ಕೋವಿಡ್‌ ವಾರಿಯರ್‌ ಎಂಬ ಚಪ್ಪಾಳೆ ಬೇಡ- ಬೇಡಿಕೆ ಈಡೇರಿಸಿ: ಅಂಗನವಾಡಿ ಕಾರ್ಯಕರ್ತೆಯರ ಪರ ವಹಿಸಿದ ನಟ ಚೇತನ್

By Sathish Kumar KHFirst Published Jan 31, 2023, 12:01 PM IST
Highlights

ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್‌ ವಾರಿಯರ್‌ ಎಂದು ಚಪ್ಪಾಳೆ ತಟ್ಟುವುದು ಬೇಡ. ಅವರ ಬೇಡಿಕೆಗಳನ್ನು ಈಡೇರಿಸಿ ಎಂದು ನಟ ಚೇತನ್‌ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಬೆಂಗಳೂರು (ಜ.31): ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕಳೆದೊಂದು ವಾರದಿಂದ ಹಗಲು- ರಾತ್ರಿ, ಚಳಿ-ಗಾಳಿಗೂ ಜಗ್ಗದೇ ಬೀಡುಬಿಟ್ಟು ಅಹೋರಾತ್ರಿ ಧರಣಿ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್‌ ವಾರಿಯರ್‌ ಎಂದು ಚಪ್ಪಾಳೆ ತಟ್ಟುವುದು ಬೇಡ. ಅವರ ಬೇಡಿಕೆಗಳನ್ನು ಈಡೇರಿಸಿ ಎಂದು ನಟ ಚೇತನ್‌ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ಅಂಗನವಾಡಿ ಕಾರ್ಯಕರ್ತರು ಮಾಡುತ್ತಿರುವ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಹೋರಾಟ ಅಗತ್ಯವಾಗಿದೆ. ಪ್ರತಿಯೊಂದು ಮಹಿಳೆಯರು ಸಮಾಜದ ಅಭಿವೃದ್ಧಿಗೆ ಅವಶ್ಯಕವಾಗಿದ್ದಾರೆ. ಇಂತಹ ಮಹಿಳೆಯರಿಗೆ ಸರ್ಕಾರದ ಸುಗಮವಾದ ಮಾತುಗಳು ನಮಗೆ ಬೇಕಾಗಿಲ್ಲ. ಕೋವಿಡ್ ಸಮಯದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದರೂ ಅಂಗನವಾಡಿ ಕಾರ್ಯಕರ್ತೆಯರುಗೆ ಸಹಾಯ ಆಗುತ್ತಿಲ್ಲ. ಕೋವಿಡ್ ವಾರಿಯರ್ ಅಂತ ಚಪ್ಪಾಳೆ ತಟ್ಟುತ್ತಾರೆ. ಆದರೆ, ಅವರಿಗೆ ಆ ಚಪ್ಪಾಳೆ ಬೇಕಾಗಿಲ್ಲ. ಬೇಡಿಕೆಗಳನ್ನು ಈಡೇರಿಸಿ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಅಂಗನವಾಡಿ ಶಿಕ್ಷಣ ಮಧ್ಯಾಹ್ನ 1 ಗಂಟೆಗೆ ಮುಕ್ತಾಯ: ಕಾರ್ಯಕರ್ತೆಯರ ಹೋರಾಟಕ್ಕೆ ಮಣಿದ ಸರ್ಕಾರ

ಸರ್ಕಾರ ಶ್ರೀಮಂತ ಪರವಾಗಿದೆ: ರಾಜ್ಯದಲ್ಲಿ ಸರ್ಕಾರ ಶ್ರೀಮಂತರ ಪರವಾಗಿದೆ. ಇಲ್ಲಿ ಸರ್ಕಾರ ಜನಪರವಾಗಿ ಕಾರ್ಯಗಳನ್ನು ಮಾಡುತ್ತಿಲ್ಲ. ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು 2017 - 2018ರಲ್ಲೂ ಬೃಹತ್‌ ಪ್ರಮಾಣದಲ್ಲಿ ಹೋರಾಟ ಮಾಡಿದ್ದರು. ಅವರ ಬೇಡಿಕೆಗಳು ನ್ಯಾಯಯುತವಾಗಿವೆ. ಆದರೆ, ಇವರು ಸಾಮಾನ್ಯ ನೌಕರರು, ಬಡವರು ಹಾಗೂ ಮಹಿಳೆಯರು ಆಗಿದ್ದು, ಇವರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರಿಗೆ ಗೌರವ ನೀಡುತ್ತಿಲ್ಲ. ಇಂತಹ ನಿರ್ಲಕ್ಷ್ಯ ಧೋರಣೆಗಳನ್ನು ಬಿಟ್ಟು ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕು. ಇಲ್ಲದಿದ್ದರೆ ಹೋರಾಟದ ಸ್ವರೂಪವನ್ನು ಬದಲಾವಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವುದು ಅನಿವಾರ್ಯ ಆಗಲಿದೆ ಎಂದು ತಿಳಿಸಿದರು.

