
ಬೆಂಗಳೂರು (ಏ.29): ಆಪ್ತಮಿತ್ರ ಸಹಾಯವಾಣಿಯನ್ನು ಮತ್ತಷ್ಟು ಚುರುಕುಗೊಳಿಸುವ ಮೂಲಕ ಎಲ್ಲಾ ಕೋವಿಡ್ ರೋಗಿಗಳಿಗೆ ಕರೆ ಮಾಡಿ ಸೂಕ್ತ ಮಾರ್ಗದರ್ಶನ ನೀಡಲು ಸಿದ್ಧತೆ ನಡೆದಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬುಧವಾರ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ಫೆಬ್ರವರಿ ವೇಳೆಯಲ್ಲಿ ಆಪ್ತಮಿತ್ರ ಆ್ಯಪ್ ಹಿಂದಕ್ಕೆ ತೆಗೆದುಕೊಳ್ಳಲಾಗಿತ್ತು. ಆದರೆ, ಮತ್ತೆ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದ ಕಾರಣ ಮತ್ತೆ ಪ್ರಾರಂಭಿಸಲಾಗಿದೆ. ಪಾಸಿಟಿವ್ ಬಂದ ರೋಗಿಗಳಿಗೆ ಮೂರ್ನಾಲ್ಕು ಗಂಟೆಯೊಳಗೆ ಆಪ್ತಮಿತ್ರದ ಮೂಲಕ ಕರೆ ಮಾಡಲಾಗುವುದು. ವೈದ್ಯಕೀಯ ಹಿನ್ನೆಲೆ ಇರುವ ತಜ್ಞರು, ಪದವೀಧರರು ಕರೆ ಮಾಡಿ ಮಾರ್ಗದರ್ಶನ ನೀಡಲಿದ್ದಾರೆ. ರೋಗ ಲಕ್ಷಣ ಇರುವವರಿಗೆ ಅಸ್ವಸ್ಥತೆ, ದೇಹಸ್ಥಿತಿ, ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ನಂತರ ಅವರಿಗೆ ಮನೆ ಆರೈಕೆ, ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಗೆ ಸೇರಿಸುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಹೇಳಿದರು.
ಸಹಾಯವಾಣಿ ಮೂಲಕ ಪ್ರತಿಯೊಬ್ಬ ಸೋಂಕಿತ ವ್ಯಕ್ತಿಗೂ ಸಮರ್ಪಕವಾಗಿ ಮಾರ್ಗದರ್ಶನ ನೀಡಲು ರಾಜ್ಯದಲ್ಲಿ 6-8 ಸಾವಿರ ಸಿಬ್ಬಂದಿ ಬೇಕಾಗುತ್ತದೆ. ಇದಕ್ಕೆ ಖಾಸಗಿ ಕಂಪನಿಗಳ ಸಹಕಾರ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಕನಿಷ್ಠ 10 ನಿಮಿಷ ರೋಗಿಯ ಜತೆ ಸಮಾಲೋಚಿಸುವಂತಾಗಬೇಕು. ಇಂತಹ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಹೇಳಿದ ಅವರು, ಪಾಸಿಟಿವ್ ಇರುವ ಬಗ್ಗೆ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತಿದ್ದಂತೆ ಕೆಲವರು ಫೋನ್‌ಗೆ ಸಿಗುವುದಿಲ್ಲ. ನಾಟ್‌ರಿಚಾಬಲ್ ಮಾಡುಕೊಳ್ಳುತ್ತಾರೆ. ಅವರನ್ನು ಬೇರೆ ವಿಭಾಗ ಮಾಡಿ ಪೊಲೀಸ್ ಇಲಾಖೆ ನೀಡಲಾಗುತ್ತದೆ. ಪೊಲೀಸರು ಅವರನ್ನು ಪತ್ತೆ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.
