊದಲ ಅಲೆಯ ಸಂದರ್ಭದಲ್ಲಿದ್ದ ಆರೋಗ್ಯ ಕಾರ್ಯಕರ್ತರ ಶೇ.50ರಷ್ಟುಮಾತ್ರ ಈಗ ಕೆಲಸ ಮಾಡುತ್ತಿದ್ದಾರೆ. ಇನ್ನು ಇತ್ತಿಚಿನ ದಿನಗಳಲ್ಲಿ ಕೋವಿಡ್ ಲಸಿಕೆ ಪಡೆದಿದ್ದರೂ ಅನೇಕ ಸಿಬ್ಬಂದಿಗಳು ಕೋವಿಡ್ ನಿಂದ ಬಳಲುತ್ತಿದ್ದಾರೆ. ಅಂದಾಜಿನ ಪ್ರಕಾರ ಶೇ.20ರಷ್ಟುಆರೋಗ್ಯ ಸಿಬ್ಬಂದಿ ಈಗ ಕೆಲಸ ಮಾಡುವ ಸ್ಥಿತಿಯಲ್ಲಿಲ್ಲ. ಇದರಿಂದ ಕೋವಿಡ್ ರೋಗಿಗಳ ಚಿಕಿತ್ಸೆ ಮೇಲೆ ಪರಿಣಾಮ ಆಗಿದೆ ಡಾ. ಪ್ರಸನ್ನ ಹೇಳಿದ್ದಾರೆ.
ರಾಜ್ಯದಲ್ಲಿ ಪ್ರತಿ 5 ನಿಮಿಷಕ್ಕೊಂದು ಪ್ರಾಣ ಹರಣ
ಇದರಿಂದಾಗಿ ನಮ್ಮ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳನ್ನೇ ನೋಡಿಕೊಳ್ಳುವುದು ಕಷ್ಟವಾಗಿದೆ. ಇನ್ನು ಹೊಟೇಲ್‌ಗಳನ್ನು ಆಸ್ಪತ್ರೆಗಳನ್ನಾಗಿ ಪರಿವರ್ತಿಸಿ ಅಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟ. ಹಾಗೆಯೇ ಇಷ್ಟುಬೆಡ್‌ಗಳಿಗೆ ಇಂತಿಷ್ಟೇ ವೈದ್ಯಕೀಯ ಸಿಬ್ಬಂದಿ, ವೈದ್ಯರು ಇರಬೇಕು ಎಂಬ ನಿಯಮವಿದೆ. ಇದನ್ನು ಪಾಲಿಸುವುದು ಕೂಡ ಸವಾಲಿನ ಸಂಗತಿಯಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.