ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಿಂದ (ಎಸ್‌ಜೆಎಂ) ನಿರ್ಮಿಸಲಾಗುತ್ತಿರುವ ಅತಿ ಎತ್ತರದ ಬಸವೇಶ್ವರ ಪ್ರತಿಮೆ ಹಾಗೂ ಅಲ್ಲಮಪ್ರಭು ಸಂಶೋಧನಾ ಕೇಂದ್ರಕ್ಕೆ ರಾಜ್ಯ ಸರ್ಕಾರ ಕಾಲಕಾಲಕ್ಕೆ ನೀಡಿರುವ ಅನುದಾನದ ಸಂಪೂರ್ಣ ಮಾಹಿತಿ ಒದಗಿಸಲು ಹೈಕೋರ್ಟ್ ಸೂಚಿಸಿದೆ.
ಬೆಂಗಳೂರು (ಜ.31) : ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಿಂದ (ಎಸ್‌ಜೆಎಂ) ನಿರ್ಮಿಸಲಾಗುತ್ತಿರುವ ಅತಿ ಎತ್ತರದ ಬಸವೇಶ್ವರ ಪ್ರತಿಮೆ ಹಾಗೂ ಅಲ್ಲಮಪ್ರಭು ಸಂಶೋಧನಾ ಕೇಂದ್ರಕ್ಕೆ ರಾಜ್ಯ ಸರ್ಕಾರ ಕಾಲಕಾಲಕ್ಕೆ ನೀಡಿರುವ ಅನುದಾನದ ಸಂಪೂರ್ಣ ಮಾಹಿತಿ ಒದಗಿಸಲು ಹೈಕೋರ್ಟ್ ಸೂಚಿಸಿದೆ.
ಮರುಘಾ ಮಠ(Murughamutt)ಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದ ಸರ್ಕಾರದ ಆದೇಶ ರದ್ದು ಕೋರಿ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ(Basava prabhu swamiji) ಮತ್ತು ಭಕ್ತರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠ ಸರ್ಕಾರಕ್ಕೆ ಈ ಸೂಚನೆ ನೀಡಿತು.ಜತೆಗೆ, ಈ ಅನುದಾನ ನೀಡುವಾಗ ಸರ್ಕಾರ ಏನಾದರೂ ಷರತ್ತುಗಳನ್ನು ವಿಧಿಸಿತ್ತೇ ಎಂಬ ಬಗ್ಗೆ ಮಾಹಿತಿ ನೀಡುವಂತೆಯೂ ನ್ಯಾಯಪೀಠ ಇದೇ ವೇಳೆ ಸೂಚಿಸಿದೆ.
ಮುರುಘಾಮಠಕ್ಕೆ ಉಸ್ತುವಾರಿ ನೇಮಕಕ್ಕೆ ನಿಯಮ ಇದೆಯೇ; ಹೈಕೋರ್ಟ್ ಪ್ರಶ್ನೆ
ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ಮುರುಘಾಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಆದರೆ, ದುರದೃಷ್ಟವಶಾತ್ ಮಠದ ಪೀಠಾಧಿಪತಿ ಮುರುಘಾ ಶರಣರು ಪೋಕ್ಸೊ ಪ್ರಕರಣದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಠಕ್ಕೆ ಸೇರಿದ ಸಾವಿರಾರು ಕೋಟಿ ರು. ಮೌಲ್ಯದ ಸ್ಥಿರ, ಚರಾಸ್ತಿ ಹಾಗೂ ವಿದ್ಯಾಸಂಸ್ಥೆಗಳ ದೈನಂದಿನ ಆಡಳಿತಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಮಠದ ಆಸ್ತಿ ಸಂರಕ್ಷಣೆ ಮತ್ತು ಭಕ್ತರ ಹಿತಾಸಕ್ತಿ ಕಾಪಾಡುವ ಉದ್ದೇಶವೊಂದೇ ಆಡಳಿತಾಧಿಕಾರಿಯ ನೇಮಕದ ಹಿಂದಿದೆ. ಆಡಳಿತಾಧಿಕಾರಿ ನೇಮಕಕ್ಕೂ ಮುನ್ನ ಮುಖ್ಯಮಂತ್ರಿಗಳು ಸ್ವತಃ ನೂರು ಬಾರಿ ಯೋಚಿಸಿ ನಿರ್ಧಾರ ಕೈಗೊಂಡಿದ್ದಾರೆ. ಮಠದ ಜೊತೆಗೆ ಸಂಘರ್ಷಕ್ಕಿಳಿಯುವ ಅಥವಾ ವ್ಯಾಜ್ಯ ಮಾಡುವ ಧೋರಣೆ ಸರ್ಕಾರದಲ್ಲ. ಇನ್ನೂ ಮಠದ ವತಿಯಿಂದ ನಿರ್ಮಿಸಲಾಗುತ್ತಿರುವ ಅತಿ ಎತ್ತರದ ಬಸವೇಶ್ವರ ಪ್ರತಿಮೆ ಹಾಗೂ ಅಲ್ಲಮಪ್ರಭು ಸಂಶೋಧನಾ ಕೇಂದ್ರಕ್ಕೆ ಸರ್ಕಾರ ಕಾಲಕಾಲಕ್ಕೆ ಕೋಟ್ಯಂತರ ಹಣವನ್ನು ಅನುದಾನವಾಗಿ ನೀಡಿದೆ. 