
ಬೆಂಗಳೂರು (ಅ.26): ಬೆಂಗಳೂರಿನ ಮೂಲಭೂತ ಸೌಕರ್ಯಗಳ ಕೊರತೆ, ರಸ್ತೆ ಗುಂಡಿಗಳು ಮತ್ತು ಕಸ ವಿಲೇವಾರಿ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಸರಣಿ ಪೋಸ್ಟ್‌ಗಳನ್ನು ಮಾಡಿ ಗಮನ ಸೆಳೆದಿದ್ದ ನಗರದ ಪ್ರಮುಖ ಉದ್ಯಮಿಗಳೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಸಭೆ ನಡೆಸಿದರು.
ನಗರದ ಸಮಸ್ಯೆಗಳನ್ನು ಆಲಿಸಲು ಮತ್ತು ಅವುಗಳ ಪರಿಹಾರಕ್ಕೆ ಕ್ರಿಯಾ ಯೋಜನೆ ರೂಪಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಈ ಸಭೆಯನ್ನು ಆಯೋಜಿಸಿದ್ದರು. ಸಭೆಯಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನ್‌ದಾಸ್ ಪೈ ಸೇರಿದಂತೆ ಹಲವು ಪ್ರಮುಖ ಉದ್ಯಮಿಗಳು ಭಾಗವಹಿಸಿದ್ದರು. ಜಿಬಿಎ (ಗವರ್ನೆನ್ಸ್ ಆಫ್ ಬೆಂಗಳೂರು ಆಕ್ಟ್) ಮುಖ್ಯ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು.
ಉದ್ಯಮಿಗಳ ಮನೆಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳ ಮೂಲಸೌಕರ್ಯ, ಔಟರ್ ರಿಂಗ್ ರಸ್ತೆ (ಓಆರ್‌ಆರ್), ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಸುಸ್ಥಿತಿಯಲ್ಲಿಡುವುದು, ಒಳಚರಂಡಿ, ಸಂಚಾರ ದಟ್ಟಣೆ ಮತ್ತು ಕಸ ವಿಲೇವಾರಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಿಯಾ ಯೋಜನೆ ರೂಪಿಸಲು ಒಪ್ಪಿಗೆ ನೀಡಲಾಯಿತು.
ಇನ್ನು ಸಭೆಯ ನಂತರ ಉದ್ಯಮಿಗಳು ಟ್ವೀಟ್‌ಗಳ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಕ್ರಮವನ್ನು ಶ್ಲಾಘಿಸಿದರು.
ಉದ್ಯಮಿ ಮೋಹನ್‌ದಾಸ್ ಪೈ ಅವರು ಟ್ವೀಟ್ ಮಾಡಿ: 'ಈ ಅದ್ಭುತ ಉಪಕ್ರಮಕ್ಕಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು. ನಾಗರಿಕರನ್ನು ಭೇಟಿ ಮಾಡುವುದು, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪರಿಹರಿಸುವುದು ಉತ್ತಮ ರಾಜಕೀಯ ನಾಯಕರ ಕೆಲಸ. ನಿಮ್ಮ ಸಂವಾದಗಳು ಮತದಾರರು ಮತ್ತು ಅವರ ಪ್ರತಿನಿಧಿಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿವೆ. ಜಿಬಿಎ ರಚಿಸುವ ಮೂಲಕ ನೀವು ದಶಕಗಳಲ್ಲಿ ಯಾವುದೇ ಭಾರತೀಯ ನಗರದಲ್ಲಿ ಆಗದ ಅತಿದೊಡ್ಡ ಸುಧಾರಣೆಯನ್ನು ಪೂರ್ಣಗೊಳಿಸಿದ್ದೀರಿ. ಭರವಸೆಯಿಂದ ಭವಿಷ್ಯದತ್ತ ನೋಡುತ್ತಿದ್ದೇವೆ' ಎಂದಿದ್ದಾರೆ.
ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು, 'ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ರಸ್ತೆಗಳು, ಓಆರ್‌ಆರ್, ಪಿಆರ್‌ಆರ್, ಒಳಚರಂಡಿ, ಸಂಚಾರ ಮತ್ತು ಕಸ ವಿಲೇವಾರಿ ಸೇರಿದಂತೆ ಪ್ರಮುಖ ಮೂಲಸೌಕರ್ಯ ಅಡಚಣೆಗಳನ್ನು ಸರಿಪಡಿಸಲು ಕ್ರಿಯಾ ಯೋಜನೆ ರೂಪಿಸಲು ಅತ್ಯಂತ ರಚನಾತ್ಮಕ ಸಭೆ ನಡೆಸಿದೆವು ಎಂದು ಟ್ವೀಟ್ ಮಾಡಿದ್ದಾರೆ. ಒಟ್ಟಾರೆಯಾಗಿ, ಉದ್ಯಮಿಗಳ ಸರಣಿ ಪೋಸ್ಟ್‌ಗಳ ನಂತರ ಎಚ್ಚೆತ್ತ ಸರ್ಕಾರ, ನಗರದ ಅಭಿವೃದ್ಧಿಗೆ ಪಾರದರ್ಶಕ ಮತ್ತು ಸಹಯೋಗದ ಹೆಜ್ಜೆ ಇಡಲು ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