ಸಿಎಂ ಮನೆ ಮುತ್ತಿಗೆಗೆ ನಾನೂ ಹೋಗುತ್ತೇನೆ: ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಐಟಿಯು ಮುಖ್ಯಸ್ಥರು ಇಂದು ಸಂಜೆಯೊಳಗೆ ಮುಖ್ಯಮಂತ್ರಿ ಜೊತೆ ಸಭೆ ಕರೆದು ಮಾತನಾಡಬೇಕು. ಇಲ್ಲದಿದ್ದರೆ ನಾಳೆ ಮುಂದಿನ ನಡೆ ಬೇರೆ ಆಗಿರುತ್ತದೆ. ಇಂದು ಸಂಜೆಯೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸಿರುವ ಆದೇಶ ಜಾರಿಯಾಗದಿದ್ದರೆ ನಾಳೆ ಮುಖ್ಯಮಂತ್ರಿ ಮನೆ ಮುತ್ತಿಗೆ ಹಾಕುವ ಬಗ್ಗೆ ಗಡುವು ನೀಡಿದ್ದಾರೆ. ಒಂದು ವೇಳೆ ಸಿಎಂ ಮನೆಯನ್ನು ಮುತ್ತಿಗೆ ಹಾಕಲು ಅಂಗನವಾಡಿ ಕಾರ್ಯಕರ್ತೆಯರು ತೆರಳಿದಲ್ಲಿ ಅವರೊಂದಿಗೆ ನಾನೂ ಹೋರಾಟಕ್ಕೆ ಹೋಗುಯತ್ತೇನೆ ಎಂದು ನಟ ಚೇತನ್‌ ತಿಳಿಸಿದ್ದಾರೆ. 

ನಾಳೆ ಅಂಗನವಾಡಿ ನೌಕರರಿಂದ ಸಿಎಂ ನಿವಾಸ ಚಲೋ; ಇನ್ನೊಂದಡೆ ಪೌರಕಾರ್ಮಿಕರ ಮುಷ್ಕರ!

ಸಚಿವರ ಭೇಟಿಗೂ ಬಗ್ಗದ ಹೋರಾಟಗಾರರು: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನಾ ಸ್ಥಳಕ್ಕೆ ನಿನ್ನೆ ಸಂಜೆ ಮಹಿಳಾ ಮತ್ತು ಮಕ್ಕಳ ಸಚಿವ  ಹಾಲಪ್ಪ ಆಚಾರ್ ಭೇಟಿ ನೀಡಿ, ಸಮಸ್ಯೆ ಆಲಿಸಿದರು. ತಮ್ಮ ಕೈಯಲ್ಲಿ ಆದ ಬೇಡಿಕೆಗಳನ್ನ ಈಡೇರಿಸುವ ಭರವಸೆ ನೀಡಿದರು. ಸಚಿವರ ಭರವಸೆಗೆ ಒಪ್ಪದ ಅಂಗನವಾಡಿ ಕಾರ್ಯಕರ್ತೆಯರು ನಮಗೆ ಬೇಡ, ಬೇಡಿಕೆ ಈಡೇರಿಸಿದ ಲಿಖಿತ ರೂಪದ ಆದೇಶ ಪ್ರತಿ ನಮಗೆ ಕೊಡಿ ಎಂದರು. ಒಂದು ವಾರ ಅಲ್ಲ ಎಷ್ಟು ದಿನವಾದರೂ ನಾವು ಇಲ್ಲಿಯೇ ಇರುತ್ತೇವೆ. ಸಿಎಂ ಜೊತೆ ಒಂದು ಸಭೆ ನಿಗದಿ ಮಾಡಿ. ಜೊತೆಗೆ, ನಮಗೆ ಲಿಖಿತ ರೂಪದ ಆದೇಶ ನೀಡಿ ಎಂದು ಪಟ್ಟು ಹಿಡಿದಿದ್ದರು.

click me!