2022ರ ಸೆ.15ರಂದು 10 ಕೋಟಿ ಹಣ ನೀಡಲಾಗಿತ್ತು, ಅದಕ್ಕೂ ಮುನ್ನ ಸಾಕಷ್ಟುಆರ್ಥಿಕ ನೆರವು ಒದಗಿಸಿದೆ ಎಂದು ವಿವರಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಯಾವುದಾದರೂ ಷರತ್ತು ವಿಧಿಸಿ ಸರ್ಕಾರ ಮಠಕ್ಕೆ ಅನುದಾನ ನೀಡಿದೆಯೋ ಅಥವಾ ಬೇಷರತ್ತಾಗಿ ನೀಡಿದೆಯೋ ಎಂದು ಪ್ರಶ್ನಿಸಿ, ಮಠಕ್ಕೆ ನೀಡಲಾಗಿರುವ ಅನುದಾನದ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಫೆ.2ಕ್ಕೆ ಮುಂದೂಡಿತು.
ಲಿಂಗಾಯತ ಮೀಸಲು: ಫೆ.3ಕ್ಕೆ ಹೈಕೋರ್ಟ್‌ಗೆ ಸರ್ಕಾರದ ವರದಿ:
ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎಗೆ ಸೇರ್ಪಡೆ ಮಾಡುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಇತ್ತೀಚೆಗೆ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಫೆ.3ರಂದು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಸರ್ಕಾರ ಹೈಕೋರ್ಟ್ ಗೆ ತಿಳಿಸಿದೆ.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ನೀಡುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಇತ್ತೀಚೆಗೆ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಕಾನೂನುಬಾಹಿರವೆಂದು ಆದೇಶಿಸುವಂತೆ ಕೋರಿ ಬೆಂಗಳೂರಿನ ಡಿ.ಜಿ.ರಾಘವೇಂದ್ರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ಪೀಠ ಸೋಮವಾರ ವಿಚಾರಣೆ ನಡೆಸಿತು.
ಸಂತ್ರಸ್ತೆ ಮದುವೆಯಾದ ರೇಪ್ ಆರೋಪಿ: ಕೇಸ್ ಮುಕ್ತಾಯ
ವಿಚಾರಣೆ ಆರಂಭವಾಗುತ್ತಿದ್ದಂತೆ ಸರ್ಕಾರದ ಪರವಾಗಿ ಹಾಜರಾದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ,ಆಯೋಗ ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಫೆ.3ರಂದು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಈ ಹೇಳಿಕೆ ದಾಖಲಿಸಿಕೊಂಡ ಪೀಠ ವಿಚಾರಣೆಯನ್ನು ಫೆ.3ಕ್ಕೆ ಮುಂದೂಡಿತು.