ರೆಮ್ಡಿಸ್‌ವೀರ್, ಆಕ್ಸಿಜನ್ ಅಕ್ರಮ ಮಾರಾಟ ಮಾಡಿದ್ರೆ ಕಠಿಣ ಕ್ರಮ: ಸುಧಾಕರ್ ವಾರ್ನ್ ...
ಇಂದಿನಿಂದ ಪೋರ್ಟಲ್ ಆರಂಭ
ನಿವೃತ್ತ ವೈದ್ಯರು, ಯುವ ವೈದ್ಯರು ಮನೆಯಲ್ಲಿಯೇ ಕುಳಿತು ಕೊರೋನಾದಂತಹ ಯುದ್ಧದ ಸಮಯದಲ್ಲಿ ಅಳಿಲು ಸೇವೆ ಮಾಡಲು ಸರ್ಕಾರವು ಅವಕಾಶ ನೀಡಿದ್ದು, ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ಪ್ರತ್ಯೇಕ ಪೋರ್ಟಲ್ ಆರಂಭಿಸಲಾಗಿದೆ.
ಸ್ವಯಂ ಪ್ರೇರಿತರಾಗಿ ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಬರಬಹುದು. ಮನೆಯಲ್ಲಿಯೇ ಕುಳಿತು ತಮ್ಮ ಸೇವೆ ಸಲ್ಲಿಸಬಹುದು. ಒಂದು ವೇಳೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅಥವಾ ಮನೆಗೆ ಹೋಗಿ ಸೇವೆ ಸಲ್ಲಿಸಲು ಆಸಕ್ತಿ ಇದ್ದರೆ ಅದಕ್ಕೂ ಅವಕಾಶ ಮಾಡಿಕೊಡಲಾಗುವುದು. ನಿವೃತ್ತ ವೈದ್ಯರಿಗೆ ಅವರ ಸೇವೆಗೆ ಯಾವ ರೀತಿಯಲ್ಲಿ ವಿಶೇಷ ಭತ್ಯೆ ನೀಡಬೇಕು ಎಂಬುದರ ಬಗ್ಗೆ ಸರ್ಕಾರ ಗಮನಹರಿಸಲಿದೆ. ಯುವ ವೈದ್ಯರಿಗೆ ಅಂಕ ನೀಡುವಲ್ಲಿ ಯಾವ ರೀತಿ ಕ್ರಮ ಅನುಸರಿಸಬಹುದು ಎಂಬುದರ ಬಗ್ಗೆ ಆಲೋಚನೆ ಮಾಡಲಾಗುವುದು. ಅಲ್ಲದೇ, ಈ ಸೇವೆಗೆ ಪ್ರತ್ಯೇಕ ಸರ್ಟಿಫಿಕೇಟ್ ನೀಡುವ ಚಿಂತನೆಯೂ ಇದೆ ಎಂದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ಕೋವಿಡ್‌ಗೆ ಬಳಸುತ್ತಿಲ್ಲ. ಆದರೆ ಇಂತಹ ಸಮಯದಲ್ಲಿ ತಾಯಿ ಮತ್ತು ಮಕ್ಕಳ ಖಾಸಗಿ ಆಸ್ಪತ್ರೆಗಳು ಕೊರೋನಾ ಸೋಂಕಿರುವ ಗರ್ಭಿಣಿಯರು, ಮಕ್ಕಳು ಬಂದರೆ ದಾಖಲಿಸಿಕೊಳ್ಳಬೇಕು. ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಈ ರೀತಿ ದಾಖಲಿಸಿಕೊಳ್ಳಲಾಗುತ್ತಿದೆ. ಇಂತಹ ಶೇ.50ರಷ್ಟುರೋಗಿಗಳಿಗೆ ಅವಕಾಶ ನೀಡಬೇಕು. ದಾಖಲು ಮಾಡುವುದನ್ನು ನಿರಾಕರಿಸುವಂತಿಲ್ಲ.
-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