ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿಕೆ ಸುರೇಶ್, ಗುರುವಾರ ರಾಮನಗರದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತಮ್ಮ ಬಳಿ ಇರುವ ಆಸ್ತಿಯ ವಿವರವನ್ನೂ ಬಹಿರಂಗಪಡಿಸಿದ್ದಾರೆ.
ಬೆಂಗಳೂರು (ಮಾ.28): ಕಾಂಗ್ರೆಸ್ ಅಭ್ಯರ್ಥಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಗುರುವಾರ ಲೋಕಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಿಕೆ ಸುರೇಶ್‌ಗೆ ಇದೇ ಕ್ಷೇತ್ರದಲ್ಲಿ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಸಿಎನ್ ಮಂಜುನಾಥ್ ಪ್ರತಿಸ್ಪರ್ಧಿಯಾಗಿದ್ದಾರೆ. ಸಿಎನ್ ಮಂಜುನಾಥ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ರಾಮನಗರದಲ್ಲಿ ಇಂದು ಭರ್ಜರಿ ರೋಡ್ ಶೋ ಮೂಲಕ ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಎರಡು ಅಫಡವಿಟ್ ಸಲ್ಲಿಸಿರುವ ಡಿಕೆ ಸುರೇಶ್ ತಮ್ಮ ಬಳಿ ಇರುವ ಬಹುಕೋಟಿ ಆಸ್ತಿಯ ವಿವರಗಳನ್ನು ತಿಳಿಸಿದ್ದಾರೆ. ಡಿಕೆ ಸುರೇಶ್ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ ಶೇ. 75ರಷ್ಟು ಏರಿಕೆಯಾಗಿದೆ. 2019ರ ಅಫಡವಿಟ್‌ನಲ್ಲಿ ತಮ್ಮ ಆಸ್ತಿ 338 ಕೋಟಿ ಎಂದು ಘೋಷಿಸಿಕೊಂಡಿದ್ದರೆ, ಈ ಬಾರಿ 593 ಕೋಟಿ ಎಂದು ತಿಳಿಸಿದ್ದಾರೆ. ಇನ್ನು ಡಿಕೆ ಸುರೇಶ್ ಅವರ ಸಾಲಗಳು ಕೂಡ ಏರಿಕೆಯಾಗಿವೆ. 2019ರಲ್ಲಿ 51 ಕೋಟಿ ಸಾಲ ಹೊಂದಿದ್ದರೆ, ಇದರಲ್ಲಿ ಶೇ. 188 ರಷ್ಟು ಹೆಚ್ಚಳವಾಗಿದ್ದು ಈಗ 150 ಕೋಟಿಯ ಸಾಲಗಾರರಾಗಿದ್ದಾರೆ.
ಹಾಗಿದ್ದರೆ, ಡಿಕೆ ಸುರೇಶ್ ಬಳಿ ಇರುವ ಆಸ್ತಿ ಎಷ್ಟು ಅನ್ನೋದು ನೋಡೋದಾದರೆ, ಕೃಷಿಕ, ಉದ್ಯಮಿ, ಹಾಗೂ ಸಾಮಾಜಿಕ ಕಾರ್ಯಕರ್ತ ಎನ್ನುವುದು ತಮ್ಮ ವೃತ್ತಿ ಎಂದು ಡಿಕೆ ಸುರೇಶ್ ಘೋಷಿಸಿಕೊಂಡಿದ್ದಾರೆ. ತಮ್ಮ ಮೇಲೆ ಒಟ್ಟು ಮೂರು ಕ್ರಿಮಿನಲ್ ಕೇಸ್‌ಗಳು ಬಾಕಿ ಇವೆ ಎಂದು ತಿಳಿಸಿದ್ದಾರೆ. ತಮ್ಮ ಬಳಿ ನಗದು ರೂಪದಲ್ಲಿ ಸದ್ಯ 4.77 ಲಕ್ಷ ರೂಪಾಯಿ ಹಣವಿದೆ ಎಂದು ಡಿಕೆ ಸುರೇಶ್ ತಿಳಿಸಿದ್ದಾರೆ. ಅದರೊಂದಿಗೆ ವಿವಿಧ ಬ್ಯಾಂಕ್ ಅಕೌಂಟ್ ಗಳಲ್ಲಿ 16 ಕೋಟಿ 61 ಲಕ್ಷ ಹಣ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.
ಶೇರ್ ಹಾಗೂ ವಿವಿಧ ಸಂಸ್ಥೆಗಳಲ್ಲಿ 2 ಕೋಟಿ 14 ಲಕ್ಷ ಹೂಡಿಕೆ ಮಾಡಿರುವುದಾಗಿಯೂ ತಿಳಿಸಿದ್ದಾರೆ. ಯಾವ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನುವ ವಿವರವನ್ನೂ ತಿಳಿಸಿದ್ದಾರೆ. ತಮ್ಮ ಬಳಿ ಒಟ್ಟು 106 ಕೋಟಿ, 71 ಲಕ್ಷ ಚರಾಸ್ತಿ ಇದೆ ಎಂದು ಘೋಷಣೆ ಮಾಡಿದ್ದರೆ. 486 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ತಳಿಸಿದ್ದಾರೆ. ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ 150 ಕೋಟಿ ಸಾಲ ಪಡೆದುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ: ನಾಮಪತ್ರ ಸಲ್ಲಿಸುವ ಮೊದಲು ಮನೆದೇವರು ಕೆಂಕೇರಮ್ಮನ ಆಶೀರ್ವಾದ ಪಡೆದ ಡಿ.ಕೆ.ಸುರೇಶ್
ಸಹೋದರ ಡಿಕೆ ಶಿವಕುಮಾರ್ ಸಾಲದ ರೂಪದಲ್ಲಿ ಹಣ ನೀಡಿದ್ದೇನೆ ಎಂದು ವಿವರಿಸಿದ್ದಾರೆ. ಡಿಕೆ ಶಿವಕುಮಾರ್‌ಗೆ 30 ಕೋಟಿ 8 ಲಕ್ಷ ಸಾಲ ನೀಡಿರುವುದಾಗಿ ಸುರೇಶ್ ತಿಳಿಸಿದ್ದಾರೆ. ಅವರ ಪುತ್ರಿ ಐಶ್ವರ್ಯಾ ಡಿಕೆಎಸ್ ಹೆಗ್ಡೆಗೆ 8 ಕೋಟಿ ಸಾಲ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಡಿಕೆ ಸುರೇಶ್ ಬಳಿಯಿದೆ 21.35 ಲಕ್ಷ ರೂಪಾಯಿ ಮೌಲ್ಯದ 1kg, 260 ಗ್ರಾಂ ಮೌಲ್ಯದ ಚಿನ್ನವಿದೆ ಎಂದು ತಿಳಿಸಿದ್ದು 2.10 ಲಕ್ಷ ರೂಪಾಯಿ ಮೌಲ್ಯದ 4 ಕೆಜಿ 860 ಗ್ರಾಂ ಬೆಳ್ಳಿಯನ್ನು ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.
ಸುರೇಶ್ ಅವರ ಅಫಿಡವಿಟ್ ಪ್ರಕಾರ, ಅವರ ಸ್ಥಿರಾಸ್ತಿಗಳ ಮೊತ್ತ ಏರಿಕೆಯಿಂದಾಗಿ ಅವರ ಆಸ್ತಿ ಮೌಲ್ಯದಲ್ಲಿ ಏರಿಕೆಯಾಗಿದೆ. ಅವರು ತಮ್ಮ ಹುಟ್ಟೂರಾದ ರಾಮನಗರ ಜಿಲ್ಲೆ ಮತ್ತು ಬೆಂಗಳೂರಿನಲ್ಲಿ 486 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ (ಅವುಗಳಲ್ಲಿ ಹೆಚ್ಚಿನವರು ಪಿತ್ರಾರ್ಜಿತ), ಕೃಷಿಯೇತರ ಆಸ್ತಿಗಳು ಮತ್ತು ವಸತಿ ಕಟ್ಟಡಗಳನ್ನು ಹೊಂದಿದ್ದಾರೆ. ಐದು ವರ್ಷಗಳ ಹಿಂದೆ ಈ ಆಸ್ತಿ ಮೌಲ್ಯ 305 ಕೋಟಿ ರೂಪಾಯಿ ಆಗಿತ್ತು.
ಇನ್ನು ಡಿಕೆ ಸುರೇಶ್ ಅವರ ಆಸ್ತಿ 33 ಕೋಟಿಯಿಂದ 106 ಕೋಟಿಗೆ ಏರಿಕೆಯಾಗಿದೆ. 2019ರಲ್ಲಿ ತಮ್ಮ ಚರಾಸ್ತಿ 33 ಕೋಟಿ ಎಂದು ಘೋಷಿಸಿಕೊಂಡಿದ್ದರೆ, ಈ ಬಾರಿ 106 ಕೋಟಿ ಎಂದು ತಿಳಿಸಿದ್ದಾರೆ. ಅವರ ಹೊಣೆಗಾರಿಕೆಗಳು ಏರಿಕೆ ಕಂಡಿದ್ದು, ಸುರೇಶ್ ಅವರು 57.27 ಕೋಟಿ ರೂಪಾಯಿ ವಿವಾದದಲ್ಲಿದೆ ಎಂದು ಘೋಷಿಸಿದ್ದಾರೆ. ಇದರಲ್ಲಿ ಆದಾಯ ತೆರಿಗೆ ಅಡಿಯಲ್ಲಿ 55.85 ಕೋಟಿ ರೂ. ಮತ್ತು ಬೆಂಗಳೂರಿನಲ್ಲಿ 1.42 ಕೋಟಿ ಆಸ್ತಿ ತೆರಿಗೆ ಸೇರಿದೆ.